ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮದ ವೈಭವೀಕರಣ ಸಲ್ಲ

ಸಂಸದ ವಿ.ಶ್ರೀನಿವಾಸಪ್ರಸಾದ್ ಅಭಿಮತ
Last Updated 17 ಅಕ್ಟೋಬರ್ 2019, 4:59 IST
ಅಕ್ಷರ ಗಾತ್ರ

ಮೈಸೂರು: ಧರ್ಮ ಇರಬೇಕು. ಆದರೆ, ಅದನ್ನು ವೈಭವೀಕರಿಸಬಾರದು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್ ಅಭಿಪ್ರಾಯಪಟ್ಟರು.

ವೈದ್ಯವಾರ್ತಾ ಪ್ರಕಾಶನ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಸಿ.ಶರತ್‌ಕುಮಾರ್‌ ಅವರ ‘ಸರ್ವಜ್ಞನ ವಚನಗಳಲ್ಲಿ ವೈದ್ಯಕೀಯ ವಿಚಾರಧಾರೆ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಜಾತಿ, ಧರ್ಮಗಳು ಮನುಷ್ಯನ ಒಳಿತಿಗೆ ಇರಬೇಕೇ ಹೊರತು ಒಡಕು ಉಂಟು ಮಾಡಬಾರದು. ಪರಸ್ಪರ ಅರ್ಥಮಾಡಿಕೊಂಡು ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ಮಾನವೀಯತೆಗೆ ಮೊದಲ ಆದ್ಯತೆಯನ್ನು ನೀಡಬೇಕು. 12ನೇ ಶತಮಾನದಲ್ಲಿ ಬಸವಣ್ಣ, 17ನೇ ಶತಮಾನದಲ್ಲಿ ಸರ್ವಜ್ಞ ಮಾನವೀಯತೆಯನ್ನೇ ಪ್ರತಿಪಾದಿಸಿದರು. ಇದನ್ನು ಇಂದು ಅಳವಡಿಸಿಕೊಳ್ಳುವ ಕೆಲಸವನ್ನು ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಭಾರತದ ಬಗ್ಗೆ ವಿಶ್ವದಲ್ಲಿ ಗೌರವ ಭಾವನೆ ಇದೆ. ಇದಕ್ಕೆ ಈ ದೇಶ ಕಂಡ ಮಹಾನ್‌ ವ್ಯಕ್ತಿಗಳು ಕಾರಣ. ಮಹಾತ್ಮ ಗಾಂಧಿಯವರೆಗೂ ಈ ದೇಶವನ್ನು ಮಾನವೀಯತೆಯ ನೆಲೆಗಟ್ಟಿನಲ್ಲಿ ಕಟ್ಟಿರುವವರು ಸಾಕಷ್ಟು ಶ್ರಮಪಟ್ಟಿದ್ದಾರೆ. ಅಂಬೇಡ್ಕರ್‌ ಅವರು ಸಮಾನತೆಗಾಗಿ ದುಡಿದಿದ್ದಾರೆ. ಹಾಗಾಗಿಯೇ ವಿಶ್ವಸಂಸ್ಥೆಯು ಅಂಬೇಡ್ಕರ್ ಹೆಸರನ್ನು ಹೇಳಿ ಸಂಭ್ರಮಿಸಿದೆ. ಮಾನವೀಯತೆಗೆ ವಿಶ್ವ ಮಿಡಿಯುತ್ತದೆ ಎನ್ನುವುದಕ್ಕೆ ಇದು ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ವಜ್ಞನು ತಿಳಿಸದ ವಿಚಾರವೇ ಇಲ್ಲ. ‘ಆಡು ಮುಟ್ಟದ ಸೊಪ್ಪಿಲ್ಲ’ ಎಂಬಂತೆ ಎಲ್ಲ ಕ್ಷೇತ್ರಗಳನ್ನೂ ಸರ್ವಜ್ಞ ಶ್ರೀಮಂತಗೊಳಿಸಿದ್ದಾರೆ. ಅಂತೆಯೇ, ವೈದ್ಯಕೀಯ ವಿಚಾರಗಳನ್ನೂ ತಮ್ಮ ವಚನಗಳಲ್ಲಿ ಪ್ರಸ್ತಾಪಿಸಿದ್ದಾರೆ. ಈ ಅಂಶಗಳನ್ನು ಡಾ.ಶರತ್‌ಕುಮಾರ್‌ ಅವರು ಪರಿಣಾಮಕಾರಿಯಾಗಿ ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅತಿಥಿಯಾಗಿ ಭಾಗವಹಿಸಿಸ ಶಾಸಕ ಎಲ್‌.ನಾಗೇಂದ್ರ ಮಾತನಾಡಿ, ಡಾ.ಶರತ್‌ಕುಮಾರ್‌ ಅವರು ಮಾನವೀಯ ಕಾಳಜಿ ಇರುವ ವೈದ್ಯ. ವೈದ್ಯರಾಗಿ ಇವರು ಸಾಕಷ್ಟು ಕುಟುಂಬಗಳಿಗೆ ಬೆಳಕು ನೀಡಿದ್ದಾರೆ. ಇವರಿಗೆ ಸಾಹಿತ್ಯಾಭಿರುಚಿ ಇರುವುದು ಮೆಚ್ಚುವ ವಿಚಾರ. ಇಂತಹ ವೈದ್ಯರ ಸಂಖ್ಯೆ ಹೆಚ್ಚಲಿ ಎಂದು ಆಶಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಬಿಜೆ‍ಪಿ ಮುಖಂಡ ತೋಂಟದಾರ್ಯ ಅಧ್ಯಕ್ಷತೆವಹಿಸಿದ್ದರು. ಬಿಜೆಪಿ ಮುಖಂಡ ಎಂ.ಶಿವಣ್ಣ, ಚುಟುಕು ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅತಿಥಿಗಳಾಗಿ ಭಾಗವಹಿಸಿದ್ದರು. ವೈದ್ಯವಾರ್ತಾ ಪ್ರಕಾಶನದ ಸ್ಥಾಪಕ ನಿರ್ದೇಶಕ ಡಾ.ಎಂ.ಜಿ.ಆರ್‌.ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ರತ್ನಾ ಹಾಲಪ್ಪಗೌಡ ಸಂದೇಶ ವಾಚನ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ ಅತಿಥಿಗಳನ್ನು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT