ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಶೋಧನೆಯು ತಾರ್ಕಿಕ ಅಂತ್ಯವಾಗಲಿ’

ಸಸ್ಯಶಾಸ್ತ್ರ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ
Last Updated 31 ಮಾರ್ಚ್ 2018, 9:54 IST
ಅಕ್ಷರ ಗಾತ್ರ

ರಾಯಚೂರು: ಔಷಧೀಯ ಗುಣ ಹೊಂದಿರುವ ಗಿಡಗಳ ಸಂಶೋಧನೆಯನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಮೂಲಕ ಪ್ರಪಂಚದ ಸೇವೆ ಮಾಡಬಹುದು ಎಂದು ತುಮಕೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಎ.ಎಚ್.ರಾಜಾಸಾಬ್‌ ಹೇಳಿದರು.

ನಗರದ ಎಲ್‌ವಿಡಿ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಔಷಧೀಯ ಸಸ್ಯಗಳ ಸಾಂಪ್ರದಾಯಿಕ ಉಪಯೋಗಗಳ ಇತ್ತೀಚಿನ ಬೆಳವಣಿಗೆಗಳು’ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸುತ್ತಮುತ್ತ ಸಿಗುವಂತಹ ಔಷಧೀಯ ಗಿಡಗಳ ಕುರಿತು ಬಹಳಷ್ಟು ವಿಷಯ ತಿಳಿದುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಆದ್ದರಿಂದ ಇವುಗಳ ಸಂಶೋಧನೆಯನ್ನು ತಾರ್ಕಿಕ ಅಂತ್ಯಗೊಳಿಸುವ ಅಗತ್ಯವಿದೆ ಎಂದು ಹೇಳಿದರು.

ಹಿಂದಿನ ಕಾಲದಲ್ಲಿ ಗಿಡಮೂಲಿಕೆಗಳ ಚಿಕಿತ್ಸೆ ವಿಧಾನ ಬಹಳಷ್ಟು ಪರಿಣಾಮಕಾರಿಯಾಗಿತ್ತು. ಆದ್ದರಿಂದಲೇ ಭಾರತೀಯ ವೈದ್ಯ ಪದ್ಧತಿಗೆ ತನ್ನದೇ ಸ್ಥಾನವಿದೆ. ದೇಶದೆಲ್ಲೆಡೆ ಸಿಗುವ ಔಷಧೀಯ ಗುಣ ಹೊಂದಿರುವ ಗಿಡಗಳ ಬಗ್ಗೆ ಸಂಶೋಧನೆ ನಡೆಸಿ ಔಷಧಗಳನ್ನು ಬಳಕೆ ಮಾಡುವ ಮಟ್ಟಕ್ಕೆ ಮುಂದುವರೆಯಬೇಕು ಎಂದು ತಿಳಿಸಿದರು.

ಮನೆಯಲ್ಲಿ ದಿನನಿತ್ಯ ಬಳಸುವ ಪದಾರ್ಥಗಳಲ್ಲಿ ಔಷಧೀಯ ಗುಣಗಳು ಇದ್ದು, ಪ್ರಪಂಚದಲ್ಲಿ ಶೇ 60ರಷ್ಟು ಜನರು ಗಿಡಮೂಲಿಕೆಗಳ ಔಷಧಗಳನ್ನು ಬಳಕೆ ಮಾಡುತ್ತಿದ್ದಾರೆ. ಬಹಳಷ್ಟು ದೇಶಗಳಲ್ಲಿ ಇವುಗಳ ಬಳಕೆ ಮಾಡಲಾಗುತ್ತಿದೆ. ಅದರಂತೆ ನಮ್ಮಲ್ಲಿಯೂ ಔಷಧಿಗಳು ತಯಾರಿಸುವ ಮೂಲಕ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆ ಮಾಡಿಕೊಳ್ಳಬಹುದಾಗಿದೆ ಎಂದರು.

ದೇಶದಲ್ಲಿ ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಆಡಳಿತ ಮಂಡಳಿ ಕಾರ್ಯದರ್ಶಿ ಜಟ್ರಂ ಶ್ರೀನಿವಾಸ್ ಮಾತನಾಡಿ, ಬದಲಾದ ಸನ್ನಿವೇಶದಲ್ಲಿ ಆಹಾರದಂತೆ ಔಷಧಗಳನ್ನು ಸೇವಿಸುವಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂಗ್ಲಿಷ್‌ ಔಷಧಗಳು ದುಬಾರಿ ವೆಚ್ಚದಿಂದ ಕೂಡಿದ್ದರಿಂದ, ಬಡವರಿಗೆ ವೆಚ್ಚ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಗಿಡ ಮೂಲಿಕೆಗಳ ಔಷಧಿಗಳು ಬಡವರಿಗೆ ಅನುಕೂಲವಾಗಲಿವೆ ಎಂದು ಹೇಳಿದರು.

ಆಹಾರ ಪದ್ಧತಿ ಹಾಗೂ ಅಸಂಬಂದ್ಧವಾದ ಜೀವನ ಶೈಲಿಯಿಂದ ಆರೋಗ್ಯ ವಿಷಯದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಪ್ರಾಕೃತಿಕವಾಗಿ ಸಿಗುಂತಹ ಔಷಧಗಳನ್ನು ಪುನಃ ಬಳಕೆಗೆ ತರುವಂತಹ ಸಂದರ್ಭ ಒದಗಿ ಬಂದಿದೆ ಎಂದು ತಿಳಿಸಿದರು.

ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ಉಪಾಧ್ಯಕ್ಷ ಆರ್.ತಿಮ್ಮಯ್ಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹೆಚ್ಚುವರಿ ಉ‍ಪ ಕುಲಪತಿ ಜಿ.ಆರ್.ನಾಯಕ, ವೈ.ಸರಸ್ವತಿ, ವೇದವ್ಯಾಸ್, ಆರ್.ಎಚ್‌.ಮೇರ್‌ವಾಡೆ, ದೇವರೆಡ್ಡಿ ಇದ್ದರು. ಪ್ರಾಚಾರ್ಯ ಎಸ್.ಎಂ.ಖೇಣೆದ್ ಸ್ವಾಗತಿಸಿದರು.

**

ಪ್ರತಿಯೊಂದು ಸಸಿ ಹಾಗೂ ಗಿಡಗಳಲ್ಲಿ ಔಷಧೀಯ ಗುಣಗಳು ಇರುತ್ತವೆ. ಆದರೆ, ಅವುಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು.

-ಎ.ಎಚ್.ರಾಜಾಸಾಬ್‌, ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT