ಶನಿವಾರ, ನವೆಂಬರ್ 23, 2019
18 °C
ಸಿಎಫ್‌ಟಿಆರ್‌ಐ ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಸಲಹೆ

ಯುವಪೀಳಿಗೆ ಮೂಲ ವಿಜ್ಞಾನ ಕೋರ್ಸ್ ಓದಲಿ

Published:
Updated:
Prajavani

ಮೈಸೂರು: ಎಂಜಿನಿಯರಿಂಗ್, ವೈದ್ಯಕೀಯ ಕೋರ್ಸ್‌ಗಳ ಕಡೆ ಮುಖ ಮಾಡಿರುವ ಯುವ ಪೀಳಿಗೆಗೆ ಮೂಲ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಅಗತ್ಯವಿದೆ ಎಂದು ಸಿಎಸ್ಐಆರ್– ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದ (ಸಿಎಫ್‌ಟಿಆರ್‌ಐ) ನಿರ್ದೇಶಕ ಡಾ.ಕೆ.ಎಸ್.ಎಂ.ಎಸ್. ರಾಘವರಾವ್ ಹೇಳಿದರು.

ಸಿಎಸ್ಐಆರ್– ಸಿಎಫ್‌ಟಿಆರ್‌ಐ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್‌ವಿವೈಎಂ) ಹಾಗೂ ದೆಹಲಿಯ ವಿಜ್ಞಾನ ಪ್ರಸಾರ್ ವತಿಯಿಂದ ನಗರದ ಸಿಎಫ್‌ಟಿಆರ್‌ಐನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಕನ್ನಡದಲ್ಲಿ ವಿಜ್ಞಾನ ಸಂವಹನ: ನಿನ್ನೆ, ಇಂದು ಹಾಗೂ ನಾಳಿನ ಹಾದಿಗಳು’ ಕುರಿತ ಎರಡು ದಿನಗಳ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಿಎಫ್‌ಟಿಆರ್‌ಐ ‘ಆಹಾರ ವಿಜ್ಞಾನ’ (ಕನ್ನಡ), ಖಾದ್ಯ ವಿಜ್ಞಾನ (ಹಿಂದಿ) ಹಾಗೂ ಫುಡ್ ಸೈನ್ಸ್ (ಇಂಗ್ಲಿಷ್) ತ್ರೈಮಾಸಿಕ ಪತ್ರಿಕೆಗಳನ್ನು ಹೊರ ತರಲಾಗುತ್ತಿದೆ. ಪೌಷ್ಟಿಕಾಂಶ ಆಹಾರದ ಮಹತ್ವ ಸಾರುವ ‘ಊಟ- ಪಾಠ’ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಜ್ಞಾನ ಪ್ರಸಾರ್‌ನ ವಿಜ್ಞಾನಿ ಡಾ.ಟಿ.ವಿ.ವೆಂಕಟೇಶ್ವರನ್ ಮಾತನಾಡಿ, ‘ಭಾರತೀಯ ಭಾಷೆಗಳಲ್ಲಿ ವಿಜ್ಞಾನದ ವಿಷಯಗಳನ್ನು ಪ್ರಚುರ ಪಡಿಸುವ ಕೆಲಸವನ್ನು ವಿಜ್ಞಾನ ಪ್ರಸಾರ್ ಮಾಡುತ್ತಿದೆ. 1990ರ ದಶಕದಲ್ಲಿ ಮೂಲ ವಿಜ್ಞಾನವನ್ನು ಓದುವವರ ಸಂಖ್ಯೆ ಹೆಚ್ಚಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಭೌತ ವಿಜ್ಞಾನ, ರಸಾಯನವಿಜ್ಞಾನ, ಜೀವಶಾಸ್ತ್ರ ಮುಂತಾದ ಮೂಲ ವಿಜ್ಞಾನದ ವಿಷಯಗಳನ್ನು ಓದುವವರ ಸಂಖ್ಯೆ ಕುಸಿಯುತ್ತಿದೆ’ ಎಂದು ಅಭಿಪ್ರಾಯಪಟ್ಟರು.

‘ನಿಮ್ಮ ಅನುಭವದ ವಿಜ್ಞಾನ ನಿಜವಾದ ವಿಜ್ಞಾನವಲ್ಲ. ಅದನ್ನೂ ಮೀರಿದ, ಕೌತುಕಗಳನ್ನು ಒಳಗೊಂಡ ಪ್ರಪಂಚವದು. ಅದರೊಳಗೆ ಪ್ರವೇಶ ಮಾಡಿದರೆ ಮಾತ್ರ ನೈಜ ಚಿತ್ರಣ ಸಿಗುತ್ತದೆ’ ಎಂದರು.

‘ಕುತೂಹಲಿ’ ಸುದ್ದಿಪತ್ರವನ್ನು ಬಿಡುಗಡೆ ಮಾಡಲಾಯಿತು.

ಕಾರ್ಯಕ್ರಮಕ್ಕೆ ಗೈರಾಗಿದ್ದ ವಿಜ್ಞಾನ ಪ್ರಸಾರ್ ನಿರ್ದೇಶಕ ಡಾ.ನಕುಲ್ ಪರಾಶರ್ ಅವರು ವಿಡಿಯೊ ಸಂದೇಶವನ್ನು ಕಳುಹಿಸಿಕೊಟ್ಟು, ಶುಭಕೋರಿದರು.

ಎಸ್‌ವಿವೈಎಂನ ಪ್ರವೀಣ್ ಕುಮಾರ್ ಸಯ್ಯಪ್ಪರಾಜು, ಸಿಎಫ್‌ಟಿಆರ್‌ಐನ ಹಿರಿಯ ಪ್ರಧಾನ ವಿಜ್ಞಾನಿ ಎ.ಎಸ್.ಕೆ.ವಿ.ಎಸ್. ಶರ್ಮ ಇದ್ದರು.

ಪ್ರತಿಕ್ರಿಯಿಸಿ (+)