ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದ ಜೀವಕ್ಕೆ ‘ದಾರಿ ದೀಪ’ ಆಸರೆ

ಕವಿತಾ ರಾವ್ ನೇತೃತ್ವದಲ್ಲಿ ವೃದ್ಧಾಶ್ರಮ ನಿರ್ವಹಣೆ- l ಕಲಾ ಸೇವೆಯ ಹಣ ಬಳಸುವ ಮಹಿಳೆ
Last Updated 29 ಮಾರ್ಚ್ 2018, 6:54 IST
ಅಕ್ಷರ ಗಾತ್ರ

ರಾಮನಗರ: ಹೆತ್ತವರನ್ನು ನಿಷ್ಕರುಣೆಯಿಂದ ನಿರ್ಗತಿಕರನ್ನಾಗಿ ಮಾಡುತ್ತಿರುವ ಮಕ್ಕಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ನೊಂದ ಜೀವಗಳಿಗೆ ಆಸರೆ ನೀಡುತ್ತಿದೆ ‘ದಾರಿದೀಪ’.

ಮಕ್ಕಳಿಂದ ಪರಿತ್ಯಕ್ತರಾದ ವಯೋವೃದ್ಧರಿಗೆ ಆಶ್ರಯ ನೀಡಲು ಈ ವೃದ್ಧಾಶ್ರಮ ತೆರೆದು ಹಿರಿಯ ಜೀವಗಳ ಬದುಕಿಗೆ ಬೆಳಕು ತೋರಿದ್ದಾರೆ ಕವಿತಾರಾವ್. ತಾಲ್ಲೂಕಿನ ಕೈಲಾಂಚ ಹೋಬಳಿಯ ಕೃಷ್ಣಾಪುರದೊಡ್ಡಿ ಗ್ರಾಮದಲ್ಲಿ ಇರುವ ಆಶ್ರಮದಲ್ಲಿ ಸದ್ಯ ವಯಸ್ಸಾದ ಮಹಿಳೆಯರು ಹಾಗೂ ಪುರುಷರು ಸೇರಿದಂತೆ 46 ಮಂದಿ ಆಶ್ರಯ ಪಡೆದಿದ್ದಾರೆ.

ಕವಿತಾ ರಾವ್ ಅವರ ಇಬ್ಬರು ಪುತ್ರಿಯರಾದ ಕಾವ್ಯಾ ರಾವ್ ಮತ್ತು ಚಿತ್ರಾ ರಾವ್ ಭರತನಾಟ್ಯ ಮತ್ತು ಸಂಗೀತದ ಪ್ರಬುದ್ಧ ಕಲಾವಿದೆಯರು. ಇವರ ಕಲಾ ಸೇವೆಯಿಂದ ಬಂದ ಹಣವನ್ನು ಈ ಆಶ್ರಮದ ನಿರ್ವಹಣೆಗೆ ಬಳಸಿಕೊಳ್ಳಲಾಗುತ್ತಿದೆ.

‘ಅದು 2008. ರಸ್ತೆ ಬದಿಯಲ್ಲಿ ಅನಾಥರಾಗಿ, ಅಸ್ವಸ್ಥರಾಗಿದ್ದ ವಯಸ್ಸಾದವರನ್ನು ನೋಡಿ ವೃದ್ಧಾಶ್ರಮ ಆರಂಭಿಸಬೇಕು ಎಂಬ ಕನಸು ಮೂಡಿತು. ನನ್ನ ಇಬ್ಬರು ಮಕ್ಕಳು ಭರತನಾಟ್ಯ ಅಭ್ಯಾಸ ಮಾಡಿದ್ದಾರೆ. ಅವರು ಕಾರ್ಯಕ್ರಮಗಳನ್ನು ನೀಡುವುದರಿಂದ ಬರುವ ಹಣದಿಂದ ಆಶ್ರಮ ನಡೆಸಲು ಆರಂಭಿಸಿದೆ. ಈ ಆಶ್ರಮ ಸ್ಥಾಪಿಸಲು ನನ್ನ ತಾಯಿ ತಾನಿಬಾಯಿಯ ಸೇವಾ ಮನೋಭಾವ ಪ್ರೇರಣೆಯಾಯಿತು’ ಎನ್ನುತ್ತಾರೆ ಕವಿತಾ ರಾವ್.

ಮಕ್ಕಳ ಗಳಿಕೆ ಹಣ ಸಾಲದೆ ಹೋದಾಗ ಪತಿ ನಾಗೇಂದ್ರರಾವ್ ಅವರ ಹೋಟೆಲ್ ಸಂಪಾದನೆಯನ್ನು ಆಶ್ರಮದ ನಿರ್ವಹಣೆಗೆ ಬಳಸಿಕೊಂಡಿದ್ದಾರೆ.

ಕೃಷ್ಣಾಪುರದೊಡ್ಡಿಯಲ್ಲಿ ತಂದೆ ನಾಗೇಶ್‌ರಾವ್‌, ತಾಯಿ ತಾನಿಬಾಯಿ ಹೆಸರಿನಲ್ಲಿ ‘ತಾನಿನಾ ರಂಗದಂಗಳ’ ವನ್ನು ಸ್ಥಾಪಿಸಿ ನಿರಂತರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲು ಅನುವು ಮಾಡಿಕೊಟ್ಟಿದ್ದಾರೆ.

9 ವರ್ಷಗಳಿಂದ ವೃದ್ಧಾಶ್ರಮ ನಡೆಯುತ್ತಿದೆ. ಶಾಂತಲಾ ಚಾರಿಟಬಲ್ ಟ್ರಸ್ಟಿನ ಮೂಲಕ ಕಳೆದ 8 ವರ್ಷಗಳಿಂದ ಅಂತರ ರಾಜ್ಯ ಸಾಂಸ್ಕೃತಿಕ ಉತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ. ಈ ಉತ್ಸವದಲ್ಲಿ ಹಲವು ರಾಜ್ಯಗಳ ಕಲಾವಿದರು ಭಾಗಹಿಸಿ ಪ್ರದರ್ಶನ ನೀಡುತ್ತಿದ್ದಾರೆ. 12 ವರ್ಷಗಳಿಂದ ಶಾಂತಲಾ ಕಲಾ ಕೇಂದ್ರದ ಮೂಲಕ ಸಾವಿರಾರು ಮಕ್ಕಳಿಗೆ ಸಂಗೀತ, ನೃತ್ಯ ಕಲಿಸಿದ್ದಾರೆ, ಈಗಲೂ ಕಲಿಸುತ್ತಿದ್ದಾರೆ.

‘ಮನುಷ್ಯನ ವ್ಯಕ್ತಿತ್ವ ವಿಕಸನವಾಗಬೇಕಾದರೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಸಾಹಿತ್ಯಕ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕು. ಜೀವನದಲ್ಲಿ ಸಾಧನೆ ಮಾಡಬೇಕಾದರೆ ಮೊದಲು ನಾವು ದೈಹಿಕವಾಗಿ, ಮಾನಸಿಕವಾಗಿ, ಬೌದ್ಧಿಕವಾಗಿ ಪ್ರಬಲವಾಗಿರಬೇಕು, ಅದಕ್ಕಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು’ ಎನ್ನುವುದು ಕವಿತಾ ರಾವ್‌ ಆಶಯವಾಗಿದೆ.

‘ಜನರಲ್ಲಿ ಸಾಂಸ್ಕೃತಿಕ ಅಭಿರುಚಿ ಮೂಡಿಸಲು, ಮನುಷ್ಯರಲ್ಲಿ ಸಹಜವಾಗಿ ಇರಬೇಕಾದ ವಿವೇಕ ಬೆಳೆಸಲು ಕವಿತಾರಾವ್‌ ಹಲವು ನೆಲೆಗಳಲ್ಲಿ ಆಲೋಚಿಸುತ್ತಿದ್ದಾರೆ. ಜನಪದ, ಸಂಗೀತ, ನಾಟ್ಯ, ನಾಟಕಗಳಂಥ ಕಲೆಗಳ ಮೂಲಕ ಈ ಪ್ರಯತ್ನವನ್ನು ಕ್ರಿಯಾಶೀಲವಾಗಿ ಮಾಡುತ್ತಿದ್ದಾರೆ. ನೊಂದವರಿಗೆ ನೆಲೆ ಕಲ್ಪಿಸಿದ್ದಾರೆ. ಇವೆಲ್ಲಾ ಕೆಲಸಗಳನ್ನು ತಮ್ಮ ಹೆತ್ತವರ ಹೆಸರಿನಲ್ಲಿ ಮಾಡುತ್ತಿರುವುದು ವೈಶಿಷ್ಟ್ಯ’ ಎನ್ನುತ್ತಾರೆ ಸಾಹಿತಿ ಎಲ್.ಸಿ. ರಾಜು ಹಾಗೂ ಸಂಶೋಧಕ ಚಿಕ್ಕಚನ್ನಯ್ಯ.

**

ಇಂದಿನಿಂದ ಉತ್ಸವ: ಗೌರಮ್ಮ ಅಧ್ಯಕ್ಷೆ

ಕೃಷ್ಣಾಪುರದೊಡ್ಡಿಯ ತಾನಿನಾ ರಂಗದಂಗಳದಲ್ಲಿ ಇದೇ 29, 30ರಂದು ಶಾಂತಲಾ ಚಾರಿಟಬಲ್ ಟ್ರಸ್ಟ್‌ ವತಿಯಿಂದ 9ನೇ ಶಾಂತಲಾ ಅಂತರರಾಜ್ಯ ಸಾಂಸ್ಕೃತಿಕ ಉತ್ಸವ ನಡೆಯಲಿದೆ. ಮಹಾದ್ವಾರಕ್ಕೆ ಪುಟ್ಟ ಮಾಸ್ತಿಗೌಡ ಹಾಗೂ ಪ್ರಧಾನ ವೇದಿಕೆಗೆ ಕೆಂಗಲ್‌ ಹನುಮಂತಯ್ಯ ಅವರ ಹೆಸರನ್ನು ಇಡಲಾಗಿದೆ. ಈ ಬಾರಿಯ ಉತ್ಸವಾಧ್ಯಕ್ಷರಾಗಿರುವವರು ಹುಟ್ಟು ಅಂಧ ಕಲಾವಿದೆ ಗೌರಮ್ಮ.

ಇವರು ಕನಕಪುರ ತಾಲ್ಲೂಕಿನ ಚಿಕ್ಕಕಲ್ಲಬಾಳು ಗ್ರಾಮದವರು. ಹರಿಕತೆ, ತತ್ವದಗಳನ್ನು ಹಾಡುತ್ತಾರೆ. ಮಹದೇಶ್ವರ ಕತೆ, ಅರ್ಜುನ ವೇಣಿ ಕತೆ, ಬಾಲನಾಗಮ್ಮನ ಕತೆ, ನೀಲವೇಣಿ ಕತೆ, ಸಿದ್ದಪ್ಪಾಜಿ ಕತೆಗಳನ್ನು ತಾಸುಗಟ್ಟಲೆ ನಿರರ್ಗಳವಾಗಿ ಹಾಡುತ್ತಾರೆ. ಇಲ್ಲಿವರೆಗೆ ಸುಮಾರು 2 ಸಾವಿರಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾರೆ.

**

9 ವರ್ಷಗಳ ಹಿಂದೆ ವೃದ್ಧಾಶ್ರಮ ಆರಂಭಿಸಿದ್ದು, ಇಂದು 46 ಸದಸ್ಯರು ಇದ್ದಾರೆ. ಕುಟುಂಬದ ಸಂಪಾದನೆಯ ಪಾಲನ್ನು ವಿನಿಯೋಗಿಸುತ್ತಿದ್ದೇವೆ.

-ಕವಿತಾ ರಾವ್‌, ವೃದ್ಧಾಶ್ರಮ ಸಂಸ್ಥಾಪಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT