ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನತ್ತ ಬೆಟ್ಟದ ಅಸ್ಮಿತೆ; ಎರಡೇ ವರ್ಷಕ್ಕೆ ಹೊಸ ಮಳಿಗೆಗಳು!

ಮತ್ತೆ ಕಟ್ಟಡ ನಿರ್ಮಾಣ ಕಾಮಗಾರಿ
Last Updated 16 ನವೆಂಬರ್ 2021, 3:04 IST
ಅಕ್ಷರ ಗಾತ್ರ

ಮೈಸೂರು: ಹಂಪಿ ಮಾದರಿಯಲ್ಲಿ ಚಾಮುಂಡಿಬೆಟ್ಟಕ್ಕೆ ಹೊಸ ಸ್ಪರ್ಶ ನೀಡಲು ಮುಂದಾಗಿರುವ ಸರ್ಕಾರದ ಕ್ರಮ ಪರಿಸರವಾದಿಗಳ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ. ಬೆಟ್ಟದ ಅಸ್ಮಿತೆಯನ್ನು ಈ ಮೂಲಕ ಅಳಿಸಲಾಗುತ್ತಿದೆ ಎಂಬ ಕೂಗು ಕೇಳಿ ಬಂದಿದೆ.

‘ಹಂಪಿ ಹಾಗೂ ಚಾಮುಂಡಿಬೆಟ್ಟಕ್ಕೆ ಅದರದ್ದೇ ಆದ ಮಹತ್ವವಿದೆ. ಈ ಎರಡನ್ನೂ ಒಂದೇ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ತೀರಾ ಅವೈಜ್ಞಾನಿಕ’ ಎಂಬುದು ಪರಿಸರಪ್ರಿಯರ ಮಾತು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪರಿಸರವಾದಿ ಕಾರ್ಟ್‌ ರವಿಕುಮಾರ್, ‘ವಿಜಯನಗರದ ಮಾದರಿ ಎನ್ನುವುದೇ ದೊಡ್ಡ ವಿರೋಧಾಭಾಸ’ ಎಂದರು.

‘ಚಾಮುಂಡಿಬೆಟ್ಟವನ್ನು ಬೇರೆ ಯಾವುದೇ ಪ್ರದೇಶಕ್ಕೆ ಹೋಲಿಸಬಾರದು. ಬೆಟ್ಟದ ಅಸ್ಮಿತೆ ಉಳಿಸಬೇಕಿದೆ. ಪವಿತ್ರ ಕ್ಷೇತ್ರವಾಗಿದ್ದು, ಪವಿತ್ರವಾಗಿಯೇ ಇರಬೇಕು. ಭಕ್ತರ ತಾಣವು ವಾಣಿಜ್ಯದ, ಹಣ ಗಳಿಕೆ ಜಾಗವಾಗಬಾರದು’ ಎಂದು ಹೇಳಿದರು.

‘ಬೆಟ್ಟದ ಆವರಣವನ್ನು ಒಂದು ವಸ್ತುಪ್ರದರ್ಶನದಂತೆ ಮಾಡಲು ಸರ್ಕಾರ ಹೊರಟಂತಿದೆ. ಸ್ಥಳೀಯರು, ಮೈಸೂರಿನವರ ಅಭಿಪ್ರಾಯ ಕೇಳದೆ ಏಕಪಕ್ಷೀಯವಾಗಿ ಕೆಲವರು ತಮ್ಮ ಕಲ್ಪನೆಗಳನ್ನು ಹೇರುತ್ತಿದ್ದಾರೆ. ಇದು ಖಂಡಿತವಾಗಿಯೂ ಸರಿಯಲ್ಲ’ ಎಂದು ತಿಳಿಸಿದರು.

ಎರಡೇ ವರ್ಷಕ್ಕೆ ಮತ್ತೆ ವಾಣಿಜ್ಯ ಮಳಿಗೆ: ದೇವಸ್ಥಾನದ ಸುತ್ತಲೂ ಇರುವ ಎಲ್ಲ ಅಂಗಡಿಗಳನ್ನು ತೆರವುಗೊಳಿಸಿ, ಹೊಸದಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸುವ ಪ್ರಸ್ತಾವ ನೂತನ ಯೋಜನೆಯಲ್ಲಿದೆ. ಇದು ಸಾಕಷ್ಟು ಟೀಕೆಗೆ ಕಾರಣವಾಗಿದೆ.

‘ಪ್ರಸಾದ’ ಯೋಜನೆಯ ಮೊದಲ ಆವೃತ್ತಿಯಲ್ಲಿ 100ಕ್ಕೂ ಅಧಿಕ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು. 2019ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಿದ್ದರು. ಆದರೆ, ಕೇವಲ ಎರಡೇ ವರ್ಷಗಳಲ್ಲಿ ಮತ್ತೆ ಹೊಸ ಮಳಿಗೆ ನಿರ್ಮಿಸುವ ಪ್ರಸ್ತಾವವನ್ನು ‘ಪ್ರಸಾದ’ ಯೋಜನೆಯ 2ನೇ ಆವೃತ್ತಿ ಹೊಂದಿದೆ.

ಆಗ ಒಟ್ಟು ₹ 80 ಕೋಟಿ ವೆಚ್ಚದಲ್ಲಿ ಈ ಮಳಿಗೆ ನಿರ್ಮಾಣ ಕಾರ್ಯ ನಡೆದಿತ್ತು. ಈಗ ಮತ್ತೆ ಮಳಿಗೆಗಳನ್ನು ನಿರ್ಮಿಸುವ ಚಿಂತನೆ ಇದೆ.

ಧಾರಣಾಶಕ್ತಿಗೆ ಅಪಾಯ: ಹೊಸ ಮಳಿಗೆಗಳ ನಿರ್ಮಾಣದ ಪ್ರಸ್ತಾವ ಬೆಟ್ಟದ ಧಾರಣಶಕ್ತಿಯನ್ನು ಕುಂದಿಸುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಪರಿಸರವಾದಿಗಳು ಹೇಳುತ್ತಾರೆ.

ಎಂಜಿನಿಯರುಗಳ ಸಂಸ್ಥೆಯಲ್ಲಿ ಶನಿವಾರ ನಡೆದ ಸಭೆಯಲ್ಲೂ ಇದೇ ವಿಚಾರ ಪ್ರಸ್ತಾಪವಾಗಿ, ‘ಕಟ್ಟಡ ನಿರ್ಮಾಣ ಚಟುವಟಿಕೆಗಳಿಗಾಗಿ ಸಿಮೆಂಟ್, ಜಲ್ಲಿ, ಮರಳು, ಕಬ್ಬಿಣವನ್ನು ಹೊತ್ತ ಬೃಹತ್ ಟ್ರಕ್‌ಗಳು ರಸ್ತೆಯಲ್ಲಿ ಸಂಚರಿಸಿ ಕುಸಿತ ಉಂಟಾಗುತ್ತದೆ’ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

‘ಬೆಟ್ಟಕ್ಕೆ ತನ್ನದೇ ಆದ ಧಾರಣಶಕ್ತಿ ಇರುತ್ತದೆ. ಹಿಂದೆಯೆಲ್ಲ ಚಾವಣಿ ಇಲ್ಲದೆ ನೆಲದಲ್ಲಿ ಕುಳಿತು ವ್ಯಾಪಾರ ಮಾಡುತ್ತಿದ್ದರು. ನಂತರ, ಪೆಟ್ಟಿಗೆ ಅಂಗಡಿಗಳನ್ನು ಹಾಕಿಕೊಂಡು ಜೀವನೋಪಾಯ ಕಂಡುಕೊಂಡರು. ಎರಡು ವರ್ಷಗಳ ಹಿಂದೆಯಷ್ಟೇ ಆಧುನಿಕ ಮಾದರಿಯ ಮಳಿಗೆಗಳನ್ನು ನಿರ್ಮಿಸಲಾಯಿತು. ಆದರೆ, ಈಗ ಹಂಪಿ ಶೈಲಿಯ ಪಾರಂಪರಿಕ ಮಳಿಗೆಗಳನ್ನು ನಿರ್ಮಿಸಲು ಸರ್ಕಾರ ಹೊರಟಿರುವುದು ಸರಿಯಲ್ಲ’ ಎಂಬ ವಿರೋಧ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT