ಧರ್ಮ ಉಳಿವಿಗೆ ‘ಧರ್ಮಹಿಂಸೆ’

7
ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಹೇಳಿಕೆ

ಧರ್ಮ ಉಳಿವಿಗೆ ‘ಧರ್ಮಹಿಂಸೆ’

Published:
Updated:
Prajavani

ಮೈಸೂರು: ಧರ್ಮದ ಉಳಿವಿಗಾಗಿ ಹೋರಾಟ ನಡೆಸುವ ‘ಧರ್ಮಹಿಂಸೆ’ ಶ್ರೇಷ್ಠವಾದದ್ದು ಎಂದು ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಇಲ್ಲಿ ಶನಿವಾರ ಹೇಳಿದರು.

ಲೇಖಕ ಡಾ.ಸುಧಾಕರ ಹೊಸಳ್ಳಿ ಅವರ ‘ರಾಮಮಂದಿರ ಮತ್ತು ಸುಗ್ರೀವಾಜ್ಞೆ ಸಾಧ್ಯತೆ– ಒಂದು ಅವಲೋಕನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಹಿಂದೂಗಳು ಯಾವುದೇ ಮಸೀದಿ ಕೆಡವಿ ದೇವಾಲಯ ನಿರ್ಮಿಸಿಲ್ಲ. ಜೈನರು ಬಸದಿಗಳನ್ನು ಕಟ್ಟಿಲ್ಲ. ಆದರೆ, ಮುಸ್ಲಿಮರು ದೇವಾಲಯಗಳನ್ನು ಕೆಡವಿ ಮಸೀದಿ ನಿರ್ಮಿಸಿದ ನೂರಾರು ಉದಾಹರಣೆಗಳಿವೆ. ಭಾರತೀಯ ಸಾಂಸ್ಕೃತಿಕ ಸಂಕೇತ ರಾಮ. ಅಯೋಧ್ಯೆಯಲ್ಲಿ ಹುಟ್ಟಿದ ರಾಮ, ಪೌರಾಣಿಕ ವ್ಯಕ್ತಿಯಾದರೂ ಐತಿಹಾಸಿಕ ವ್ಯಕ್ತಿ ಆಗಿರಲೇಬೇಕು. ಅಯೋಧ್ಯೆಯಲ್ಲಿ ಹಿಂದೂ ದೇವಾಲಯ ಇತ್ತು. ಇದಕ್ಕೆ ಸಾಕಷ್ಟು ಪುರಾವೆಗಳು ಇವೆ ಎಂದು ಅಭಿಪ್ರಾಯಪಟ್ಟರು.

ರಕ್ಷಣೆ ಕೊಡಲಿ: ‘ರಾಮ– ಸೀತೆ ಹೆಂಡ ಕುಡಿಯುತ್ತಿದ್ದರು, ಮಾಂಸಾಹಾರಿ ಆಗಿದ್ದರು ಎಂದು ಪ್ರೊ.ಭಗವಾನ್ ಬರೆದಿದ್ದಾರೆ. ಅವರಿಗೆ ಈಗ ಪೊಲೀಸರ ರಕ್ಷಣೆ ನೀಡಲಾಗಿದೆ. ಆದರೆ, ಭಗವಾನ್, ಚಂದ್ರಶೇಖರ ಪಾಟೀಲ ಅವರು ದೇವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದು ಸರಿಯಲ್ಲ’ ಎಂದರು.

ಎಫ್ಐಆರ್ ಹಾಕಲಿ: ‘ನರೇಂದ್ರ ಮೋದಿ ನರಹಂತಕ. ನೂರಾರು ಮುಸ್ಲಿಮರನ್ನು ಕೊಂದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಕೊಡಗಿನ ಕಾರ್ಯಕ್ರಮವೊಂದರಲ್ಲಿ ಈ ಹಿಂದೆ ಹೇಳಿದ್ದರು. ಅವರ ವಿರುದ್ಧ ಎಫ್.ಐ.ಆರ್ ದಾಖಲಿಸಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಾಂಡ ಕಾರ್ಯಪ್ಪ ಆಗ್ರಹಿಸಿದರು.

‘ಟಿಪ್ಪು ನಾಯಿಗಿಂತ ಕಡೇ. ಆತನ ಜಯಂತಿಯನ್ನು ಸರ್ಕಾರ ಆಚರಿಸುತ್ತಿದೆ. ಪ್ರೊ.ಭಗವಾನ್ ಎಂಬ ಬಾಬರ್ ಹಾಗೂ ಚಂಪಾ ಅವರಿಗೆ ತಲೆಕೆಟ್ಟಿದ್ದು, ಅವರು ನಿಜವಾದ ರಾಷ್ಟ್ರದ್ರೋಹಿ’ ಎಂದು ಟೀಕಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಮಂಡ್ಯ ಘಟಕದ ಉಪಾಧ್ಯಕ್ಷೆ ಬಿ.ಎಸ್‌.ಅನುಪಮಾ, ಲೇಖಕ ಹನಿಯೂರು ಚಂದ್ರೇಗೌಡ ಇದ್ದರು.

ಸಂವಿಧಾನ ಬದಲಿಗೆ ಆಗ್ರಹ:

‘ಇಂದಿನ ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಸಂವಿಧಾನದ ಮೂಲಸ್ವರೂಪವನ್ನು ಬದಲಾಯಿಸಬೇಕು’ ಎಂದು ವಕೀಲ ಪಿ.ಕೃಷ್ಣಮೂರ್ತಿ ಆಗ್ರಹಿಸಿದರು.

‘ಸಂವಿಧಾನದ ಮೂಲ ಸ್ವರೂಪ ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರು ತೀರ್ಪು ನೀಡಿದ್ದರು. ಆ ತೀರ್ಪು ಮರುವ್ಯಾಖ್ಯಾನಕ್ಕೆ ಒಳಗಾಗಬೇಕು. ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಬೀಳುತ್ತಿರುವ ಹೊಡೆತದಿಂದ ಪಾರಾಗಬೇಕಾದರೆ ಸಂವಿಧಾನಕ್ಕೆ ತಿದ್ದುಪಡಿ ಅಗತ್ಯವಿದೆ’ ಎಂದರು.

‘ರಾಮ ಮಂದಿರ ವಿವಾದವನ್ನು ತ್ವರಿಗತಿಯಲ್ಲಿ ಇತ್ಯರ್ಥಪಡಿಸಲು ಸುಪ್ರೀಂಕೋರ್ಟ್‌ಗೆ ಗಡುಸುತನವಿಲ್ಲ’ ಎಂದು ಟೀಕಿಸಿದರು.

ಸಂವಿಧಾನ ಅಳಿಸಲು ಸಾಧ್ಯವಿಲ್ಲ:

ಕೃತಿಯ ಲೇಖಕ ಸುಧಾಕರ್ ಹೊಸಳ್ಳಿ ಮಾತನಾಡಿ, ‘ಸಂವಿಧಾನ ಉಳಿಸಿ ಎಂದು ನಿವೃತ್ತ ನ್ಯಾಯಮೂರ್ತಿಯೊಬ್ಬರು ಎಲ್ಲ ಕಡೆಗಳಲ್ಲಿ ಉಪನ್ಯಾಸ ನೀಡುತ್ತಿದ್ದಾರೆ. ಸಂವಿಧಾನ ಉಳಿಸಲು ಇವರ್ಯಾರು? ಶ್ರೀರಾಮ ಬಂದರೂ ಸಂವಿಧಾನವನ್ನು ಅಳಿಸಲು ಸಾಧ್ಯವಿಲ್ಲ’ ಎಂದರು.

‘ಪ್ರೊ.ಕೆ.ಎಸ್.ಭಗವಾನ್ ಅವರು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರಿಗೆ ಜನರ ತೆರಿಗೆ ಹಣದಲ್ಲಿ ಪೊಲೀಸರ ರಕ್ಷಣೆ ನೀಡಲಾಗಿದೆ. ಇದನ್ನು ಹಿಂಪಡೆಯದಿದ್ದರೆ ಕೋರ್ಟ್ ಮೊರೆ ಹೋಗುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಸಾಹಿತ್ಯ ಮೊಲೆ ಉಣಿಸುವ ತಾಯಿಯಂತಿರಬೇಕು. ಆದರೆ, ಕೆಲ ಸಾಹಿತಿಗಳು ಮಲವನ್ನು ಉಣಿಸುವ ಕೆಲಸ ಮಾಡುತ್ತಿದ್ದಾರೆ. ದೇಶದಲ್ಲಿ ಬೆಂಕಿ ಹಚ್ಚುವಂತಹ ಸಾಹಿತ್ಯವನ್ನು ಬರೆಯುತ್ತಿದ್ದಾರೆ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !