ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ: ಎಲ್.ಹನುಮಂತಯ್ಯ ಆತಂಕ

7

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ: ಎಲ್.ಹನುಮಂತಯ್ಯ ಆತಂಕ

Published:
Updated:
Deccan Herald

ಮೈಸೂರು: ಭಿನ್ನ ಅಭಿಪ್ರಾಯ, ಪರ್ಯಾಯ ಚಿಂತನೆ ವ್ಯಕ್ತಪಡಿಸುವವರನ್ನು ಗೃಹಬಂಧನದಲ್ಲಿ ಇರಿಸಲಾಗುತ್ತಿದೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ತಲೆದೋರಿದೆ ಎಂದು ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಇಲ್ಲಿ ಆತಂಕ ವ್ಯಕ್ತಪಡಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ವೈದ್ಯವಾರ್ತಾ ಪ್ರಕಾಶನ ಆಶ್ರಯದಲ್ಲಿ ಮಾನಸ ಗಂಗೋತ್ರಿಯಲ್ಲಿ ಶನಿವಾರ ಆಯೋಜಿಸಿದ್ದ ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ರಚಿಸಿರುವ ‘ಚುಟುಕು ಚಿಂತನ ಮಾ ಕಾವ್ಯ ಮಂಥನ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹಿಂಸಾಚಾರದಲ್ಲಿ ತೊಡಗಿದರೆ ಅದು ಕಾನೂನು ಪ್ರಕಾರ ಅಪರಾಧ. ಆದರೆ, ನಕ್ಸಲ್ ವಾದದಲ್ಲಿ ನಂಬಿಕೆ ಹೊಂದಿರುವವರನ್ನು ಬಂಧಿಸಲಾಗುತ್ತಿದೆ. ಹಿಂದೊಮ್ಮೆ, ವಿಧಾನ ಪರಿಷತ್‌ನಲ್ಲಿ ಭಾಷಣ ಮಾಡುವ ವೇಳೆ, ನಾನು ನಕ್ಸಲ್ ಆಗಬೇಕೆಂದು ಇದ್ದವನು. ಅನಿವಾರ್ಯವಾಗಿ ವಿಧಾನ ಪರಿಷತ್ ಸದಸ್ಯನಾಗಿದ್ದೆ ಎಂದು ಹೇಳಿದ್ದೆ. ಅದಕ್ಕೆ ಕಾರಣವನ್ನೂ ವಿವರಿಸಿದ್ದೆ. ಇದಕ್ಕೆ ಬಹುತೇಕರು ಸಹಮತ ವ್ಯಕ್ತಪಡಿಸಿದ್ದರು. ಬಲಪಂಥೀಯ ಸದಸ್ಯರೂ ಒಪ್ಪಿದ್ದರು. ಆದರೆ, ಈಗ ಪರಿಸ್ಥಿತಿ ಭಿನ್ನವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿಂತಕರು ನಿರ್ಭೀತಿಯಿಂದ ತಮ್ಮ ಅಭಿಪ್ರಾಯವನ್ನು ಹೇಳಲು ಸಾಧ್ಯವಾಗದ ಪರಿಸ್ಥಿತಿ ಇದೆ. ವೈಚಾರಿಕ ಹಾಗೂ ಪರ್ಯಾಯ ಚಿಂತನೆಗಳನ್ನು ಪ್ರೀತಿಯಿಂದ ಸ್ವೀಕರಿಸುವ ವಾತಾವರಣ ಇಲ್ಲ. ಸಾಹಿತ್ಯಕ್ಕೂ ಆತಂಕ ಎದುರಾಗಿದೆ. ತಮಿಳುನಾಡಿನಲ್ಲಿ ಕೃತಿಯೊಂದನ್ನು ನಿಷೇಧಿಸಲಾಗಿದೆ. ಕೇರಳದಲ್ಲೂ ಕೃತಿಯೊಂದನ್ನು ನಿಷೇಧಿಸಲು ಮುಂದಾಗಿದ್ದಾರೆ. ಕರ್ನಾಟಕದಲ್ಲಿ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವವರ ಕೊಲೆ ಮಾಡಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಂ.ನೀಲಗಿರಿ ತಳವಾರ ಮಾತನಾಡಿ, ‘ಚುಟುಕುಗಳ ಬಗ್ಗೆ ಈವರೆಗೆ ಗಂಭೀರ ವಿಮರ್ಶೆ ನಡೆದಿರಲಿಲ್ಲ. ಆದರೆ, ಅರವಿಂದ ಮಾಲಗತ್ತಿ ಆ ಕೆಲಸವನ್ನು ಮಾಡಿದ್ದಾರೆ. ಮಾ ಕಾವ್ಯ ಎಂಬ ಹೊಸ ಪರಿಕಲ್ಪನೆಯನ್ನು ಈ ಕೃತಿಯ ಮೂಲಕ ಸಾದರಪಡಿಸಿದ್ದಾರೆ. ಈಗಿನ ಎಸ್‌ಎಂಎಸ್ ಕಾವ್ಯವನ್ನೂ ಈ ಗುಂಪಿಗೆ ಸೇರಿಸಿದ್ದಾರೆ’ ಎಂದರು.

ವಿದ್ವಾಂಸ ಟಿ.ವಿ.ವೆಂಕಟಾಚಲಶಾಸ್ತ್ರಿ ಮಾತನಾಡಿ, ‘ಚುಟುಕುಗಳು ಚಿಕ್ಕವೇ. ಆದರೆ, ಅವು ಕೊಡುವ ಸಂದೇಶ, ಮುಟ್ಟಿಸುವ ಚುರುಕುತನ ದೊಡ್ಡದು. ಮಾಲಗತ್ತಿ ಚುಟುಕುಗಳ ಬಗ್ಗೆ ಶೋಧನೆ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ’ ಎಂದು ಹೇಳಿದರು.

ವೈದ್ಯವಾರ್ತಾ ಪ್ರಕಾಶನದ ಡಾ.ಎಂ.ಜಿ.ಆರ್.ಅರಸ್, ಚುಟುಕು ಸಾಹಿತ್ಯ ಪರಿಷತ್‌ನ ಸಂಘಟನಾ ಕಾರ್ಯದರ್ಶಿ ಎಂ.ಚಂದ್ರಶೇಖರ್ ಇದ್ದರು.

ಸ್ವಚ್ಛ ಭಾರತ ಜಾಹೀರಾತಿಗೆ ₹1,000 ಕೋಟಿ

ಕೇಂದ್ರ ಸರ್ಕಾರವು ‘ಸ್ವಚ್ಛ ಭಾರತ’ ಯೋಜನೆಯ ಜಾಹೀರಾತಿಗೆ ₹1,000 ಕೋಟಿ ಖರ್ಚು ಮಾಡಿದೆ. ಆದರೆ, ಈ ದೇಶವನ್ನು ಸ್ವಚ್ಛಗೊಳಿಸುತ್ತಿರುವ ಲಕ್ಷಾಂತರ ಪೌರಕಾರ್ಮಿಕರಿಗೆ ₹5 ಸಾವಿರ ವೇತನ ನೀಡಲು ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ಮಲ ಹೊರುವ ಪದ್ಧತಿ ಜೀವಂತವಾಗಿದೆ. ಜಾಹೀರಾತಿಗೆ ಖರ್ಚು ಮಾಡಿದ ಹಣವನ್ನು ಪೌರಕಾರ್ಮಿಕರಿಗೆ ಕೊಟ್ಟಿದ್ದರೆ, ದೇಶ ಮತ್ತಷ್ಟು ಸ್ವಚ್ಛವಾಗುತ್ತಿತ್ತು. ಬೌದ್ಧಿಕ ಸ್ವಚ್ಛತೆಗಿಂತ ಮಾನಸಿಕ ಸ್ವಚ್ಛತೆ ಆಗಬೇಕಿದೆ ಎಂದು ಎಲ್. ಹನುಮಂತಯ್ಯ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !