ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರಕಾರ್ಮಿಕರ ನಿತ್ಯಕರ್ಮಕ್ಕೂ ಸಮಸ್ಯೆ

ಮಳೆ, ಗಾಳಿ, ಬಿಸಿಲೆನ್ನದೆ ಶ್ರಮಿಸುವ ಕಾರ್ಮಿಕರು; ಕಾಯಂಗೊಳಿಸಲು ಆಗ್ರಹ
Last Updated 12 ಮೇ 2019, 19:57 IST
ಅಕ್ಷರ ಗಾತ್ರ

ಮೈಸೂರು:ಪ್ರವಾಸೋದ್ಯಮ ಕ್ಷೇತ್ರವಲ್ಲದೆ ಸ್ವಚ್ಛತೆ ದೃಷ್ಟಿಯಿಂದಲೂ ದೇಶದ ಜನರ ಗಮನ ಸೆಳೆದ ನಗರ ಮೈಸೂರು. ರಾಷ್ಟ್ರಮಟ್ಟದಲ್ಲೇ ‘ಅತ್ಯಂತ ಸ್ವಚ್ಛ’ ನಗರ ವಿಭಾಗದಲ್ಲಿ ಹಿಂದೆ ಅಗ್ರಸ್ಥಾನವನ್ನು ಅಲಂಕರಿಸಿದ ಕೀರ್ತಿಯೂ ಮೈಸೂರಿಗಿದೆ. 2019ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಸ್ವಚ್ಛತಾ ಸಮೀಕ್ಷೆಯಲ್ಲಿ ಅತ್ಯಂತ ಸ್ವಚ್ಛ ನಗರ ವಿಭಾಗದಲ್ಲಿ 3ನೇ ಸ್ಥಾನ ಬಂದಿದೆ. ಇದರ ನಿಜವಾದ ಶ್ರೇಯಸ್ಸು ಸಲ್ಲಬೇಕಿರುವುದು ಪೌರಕಾರ್ಮಿಕರಿಗೆ.

ಕಸದ ನಿರ್ವಹಣೆಯನ್ನು ಮಹಾನಗರ ಪಾಲಿಕೆ ನೋಡಿಕೊಂಡರೂ, ಮನೆ ಮನೆಗೆ ಹೋಗಿ ಕಸ ಸಂಗ್ರಹಿಸುವುದು, ರಸ್ತೆ, ಪಾದಚಾರಿ ಮಾರ್ಗ, ನಿರ್ಜನ ಪ್ರದೇಶಗಳಲ್ಲಿ ಬಿದ್ದಿರುವ ಕಸವನ್ನು ಗುಡಿಸಿ ಸ್ವಚ್ಛಗೊಳಿಸುವ ಕೆಲಸವನ್ನು ಪೌರಕಾರ್ಮಿಕರು ನಿಷ್ಠೆಯಿಂದ ಮಾಡುತ್ತಿದ್ದಾರೆ. ರಸ್ತೆ, ಬೀದಿ, ಬಡಾವಣೆಗಳ ಸ್ವಚ್ಛತೆಗೆ ಮಳೆ, ಗಾಳಿ, ಬಿಸಿಲೆನ್ನದೆ ಶ್ರಮಿಸುವ ಪೌರಕಾರ್ಮಿಕರ ಸಮಸ್ಯೆಗಳು ಹತ್ತಾರು. ಕೌಟುಂಬಿಕ ಹಾಗೂ ಕಾರ್ಯಕ್ಷೇತ್ರದಲ್ಲೂ ಅನೇಕ ಸವಾಲು ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಪೌರಕಾರ್ಮಿಕರಿಗೆ ಕೈಗವಸು, ಶೂ, ಪೊರಕೆ, ತಳ್ಳುವ ಗಾಡಿ, ಸಮವಸ್ತ್ರ ಸೇರಿದಂತೆ ಕಸವನ್ನು ಎತ್ತಿ ಹಾಕಲು ಸಲಕರಣೆಗಳನ್ನು ಪಾಲಿಕೆ ಒದಗಿಸಬೇಕು. ಆದರೆ, ಬಹುತೇಕ ಪೌರಕಾರ್ಮಿಕರಿಗೆ ಕೈಗವಸು, ಶೂಗಳನ್ನು ಒದಗಿಸಿಲ್ಲ. ಒದಗಿಸಿದ್ದರೂ ಅವುಗಳನ್ನು ಪೌರಕಾರ್ಮಿಕರು ಬಳಸುತ್ತಿಲ್ಲ. ಇದರಿಂದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಕೆಲಸ ಮಾಡುವ ಸ್ಥಳಗಳಲ್ಲಿ ಶೌಚಾಲಯ ಇಲ್ಲದೆ ಮಲಮೂತ್ರ ವಿಸರ್ಜನೆ ಮಾಡಲೂ ಪಡಿಪಾಟಲು ಅನುಭವಿಸುವ ಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಮನೆ ಮುಂದೆ ಕೈಚಾಚುವಂತಹ ಪರಿಸ್ಥಿತಿಯೂ ಉಂಟು.

‘ನಾನು 13 ವರ್ಷಗಳಿಂದ ಪೌರಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದೇನೆ. 21ನೇ ವಾರ್ಡ್‌ನಲ್ಲಿ ನನ್ನ ಕೆಲಸ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಕೆಲಸ ಮಾಡಬೇಕು. ನಾನು ಮಂಡಕಳ್ಳಿಯಲ್ಲಿ ವಾಸವಾಗಿದ್ದು, ಬೆಳಿಗ್ಗೆ 5ಕ್ಕೆ ಮನೆ ಬಿಟ್ಟು ಇಲ್ಲಿಗೆ ಬರುತ್ತೇನೆ. ಕೈಗಾಡಿಯನ್ನು ತಳ್ಳಿಕೊಂಡು ಮನೆ ಮನೆಗೂ ಹೋಗಿ ಕಸ ಸಂಗ್ರಹಿಸುತ್ತೇನೆ. ವಾರಕ್ಕೊಂದು ದಿನ ರಜೆ ಕೊಡಬೇಕು. ಆದರೆ, ಆ ನಿಯಮವನ್ನು ಇಲ್ಲಿ ಪಾಲಿಸುತ್ತಿಲ್ಲ. ಭಾನುವಾರವೂ ಬೆಳಿಗ್ಗೆ 11 ಗಂಟೆವರೆಗೆ ದುಡಿಯಬೇಕು. ಹಬ್ಬದ ದಿನಗಳಲ್ಲೂ ಬೆಳಿಗ್ಗೆ 10ರವರೆಗೆ ಕೆಲಸ ಮಾಡಬೇಕು. ರಜೆ ಹಾಕಿದರೆ ಸಂಬಳದಲ್ಲಿ ಕಟ್ ಮಾಡುತ್ತಾರೆ’ ಎಂದು ಪೌರಕಾರ್ಮಿಕರಾದ ಸರಿತಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಾನು ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದೇನೆ. ಸಂಬಳವನ್ನು 15ನೇ ತಾರೀಖಿನೊಳಗೆ ಕೊಡಬೇಕೆಂಬ ನಿಯಮ ಇದ್ದರೂ ಯಾವಾಗ ಸಂಬಳ ಕೈಗೆ ಬರುತ್ತದೆ ಎಂಬುದು ಗ್ಯಾರಂಟಿ ಇಲ್ಲ. 20 ಸಾವಿರ ರೂಪಾಯಿ ಬೋನಸ್ ಕೊಡುತ್ತೇವೆ ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದರು. ಆದರೆ, ಅದನ್ನೂ ಕೊಟ್ಟಿಲ್ಲ’ ಎಂದು ಅಳಲು ತೋಡಿಕೊಂಡರು.

‘ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ ಕಾಯಂಗೊಳಿಸಬೇಕು. ಕನಿಷ್ಠ ವೇತನ 18 ಸಾವಿರ ರೂಪಾಯಿ ಕೊಡಬೇಕು. 700 ಜನರಿಗೆ ಒಬ್ಬ ಪೌರಕಾರ್ಮಿಕ ಎಂಬ ನಿಯಮವನ್ನು ಬದಲಿಸಿ 500 ಮಂದಿಗೆ ಒಬ್ಬ ಪೌರಕಾರ್ಮಿಕರನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.

ಜೆ.ಪಿ.ನಗರದಲ್ಲಿ ವಾಸವಾಗಿರುವ ರೂಪಾ, ಗಂಗೋತ್ರಿ ಬಡಾವಣೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.

‘ಬೆಳಿಗ್ಗೆ 5.30ಕ್ಕೆ ಮನೆ ಬಿಡುತ್ತೇನೆ. ನಿರ್ದಿಷ್ಟ ಬೀದಿಯಲ್ಲಿ ಹೋಗಿ ಕಸ ಸಂಗ್ರಹಿಸುತ್ತೇನೆ. ಎಷ್ಟೋ ಬಾರಿ ಮನೆಯಲ್ಲಿ ನಿತ್ಯಕರ್ಮ ಮಾಡಲು ಸಾಧ್ಯವಾಗದೆ ಕೆಲಸಕ್ಕೆ ಬಂದ ಉದಾಹರಣೆ ಉಂಟು. ಅಂತಹ ಸಂದರ್ಭಗಳಲ್ಲಿ ನಮಗೆ ತೀವ್ರ ಸಮಸ್ಯೆ ಆಗುತ್ತದೆ. ಕೆಲ ಮನೆಯವರ ಪರಿಚಯ ಇರುವುದರಿಂದ ಅವರ ಬಳಿ ಗೋಗರೆದು ನಿತ್ಯಕರ್ಮ ಮುಗಿಸುತ್ತೇವೆ. ಆದರೂ ಇದು ಮುಜುಗರದ ಸಂಗತಿ’ ಎಂದು ರೂಪಾ ತಮ್ಮ ಸ್ಥಿತಿಯನ್ನು ಬಿಚ್ಚಿಟ್ಟರು.

ಗಂಗೋತ್ರಿ ಬಡಾವಣೆಯಲ್ಲಿ ಸಮುದಾಯ ಶೌಚಾಲಯವನ್ನು ನಿರ್ಮಿಸಲಾಗಿದೆ. ಆದರೆ, ಅದು ಇನ್ನೂ ಉದ್ಘಾಟನೆಯಾಗಿಲ್ಲ. ಈ ಹಿಂದೆ ಇಂದಿರಾ ಕ್ಯಾಂಟೀನ್‌ನಿಂದ ತಿಂಡಿ ನೀಡುತ್ತಿದ್ದರು. ಅದು ಚೆನ್ನಾಗಿರುತ್ತಿರಲಿಲ್ಲ. ಅದನ್ನು ತಿಂದರೆ ಹುಷಾರು ತಪ್ಪುತ್ತಿತ್ತು. ಹೀಗಾಗಿ, ಇಂದಿರಾ ಕ್ಯಾಂಟೀನ್ ತಿಂಡಿ- ಊಟ ಬೇಡ ಎಂದಿದ್ದಕ್ಕೆ ಅದನ್ನು ನಿಲ್ಲಿಸಲಾಗಿದೆ. ಅದರ ಬದಲಾಗಿ ಹಣ ನೀಡಿದರೆ ತಿಂಡಿ ತಿಂದುಕೊಳ್ಳುತ್ತೇವೆ ಎಂದು ಮನವಿ ಮಾಡಿದರು.

‘ವರ್ಷಕ್ಕೊಮ್ಮೆಅಪೋಲೊ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ ಮಾಡುತ್ತಾರೆ. ಆರೋಗ್ಯದಲ್ಲಿ ತುಂಬಾ ಏರುಪೇರಾದರೆ ಇ.ಎಸ್.ಐ ಆಸ್ಪತ್ರೆಗೆ ಹೋಗುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT