ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತಾಟದಿಂದ ಅಧೋಗತಿಯತ್ತ ಶಿಕ್ಷಣ: ಡಾ.ಅರವಿಂದ ಮಾಲಗತ್ತಿ ಬೇಸರ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ
Last Updated 7 ಜನವರಿ 2019, 12:30 IST
ಅಕ್ಷರ ಗಾತ್ರ

ಮೈಸೂರು: ಈಚಿನ ದಿನಗಳಲ್ಲಿ ಭಾರತದಲ್ಲಿ ಸಂವಿಧಾನಕ್ಕೂ ಧಾರ್ಮಿಕ ನೀತಿಗಳಿಗೂ ಹಗ್ಗ ಜಗ್ಗಾಟ ನಡೆಯುತ್ತಿದೆ. ಇದರಿಂದ ಶಿಕ್ಷಣ ನೀತಿ ಅಧೋಗತಿಗೆ ಜಾರುತ್ತಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ಸಾಹಿತ್ಯ– ಬೋಧನೆ ಮತ್ತು ಸಂಶೋಧನೆಯ ಹೊಸ ಸಾಧ್ಯತೆಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ– ಮತೀಯ ವಿಚಾರ ಮೀರಿದ ಚಿಂತನಾ ವ್ಯವಸ್ಥೆ ವಿಶ್ವವಿದ್ಯಾಲಯಗಳಲ್ಲಿ ಜಾರಿಗೊಂಡಾಗ ಮಾತ್ರ ಸಾಮಾಜಿಕ ಸಮಾನತೆ ಜಾರಿಗೊಳ್ಳಲು ಸಾಧ್ಯ. ಅಂಬೇಡ್ಕರ್‌ ಅವರು ಇದನ್ನು ಪ್ರತಿಪಾದಿಸಿದ್ದರು ಎಂದು ಅವರು ಉಲ್ಲೇಖಿಸಿದರು.

‘ಪಾಶ್ಚಿಮಾತ್ಯ ಶಿಕ್ಷಣದ ಪ್ರಭಾವಕ್ಕೆ ಒಳಗಾಗಿ ನಮ್ಮ ಶಿಕ್ಷಣ ಪದ್ಧತಿಯನ್ನು ಪ್ರಯೋಗಗಳಿಗೆ ಸೀಮಿತ ಮಾಡಲಾಗುತ್ತಿದೆ. ನನ್ನ 40 ವರ್ಷಗಳ ಅಧ್ಯಾಪಕ ವೃತ್ತಿಯ ಕೊನೆಯ 10 ವರ್ಷಗಳಲ್ಲಿ ತೊಳಲಾಟ ಅನುಭವಿಸಿದ್ದೇನೆ. ವಾರ್ಷಿಕ ಪರೀಕ್ಷೆ ಪದ್ಧತಿ ತೆಗದು ಹಾಕಿ, ಸೆಮಿಸ್ಟರ್ ಪದ್ಧತಿ ಜಾರಿಯಾಯಿತು. ಬಳಿಕ ಸಿಬಿಸಿಎಸ್‌ ಇತ್ಯಾದಿ ವ್ಯವಸ್ಥೆ ಬಂದಿತು. ಹೊಸ ಪ್ರಯೋಗಗಳು ಇರಬೇಕು ನಿಜ. ಆದರೆ, ಅವೇ ಹೆಚ್ಚಾದರೆ ಬೋಧನೆ ಸೊರಗುತ್ತದೆ’ ಎಂದರು.

‘ಈ ಹಿಂದೆ ನಾನು ಶಿಕ್ಷಕರಿಗೆ ಪುನಶ್ಚೇತನ ಶಿಬಿರಗಳನ್ನೇ ಮೊಟಕುಗೊಳಿಸಬೇಕು ಎಂದು ವಾದಿಸುತ್ತಿದ್ದೆ. ಶಿಬಿರಗಳು ಅವುಗಳ ಕಾಲ ಮಿತಿಗೆ ಸೀಮಿತಗೊಳ್ಳದೇ ವರ್ಷದ ಎಲ್ಲ ದಿನಗಳಿಗೂ ವಿಸ್ತರಣೆಗೊಳ್ಳಬೇಕು. ಪುನಶ್ಚೇತನ ಕ್ರಿಯೆಯು ವರ್ಷದ ಎಲ್ಲ ದಿನಗಳಲ್ಲೂ ಇರಬೇಕು‘ ಎಂದು ಹೇಳಿದರು.

‘ಪುನಶ್ಚೇತನ’ ಕೃತಿ ಬಿಡುಗಡೆಗೊಳಿಸಿದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ವಿ.ವಿ.ಗೆ ಬೋಧಕಾಂಗ ಮುಖ್ಯವೇ ಹೊರತು, ಕಟ್ಟಡ, ಸೌಲಭ್ಯಗಳು ಮುಖ್ಯವಲ್ಲ. ಈ ನಿಟ್ಟಿನಲ್ಲಿ ಅಧ್ಯಾಪಕರನ್ನು ಬಲಪಡಿಸುವುದು ಆದ್ಯತೆಯಾಗಬೇಕು ಎಂದರು.

ಮುರುಘಾಮಠದ ಶೂನ್ಯ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾಶರಣರು ಸಾನ್ನಿಧ್ಯವಹಿಸಿದ್ದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕೃತಿಯ ಪ್ರಧಾನ ಸಂಪಾದಕ ಪ್ರೊ.ನೀಲಗಿರಿ ತಳವಾರ್, ನಿವೃತ್ತ ಪ್ರಾಧ್ಯಾಪಕ ಎನ್.ಎಸ್.ತಾರಾನಾಥ್, ಕೃತಿಯ ಸಂಪಾದಕರಾದ ಡಾ.ಸಿ.ಟಿ.ಜಯಣ್ಣ, ಡಾ.ಜಿ.ಎಸ್.ಅಶೋಕ್ ಭಾಗವಹಿಸಿದ್ದರು.

ಅರಳಿದ ಮಿದುಳು ಬೇಕು

ಪುಸ್ತಕ ರಚನೆಗೆ ಜಾಗೃತಿ ಅಗತ್ಯ. ಅರಳಿದ ಮಿದುಳು ಶ್ರೇಷ್ಠ ಕೃತಿಯನ್ನು ನೀಡಬಲ್ಲದು ಎಂದು ಮುರುಘಾಮಠದ ಶೂನ್ಯಪೀಠಾಧ್ಯಕ್ಷ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಚಿಂತನಶೀಲರಿಗೆ ಪುಸ್ತಕ ರಚನೆ ಕಷ್ಟವಲ್ಲ. ಮಂಥನ ನಡೆಸುವವರ ತಲೆಯಲ್ಲಿ ಚಿಂತನೆ ಬರುತ್ತದೆ. ಬೋಧಕ ಲೋಕದ ಅತ್ಯದ್ಭುತ ಸ್ಥಿತಿ ಚಿಂತನ-ಮಂಥನವಾಗಬೇಕು. ಪುಸ್ತಕಗಳು ಮಿದುಳಿನ ಮೇವಾಗಬೇಕು ಎಂದು ಸಲಹೆ ನೀಡಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT