ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛನಗರವೂ... ಕಸದ ಸಮಸ್ಯೆಯೂ...

Last Updated 12 ಮೇ 2019, 19:48 IST
ಅಕ್ಷರ ಗಾತ್ರ

ಮೈಸೂರು: ಸ್ವಚ್ಛನಗರ, ಅರಮನೆ ನಗರಿ... ಹೀಗೆ ವಿವಿಧ ಅಭಿದಾನಗಳಿಂದ ಜಗದ್ವಿಖ್ಯಾತಿ ಗಳಿಸಿರುವ ಮೈಸೂರು ಪ್ರವಾಸಿಗರನ್ನು ಸೆಳೆಯುವ ಹಲವು ಅಂಶಗಳನ್ನು ತನ್ನೊಡಲೊಳಗೆ ಹುದುಗಿಸಿಕೊಂಡಿದೆ. ಜತೆ ಜತೆಗೆ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆಯೂ ನಗರವನ್ನು ಬಾಧಿಸುತ್ತಿದೆ. ಅಲ್ಲಲ್ಲಿ ಕಸದ ರಾಶಿಗಳು ಕಣ್ಣಿಗೆ ರಾಚುತ್ತಿವೆ. ಈ ಕುರಿತು ಈ ವಾರದ ನಮ್ಮನಗರ ನಮ್ಮ ಧ್ವನಿಯಲ್ಲಿ ಬೆಳಕುಚೆಲ್ಲಲು ಪ್ರಯತ್ನಿಸಲಾಗಿದೆ...

ಮೈಸೂರು: ಮುಂಜಾನೆಯ ವಾಯುವಿಹಾರ ನಡೆಸುವವರು, ದೂರದ ಊರಿನಿಂದ ಬಂದು ಬಸ್‌ ಇಳಿದು ತಮ್ಮ ಗಮ್ಯ ಸೇರುವವರು ಅಸಹ್ಯ ಪಡುವಂಥ ಸನ್ನಿವೇಶ. ಅದಕ್ಕೆ ಕಾರಣ ನಗರದ ಕೆಲವು ಕಡೆ ತ್ಯಾಜ್ಯದ ರಾಶಿ. ರಸ್ತೆ ಬದಿಯಲ್ಲೋ, ರಸ್ತೆ ಬದಿ ಇರುವ ಮರದ ಬುಡಗಳಲ್ಲಿ ತ್ಯಾಜ್ಯವನ್ನು ಪ್ಲಾಸ್ಟಿಕ್‌ ಕವರ್‌ಗಳಲ್ಲಿ ಕಟ್ಟಿ ಇಟ್ಟಿರುವ ಸ್ಥಿತಿ. ಉದ್ಯಾನಗಳ ಮೂಲೆಯಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ವಿವಿಧ ಬಗೆಯ ತ್ಯಾಜ್ಯ...

ಇದು ಯಾವುದೋ ನಗರದ ಸ್ಥಿತಿಯಲ್ಲ. ಎರಡು ಬಾರಿ ದೇಶದ ಸ್ವಚ್ಛನಗರ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು, ಮತ್ತೆರಡು ಬಾರಿ ಅದಕ್ಕಿಂತ ಕೆಳಗಿನ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಮೈಸೂರು ನಗರದ ಸ್ವಚ್ಛತೆಯ ಸತ್ಯ. ನಗರದ ಕೆಲವು ಭಾಗಗಳಲ್ಲಿ ನೈರ್ಮಲ್ಯ ಕಂಡು ಬಂದರೂ ಹಲವು ಕಡೆಗಳಲ್ಲಿ ಪರಿಸ್ಥಿತಿ ಅದಕ್ಕೆ ವ್ಯತಿರಿಕ್ತವಾಗಿದೆ. ಮೂಲದಲ್ಲೇ ಕಸವನ್ನು ವಿಂಗಡಿಸುವ ಪ್ರಕ್ರಿಯೆ, ದುರ್ನಾತ, ಪೌರಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳೂ ನಗರದ ತ್ಯಾಜ್ಯ ವಿಲೇವಾರಿಯಲ್ಲಿ ಆಗುತ್ತಿರುವ ವ್ಯತ್ಯಯಕ್ಕೆ ಕೊಡುಗೆ ನೀಡುತ್ತಿವೆ.

65 ವಾರ್ಡ್‌ಗಳನ್ನು ಹೊಂದಿರುವ ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರತಿ ದಿನ 405 ಟನ್‌ ಕಸ ಉತ್ಪತ್ತಿಯಾಗುತ್ತದೆ. ಅದರ ವಿಲೇವಾರಿಯೇ ಸರಿಯಾದ ರೀತಿಯಲ್ಲಿ ಆಗುತ್ತಿಲ್ಲ ಎನ್ನುವ ದೂರು ಸಾರ್ವಜನಿಕ ವಲಯದಲ್ಲಿ ಇದೆ.

ವಿಂಗಡಣೆಯಾಗದ ಹಸಿ–ಒಣ ತ್ಯಾಜ್ಯ:
ತ್ಯಾಜ್ಯ ನಿರ್ವಹಣೆಯ ಆರಂಭದ ಸವಾಲೇ ಹಸಿ ಮತ್ತು ಒಣ ತ್ಯಾಜ್ಯ. ಮನೆ, ಬೀದಿ, ಸಂತೆ, ಸಾರ್ವಜನಿಕ ಸ್ಥಳ, ಮೈದಾನ, ಹೋಟೆಲ್, ಬಾರ್ ಅಂಡ್ ರೆಸ್ಟೊರೆಂಟ್, ತರಕಾರಿ ಮಾರುಕಟ್ಟೆ, ಮೀನು, ಮಾಂಸ ಮಾರುಕಟ್ಟೆ, ಕಲ್ಯಾಣ ಮಂಟಪ, ಆಸ್ಪತ್ರೆ, ಬಸ್–ರೈಲು ನಿಲ್ದಾಣ, ಸರ್ಕಾರಿ–ಖಾಸಗಿ ಕಚೇರಿಗಳು ಸೇರಿದಂತೆ ಎಲ್ಲವೂ ತ್ಯಾಜ್ಯ ಉತ್ಪಾದಿಸುವ ತಾಣಗಳೇ ಆಗಿವೆ. ಆದರೆ, ಅವುಗಳ ವಿಂಗಡಣೆಯೇ ಬಲು ದೊಡ್ಡ ಸಾಹಸ.
ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಬೇಕು ಎಂಬುದು ಪಾಲಿಕೆಯ ಆಶಯ. ಅದಕ್ಕಾಗಿ ಈ ಹಿಂದೆಯೇ ಹಸಿರು ಹಾಗೂ ಕೆಂಪು ಬಣ್ಣದ ಕಸದ ತೊಟ್ಟಿಗಳನ್ನು ನೀಡಲಾಗಿದೆ. ಅಲ್ಲದೆ, ಕೆಲ ಸಂಸ್ಥೆಗಳು ಒಣಕಸ ಸಂಗ್ರಹಕ್ಕೆ ಚೀಲಗಳನ್ನೂ ನೀಡಿವೆ. ಅಲ್ಲಲ್ಲಿ ಸಣ್ಣ ಕಸದ ಡಬ್ಬಿಗಳನ್ನು ಇಡಲಾಗಿದೆ. ಅವುಗಳಲ್ಲಿ ಕೆಲವು ಮುರಿದು ಮೂಲೆ ಸೇರಿವೆ. ಕೆಲವು ಮನೆಗಳಲ್ಲಿ ಕಸವನ್ನು ಪ್ರತ್ಯೇಕವಾಗಿ ನೀಡಿದರೂ, ಕಸ ಸಂಗ್ರಹಿಸುವ ಪಾಲಿಕೆ ವಾಹನದಲ್ಲಿ ಪ್ರತ್ಯೇಕವಾಗಿ ಕಸವನ್ನು ಹಾಕಲು ಅವಕಾಶ ಇಲ್ಲ. ಹಸಿ ಮತ್ತು ಒಣ ತ್ಯಾಜ್ಯವನ್ನು ಒಂದೇ ವಾಹನಕ್ಕೆ ಹಾಕಲಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಕಸ ವಿಂಗಡಿಸಿ ಕೊಟ್ಟರೂ ಪ್ರಯೋಜನ ಏನು ಎಂಬುದು ಹಲವರ ಪ್ರಶ್ನೆ.

ಕಸ ಸಂಗ್ರಹ: ಮೈಸೂರಿನಲ್ಲಿ ಮನೆ ಮನೆಗಳಿಂದ ಕಸ ಸಂಗ್ರಹಿಸಲು ಪಾಲಿಕೆಯು 165 ಆಟೊಗಳನ್ನು ನಿಯೋಜಿಸಿದೆ. ಪ್ರತಿ ದಿನವೂ ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸಲಾಗುತ್ತಿದೆ. ಅನೇಕ ಬೀದಿಗಳಲ್ಲಿ ಕಸವನ್ನು ವಿಂಗಡಿಸಿಯೇ ನೀಡುತ್ತಾರೆ. ಆದರೆ ನಮ್ಮ ಆಟೊದಲ್ಲಾಗಲಿ, ಟಿಪ್ಪರ್‌ಗಳಲ್ಲಾಗಲಿ ಒಣ ಕಸ ಹಾಗೂ ಹಸಿ ಕಸ ಹಾಕಲು ಪ್ರತ್ಯೇಕ ವಿಭಾಗ ಇಲ್ಲ. ಅಲ್ಲದೆ, ಕೆಲವರು ಕಸದ ಬುಟ್ಟಿಯ ಕೆಳ ಭಾಗದಲ್ಲಿ ಒಣಕಸವನ್ನೂ, ಮೇಲ್ಭಾಗದಲ್ಲಿ ಹಸಿ ಕಸವನ್ನೂ ಹಾಕಿ ಕೊಡುತ್ತಾರೆ. ನಾವು ಎಲ್ಲವನ್ನೂ ಒಂದರಲ್ಲೇ ಹಾಕುತ್ತೇವೆ. ಇದರಿಂದ ಪಾಲಿಕೆಯ ಆಶಯವೇ ಮಣ್ಣುಪಾಲಾಗುತ್ತಿದೆ. ಜತೆಗೆ, ಮೂಲದಲ್ಲೇ ವಿಂಗಡಿಸಿ ಕೊಡುವ ಸಾರ್ವಜನಿಕರ ಶ್ರಮವೂ ವ್ಯರ್ಥವಾಗುತ್ತಿದೆ. ಇದನ್ನು ಪರಿಹರಿಸಬೇಕಾದುದು ಪಾಲಿಕೆಯೇ ಹೊರತು ಸಾರ್ವಜನಿಕರಲ್ಲ. ಒಂದೇ ವಾಹನದಲ್ಲಿ ಎರಡೂ ಬಗೆಯ ತ್ಯಾಜ್ಯ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಪೌರಕಾರ್ಮಿಕ.

‘ನಾವು ಸರಿಯಾದ ಸಮಯಕ್ಕೆ ಕಂದಾಯವನ್ನು ಪಾವತಿ ಮಾಡುತ್ತೇವೆ. ಅದನ್ನು ಬಳಸಿಕೊಂಡು ಕಸವನ್ನು ಪಾಲಿಕೆಯವರೇ ವಿಂಗಡಿಸಲಿ. ಅವುಗಳನ್ನು ವಿಂಗಡಿಸಿಕೊಂಡು ಕುಳಿತುಕೊಳ್ಳಲು ನಮಗೆ ಸಮಯ ಎಲ್ಲಿದೆ ಎನ್ನುತ್ತಾರೆ’ ಉದಯಗಿರಿ ನಿವಾಸಿ ವಿಷ್ಣು.‌

ಸಾರ್ವಜನಿಕರಲ್ಲಿ ಮೊದಲು ಸ್ವಚ್ಛತೆಯ ಪ್ರಜ್ಞೆ ಮೂಡಬೇಕಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ಹಸಿ–ಒಣ ತ್ಯಾಜ್ಯ ವಿಂಗಡಿಸಿ ನೀಡುವ ಮೂಲಕ, ನಗರವನ್ನು ಸ್ವಚ್ಛವಾಗಿಡಲು ಕೈ ಜೋಡಿಸಬೇಕು. ಎಲ್ಲವನ್ನೂ ಪಾಲಿಕೆಯೇ ಮಾಡಬೇಕು, ನಾವೂ ಕಂದಾಯ ಪಾವತಿಸುತ್ತೇವೆ ಎಂದು ಹೇಳುತ್ತಿದ್ದರೆ ಯಾವುದೂ ಸಾಂಗವಾಗಿ ನೆರವೇರಲು ಸಾಧ್ಯವಿಲ್ಲ ಎಂದು ಹೇಳುತ್ತಾರೆ ಖಾಸಗಿ ಕಂಪನಿ ಉದ್ಯೋಗಿ ಎ.ಜೆ.ಉದಯಕುಮಾರ್‌.

ತ್ಯಾಜ್ಯ ರಾಶಿ; ಏನು ಕಾರಣ?: ನಗರದಲ್ಲಿ ಈ ಹಿಂದೆ ಹಲವು ಕಡೆ ಕಂಟೇನರ್‌ಗಳನ್ನು ಇಟ್ಟು ಅವುಗಳಲ್ಲಿ ಕಸ ಹಾಕಲು ಅವಕಾಶ ಇತ್ತು. ಆದರೆ, ಈಗ ನಗರದಲ್ಲಿ ಕೇವಲ 70 ಕಂಟೇನರ್‌ಗಳು ಇವೆ. ಪಾಲಿಕೆಯ ವತಿಯಿಂದ ಪ್ರತಿ ದಿನ ಮನೆ ಮನೆಗೆ ಆಟೊಗಳ ಮೂಲಕ ತೆರಳಿ ಕಸ ಸಂಗ್ರಹಿಸಲಾಗುತ್ತಿದೆ. ಹೀಗಿರುವಾಗ ಕಂಟೇನರ್‌ಗಳ ಅಗತ್ಯ ಇಲ್ಲ ಎನ್ನುತ್ತಾರೆ ಪಾಲಿಕೆ ಆರೋಗ್ಯಾಧಿಕಾರಿ ಡಿ.ಜಿ.ನಾಗರಾಜ್‌.

ಕೆಲವು ವಾರ್ಡ್‌ಗಳಲ್ಲಿ ಶೇ 100 ರಷ್ಟು ಕಸ ವಿಂಗಡಣೆ ಆಗುತ್ತಿದೆ. ಹೆಚ್ಚಿನ ಸಾರ್ವಜನಿಕರು ಕಸ ಸಂಗ್ರಹಿಸುವ ಪಾಲಿಕೆಯ ವಾಹನಗಳಿಗೇ ಕಸ ಹಾಕುತ್ತಾರೆ. ಬೆಳಿಗ್ಗೆ ಬೇಗ ಮನೆಯಿಂದ ಹೋಗುವವರು ಕಸದ ಬುಟ್ಟಿಗಳಲ್ಲಿ ಕಸ ಇಟ್ಟು ತೆರಳುತ್ತಾರೆ. ನಮ್ಮ ಪೌರಕಾರ್ಮಿಕರು ಅವುಗಳನ್ನು ಆಟೊಗಳಿಗೆ ತುಂಬಿ ಬಿಡುತ್ತಾರೆ. ಪ್ರತಿ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆವರೆಗೂ ನಮ್ಮ ಆಟೊಗಳು ಕಸ ಸಂಗ್ರಹಿಸುತ್ತವೆ ಎನ್ನುತ್ತಾರೆ ನಾಗರಾಜ್‌.

ತ್ಯಾಜ್ಯ ಸಂಗ್ರಹ ಸಮರ್ಪಕವಾಗಿ ಇರುವುದರಿಂದ ಕಂಟೇನರ್‌ಗಳ ಅಗತ್ಯ ಇಲ್ಲ. ಕಂಟೇನರ್‌ಗಳನ್ನು ಇಡುತ್ತಿದ್ದ ಜಾಗದಲ್ಲಿ ಕಸ ಹಾಕಿದವರಿಗೆ ದಂಡ ವಿಧಿಸಲಾಗುತ್ತಿದೆ. ಮೊದಲ ಬಾರಿಗೆ ಕಸ ಹಾಕುವವರಿಗೆ ₹ 100 ರೂಪಾಯಿ, ಎರಡನೇ ಬಾರಿ ಕಸ ಹಾಕಿದವರಿಗೆ ₹ 200 ರೂಪಾಯಿ ದಂಡ ವಿಧಿಸುತ್ತೇವೆ ಎಂದು ಅವರು ತಿಳಿಸಿದರು.

ವಾಣಿಜ್ಯ ಮಳಿಗೆಗಳು, ಪಿ.ಜಿ. ಅಕಾಮಡೇಶನ್‌ಗಳು ಇರುವ ಕಡೆ ಈ ರೀತಿಯ ಸಮಸ್ಯೆ ಇದೆ. ಕೆಲವು ಬಡಾವಣೆಗಳಲ್ಲಿಯೂ ಈ ರೀತಿ ಕಸ ಹಾಕುತ್ತಾರೆ. ಇದಕ್ಕಾಗಿ ಸ್ವಚ್ಛತಾ ಮೇಲ್ವಿಚಾರಕನ್ನು ನಿಯೋಜಿಸಲಾಗಿದ್ದು, ಈ ರೀತಿ ಕಸ ಹಾಕುವವರನ್ನು ಅವರು ಪತ್ತೆ ಮಾಡುತ್ತಾರೆ. ದಂಡ ವಿಧಿಸುವ ಬಗ್ಗೆ ಪಾಲಿಕೆಯ ಬೈಲಾದಲ್ಲೇ ಉಲ್ಲೇಖಿಸಲಾಗಿದೆ ಎಂದು ಅವರು ವಿವರಿಸುತ್ತಾರೆ.

ಕಾರ್ಮಿಕರ ಕೊರತೆ:
ಪಾಲಿಕೆಯಲ್ಲಿ ಪೌರ ಕಾರ್ಮಿಕರ ಕೊರತೆ ಇದೆ. ಇದೇ ಕಾರಣದಿಂದಾಗಿ ಸ್ವಚ್ಛತೆಯ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ. ಕಾಯಂ ಪೌರಕಾರ್ಮಿಕರು ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2ರವರೆಗೂ, ಗುತ್ತಿಗೆ ಕಾರ್ಮಿಕರು ಬೆಳಿಗ್ಗೆ 6.30ರಿಂದ ಮಧ್ಯಾಹ್ನ 2.30ರವರೆಗೂ ಕೆಲಸ ನಿರ್ವಹಿಸುತ್ತಾರೆ. ಪೌರಕಾರ್ಮಿಕರ ಬದ್ಧತೆಯ ಕೆಲಸದಿಂದಲೇ ಮೈಸೂರು ನಗರ ಸ್ವಚ್ಛತೆಯಲ್ಲಿ ಮುಂಚೂಣಿಯಲ್ಲಿದೆ ಎನ್ನುತ್ತಾರೆ ಪೌರಕಾರ್ಮಿರು.

ಈ ಹಿಂದೆ 500 ಜನರಿಗೆ ಒಬ್ಬ ಪೌರಕಾರ್ಮಿಕರಂತೆ ನೇಮಕ ಮಾಡಿಕೊಂಡಿದ್ದರು. ಆದರೆ, ಈಗ 700 ಮಂದಿಗೆ ಒಬ್ಬ ಪೌರಕಾರ್ಮಿಕರಂತೆ ನಿಯೋಜನೆ ಮಾಡಿದ್ದಾರೆ. ಸರ್ಕಾರ ಹಣ ಉಳಿಸಲು ಹೋಗಿ ಪೌರಕಾರ್ಮಿಕರಿಗೆ ಒತ್ತಡ ಆಗುತ್ತಿದೆ. ಹಗಲು ರಾತ್ರಿ ದುಡಿದ ಕಾರಣದಿಂದಾಗಿಯೇ ಸ್ವಚ್ಛತೆಯಲ್ಲಿ ಉನ್ನತ ಸ್ಥಾನದಲ್ಲಿದೆ. ಲಕ್ಷಾಂತರ ಜನ ಪ್ರತಿ ದಿನ ಮೈಸೂರಿಗೆ ಭೇಟಿ ನೀಡುತ್ತಾರೆ. ಇವೆಲ್ಲವನ್ನೂ ಗಮನಿಸಿದರೆ ಪೌರಕಾರ್ಮಿಕರ ಸಂಖ್ಯೆ ಭಾರಿ ಕಡಿಮೆ ಇದೆ. ನಗರ ಬೆಳೆಯುತ್ತಲೇ ಇದೆ. ಕೈಗಾರಿಕೆಗಳೂ ತಲೆ ಎತ್ತುತ್ತಲೇ ಇವೆ. ಆದರೆ, ಪೌರಕಾರ್ಮಿಕರ ಸಂಖ್ಯೆ ಮಾತ್ರ ಕಡಿಮೆ ಆಗುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಪೌರಕಾರ್ಮಿಕರ ಸಂಘದ ಉನ್ನತ ಸಮಿತಿ ಅಧ್ಯಕ್ಷ ಎನ್‌.ಮಾರ.

ಗುತ್ತಿಗೆ ಪೌರಕಾರ್ಮಿಕರ ಪರಿಸ್ಥಿತಿ ಚಿಂತಾಜನಕವಾಗಿದೆ. ಕೆಲವು ಬಾರಿ ಸರಿಯಾದ ಸಮಯಕ್ಕೆ ಸಂಬಳ ದೊರೆತರೆ ಮತ್ತೆ ಕೆಲವು ಬಾರಿ ವ್ಯತ್ಯಾಸವಾಗುತ್ತದೆ. ಕೆಲವು ಬಾರಿ ಇಎಸ್‌ಐ ಪಾವತಿ ಮಾಡುತ್ತಾರೆ. ಮತ್ತೆ ಕೆಲವು ಬಾರಿ ಪಾವತಿಸುವುದಿಲ್ಲ. ಅನಾಹುತ ಆದರೆ ಅದಕ್ಕೂ ಪರಿಹಾರ ಸಿಗುತ್ತಿಲ್ಲ. ಇದೊಂದು ರೀತಿ ಜೀತ ಪದ್ಧತಿಯಂತೆ ಆಗಿದೆ ಎನ್ನುವುದು ಗುತ್ತಿಗೆ ಪೌರಕಾರ್ಮಿರಕ ಅಳಲು.

ಹಿಂದೆ ಪೌರಕಾರ್ಮಿಕರಿಗೆ ಉಪಾಹಾರ ನೀಡುತ್ತಿದ್ದರು. ಬಳಿಕ ಇಂದಿರಾ ಕ್ಯಾಂಟೀನ್‌ನಲ್ಲಿ ನೀಡಲು ಆರಂಭಿಸಿದರು. ಅಲ್ಲಿ ಉಪಾಹಾರ ತಿಂದ ಹಲವರಿಗೆ ಆರೋಗ್ಯ ಸಮಸ್ಯೆ ಕಾಡಲಾರಂಭಿಸಿತು. ಕಸದ ಮಧ್ಯೆಯೇ ಆಹಾರ ಸೇವಿಸಬೇಕಾದ ಪರಿಸ್ಥಿತಿ ಇದೆ. ನಾವೂ ಮನುಷ್ಯರಲ್ಲವೇ ಎಂದು ಕಸಗುಡಿಸುತ್ತಿದ್ದ ಪೌರಕಾರ್ಮಿಕ ಮಹಿಳೆ ಕಣ್ಣೀರಾದರು.

ಮಾರುಕಟ್ಟೆಗಳಲ್ಲಿ ಕಸ ನಿರ್ವಹಣೆಯೇ ಸಮಸ್ಯೆಯಾಗುತ್ತಿದೆ. ಬೇಸಿಗೆಯಲ್ಲಿ ಕಲ್ಲಂಗಡಿ ಸೇರಿದಂತೆ ವಿವಿಧ ಹಣ್ಣುಹಂಪಲುಗಳ ಆವಕ ಹೆಚ್ಚಿರುತ್ತದೆ. ಸಾಗಣೆ ವೇಳೆ ಕೆಟ್ಟುಹೋದವುಗಳನ್ನು ತ್ಯಾಜ್ಯದಲ್ಲಿ ಹಾಕುತ್ತಾರೆ ಅವುಗಳ ನಿರ್ವಹಣೆಯೂ ಕಷ್ಟಕರವಾಗಿದೆ. ಗುಜರಿ ಅಂಗಡಿಗಳು ಹೆಚ್ಚು ಇರುವ ಕಡೆಯಂತೂ ಹೇಳತೀರದ ಸಮಸ್ಯೆ. ಕೆಲವು ಕಡೆ ಅಂಗಡಿಯವರೂ ಕಸವನ್ನು ಅಲ್ಲಲ್ಲಿ ಎಸೆಯುತ್ತಾರೆ. ಅವುಗಳನ್ನು ಹಸುಗಳು, ನಾಯಿಗಳು ಚೆಲ್ಲಾಪಿಲ್ಲಿ ಮಾಡುತ್ತವೆ. ಈ ಕಾರಣಕ್ಕಾಗಿ ಕಂಟೇನರ್‌ಗಳನ್ನು ಇಡಲೇ ಬೇಕು ಎಂಬುದು ಹಲವರ ಆಗ್ರಹ.

‌ದಸರಾ ಹತ್ತಿರ ಬಂದಾಗ, ಸ್ವಚ್ಛ ಭಾರತದ ಸಮೀಕ್ಷೆ ಅವಧಿಯಲ್ಲಿ ಕೈಗವಸು, ಮುಖಗವಸುಗಳನ್ನು ನೀಡುತ್ತಾರೆ. ಕಾರ್ಮಿಕರ ಕಾಯಂಗೆ ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಸರ್ಕಾರ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು. ವಸತಿ ಹಾಗೂ ನಿವೇಶನಗಳನ್ನು ನೀಡಬೇಕು. ಸಾಲಪ್ಪ ವರದಿ ಜಾರಿಗೆ ತರಬೇಕು. ಗುತ್ತಿಗೆದಾರ ಪೌರಕಾರ್ಮಿಕರ ನೇರ ನೇಮಕಾತಿಯಾಗಬೇಕು ಎಂಬ ಒತ್ತಾಯ ಪೌರಕಾರ್ಮಿಕರದ್ದು.

ಕಂಟೇನರ್‌ ಇದ್ದರೆ ಸಮಸ್ಯೆ ಏನು?:
ನಗರದ ಹಲವೆಡೆ ಈ ಹಿಂದೆ ಇಟ್ಟಿದ್ದ ಕಸದ ತೊಟ್ಟಿ (ಕಂಟೇನರ್‌) ಗಳನ್ನು ಏಕಾಏಕಿ ತೆಗೆದು ಹಾಕಲಾಗಿದೆ. ಇದರಿಂದ ಆ ಜಾಗದಲ್ಲಿ ಕಸ ಚೆಲ್ಲುವುದು ನಿಂತಿಲ್ಲ. ದನಗಳು, ಬೀದಿನಾಯಿಗಳು, ಹಂದಿಗಳು ಕಸವನ್ನು ಚೆಲ್ಲಾಪಿಲ್ಲಿಯಾಗಿಸುತ್ತಿವೆ. ಇದರಿಂದ ಸುತ್ತಲಿನ ವಾತಾವರಣ ಮತ್ತಷ್ಟು ಗಲೀಜು ಆಗುತ್ತಿದೆ. ಕಂಟೇನರ್‌ ಇಟ್ಟರೆ ಅದರಲ್ಲಿ ಸುತ್ತಲಿನ ಜನ ಕಸ ಹಾಕಿದರೆ, ಬೆಳಿಗ್ಗೆ ಅದನ್ನು ವಿಲೇವಾರಿ ಮಾಡಿದರೆ ನಗರ ಸ್ವಚ್ಛವಾಗುತ್ತದೆ. ಇಲ್ಲವಾದರೆ ಜನ ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ಅದರಿಂದ ಕಾರ್ಮಿಕರ ಕೆಲಸದ ಹೊರೆ ಹೆಚ್ಚುತ್ತದೆ. ಇದಕ್ಕೆ ಲಕ್ಷ್ಮಿಪುರಂ ಪೊಲೀಸ್ ಠಾಣೆ ಎದುರಿನ ಕಸದ ರಾಶಿಯೇ ಸಾಕ್ಷಿ.

ಅಲ್ಲಲ್ಲಿ ಕಸ:
ನಗರವನ್ನು ಒಂದು ಬಾರಿ ಸುತ್ತಾಡಿದರೆ ಅಲ್ಲಲ್ಲಿ ಕಸದ ದರ್ಶನವಾಗುತ್ತದೆ. ಪರಿಸರ ಎಂಜಿನಿಯರ್‌ಗಳು ಎ.ಸಿ.ಕಾರಿನಲ್ಲಿ ಸುತ್ತಾಡುವುದರಿಂದ ಅವರಿಗೆ ಕಸ ಇರುವ ಬಗ್ಗೆಯೂ ಅವರಿಗೆ ಮನವರಿಕೆಯಾಗುವುದಿಲ್ಲ ಎನ್ನುವ ಆರೋಪ ನಾಗರಿಕರದ್ದು.

ನಗರದ ಪ್ರಮುಖ ಭಾಗಗಳಾದ ಲಕ್ಷ್ಮಿ ಹಯಗ್ರಿವ ರಸ್ತೆ, ರಮಾವಿಲಾಸ ರಸ್ತೆ ಪಕ್ಕ, ಬಲ್ಲಾಳ್‌ ವೃತ್ತದ ಕೆ.ಜಿ.ಕೊಪ್ಪಲು ಕಡೆಗೆ ಸಾಗುವ ರಸ್ತೆ ಬದಿಯ ಮರದ ಬುಡ, ಹಳೆ ಸಂತೆಪೇಟೆ, ಮಕ್ಕಾಜಿಚೌಕದ ಬಳಿ, ಶ್ರೀಹರ್ಷ ರಸ್ತೆ ಪಕ್ಕ, ಅಶೋಕರಸ್ತೆಯ ಹಳ್ಳದಕೇರಿಯ ಸಂಗಮ್‌ ಥಿಯೇಟರ್‌ ಹಿಂಭಾಗ, ಸುಬ್ಬರಾಯರ ಕೆರೆ ಉದ್ಯಾನದ ಮೂಲೆಗಳಲ್ಲಿ, ಸತ್ತಾರ್‌ ಸೇಠ್‌ ಬ್ಲಾಕ್‌ ಸಮೀಪ, ಸೇಂಟ್‌ ಫಿಲೋಮಿನಾ ಚರ್ಚ್‌ ಬಳಿ, ಎಸಿಬಿ ಕಚೇರಿ ಮುಂಭಾಗದ ಬೆಂಗಳೂರು ಮೈಸೂರು ರಸ್ತೆ ಬಳಿ, ಉದಯಗಿರಿಯ ಹಲವೆಡೆಯೂ ಕಸದ ದರ್ಶನವಾಗುತ್ತದೆ.

ಸ್ವಾತಂತ್ರ್ಯ ಉದ್ಯಾನದ ಒಂದು ಬದಿ ಕಾಂಪೌಂಡ್‌ ಇಲ್ಲದೆ ಇರುವುದರಿಂದ ಸಾರ್ವಜನಿಕರು ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ಕಸದ ರಾಶಿಯಲ್ಲಿ ಮೇವು ಸಿಗುತ್ತದೆ ಎಂದು ಜಾನುವಾರುಗಳು, ಬೀದಿನಾಯಿಗಳು ತ್ಯಾಜ್ಯವನ್ನು ಚೆಲ್ಲಾಡುತ್ತವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ಸ್ಥಳೀಯರಾದ ರಾಮಮೂರ್ತಿ.

ಉದ್ಯಾನಗಳಲ್ಲೂ ತ್ಯಾಜ್ಯದ ರಾಶಿ:
ಕೆಲವು ಉದ್ಯಾನಗಳಲ್ಲೂ ತ್ಯಾಜ್ಯ ರಾಶಿ ಇದೆ. ಮದ್ಯಪಾನ ಮಾಡಿ ಖಾಲಿ ಬಾಟಲಿ, ಆಹಾರ ಪೊಟ್ಟಣಗಳನ್ನೂ ಉದ್ಯಾನಗಳಲ್ಲೇ ಎಸೆಯುವ ಪ್ರವೃತ್ತಿಯೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT