ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

ಗುರುವಾರ , ಏಪ್ರಿಲ್ 25, 2019
32 °C
ದೇಶದ ಹಿತ ಮುಖ್ಯವೇ ನಮ್ಮ ನಡುವಿನ ಭಿನ್ನಾಭಿಪ್ರಾಯವಲ್ಲ: ಸಿದ್ದರಾಮಯ್ಯ

ಕಾಂಗ್ರೆಸ್‌–ಜೆಡಿಎಸ್‌ ನಾಯಕರ ಒಗ್ಗಟ್ಟು ಪ್ರದರ್ಶನ

Published:
Updated:
Prajavani

ಮೈಸೂರು: ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಪೈಪೋಟಿ ನಡೆಸಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮುಖಂಡರು ಶುಕ್ರವಾರ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಪರಸ್ಪರ ಕೈಹಿಡಿದುಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದರು.

ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರ ಪ್ರಚಾರಕ್ಕೆ ಆಯೋಜಿಸಿದ್ದ ಜೆಡಿಎಸ್‌–ಕಾಂಗ್ರೆಸ್‌ ಜಂಟಿ ಸಮಾವೇಶದಲ್ಲಿ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಒಳಗೊಂಡಂತೆ ಉಭಯ ಪಕ್ಷಗಳ ಮುಖಂಡರು ಪಾಲ್ಗೊಂಡರು.

‘ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿದ್ದೇವೆ. ಪ್ರಧಾನಿ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಸುವ ಗುರಿಯೊಂದಿಗೆ ಲೋಕಸಭೆ ಚುನಾವಣೆಯನ್ನು ಜತೆಯಾಗಿ ಎದುರಿಸುತ್ತಿದ್ದೇವೆ’ ಎಂದು ಎಚ್‌.ಡಿ.ದೇವೇಗೌಡ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಕೆಟ್ಟ ಆಡಳಿತ ವ್ಯವಸ್ಥೆಯನ್ನು ತೊಡೆದುಹಾಕಬೇಕೆಂಬ ಎಂಬ ನಿರ್ಣಯ ಕೈಗೊಂಡು ಒಟ್ಟಾಗಿದ್ದೇವೆ. ಜಿ.ಟಿ.ದೇವೇಗೌಡ ಒಳಗೊಂಡಂತೆ ಎಲ್ಲರೂ ಮೈತ್ರಿ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ’ ಎಂದು ತಿಳಿಸಿದರು.

ಅನಿವಾರ್ಯ ಪರಿಸ್ಥಿತಿ ಇದೆ: ಸಿದ್ದರಾಮಯ್ಯ ಮಾತನಾಡಿ, ‘ನೀವು ಎಚ್‌.ಡಿ.ದೇವೇಗೌಡರ ಜತೆ ಕೈಜೋಡಿಸಿದ್ದು ಏಕೆ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ನಾವಿಬ್ಬರು ಒತೆಯಾಗಿ ಮುಂದಡಿ ಇಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಅವರಿಗೆ ಉತ್ತರಿಸಿದ್ದೇನೆ. ದೇಶದ ಹಿತ ಕಾಪಾಡಲು ಜತೆಯಾಗಿದ್ದೇವೆ. ಇದರಲ್ಲಿ ವಿಶೇಷವಾದುದು ಏನೂ ಇಲ್ಲ’ ಎಂದರು.

ಮೋದಿ ಆಡಳಿತದ ಐದು ವರ್ಷಗಳಲ್ಲಿ ದಲಿತರು, ಅಲ್ಪ ಸಂಖ್ಯಾತರಿಗೆ ಭಯದ ವಾತಾವರಣ ನಿರ್ಮಾಣವಾಗಿದೆ. ಗೋರಕ್ಷಣೆ ಹೆಸರಿನಲ್ಲಿ ಹಲವು ದಲಿತರು ಮತ್ತು ಮುಸ್ಲಿಮರ ಹತ್ಯೆ ನಡೆದಿದೆ. ಪ್ರಜಾಪ್ರಭುತ್ವ ಇದ್ದರೆ ಮಾತ್ರ ಈ ದೇಶಕ್ಕೆ ಉಳಿಗಾಲವಿದೆ. ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಾದಿದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರಿಗೆ ಹಣದ ಆಮಿಷ ಒಡ್ಡಿ ರಾಜ್ಯ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಲೇ ಇದೆ. ಅವರ ಯಾವುದೇ ಕುತಂತ್ರವೂ ಫಲಿಸದು. ಸಮ್ಮಿಶ್ರ ಸರ್ಕಾರ ಐದು ವರ್ಷವೂ ಆಡಳಿತ ನಡೆಸಲಿದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆದ್ದರೆ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಎದುರಾಳಿಯಾಗಿದ್ದ ಕಾಂಗ್ರೆಸ್‌ ಜತೆ ಹೇಗೆ ಒಂದಾಗುವುದು ಎಂದು ಹಲವು ಕಾರ್ಯಕರ್ತರು ಪ್ರಶ್ನಿಸುತ್ತಾರೆ. ಮೈತ್ರಿ ಸರ್ಕಾರ ಉಳಿಯಬೇಕಾದರೆ ನಾವೆಲ್ಲರೂ ಜತೆಯಾಗಬೇಕಾದುದು ಅನಿವಾರ್ಯ ಎಂದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ನಾವಿಬ್ಬರೂ ಜತೆಯಾಗಿಯೇ ಇರುತ್ತಿದ್ದೆವು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ರಾಷ್ಟ್ರದ ಹಿತಾಸಕ್ತಿ ಕಾಪಾಡಲು ಒಟ್ಟಾಗಬೇಕಿದೆ’ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ವಿಶ್ವನಾಥ್‌ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರು ಪಾಲ್ಗೊಂಡಿರಲಿಲ್ಲ.

ಮೈಸೂರು–ಕೊಡಗು ಕ್ಷೇತ್ರದ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್, ಸಚಿವ ಸಿ.ಎಸ್‌.ಪುಟ್ಟರಾಜು, ವಿಧಾನಪರಿಷತ್‌ ಸದಸ್ಯರಾದ ಸಿ.ಎಂ.ಇಬ್ರಾಹಿಂ, ಧರ್ಮಸೇನಾ, ಎಐಸಿಸಿ ಕಾರ್ಯದರ್ಶಿ ವಿಷ್ಣುನಾದನ್, ಶಾಸಕರಾದ ತನ್ವೀರ್‌ ಸೇಠ್‌, ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್‌ ಕುಮಾರ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮೇಯರ್‌ ಪುಷ್ಪಲತಾ ಜಗನ್ನಾಥ್‌, ಕಾಂಗ್ರೆಸ್‌ ಮುಖಂಡರಾದ ಮುಖಂಡರಾದ ಡಾ.ಎಚ್‌.ಸಿ.ಮಹದೇವಪ್ಪ, ಎಚ್‌.ಪಿ.ಮಂಜುನಾಥ್‌, ಕೆ.ವೆಂಕಟೇಶ್‌, ವಾಸು, ಎಂ.ಕೆ.ಸೋಮಶೇಖರ್‌, ಜೆಡಿಎಸ್‌ ಮುಖಂಡರಾದ ಅಬ್ದುಲ್ಲಾ, ಪ್ರೊ.ಕೆ.ಎಸ್‌.ರಂಗಪ್ಪ, ಕೆ.ವಿ.ಮಲ್ಲೇಶ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್‌, ನಗರ ಘಟಕದ ಅಧ್ಯಕ್ಷ ಆರ್‌.ಮೂರ್ತಿ ಪಾಲ್ಗೊಂಡಿದ್ದರು.

ವೇದಿಕೆ ಹಂಚಿಕೊಂಡ ಜಿಟಿಡಿ–ಸಿದ್ದರಾಮಯ್ಯ

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಅವರು ವಿಧಾನಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ವೇದಿಕೆಯಲ್ಲಿ ಜತೆಯಾಗಿ ಕಾಣಿಸಿಕೊಂಡರು.‌

ಭಾಷಣದ ವೇಳೆ ಪರಸ್ಪರರನ್ನು ಪ್ರಶಂಸಿಸಿ ತಮ್ಮ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂಬ ಸಂದೇಶವನ್ನು ಉಭಯ ಪಕ್ಷಗಳ ಕಾರ್ಯಕರ್ತರಿಗೆ ರವಾನಿಸುವ ಪ್ರಯತ್ನ ಮಾಡಿದರು.

ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ ಗೆಲುವು ಪಡೆದಿದ್ದರು. ಆ ಬಳಿಕ ಬಹಿರಂಗ ಸಭೆಯಲ್ಲಿ ಜತೆಯಾಗಿ ಕಾಣಿಸಿಕೊಂಡಿರಲಿಲ್ಲ.

‘ಸನ್ಯಾಸಿಯಾಗಲು ಹುಟ್ಟಿಲ್ಲ’

ಕಾರ್ಯಕ್ರಮದಲ್ಲಿ ಮಾತನಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಟೀಕೆಗೆ ತಿರುಗೇಟು ನೀಡಿದರು.

‘ನಾನು ಸನ್ಯಾಸಿಯಾಗಲು ಹುಟ್ಟಿಲ್ಲ. ನಾನೊಬ್ಬ ರೈತನ ಮಗ. ಇಡೀ ಜೀವನವನ್ನು ರಾಜಕೀಯಕ್ಕೆ ಮುಡುಪಾಗಿಟ್ಟಿದ್ದೇನೆ. ಜೀವನದ ಕೊನೆಯ ಉಸಿರಿನವರೆಗೂ ರಾಜಕೀಯದಲ್ಲಿರುತ್ತೇನೆ. ಮೋದಿ ಮಾಡಿರುವ ಟೀಕೆಗಳಿಗೆ ಎಳೆಎಳೆಯಾಗಿ ಉತ್ತರಿಸುವ ಸಾಮರ್ಥ್ಯ ನನ್ನಲ್ಲಿದೆ’ ಪ್ರತ್ಯುತ್ತರ ಕೊಟ್ಟರು.

ದೇವೇಗೌಡ ಅವರು ಭಾಷಣದ ವೇಳೆ ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಂಕರ್‌ ಹೆಸರನ್ನು ವಿಜಯಸಂಕೇಶ್ವರ್‌ ಎಂದೂ, ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ಅವರ ಹೆಸರನ್ನು ವಿಜಯಸಿಂಹ ಎಂದೂ ತಪ್ಪಾಗಿ ಹೇಳಿದರು.

‘ಪ್ರತಾಪಸಿಂಹ ಮೂರು ಕಾಸು ಕೊಟ್ಟಿಲ್ಲ’

ಪ್ರಧಾನಿ ನರೇಂದ್ರ ಮೋದಿ ಅವರು ನಂ.1 ಸುಳ್ಳುಗಾರ. ಸಂಸದ ಪ್ರತಾಪಸಿಂಹ ಸುಳ್ಳು ಹೇಳುವುದರಲ್ಲಿ ನಂತರದ ಸ್ಥಾನದಲ್ಲಿದ್ದಾರೆ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

ಮೈಸೂರು–ಬೆಂಗಳೂರು ಹೆದ್ದಾರಿ ಅಭಿವೃದ್ಧಿ, ಹಿನಕಲ್‌ ಫ್ಲೈಓವರ್‌ ಮತ್ತು ರಿಂಗ್‌ ರಸ್ತೆ ಅಭಿವೃದ್ಧಿಯಲ್ಲಿ ಪ್ರತಾಪ ಸಿಂಹ ಕೊಡುಗೆ ಏನೂ ಇಲ್ಲ. ನಗರದ ಅಭಿವೃದ್ಧಿಗೆ ಮೂರು ಕಾಸು ಕೂಡಾ ಕೊಟ್ಟಿಲ್ಲ. ಆದರೆ ಎಲ್ಲವನ್ನೂ ತಾನೇ ಮಾಡಿದ್ದು ಎಂದು ಸುಳ್ಳು ಹೇಳುತ್ತಿದ್ದಾನೆ ಎಂದು ಟೀಕಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !