ಸೋಮವಾರ, ಏಪ್ರಿಲ್ 6, 2020
19 °C
ಹಲವು ಸಂಘಟಕರಲ್ಲಿ ಆತಂಕ; ಕೆಲವರಲ್ಲಿ ಆತ್ಮವಿಶ್ವಾಸ

ಮೈಸೂರು | ಬೇಸಿಗೆ ಶಿಬಿರಕ್ಕೆ ‘ಕೊರೊನಾ’ ಕರಿನೆರಳು

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಏಪ್ರಿಲ್‌ ಮೊದಲ ವಾರದಿಂದ ಆರಂಭಗೊಳ್ಳುವ ‘ಬೇಸಿಗೆ ಶಿಬಿರ’ಗಳಿಗೆ ‘ಕೊರೊನಾ ವೈರಸ್‌’ನ ಕರಿನೆರಳು ಕಾಡಲಾರಂಭಿಸಿದೆ.

ರಾಜ್ಯದ ವಿವಿಧೆಡೆ ಕೊರೊನಾ ವೈರಸ್‌ ಶಂಕಿತರು ಪತ್ತೆಯಾದ ಬೆನ್ನಿಗೆ, ಪ್ರತಿ ವರ್ಷವೂ ಮಕ್ಕಳಿಗಾಗಿ ಬೇಸಿಗೆ ಶಿಬಿರ ಆಯೋಜಿಸುತ್ತಿದ್ದವರು ಇದೀಗ ಕೊಂಚ ಹಿಂದೇಟು ಹಾಕಲಾರಂಭಿಸಿದ್ದಾರೆ.

ಹಲವು ಸಂಘಟಕರು ಕೊರೊನಾ ವೈರಸ್‌ ಪಸರಿಸುವ ಆತಂಕ ವ್ಯಕ್ತಪಡಿಸಿದರೆ, ಕೆಲವರು ಇದೊಂದು ಭೀತಿ ಮೂಡಿಸುವ ಯತ್ನ. ಪೋಷಕರಿಂದಲೇ ಹೆಚ್ಚಿನ ಒತ್ತಡ ಬರುತ್ತಿದೆ. ನಾವಂತೂ ಶಿಬಿರದ ಸಕಲ ಸಿದ್ಧತೆ ನಡೆಸಿಕೊಳ್ಳುತ್ತಿದ್ದೇವೆ. ಮುಂದೆ ನೋಡೋಣ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮೈಸೂರು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರತಿ ವರ್ಷವೂ ಬೇಸಿಗೆ ಶಿಬಿರ ನಡೆಯುತ್ತವೆ. ಪರೀಕ್ಷೆಗಳು ಮುಗಿಯುವ ಹೊತ್ತಿಗೆ ಶಿಬಿರದ ಸಿದ್ಧತೆ ಚುರುಕುಗೊಳ್ಳುತ್ತವೆ. ಆದರೆ ಈ ಬಾರಿ ಹೆಚ್ಚಿನ ಚಟುವಟಿಕೆ ಗೋಚರಿಸುತ್ತಿಲ್ಲ. ಕೊರೊನಾ ವೈರಸ್ ಭೀತಿ ಕಡಿಮೆಯಾದರೆ ಎಂದಿನಂತೆ ಬೇಸಿಗೆ ಶಿಬಿರ ನಡೆಯಬಲ್ಲವು ಎನ್ನುತ್ತಾರೆ ಹಲವರು.

‘ನಟನ ರಂಗಶಾಲೆ ನಡೆಸುವ ರಜಾ–ಮಜಾ ಬೇಸಿಗೆ ಶಿಬಿರಕ್ಕೆ ರಾಜ್ಯದ ಎಲ್ಲೆಡೆಯಿಂದ ಬೇಡಿಕೆಯಿದೆ. ಈ ಬಾರಿಯ ಬೇಸಿಗೆ ಶಿಬಿರ ಏ.12ರಿಂದ ಮೇ 6ರವರೆಗೂ ನಡೆಯಲಿದೆ. ಜಯನಗರದ ವಿವೇಕ ಬಾಲೋದ್ಯಾನ, ಕನಕದಾಸ ನಗರದ ಸುಪ್ರೀಂ ಪಬ್ಲಿಕ್‌ ಶಾಲೆಯಲ್ಲಿ ಶಿಬಿರ ನಡೆಯಲಿದ್ದು, ಎರಡೂ ಕಡೆ ತಲಾ 200 ಮಕ್ಕಳು ಭಾಗಿಯಾಗಲಿದ್ದಾರೆ. ಕೊಳ್ಳೇಗಾಲ, ಸಾಲುಂಡಿಯಲ್ಲೂ ಶಿಬಿರ ನಡೆಯಲಿದೆ’ ಎಂದು ಚಿತ್ರನಟ ಮಂಡ್ಯ ರಮೇಶ್ ತಿಳಿಸಿದರು.

‘ಬೇಸಿಗೆ ಶಿಬಿರದ ರೂಪುರೇಷೆಯ ಸಿದ್ಧತೆ ಭರದಿಂದ ನಡೆದಿದೆ. ಒಂದು ತಿಂಗಳ ಅವಧಿಯ ಕೋರ್ಸಿದು. ಮಾರ್ಚ್ 29ರಿಂದ ಅರ್ಜಿ ವಿತರಿಸುತ್ತೇವೆ. ನುರಿತ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವಿವಿಧ ವಿಷಯ ತಿಳಿಸಿಕೊಡಲಿದ್ದಾರೆ’ ಎಂದು ಹೇಳಿದರು.

‘ನಮ್ಮ ಶಾಲೆಯ ಆವರಣದಲ್ಲಿ ಏ.5ರಿಂದ ಮೇ 8ರವರೆಗೆ ನಡೆಯಲಿರುವ ಈ ಬಾರಿಯ ಬೇಸಿಗೆ ಶಿಬಿರಕ್ಕೆ 350ಕ್ಕೂ ಹೆಚ್ಚು ಮಕ್ಕಳು ದಾಖಲಾಗಲಿದ್ದಾರೆ. ಎಲ್ಲ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ. ಕೊರೊನಾ ವೈರಸ್‌ ಬಗ್ಗೆ ಅನಗತ್ಯವಾಗಿ ಭಯ ಸೃಷ್ಟಿಸಲಾಗುತ್ತಿದೆ. ಎಲ್ಲಿ ನೋಡಿದರೂ ಭಯ ಸೃಷ್ಟಿಸುವ ವಾತಾವರಣವೇ ಕಂಡುಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ’ ಎಂದು ಪೂರ್ಣ ಚೇತನ ಪಬ್ಲಿಕ್‌ ಶಾಲೆಯ ಸಿಇಒ ದರ್ಶನ್‌ರಾಜ್‌ ಬಿ. ತಿಳಿಸಿದರು.

ಸರ್ಕಾರದ ನಿರ್ಧಾರಕ್ಕೆ ಬದ್ಧ

‘ಕೊರೊನಾ ವೈರಸ್ ಆತಂಕಕ್ಕೆ ಪರೀಕ್ಷೆಗಳನ್ನೇ ಬೇಗ ನಡೆಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಮಕ್ಕಳು ಒಂದೆಡೆ ಸೇರುವ ಬೇಸಿಗೆ ಶಿಬಿರ ಆಯೋಜನೆಗೆ ಸಂಬಂಧಿಸಿದಂತೆ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತೆಗೆದುಕೊಳ್ಳುವ ನಿರ್ಧಾರ ಪಾಲಿಸಲಾಗುವುದು’ ಎಂದು ಮೈಸೂರು ರಂಗಾಯಣದ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಬೇಸಿಗೆ ಶಿಬಿರದ ಚಟುವಟಿಕೆಗಳು ಈ ವೇಳೆಗೆ ಆರಂಭಗೊಳ್ಳಬೇಕಿತ್ತು. ಆದರೆ ಈ ಬಾರಿ ನಮ್ಮಲ್ಲಿ ಈ ಬಗ್ಗೆ ಸಭೆಯೇ ನಡೆದಿಲ್ಲ. ಯಾವೊಂದು ನಿರ್ಧಾರ ತೆಗೆದುಕೊಂಡಿಲ್ಲ’ ಎಂದು ಜೆಎಸ್‌ಎಸ್‌ ಮಹಾವಿದ್ಯಾಪೀಠದ ನಾಟಕ ತರಬೇತುದಾರ ಜೀವನ್ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)