ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕರ ವಿರುದ್ಧ ಕ್ರಮಕ್ಕೆ ಆಗ್ರಹ

ಎಂಎಚ್‌ಆರ್‌ಡಿ ಸಚಿವರಿಗೆ ಪತ್ರ ಬರೆದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ
Last Updated 27 ಮೇ 2020, 19:47 IST
ಅಕ್ಷರ ಗಾತ್ರ

ಮೈಸೂರು: ಭಾರತೀಯ ಭಾಷಾ ಸಂಸ್ಥಾನದ (ಸಿಐಐಎಲ್‌) ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ದೊರಕುವಲ್ಲಿ, ಸಕಾರಾತ್ಮಕವಾಗಿ ಕಾರ್ಯಶೀಲರಾಗದ ಸಿಐಐಎಲ್ ನಿರ್ದೇಶಕ ಡಾ.ಡಿ.ಜಿ.ರಾವ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಮೇ 20ರಂದು ಬರೆದಿರುವ ಆ ಪತ್ರದ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದ್ದು, ಶಾಸ್ತ್ರೀಯ ಕನ್ನಡ ಭಾಷೆಗೆ ಸಂಬಂಧಿಸಿದಂತೆ ಸಿಐಐಎಲ್ ನಿರ್ದೇಶಕರ ವಿಳಂಬ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯದ ಬಗ್ಗೆ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡಬೇಕೆಂಬ ನಮ್ಮ ಬೇಡಿಕೆ ಬಹಳ ಕಾಲದಿಂದ ನನೆಗುದಿಗೆ ಬಿದ್ದಿದೆ. ಸ್ವಾಯತ್ತತೆ ಪಡೆಯುವ ಸಂಬಂಧ ಹಲವು ಸಭೆ ನಡೆಸಲಾಗಿದೆ. ಶಾಸ್ತ್ರೀಯ ಕೇಂದ್ರಕ್ಕೆ ಮೈಸೂರಿನಲ್ಲಿ 3 ಎಕರೆ ಜಾಗ ಒದಗಿಸಿಕೊಡಲಾಗಿದೆ. ಆದರೆ, ಆಡಳಿತಾತ್ಮಕವಾಗಿ ಸಿಐಐಎಲ್ ನಿರ್ದೇಶಕರು ಸ್ಪಂದಿಸುತ್ತಿಲ್ಲ. ಕನ್ನಡದ ಅಭಿವೃದ್ಧಿ ಕುರಿತ ವಿಚಾರಗಳಿಗೆ ಆದ್ಯತೆ ನೀಡಬೇಕಾಗಿದೆ. ಇನ್ನೂ ವಿಳಂಬವಾದಲ್ಲಿ ಅದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುತ್ತದೆ. ರಾಜ್ಯ ಸರ್ಕಾರದ ನಿರ್ಧಾರಗಳನ್ನು ಉದ್ದೇಶಪೂರ್ವಕವಾಗಿಯೋ ಅಥವಾ ಅಲ್ಲದೆಯೋ ಪಾಲನೆ ಮಾಡದ ಸಿಐಐಎಲ್ ನಿರ್ದೇಶಕ ರಾವ್‌ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಂಎಚ್‌ಆರ್‌ಡಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್‌ ಅವರನ್ನು ಆಗ್ರಹಿಸಿದ್ದಾರೆ.

ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಕನ್ನಡದ ಹಲವಾರು ಮುಂದಾಳುಗಳು ಸಾಕಷ್ಟು ಶ್ರಮಿಸಿದ್ದಾರೆ. ಆದರೆ, ನೆರೆಯ ತಮಿಳು ಭಾಷೆಗಾಗಿ ಶ್ರಮಿಸಿದ ಅನೇಕ ಸಾಧಕರನ್ನು ಗೌರವಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು 2005-06ರಿಂದಲೇ ಅಗತ್ಯವಾದ ಆರ್ಥಿಕ ನೆರವು ಒದಗಿಸುತ್ತಿದೆ. ಕನ್ನಡ ಭಾಷೆಯ ಸಂದರ್ಭದಲ್ಲಿ ಹಲವು ವರ್ಷಗಳಿಂದ ಈ ನೆರವು ಸಿಗುತ್ತಿಲ್ಲ. ಆದ್ದರಿಂದ ಕನ್ನಡ ಭಾಷೆಗಾಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರಮಿಸಿದ ವಿದ್ವಾಂಸರನ್ನು ಗೌರವಿಸುವುದು ಅವಶ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸದಾನಂದಗೌಡರಿಂದಲೂ ಪತ್ರ

‘ಸಿಐಐಎಲ್ ನಿರ್ದೇಶಕ ರಾವ್‌, ಎಂಎಚ್‌ಆರ್‌ಡಿ ನಿಯಮ ಉಲ್ಲಂಘಿಸಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕರು ಹಾಗೂ ಸಂಶೋಧನಾ ಸಿಬ್ಬಂದಿಯ ನೇಮಕಾತಿಗೆ ಅಧಿಸೂಚನೆ ಹೊರಡಿಸಿದ್ದಾರೆ. ಅವರ ನಡೆಯನ್ನು ಗಮನಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡ ಅವರೂ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದಾರೆ.

ಅಧ್ಯಯನ ಕೇಂದ್ರದ ಸಿಬ್ಬಂದಿಯ ಸೇವಾವಧಿ ಮುಗಿಯುವ ಮುನ್ನವೇ, ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ರಾವ್‌ ಅವರನ್ನು ಮೈಸೂರಿನ ಹಲವಾರು ವಿದ್ವಾಂಸರು, ಹೋರಾಟಗಾರರು ತರಾಟೆಗೆ ತೆಗೆದುಕೊಂಡಿದ್ದರು. ಆನಂತರ, ಅಧಿಸೂಚನೆ ವಾಪಸ್ ಪಡೆಯುವುದಾಗಿ ಭರವಸೆ ನೀಡಿದ್ದ ರಾವ್‌, ಯಾವುದೇ ಕ್ರಮ ಕೈಗೊಂಡಿಲ್ಲ. ಬದಲಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಮೂರು ಬಾರಿ ವಿಸ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT