ಶುಕ್ರವಾರ, ಅಕ್ಟೋಬರ್ 18, 2019
20 °C
ವಿಜಯದಶಮಿದಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸಾಹಸ ಪ್ರದರ್ಶನ

ಮೈನವಿರೇಳಿಸಲಿದೆ ‘ಡೇರ್‌ ಡೆವಿಲ್ಸ್’

Published:
Updated:
Prajavani

ಮೈಸೂರು: ವಿಜಯ ದಶಮಿಯ ಮನ್ನಾ ದಿನ ಹಾಗೂ ಜಂಬೂ ಸವಾರಿಯ ಇಳಿಹಗಲಲ್ಲಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಸೇರುವ ಜನರನ್ನು ಸೆಳೆಯುವ ಪ್ರದರ್ಶನಗಳಲ್ಲಿ ಸೈನಿಕರು ಬೈಕ್‌ಗಳಲ್ಲಿ ಅನಾವರಣಗೊಳಿಸುವ ಸಾಹಸವೂ ಪ್ರಮುಖವಾದುದು.

ಈ ಬಾರಿ ಜನರನ್ನು ರೋಮಾಂಚನಗೊಳಿಸಲು ರಾಜಸ್ಥಾನದ ಜಬಲ್‌ಪುರದ ‘ಡೇರ್‌ ಡೆವಿಲ್ಸ್‌’ ಸೇನಾ ತಂಡ ಸಿದ್ಧಗೊಂಡಿದೆ. ‘ಕಾರ್ಪ್ಸ್‌ ಆಫ್‌ ಸಿಗ್ನಲ್ಸ್‌’ನ ಕ್ಯಾಪ್ಟನ್ ದಿಶಾಂತ್ ಕಠಾರಿಯಾ ನೇತೃತ್ವದಲ್ಲಿ 32 ಸೈನಿಕರು ಗುರುವಾರ ನಗರಕ್ಕೆ ಬಂದಿಳಿದಿದ್ದು, ಶುಕ್ರವಾರ ಬೆಳಿಗ್ಗೆ ಬನ್ನಿಮಂಟಪದ ಕವಾಯತು ಮೈದಾನದಲ್ಲಿ ಸುಮಾರು 2 ಗಂಟೆ ಹಲವು ಪ್ರದರ್ಶನಗಳ ತಾಲೀಮು ನಡೆಸಿತು.

ಓಪನಿಂಗ್‌ ಕ್ರಾಸಿಂಗ್, ಓಪನಿಂಗ್‌ ಸೆಲ್ಯೂಟ್, ಡಬಲ್‌ ಕ್ರಾಸಿಂಗ್‌, ಪ್ಯಾರಲಲ್ ಕ್ರಾಸಿಂಗ್, ರಿವರ್ಸ್‌ ಟ್ಯಾಂಕ್ ಟಾಪ್ (ಹಿಮ್ಮುಖವಾಗಿ) ಚಾಲನೆ, ಕೈಬಿಟ್ಟು ಚಾಲನೆ, ನಿಂತು ಓಡಿಸುವುದು, ಏಣಿ ಮೇಲೆ ನಿಂತು ಸಾಗುವುದು, ಏಣಿಯಲ್ಲಿ ಎಂಟು ಜನ ಕುಳಿತು ಚಾಲನೆ, ಜಂಪಿಂಗ್‌, ಕ್ರಾಸ್‌ ಜಂಪಿಂಗ್, ಬೆಂಕಿಯ ರಿಂಗ್‌ನಲ್ಲಿ ಜಂಪ್‌ ಮಾಡುವುದು, ಮಲಗಿರುವ 12 ಜನರ ಮೇಲೆ ಬೈಕ್‌ ಹಾರಿಸುವುದು, ಪಿರಮಿಡ್‌ ಮೊದಲಾದ ಸಾಹಸಗಳನ್ನು ಪ್ರದರ್ಶಿಸಲಿದ್ದಾರೆ.

‘ವಿಜಯದಶಮಿಯಂದು ಸಾಹಸ ಪ್ರದರ್ಶಿಸಲು ನಮಗೆ 30 ನಿಮಿಷ ಕಾಲಾವಕಾಶ ನೀಡಿದ್ದಾರೆ. ಈ ಅವಧಿಯಲ್ಲಿ ಸುಮಾರು 50 ಸಾಹಸಗಳನ್ನು ನಮ್ಮ ತಂಡ ಪ್ರದರ್ಶಿಸಲಿದೆ’ ಎಂದು ಕ್ಯಾಪ್ಟನ್‌ ದಿಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ದಾಖಲೆಗಳ ಸರದಾರರು: ಬೈಕ್‌ನಲ್ಲಿ ಯೋಗ: ಹಲವು ವಿಶ್ವದಾಖಲೆಗಳನ್ನು ಮಾಡಿದ ಹೆಗ್ಗಳಿಕೆ ಈ ತಂಡಕ್ಕಿದೆ. ಹವಾಲ್ದಾರ್ ರವೀಶ್ ಅವರು ರಾಯಲ್‌ ಎನ್‌ಫೀಲ್ಡ್ ಬುಲೆಟ್‌ ಬೈಕ್‌ ಚಲಾಯಿಸುತ್ತಲೇ ಸುಮಾರು 50 ಯೋಗಾಸನಗಳನ್ನು ಪ್ರದರ್ಶಿಸಿ ಗಿನ್ನೆಸ್‌ ದಾಖಲೆ ಬರೆದಿದ್ದಾರೆ. ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌, ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌... ಹೀಗೆ ಅಂತರರಾಷ್ಟ್ರೀಯ, ರಾಷ್ಟ್ರಮಟ್ಟದ ಹಲವು ಸಾಧನೆಗಳು ಡೇರ್‌ ಡೆವಿಲ್ಸ್‌ ತಂಡದ ಮುಡಿಗೇರಿವೆ.

ರಿವರ್ಸ್‌ ರೈಡ್ ಸಾಧನೆ: ಹವಾಲ್ದಾರ್‌ ಈಶ್ವರ ಟಿ.ರಾವ್ ಅವರು ಹಿಮ್ಮುಖವಾಗಿ ಬೈಕ್‌ ಚಲಾಯಿಸಿ (4 ಗಂಟೆಯಲ್ಲಿ 172 ಕಿ.ಮೀ) ವಿಶ್ವ ದಾಖಲೆ ಬರೆದಿದ್ದಾರೆ.

ಸಾಹಸಕ್ಕೆ ದೇಹವೇ ರಸ್ತೆ: ನೆಲದಲ್ಲಿ ಮಲಗಿ, ದೇಹದ ಮೇಲೆ ಬೈಕ್ ಹಾರಿಸುವ ಮೂಲಕ ಗಿನ್ನೆಸ್‌ ದಾಖಲೆ ಮಾಡಿರುವ ಹವಾಲ್ದಾರ್‌ ದಿಲೀಪ್‌ಕುಮಾರ್‌ ಬೆಹರಾ ಅವರೂ ಸಾಹಸ ಪ್ರದರ್ಶಿಸಲಿದ್ದಾರೆ. ದೇಹದ ಮೇಲೆ 12.49 ಸೆಕೆಂಡ್‌ಗಳಲ್ಲಿ 1,300 ಬೈಕ್‌ಗಳನ್ನು ಹಾರಿಸಿರುವ ಇವರು ತಂಡದ ಪ್ರಮುಖ ಸದಸ್ಯ ಹಾಗೂ ಆಧಾರ ಸ್ತಂಭ ಎನ್ನುತ್ತಾರೆ ದಿಶಾಂತ್ ಕಠಾರಿಯಾ.

ಮೋಡಿ ಮಾಡಲಿದ್ದಾರೆ ‘ಜೋಕರ್‌’ಗಳು: ಮೈನವಿರೇಳಿಸುವ ಸಾಹಸ ಪ್ರದರ್ಶನ ನೋಡಿ ಏಕತಾನತೆಯ ಭಾವನೆ ಬರಬಾರದು ಎಂದು ಸೈನಿಕರು ಸಾಹಸದ ಮೂಲಕವೇ ಮನರಂಜಿಸಲಿದ್ದಾರೆ. ಜೋಕರ್‌ ಬ್ರದರ್ಸ್‌ ಎಂದೇ ಪ್ರಸಿದ್ಧಿ ಪಡೆದ ಪ್ರಮೋದ್ ಪಾಟೀಲ ಮತ್ತು ಗಮ್ಮೇಶ್ ಪರೇಶ್ ಅವರು ಜೋಕರ್‌ಗಳಾಗಿ ನಗೆ ಅರಳಿಸಲಿದ್ದಾರೆ.

ಸಾಹಸವನ್ನು ಸವಾಲನ್ನಾಗಿಸಿಕೊಂಡು ನಾವು ಪ್ರತ್ಯೇಕವಾಗಿ ಹಾಗೂ ಜತೆಯಾಗಿ ಪ್ರದರ್ಶನ ನೀಡುತ್ತಾ, ಕೀಟಲೆ ಮಾಡುತ್ತಾ ಸಾಹಸಿಗರ ಮಧ್ಯೆ ಸಾಗುತ್ತೇವೆ. ಪ್ರೇಕ್ಷಕರಲ್ಲಿ ಆಗ ಮೂಡುವ ಮಂದಹಾಸವೇ ನಮಗೆ ಪ್ರೋತ್ಸಾಹ ಎಂದು ಅವರು ತಿಳಿಸಿದರು.

ಈ ತಂಡದಲ್ಲಿ ಹಾಸನ ಜಿಲ್ಲೆ ಹೊಳೆನರಸೀಪುರದ ಸುನೀಲ್ ಹಾಗೂ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ಮಂಗಸೂಳಿ ಗ್ರಾಮದ ವಿಶಾಲ್ ಮಾನೆ ಇರುವುದು ಹೆಮ್ಮೆಯ ವಿಷಯ.

Post Comments (+)