ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ; ಒಂದು ವಿವೇಚನೆ

Last Updated 19 ಅಕ್ಟೋಬರ್ 2018, 12:53 IST
ಅಕ್ಷರ ಗಾತ್ರ

ಕಳೆದ 2017ರ ಸೆ.18ರಂದು ಮೈಸೂರಿನ ಕೆಲವು ಗೆಳೆಯರು ಮಹಿಷಾಸುರ ದಸರಾವನ್ನು ಚಾಮುಂಡಿಬೆಟ್ಟದಲ್ಲಿ ಆಚರಿಸಿದರು. ಪ್ರತಿ ವರ್ಷ ಜಂಬೂ ಸವಾರಿಗೂ ಮುನ್ನ ಈ ಆಚರಣೆ ನಡೆಯುತ್ತಿದೆ. ಈ ಬಾರಿ ದಸರೆಯಲ್ಲಿ ಭಾಗವಹಿಸಿದ್ದ ಹಿರಿಯ ರಾಜಕಾರಣಿ ಎ.ಕೆ.ಸುಬ್ಬಯ್ಯ ಅವರು ಮುಂದಿನ ವರ್ಷದಿಂದ ಇದನ್ನು ನಾಡಹಬ್ಬವಾಗಿ ರಾಜ್ಯದಾದ್ಯಂತ ಆಚರಿಸಬೇಕೆಂದು ಫರ್ಮಾನು ಹೊರಡಿಸಿದ್ದಾರೆ. ಹಾಗೆಯೇ, ಕಳೆದ ಅ.7ರಂದು ಕೆಲವರು ಮಹಿಷ ದಸರಾವನ್ನು ಆಚರಿಸಿದ್ದಾರೆ.

ಮೈಸೂರು ದಸರೆಯಲ್ಲಿ ಚಾಮುಂಡೇಶ್ವರಿ ಹಾಗೂ ಮಹಿಷಾಸುರನ ಬಗ್ಗೆ ವಿಶೇಷವಾಗಿ ಕೇಳಿ ಬರುತ್ತದೆ. ಚಾಮುಂಡೇಶ್ವರಿಯು ಮಹಿಷಾಸುರನನ್ನು ಕೊಂದು ಈ ಪ್ರದೇಶದಲ್ಲಿ ಶಾಂತಿ ಸ್ಥಾಪಿಸಿ ಬೆಟ್ಟದಲ್ಲಿ ನೆಲೆ ನಿಂತಳೆಂದು ದಂತಕಥೆಗಳಿವೆ. ಅದಕ್ಕೆ ಸಂಬಂಧಿಸಿದ ಅನೇಕ ಐತಿಹ್ಯಗಳು ಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕಂಡುಬರುತ್ತವೆ. ಈ ದಂತಕಥೆ ಮತ್ತು ಐತಿಹ್ಯಗಳನ್ನೇ ಆಧರಿಸಿಕೊಂಡು ಅವೇ ವಾಸ್ತವಿಕವೆಂಬಂತೆ ಜನಮನದಲ್ಲಿ ಗ್ರಹಿಕೆಯಾಗಿದೆ.

ಸಂಸ್ಕೃತದ ಪ್ರಾಚೀನ ಗ್ರಂಥಗಳನ್ನು ಅವಲೋಕಿಸಿದಾಗ ಚಾಮುಂಡಾ ಎಂಬ ದೇವಿಯು ಬ್ರಾಹ್ಮೀ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ, ಇಂದ್ರಾಣಿ ಮತ್ತು ಚಾಮುಂಡಾ ಎಂಬ ಸಪ್ತ ಮಾತೃಕೆಗಳಲ್ಲಿ ಒಬ್ಬಳಾಗಿದ್ದಾಳೆ.

ಮಹಿಷಾಸುರ ಪುರಾಣಗಳಲ್ಲಿ ಕಂಡು ಬರುವಂತೆ ದಿತಿ ಎಂಬುವವಳ ಮಗ. ಎಮ್ಮೆ ಮುಖದವನು. ತ್ರಿಪುರ ಸುಂದರಿ ಎಂಬ ದೇವತೆಯಿಂದ ಹತನಾದವನು, ರಂಭಾಸುರನ ಮಗ ದೇವಿಯನ್ನು ಮೋಹಿಸಿ ಹತನಾದವನು, ಚಂಡ-ಮುಂಡ ಎಂಬ ರಾಕ್ಷಸರನ್ನು ಕೊಂದಿದ್ದರಿಂದ ಕಾಳಿಕಾದೇವಿಗೆ ಚಾಮುಂಡಾ ಎಂದು ಹೆಸರಾಯಿತು ಎಂದು ತಿಳಿದು ಬರುತ್ತದೆ.

ಈ ಚಂಡ ಮತ್ತು ಮುಂಡ ಅಣ್ಣ ತಮ್ಮಂದಿರೆಂದು ಪ್ರತೀತಿ ಇದೆ. ಆದರೆ, ಚಂಡ-ಮುಂಡ ಎಂಬವು ದ್ರಾವಿಡ ಜನಾಂಗಕ್ಕೆ ಸೇರಿದ ಎರಡು ಸಮುದಾಯಗಳು ಇಂದು ಉತ್ತರ ಭಾರತದಲ್ಲಿವೆ. ಇನ್ನೊಂದು ನಂಬಿಕೆಯ ಪ್ರಕಾರ ಮಹಿಷನು ಕೋಲ ಬುಡಕಟ್ಟು ಸಮುದಾಯಕ್ಕೆ ಸೇರಿದವನು. ಮತ್ತೊಂದು ದಂತಕಥೆ ಮತ್ತು ನಂಬಿಕೆಯ ಪ್ರಕಾರ ಆತ ಸಂತಾಲ ಬುಡಕಟ್ಟಿಗೆ ಸೇರಿದವನು ಮತ್ತು ಅದರ ನಾಯಕನಾಗಿದ್ದವನು. ಈ ಸಮುದಾಯ ದ್ರಾವಿಡೇತರವಾಗಿದ್ದು, ಇಂದಿನ ಪಶ್ಚಿಮ ಬಂಗಾಳ ಮತ್ತು ಸುತ್ತಲ ಪ್ರದೇಶಗಳಲ್ಲಿ ವಾಸವಾಗಿದೆ. ಈ ಸಮುದಾಯದವರು 19ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದಿದ್ದರು ಎಂದೂ ತಿಳಿದುಬಂದಿದೆ. ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದರೆ ಚಾಮುಂಡೇಶ್ವರಿಯು ಆರ್ಯ ದೈವ ಸಂಕುಲಕ್ಕೆ ಹಾಗೂ ಮಹಿಷ ಆರ್ಯೇತರ ಸಮುದಾಯಕ್ಕೆ ಸೇರಿದವನು. ಸಂತಾಲರಲ್ಲಿರುವ ಒಂದು ಐತಿಹ್ಯದ ಪ್ರಕಾರ ಆತ ಅಸಂಖ್ಯ ಎಮ್ಮೆಗಳ ಒಡೆಯನಾಗಿದ್ದನು. ಹೀಗೆ ಆರ‍್ಯ ಮತ್ತು ದ್ರಾವಿಡ ಸಂಘರ್ಷದಿಂದ ಉದ್ಭವಿಸಿರುವ ಈ ಮಹಿಷಾಸುರ ಮರ್ದಿನಿ ಕಥೆ ಪರೋಕ್ಷವಾಗಿ ನಮ್ಮ ದೇಶದ ಪ್ರಾಚೀನ ಇತಿಹಾಸವನ್ನು ಹೇಳುತ್ತದೆ. ಅದು ಕೇವಲ ಮೈಸೂರು ಪ್ರದೇಶಕ್ಕೆ ಸೀಮಿತವಾದುದ್ದೇನೂ ಅಲ್ಲ. ರಾಜ್ಯ ಹಾಗೂ ದೇಶ ವ್ಯಾಪಿಯಲ್ಲೂ ಕಂಡುಬರುತ್ತದೆ.

ನಮ್ಮ ಕನ್ನಡ ನಾಡಿಗೆ ಮೂಲದಲ್ಲಿ ಕರುನಾಡು ಎತ್ತರವಾದ ಪ್ರದೇಶ (ತಮಿಳಿನಲ್ಲಿ ಮೇಲ್ ನಾಟ್ಟು ಎಂದು ಕನ್ನಡನಾಡಿಗೆ ಹೆಸರಿಸುತ್ತಾರೆ, ಕೀಳ್ ನಾಟ್ಟು ಎಂದರೆ ಕೆಳಗಿನ ಪ್ರದೇಶ ಅಂದರೆ ತಮಿಳುನಾಡು), ಕಪ್ಪು ಮಣ್ಣಿನನಾಡು, ಎರೆನಾಡು ಈ ಮುಂತಾದ ಹೆಸರುಗಳಿದ್ದವು. ತಮಿಳಿನ ಎರಡನೆಯ ಶತಮಾನದ ಮಾಮೂಲನಾರ್ ಎಂಬ ಕವಿ ಕನ್ನಡನಾಡನ್ನು ಎರುಮಿನಾಡು ಎಂದು ಹೆಸರಿಸಿದ್ದಾನೆ. ಅದೇ ಎರುಮೈನಾಡು ಅಂದರೆ ಎಮ್ಮೆಗಳ ನಾಡು. ಕನ್ನಡನಾಡಿನಲ್ಲಿ ಎಮ್ಮೆ ಹೆಸರಿನ ಅನೇಕ ಗ್ರಾಮಗಳು ಕಂಡುಬರುತ್ತವೆ. ಉದಾಹರಣೆಗೆ ಎಮ್ಮೆದೊಡ್ಡಿ, ಎಮ್ಮೆಕೊಪ್ಪಲು, ಎಮ್ಮೆಮ್ಮಾಡು, ಎಮ್ಮಿಗನೂರು, ಮಹಿಷಿ ಇತ್ಯಾದಿ.

ಸಂಸ್ಕೃತದಲ್ಲಿ ಕಾಡುಕೋಣ ಎಂಬುದಕ್ಕೆ ಮಹಿಷ ಎಂದು ಹೆಸರು. ಮಹಿಷೀಶಿಶುಃ ಎಂದರೆ ಎಮ್ಮೆ ಕರು. ಎಮ್ಮೆಗಳ ನಾಡನ್ನು ಮಹಿಷಮಂಡಲ, ಮಹೀಷಿಕಾ ಎಂದು ಸಂಸ್ಕೃತೀಕರಣಗೊಳಿಸಲಾಗಿದೆ. ಸಂಶೋಧಕ ಶಂ.ಬಾ.ಜೋಶಿಯವರು ಹೇಳುವಂತೆ... ಎಮ್ಮೆ ನಾಡು ಎಂದರೆ ಕಗ್ಗ; ಮಹಿಷ ದೇಶವೆಂದರೆ ಕುಸುರಿ...

ಮಹಿಷಿಗಳು (ಎಮ್ಮ್ಮೆಗಳು) ಅಧಿಕವಾಗಿರುವ ನಾಡು ಮಹಿಷಮಂಡಲ. ಅದೇ ಕ್ರಮೇಣ ಮಹಿಷನ ಊರು, ಮೈಶೂರು, ಮಹಿಶೂರು, ಮಯಿಸೂರು, ಮೈಸೂರು ಎಂದಾಗಿದೆ. ಈ ಕಾರಣದಿಂದಲೂ ಮಹಿಷಾಸುರ ಮರ್ದಿನಿ ಎಂದು ಹೆಸರಿಸಲಾದ ಚಾಮುಂಡೇಶ್ವರಿಗೂ ಮೈಸೂರಿಗೂ ನಿಕಟವಾದ ಸಂಬಂಧವೇನೂ ಇಲ್ಲ.

ಮತ್ತೆ ಶಂ.ಬಾ.ಜೋಶಿಯವರ ಮಾತುಗಳನ್ನು ನೋಡೋಣ; ಮೈಸೂರು ರಾಜಮನೆತನದ ಕುಲದೇವತೆ ಮಹಿಷಾಸುರ ಮರ್ದಿನಿ. ಮೈಸೂರಿನ ಅರಸರು ತಮ್ಮ ಸಂಬಂಧವನ್ನು ಯದುವಂಶಕ್ಕೆ ಒಯ್ದು ಹಚ್ಚುತ್ತಾರೆ. ಶಿವಾಜಿಯ ಕುಲದೇವತೆ ಕೂಡ ಮಹಿಷಾಸುರ ಮರ್ದಿನಿ. ಈ ಮಾತುಗಳ ಹಿನ್ನೆಲೆಯಲ್ಲಿ ನಾವು ಮೈಸೂರು ಅರಸರ ಹಿನ್ನಲೆಯನ್ನು ಕ್ವಚಿತ್ತಾಗಿ ನೋಡೋಣ.

ಮೈಸೂರು ಸಂಸ್ಥಾನದ ಸ್ಥಾಪಕರಾದ ಯದುರಾಯ ಅಥವಾ ವಿಜಯ ಮತ್ತು ಕೃಷ್ಣ ಎಂಬುವವರು ಉತ್ತರ ದೇಶದಿಂದ (ಗುಜರಾತಿನ ದ್ವಾರಕೆಯಿಂದ?) ಬಂದವರು ಎಂಬುದು ಸಾಮಾನ್ಯ ಐತಿಹಾಸಿಕ ತಿಳಿವಳಿಕೆಯೇ ಆಗಿದೆ. ಆ ಸಹೋದರರಿಬ್ಬರು ಅಂದಿನ ಮಹಿಷೂರಿನ ಸಮೀಪದಲ್ಲಿದ್ದ ಕಾರುಗಳ್ಳಿಯ ಮಾರನಾಯಕ ಎಂಬುವವನನ್ನು ನಿಗ್ರಹಿಸಿ, ಮೈಸೂರು ರಾಜ್ಯದ ಸ್ಥಾಪನೆಗೆ ಮೂಲ ಕಾರಣರಾದರು. ಮತ್ತು ಯದುರಾಯನು ಈ ವಂಶದ ಮೊದಲ ದೊರೆಯಾಗಿ ಪ್ರತಿಷ್ಠಾಪನೆಗೊಂಡನು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. ಸಹೋದರರಿಬ್ಬರು ತಮ್ಮ ಕುಲದೇವರಾದ ಚಾಮುಂಡೇಶ್ವರಿಯನ್ನು ಸ್ಥಾಪಿಸಿದರು ಎಂಬುದು ತಿಳಿದುಬರುತ್ತದೆ.

ಚಾಮುಂಡೇಶ್ವರಿಯ ಮತ್ತೊಂದು ಹೆಸರೇ ಮಹಿಷಾಸುರ ಮರ್ದಿನಿ ಎಂದಾಗಿರುವುದರಿಂದ, ಆ ಪರಿಣಾಮ ಮೈಸೂರು ದಸರಾ ಮಹೋತ್ಸವಕ್ಕೂ ಈ ಹೆಸರಿಗೆ ತಳಕು ಹಾಕಲಾಗಿದೆ. ಆದರೆ, ವಾಸ್ತವವಾಗಿ ನೋಡಿದರೆ ಚಾಮುಂಡಿ ಬೆಟ್ಟದ ಮೂಲ ಹೆಸರು ಮಹಾಬಲಾದ್ರಿ ಮತ್ತು ಅಲ್ಲಿಯ ಮೂಲ ದೇವರು ಮಹಾಬಲೇಶ್ವರ. ಆ ದೇವಸ್ಥಾನವು ಇಂದಿಗೂ ಚಾಮುಂಡೇಶ್ವರಿ ದೇವಾಲಯದ ಪಕ್ಕದಲ್ಲಿದೆ. ಮಹಾಬಲೇಶ್ವರ ದೇವಾಲಯಕ್ಕೆ ಹೊಯ್ಸಳ ರಾಜನಾದ ವಿಷ್ಣುವರ್ಧನನು ಕ್ರಿ.ಶ. 1128ರಲ್ಲಿ ಹಾಗೂ ವಿಜಯನಗರ ಸಾಮ್ರಾಜ್ಯದ ವಂಶಸ್ಥರು ಕ್ರಿ.ಶ.1626ರಲ್ಲಿ ದತ್ತಿ ಕೊಟ್ಟರು (ಮೈಸೂರು ಚಾಮುಂಡೇಶ್ವರಿ ದೇವಸ್ಥಾನ-ಲೇ.ಬಿ.ವಿ.ಗೋಸ್ವಾಮಿ, ಎಸ್.ಜಿ.ಮೊರಬ, ಪ್ರ.ಮು.2001). ಆ ಹೊತ್ತಿನಲ್ಲಿ (ಕ್ರಿ.ಶ.1128ರಲ್ಲಿ) ಚಾಮುಂಡಿ ಬೆಟ್ಟ ಎಂಬ ಹೆಸರೇನು ಇರಲಿಲ್ಲ. ಮಹಾಬಲೇಶ್ವರ ಎಂಬ ಹೆಸರಿನ ಕಾರಣದಿಂದ ಬಹುಶಃ ಮೈಸೂರು ತಾಲ್ಲೂಕಿನ ಮಾರ್ಬಳ್ಳಿ, ಮಾರ್ಬಳ್ಳಿ ಹುಂಡಿ ಗ್ರಾಮಗಳು ಹೆಸರಾಗಿವೆ ಎಂದು ಸೊಂಶೋಧಕ ಡಾ.ಎಂ.ಚಿದಾನಂದಮೂರ್ತಿಯವರು ಹೇಳುವ ಅಭಿಪ್ರಾಯವನ್ನು ನಾವು ಸುಲಭದಲ್ಲಿ ತೆಗೆದುಹಾಕುವ ಹಾಗಿಲ್ಲ. ಮತ್ತು ಕಾರುಗಳ್ಳಿಯ ಮಾರನಾಯಕನು ಈ ದೇವತೆಯ ಉಪಾಸಕನಾಗಿದ್ದನು. ಅಂದರೆ, ಮೈಸೂರು ಅರಸರ ಕಾರಣದಿಂದಾಗಿ ಮಹಾಬಲಾದ್ರಿಯು ಚಾಮುಂಡಿ ಬೆಟ್ಟವಾಯಿತು ಎಂದಾಗುತ್ತದೆ.

ಯದುರಾಯ ಮತ್ತು ಕೃಷ್ಣ ದೂರದಿಂದ ಮೈಸೂರಿಗೆ ಬಂದು, ಇಲ್ಲಿನ ಪಾಳೆಗಾರನನ್ನು ನಿಗ್ರಹಿಸಿ, ಮೈಸೂರು ಸಂಸ್ಥಾನವನ್ನು ಸ್ಥಾಪಿಸಿದರೆಂಬುದು ಎಷ್ಟು ಸಂಭಾವ್ಯ? ಪರದೇಶದಿಂದ ಬಂದವರು, ಪ್ರದೇಶದ ಅರಿವಿಲ್ಲದವರು, ಪ್ರದೇಶದ ಭಾಷೆ ಗೊತ್ತಿಲ್ಲದವರು ಎಷ್ಟರಮಟ್ಟಿಗೆ ಒಂದು ರಾಜ್ಯವನ್ನು ಸ್ಥಾಪಿಸಲು ಸಾಧ್ಯವಾದೀತು? ಇತ್ಯಾದಿ ಅನುಮಾನಗಳು ಸಹಜವಾಗಿ ಬರುತ್ತವೆ. ನಮ್ಮ ದೇಶದ ರಾಜವಂಶೀಯರು ಸಾಮಾನ್ಯವಾಗಿ ತಾವು ಸ್ಥಳೀಕರು ಎಂದು ಹೇಳಿಕೊಂಡರೆ ಎಲ್ಲಿ ಜನಮನ್ನಣೆ, ರಾಷ್ಟ್ರಮನ್ನಣೆ ದೊರಕುವುದಿಲ್ಲವೊ ಎಂಬ ಕಾರಣದಿಂದ ತಮ್ಮ ವಂಶಾವಳಿಯನ್ನು, ಬಿರುದುಬಾವಲಿಯನ್ನು, ಗೋತ್ರಸೂತ್ರಗಳನ್ನು ಶ್ರೇಷ್ಠತೆಗೆ ಅರ್ಪಿಸಿಕ್ಕೊಳ್ಳುವುದು ಸಹಜವೇ ಆಗಿದೆ (ಆರ‍್ಯೀಕರಣ). ಈ ದೃಷ್ಟಿಯಿಂದ ನೋಡಿದಾಗ ಮೈಸೂರು ಅರಸರ ಕುಲದೇವತೆಯಾದ ಚಾಮುಂಡೇಶ್ವರಿಗೂ, ಮಹಿಷಾಸುರನ ಸಂಹಾರಕ್ಕೂ ಮತ್ತು ಮೈಸೂರಿಗೂ ನೇರ ಸಂಬಂಧ ಬರುವುದು ಅಸಂಭಾವ್ಯ. ಏನಿದ್ದರೂ ಎಮ್ಮೆಗಳ ನಾಡು–ಮಹಿಷಮಂಡಲ–ಮೈಸೂರು ಎಂಬುದು ಸಹಜವಾಗುತ್ತದೆ.

ಹಿಂದೂ ಪಂಚಾಂಗದ ಪ್ರಕಾರ ವರ್ಷದಲ್ಲಿ ಎರಡು ನವಮಿಗಳು ಬರುತ್ತವೆ. ಮೊದಲನೆಯದು ಚೈತ್ರ ಮಾಸದಲ್ಲಿ ಬರುವ ನವಮಿ (ರಾಮನವಮಿ ಸಂದರ್ಭ). ಎರಡನೆಯದು ಆಶ್ವಯುಜ ಮಾಸದಲ್ಲಿ ಬರುವ ನವಮಿ. ಈ ನವಮಿಗೆ ನವರಾತ್ರಿ ಎಂಬ ಹೆಸರು ಜನಜನಿತವಾಗಿದೆ (ಶರನ್ನವರಾತ್ರಿ). ಈ ನವರಾತ್ರಿ ಆಚರಣೆಯನ್ನು ಸಾಮಾನ್ಯವಾಗಿ ಹಿಂದೂ ಸಮುದಾಯದವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಆಚರಿಸುತ್ತಾರೆ. ಅದರಂತೆ ಹಿಂದೂ ಸಾಮ್ರಾಜ್ಯಗಳು, ರಾಜರು ಇದನ್ನು ಹಿಂದಿನಿಂದಲೂ ಆಚರಿಸುತ್ತ ಬಂದ್ದಿದ್ದಾರೆ. ವಿಜನಗರದ ಅರಸರ ಕಾಲದಲ್ಲಿ ಈ ಹಬ್ಬಕ್ಕೆ ಮಹಾನವಮಿ ಎಂಬ ಹೆಸರೂ ಹೆಚ್ಚಾಗಿ ಬಂದಿತು ಮತ್ತು ಅತ್ಯಂತ ವಿಜೃಂಭಣೆಯಿಂದ ಆ ಕಾಲದಲ್ಲಿ ಆಚರಿಸಲಾಗುತ್ತಿತ್ತು. ವಾಸ್ತವವಾಗಿ, ಇದು ಒಂಬತ್ತು ದಿನಗಳ ಹಬ್ಬ. ಹತ್ತನೆಯ ದಿನದ ದಶಮಿ ಅಥವಾ ವಿಜಯದಶಮಿ ಆಚರಣೆ ವಿಜನಗರದ ಅರಸರು ಶತ್ರುಗಳ ಮೇಲೆ ದಿಗ್ವಿಜಯಕ್ಕೆ ಹೊರಡುತ್ತಿದ್ದ ಕಾಲದಿಂದ ಪ್ರಚಾರಕ್ಕೆ ಬಂದಿತು. ಹತ್ತೊಂಬತ್ತನೆಯ ಶತಮಾದ ಕೊನೆಯಲ್ಲಿ ಮೈಸೂರು ಅರಸರು ವಿಜಯದಶಮಿಯನ್ನು ತಮ್ಮ ರಾಜ ವೈಭವದ ಮೆರಣವಣಿಗೆಯನ್ನಾಗಿ ಪರಿವರ್ತಿಸಿಕೊಂಡರು (ಅದೇ ಇಂದಿನ ದಸರಾ). ನವಮಿಯ ದಿನ ಅವರು ತಮ್ಮ ಸಾಮಂತರು, ಮಾಂಡಳೀಕರು, ಪಾಳೆಗಾರರು ಮುಂತಾದವರಿಂದ ಕೊಡುಗೆಗಳನ್ನು ಸ್ವೀಕರಿಸಿ (ಸೈನಿಕರು ಮತ್ತು ನಗನಾಣ್ಯ) ಆನಂತರ ಶತ್ರು ರಾಜರ ಮೇಲೆ ಯುದ್ಧಕ್ಕೆ ಹೋಗುತ್ತಿದ್ದರು. ಈ ದಿಗ್ವಿಜಯದ ಸೂಚಕವಾಗಿ ಹತ್ತನೆಯ ದಿನದ ಆಚರಣೆ ಜಾರಿಗೆ ಬಂದಿತು. ಇದು ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರು, ಕಂಠೀರವ ನರಸಿಂಹರಾಜ ಒಡೆಯರು, ಚಿಕ್ಕದೇವರಾಜ ಒಡೆಯರು ಮುಂತಾದವರ ಕಾಲದಲ್ಲಿ ಯಶಸ್ಸಿನಿಂದಲೇ ಮುಂದುವರಿಯಿತು. ಶ್ರೀರಂಗಪಟ್ಟಣದಿಂದ ಮೈಸೂರು ಸಂಸ್ಥಾನದ ರಾಜಧಾನಿಯು ಮೈಸೂರಿಗೆ ಸ್ಥಳಾಂತರಿಸಿದ ಮೇಲೆ ರೂಪಾಂತರಗೊಂಡ ನವರಾತ್ರಿ ಹಬ್ಬ (1805ರಿಂದ) ಮುಂದುವರೆಯಿತು. ಹತ್ತನೆಯ ದಿವಸದ ವಿಜಯದಶಮಿ ಆಚರಣೆ ನೆಪಮಾತ್ರಕ್ಕೆ ನಡೆದು ಬನ್ನಿಪೂಜೆಗೆ ಸೀಮಿತವಾಯಿತು (ಹೀಗೆ ಹತ್ತು ದಿನಗಳ ಹಬ್ಬಕ್ಕೆ 19ನೆಯ ಶತಮಾನದ ಕೊನೆಯಲ್ಲಿ ದಶ+ಹರ=ಹತ್ತು+ದಿವಸ=ದುಶೇರ=ದಶರ=ದಸರ ಎಂದು ಹೆಸರಾಗಿದೆ).

ಇದೆಲ್ಲದರ ತಥ್ಯವೆಂದರೆ

1. ಮೈಸೂರು ದಸರ ಹಬ್ಬಕ್ಕೂ ಮಹಿಷಾಸುರ ಮರ್ದಿನಿಯಾದ ಚಾಮುಂಡೇಶ್ವರಿಗೂ ತಳುಕು ಹಾಕುವುದು ಸರಿಯಾದ ಕ್ರಮವಲ್ಲ.

2. ಮಹಿಷಾಸುರನ ಮರ್ದಿನಿಯಾದ ಚಾಮುಂಡೇಶ್ವರಿಯು ಮೈಸೂರು ರಾಜಮನೆತನಕ್ಕೆ ಪ್ರಧಾನವಾಗಿ ದೇವತೆಯೇ ಹೊರತು ಈಗ ಚಾಲ್ತಿಯಲ್ಲಿರುವಂತೆ ನಾಡದೇವತೆ ಆಗಲಾರಳು ಮತ್ತು ಗ್ರಾಮದೇವತೆಯೂ ಅಲ್ಲ.

3. ಮಹಿಷಾಸುರನ ಕಥೆಗೂ ಚಾಮುಂಡಿ ಬೆಟ್ಟಕ್ಕೂ ಯಾವುದೇ ಸಂಬಂಧವಿಲ್ಲ ಮತ್ತು ಮಹಿಷನು ಮೂಲಭೂತವಾಗಿ ಒಬ್ಬ ಬುಡಕಟ್ಟಿನ ನಾಯಕ.

4. ಮೈಸೂರು ಎಂಬ ಪದ ಮಹಿಷನಾಡು ಅಂದರೆ ಎಮ್ಮೆಗಳ ನಾಡು ಎಂದೇ ವ್ಯುತ್ಪತ್ತಿ ಆಗುತ್ತದೆ. ಹಾಗೆಂದು ಕೀಳರಿಮೆಯೇನೂ ಬೇಕಿಲ್ಲ. ಎಮ್ಮೆ ಕೂಡ ಮನುಷ್ಯನ ದಿನನಿತ್ಯದ ಬದುಕಿಗೆ ಆಕಳಿನಷ್ಟೇ ಉಪಕಾರಿಯಾದುದು.

5. ಮಹಿಷಾಸುರನ ಹೆಸರಿನಲ್ಲಿ ದಸರೆ ಆಚರಿಸುವುದು ಸಮಂಜಸವಾಗಲಾರದು. ಯಾಕೆಂದರೆ ಮಹಿಷಾಸುರನಿಗೂ ಮೈಸೂರಿಗೂ ಯಾವುದೇ ಸಂಬಂಧವಿಲ್ಲ. ಈಗಿರುವ ಕಥೆಗಳು, ದಂತ ಕಥೆಗಳು, ಐತಿಹ್ಯಗಳು ಕೇವಲ ಕಪೋಲಕಲ್ಪಿತ. ಆದರೆ, ಒಬ್ಬ ಬುಡಕಟ್ಟಿನ ನಾಯಕನೆಂದು ಹೇಳಲಾದ ಆರ‍್ಯೇತರ ಮಹಿಷನನ್ನು ಗುರುತಿಸಿ, ಗೌರವಿಸುವ ಕೆಲಸವನ್ನು ಮಾಡಬಹುದು. ಅದಕ್ಕೆ ಯಾವುದೇ ಕಾಲಮಿತಿಯಿಲ್ಲ.

6. ಮೈಸೂರು ದಸರಾವನ್ನು ನಾಡಹಬ್ಬ ದಸರಾ ಎಂಬ ಹೆಸರಿನಿಂದ ರಾಜ್ಯ ಸರ್ಕಾರ ಆಚರಿಸುತ್ತ ಬಂದಿರುವುದು 1971ರಿಂದ. ಕರ್ನಾಟಕದ ಏಕೀಕರಣದ ಮುಂಚೆ ಹೊರಪ್ರದೇಶಗಳಲ್ಲಿದ್ದ ಕನ್ನಡಿಗರು ನವರಾತ್ರಿ ಹಬ್ಬವನ್ನು ಈ ಹೆಸರಿನಿಂದ ಆಚರಿಸುತ್ತಿದ್ದರು. ಉದಾ: ಧಾರವಾಡ, ಮುಂಬೈ, ಪುಣೆ, ಹೈದರಾಬಾದ್, ಸೊಲ್ಲಾಪುರ ಇತ್ಯಾದಿ ಪ್ರದೇಶಗಳಲ್ಲಿ.

ಕೊನೆಯದಾಗಿ ಭಾವನಾತ್ಮಕವಾದ ಆಚರಣೆಯ ಈ ಗದ್ದಲಗೋಜಲುಗಳ ನಡುವೆ ಜನರ ನೈಜವಾದ ಸಮಸ್ಯೆಗಳನ್ನು, ಆರ್ಥಿಕ ಸಮಸ್ಯೆಗಳನ್ನು ಮರೆಮಾಚಲಾಗುತ್ತಿರುವುದು ವಾಸ್ತವಿಕದ ವಿರೋಧಾಭಾಸ. ಇಂಥ ಭಿನ್ನಾಭಿಪ್ರಾಯಗಳು ಇದ್ದಷ್ಟೂ ಬಂಡವಾಳಶಾಹೀ ವ್ಯವಸ್ಥೆಗೆ ಪೂರಕ, ಬಡವರಾದವರಿಗೆ ಮತ್ತು ನಿರುದ್ಯೋಗಿಗಳಿಗೆ ಮಾರಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT