ಶುಕ್ರವಾರ, ಜೂನ್ 25, 2021
22 °C
ವೈದ್ಯರು, ಆಸ್ಪತ್ರೆ ವಿರುದ್ಧ ಕ್ರಮಕ್ಕೆ ಮೃತ ಯುವಕನ ಪೋಷಕರ ಆಗ್ರಹ

ಸಕಾಲಕ್ಕೆ ಚಿಕಿತ್ಸೆ ಸಿಗದೆ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಹೃದಯ ಸಂಬಂಧಿ ಸಮಸ್ಯೆಗೆ ಸಕಾಲಕ್ಕೆ ಚಿಕಿತ್ಸೆ ಸಿಗದೆ ಯುವಕನೊಬ್ಬ ಮೃತಪಟ್ಟ ಘಟನೆ ಭಾನುವಾರ ನಗರದಲ್ಲಿ ನಡೆದಿದೆ.

ಮಂಡ್ಯ ಜಿಲ್ಲೆಯ ಶರತ್ (21) ಮೃತ ಯುವಕ.

‘ಶನಿವಾರ ರಾತ್ರಿ 3 ಗಂಟೆ ವೇಳೆಗೆ ಶರತ್‌ ಸಮಸ್ಯೆಗೀಡಾಗಿದ್ದಾನೆ. ತಕ್ಷಣವೇ ಪೋಷಕರು ಮಂಡ್ಯದ ಆಸ್ಪತ್ರೆಗೆ ಈತನನ್ನು ಕರೆದೊಯ್ದಿದ್ದಾರೆ. ಅಲ್ಲಿನ ವೈದ್ಯರು ಮೈಸೂರಿನ ಜಯದೇವ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ. ಇಲ್ಲಿಗೆ ನಸುಕಿನಲ್ಲೇ ಕರೆದುಕೊಂಡು ಬಂದರೂ ಯಾವೊಂದು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡದಿದ್ದಕ್ಕೆ ಯುವಕ ಮೃತಪಟ್ಟಿದ್ದಾನೆ’ ಎಂದು ಈ ಕುಟುಂಬದ ಜೊತೆಗೆ ಬಂದಿದ್ದ ಸಂಬಂಧಿಕರೊಬ್ಬರು ಮಾಧ್ಯಮಗಳ ಬಳಿ ದೂರಿದರು.

ಸಕಾಲಕ್ಕೆ ಸ್ಪಂದಿಸದ ಸಿಬ್ಬಂದಿ, ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

‘ಮಂಡ್ಯದಿಂದ ಮೈಸೂರಿಗೆ ಬಂದು ಹಲವು ಆಸ್ಪತ್ರೆಗಳ ಬಾಗಿಲಿಗೆ ಹೋದೆವು. ಆದರೆ ಎಲ್ಲ ಆಸ್ಪತ್ರೆಯಲ್ಲೂ ಕೊರೊನಾ ನೆಗೆಟಿವ್ ವರದಿ ಕೇಳಿ, ವಾಪಸ್ ಕಳುಹಿಸಿದರು. ಸಾಯೋ ನನ್ನ ಮಗ ಕೈ ಮುಗಿದು ಬೇಡಿದರೂ, ಯಾವೊಬ್ಬ ವೈದ್ಯರು, ಸಿಬ್ಬಂದಿ ಕನಿಕರ ತೋರಿಸಲಿಲ್ಲ. ಸಕಾಲಕ್ಕೆ ನನ್ನ ಮಗನಿಗೆ ಚಿಕಿತ್ಸೆ ದೊರಕಿದ್ದರೆ ಬದುಕುತ್ತಿದ್ದನೇನೋ’ ಎಂದು ಶರತ್ ತಾಯಿ ಮಾಧ್ಯಮದ ಎದುರು ಗೋಳಿಟ್ಟರು.

ನಿವೃತ್ತ ಶಿಕ್ಷಕನಿಗೆ ಚಪ್ಪಲಿ ಏಟು

ಹುಣಸೂರು ತಾಲ್ಲೂಕಿನ ಬಿಳಿಕೆರೆ ಗ್ರಾಮದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆಗೆ ಸಂಬಂಧಿಸಿದಂತೆ ನಡೆದ ಮಾತಿನ ಚಕಮಕಿಯಲ್ಲಿ, ನಿವೃತ್ತ ಶಿಕ್ಷಕರಿಗೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹೊಡೆದಿದ್ದಾನೆ.

ವಿಜಯ್ ಎಂಬುವರೇ ಚಪ್ಪಲಿಯಿಂದ ಹೊಡೆತ ತಿಂದವರು. ಬಿಳಿಕೆರೆಯ ರಮೇಶ್ ಎಂಬಾತನೇ ನಿವೃತ್ತ ಶಿಕ್ಷಕರಿಗೆ ಚಪ್ಪಲಿಯಿಂದ ಥಳಿಸಿದವ.

‘ನಿವೃತ್ತ ಶಿಕ್ಷಕ ವಿಜಯ್ ತಾವಿರುವ ಬಡಾವಣೆಯಲ್ಲಿ ಸ್ವಾತಂತ್ರ್ಯೋತ್ಸವಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಬಡಾವಣೆಯ ಅಭಿವೃದ್ಧಿಗೆ ಶ್ರಮಿಸಿದವ ನಾನು. ನನಗೆ ಹೇಳದೆ ಸ್ವಾತಂತ್ರ್ಯೋತ್ಸವ ಆಯೋಜಿಸಿದ್ದೀರಿ ಎಂದು ರಮೇಶ್‌ ಎಂಬಾತ ಚಪ್ಪಲಿಯಿಂದ ನಿವೃತ್ತ ಶಿಕ್ಷಕರಿಗೆ ಥಳಿಸಿದ್ದಾನೆ ಎಂಬ ದೂರು ದಾಖಲಾಗಿದೆ’ ಎಂದು ಬಿಳಿಕೆರೆ ಪೊಲೀಸರು ತಿಳಿಸಿದರು.

ಬೈಕ್‌ ಕಳ್ಳರಿಬ್ಬರ ಬಂಧನ

ಇಬ್ಬರು ಬೈಕ್‌ ಕಳ್ಳರನ್ನು ಬಂಧಿಸಿದ ಮೈಸೂರು ಸಿಸಿಬಿ ಪೊಲೀಸರು, ₹ 5 ಲಕ್ಷ ಮೌಲ್ಯದ 8 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಜಾಫರ್‌ ಸೇಠ್‌ ನಗರದ ನರ್ಮ್‌ ಅಪಾರ್ಟ್‌ಮೆಂಟ್‌ ಬಳಿಯ ನಿವಾಸಿ, ವೆಲ್ಡಿಂಗ್‌ ಮತ್ತು ಪ್ಯಾಬ್ರಿಕೇಷನ್‌ ಕೆಲಸ ಮಾಡುವ ಸುಹೇಲ್ ಪಾಷ (18), ಉದಯಗಿರಿಯ ಛಾಯಾದೇವಿ ನಗರದ ನಿವಾಸಿ, ಹಣ್ಣಿನ ಅಂಗಡಿಯ ಕೆಲಸಗಾರ ಶೋಹೆಬ್ ಖಾನ್ (19) ಬಂಧಿತರು.

ಎನ್‌.ಆರ್.ಮೊಹಲ್ಲಾದ ತಿಬ್ಬಾದೇವಿ ಚಿತ್ರಮಂದಿರದ ಬಳಿ ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಈ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿಗಳಿಬ್ಬರು 8 ಹೋಂಡಾ ಡಿಯೋ ಬೈಕ್‌ಗಳನ್ನು ಕಾನೂನಿನ ಸಂಘರ್ಷಕ್ಕೊಳಗಾದ ಬಾಲಕನೊಂದಿಗೆ ಸೇರಿ ಮೈಸೂರು ನಗರದ ವಿವಿಧ ಸ್ಥಳಗಳಲ್ಲಿ ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ. ವಿಜಯನಗರ, ಹೆಬ್ಬಾಳ ವ್ಯಾಪ್ತಿಯಲ್ಲಿ ತಲಾ ಮೂರು ಬೈಕ್ ಕದ್ದಿದ್ದರೆ, ಸರಸ್ವತಿಪುರಂ ವ್ಯಾಪ್ತಿಯಲ್ಲಿ ಎರಡು ಬೈಕ್ ಕಳವು ಮಾಡಿದ್ದಾರೆ ಎಂದು ಸಿಸಿಬಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.