ಸೋಮವಾರ, ಜುಲೈ 26, 2021
22 °C

‘ನಿರ್ಲಕ್ಷ್ಯ ಮಾಡಬೇಡಿ; ಪರೀಕ್ಷೆ ತಪ್ಪಿಸಿಕೊಳ್ಳಬೇಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೋವಿಡ್ ಮಾರಣಾಂತಿಕವಲ್ಲ. ಸಕಾಲಕ್ಕೆ ಚಿಕಿತ್ಸೆಗೊಳಪಟ್ಟರೇ ಎಲ್ಲರೂ ಸುಲಲಿತವಾಗಿ ಗೆಲ್ಲಬಹುದು. ಆದರೆ, ಪರೀಕ್ಷೆ ಮಾಡಿಸಿಕೊಳ್ಳಲಿಕ್ಕೆ ಹಿಂದೇಟು ಹಾಕಿದರೆ ಯಾರೊಬ್ಬರೂ ಏನು ಮಾಡಲಾಗಲ್ಲ.

ಕೊರೊನಾ ಸೋಂಕಿನ ಲಕ್ಷಣಗಳು ಗೋಚರಿಸುತ್ತಿದ್ದಂತೆ ನಿರ್ಲಕ್ಷ್ಯ ಮಾಡಬಾರದು. ಮಳೆಗಾಲದಲ್ಲಿ ಸಹಜ ಎಂದು ನೀವೇ ನಿರ್ಧರಿಸಿಕೊಳ್ಳಬೇಡಿ. ಯಾವುದಕ್ಕೂ ತಕ್ಷಣವೇ ಪರೀಕ್ಷೆಗೊಳಪಡಿ. ಪ್ರತ್ಯೇಕ ವಾಸ ನಡೆಸಿ. ಆರಂಭದಲ್ಲೇ ಚಿಕಿತ್ಸೆಗೊಳಪಟ್ಟರೇ ಎಲ್ಲವೂ ಸರಳ. ವಿಪರೀತಕ್ಕೆ ಹೋದ ಮೇಲೆ ಯಾರಿಂದಲೂ ಏನೂ ಮಾಡಲು ಸಾಧ್ಯವಿರಲ್ಲ.

ಮನೋಬಲವೇ ಮೊದಲ ಮದ್ದು. ಮನಸ್ಸು ಪ್ರಶಾಂತ ಸ್ಥಿತಿಯಲ್ಲಿರಬೇಕು. ಆತ್ಮಸ್ಥೈರ್ಯವೊಂದಿದ್ದರೆ ಸಾಕು. ಮಾನಸಿಕವಾಗಿ ಕುಗ್ಗಿದರೆ ಎಲ್ಲವೂ ಮುಗಿದಂತೆ. ಎಷ್ಟು ಸಕಾರಾತ್ಮಕ ನಿಲುವು ನಿಮ್ಮೊಳಗಿರುತ್ತೆ, ಅಷ್ಟು ಶಕ್ತಿ ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕಾರಿಯಾಗಲಿದೆ. ಸಾಮಾಜಿಕ ಜಾಲತಾಣ, ದೃಶ್ಯ ಮಾಧ್ಯಮ, ಯೂಟ್ಯೂಬ್‌ನಿಂದ ಎಷ್ಟು ದೂರ ಇರುತ್ತೇವೆ, ಅಷ್ಟು ಬೇಗ ಗುಣಮುಖರಾಗುತ್ತೇವೆ. ಇಲ್ಲದಿದ್ದರೇ ಆತಂಕಕ್ಕೀಡಾಗಿ ಮತ್ತೊಂದಿಷ್ಟು ಸಮಸ್ಯೆ ಸೃಷ್ಟಿಸಿಕೊಳ್ಳುತ್ತೇವೆ.

ಕೊರೊನಾ ಸೋಂಕಿನ ಅನುಮಾನ ಬಂದೊಡನೆ ಮಾನಸಿಕವಾಗಿ ಸಿದ್ಧರಾಗಿ. ಆಸ್ಪತ್ರೆಗೆ ಅಗತ್ಯವಿರುವ ಕಿಟ್ ಸಿದ್ಧಪಡಿಸಿಕೊಂಡಿರಿ. ಅಲ್ಲಿಗೆ ಹೋದ ಬಳಿಕ ಏನು ಇಲ್ಲವಲ್ಲ ಎಂದು ಪರಿತಪಿಸಬೇಡಿ. ಬಿಸಿನೀರು, ಪೌಷ್ಟಿಕಾಂಶ ಆಹಾರ ಸೇವನೆ ಸಹಕಾರಿ. ಮನೆಮದ್ದು ಪರಿಣಾಮಕಾರಿ. ಗ್ರೀನ್‌ ಟೀ ಅತ್ಯುಪಯುಕ್ತ. ಇದಕ್ಕೆ ಮಸಾಲೆ ಸೇರಿಸಿಕೊಳ್ಳಬಹುದು. ಬಿಸಿನೀರಿನೊಳಗೆ ಮೆಣಸು, ಚಕ್ಕೆ, ಲವಂಗವನ್ನು ಹಾಕಿ ಕುಡಿದರೆ ಒಳ್ಳೆಯದು.

ನಾನು 6 ತಿಂಗಳ ಗರ್ಭಿಣಿ. ಪತಿ ಡಾಕ್ಟರ್. ಮೈ–ಕೈ ನೋವು, ಜ್ವರ, ಶೀತ ಕಾಣಿಸಿಕೊಂಡಿತು. ತಕ್ಷಣವೇ ತಪಾಸಣೆಗೊಳಪಟ್ಟೆ. ಮನೆಯಲ್ಲೇ ಪ್ರತ್ಯೇಕ ವಾಸವಿದ್ದೆ. ಮೂರು ದಿನದ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ರಾತ್ರಿ ಫೋನ್ ಮಾಡಿ ನಿಮ್ಮ ವರದಿ ನೆಗೆಟಿವ್ ಬಂದಿದೆ ಎಂದರು. ಎಲ್ಲರೂ ಸಂತೋಷಪಟ್ಟೆವು. ಆದರೆ, ಬೆಳಿಗ್ಗೆ ಹಾಸಿಗೆಯಿಂದ ಏಳುವ ಮುನ್ನ ಅದೇ ಸಿಬ್ಬಂದಿ ಫೋನ್ ಮಾಡಿ ಪಾಸಿಟಿವ್ ಎಂದಾಗ ನನ್ನೊಳಗಿದ್ದ ಧೈರ್ಯ, ಆತ್ಮವಿಶ್ವಾಸ ಎಲ್ಲವೂ ಅಲ್ಲಾಡಿದವು. ಈ ಹಿಂದೆ ಒಮ್ಮೆ ನಮ್ಮ ಏರಿಯಾ 28 ದಿನ ಸೀಲ್‌ಡೌನ್ ಆಗಿತ್ತು. ನನ್ನಿಂದ ಇದೀಗ ಜನರಿಗೆ ತೊಂದರೆ ಆಯ್ತಲ್ಲಾ ಎಂದು ಪರಿತಪಿಸಿದೆ. ಸುತ್ತಮುತ್ತಲಿನವರು ಸಹಕರಿಸಿದರು. ಕುಟುಂಬ ಬೆಂಬಲಕ್ಕೆ ನಿಂತಿತು. ಕೋವಿಡ್ ಆಸ್ಪತ್ರೆಗೆ ದಾಖಲಾಗಿ ಆರೈಕೆಗೊಳಪಟ್ಟೆ. ಗುಣಮುಖಳಾಗಿ ಮನೆಯಲ್ಲೇ ಇದ್ದೇನೆ.

ನಿರೂಪಣೆ: ಡಿ.ಬಿ.ನಾಗರಾಜ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.