ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಿಗ್ಗೆ ನೀರಸ, ಸಂಜೆಯಾಗುತ್ತಿದ್ದಂತೆಯೇ ಚುರುಕು

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಹಕ್ಕು ಚಲಾಯಿಸಿ ಸಂಭ್ರಮಿಸಿದ ಮತದಾರರು
Last Updated 19 ಏಪ್ರಿಲ್ 2019, 4:22 IST
ಅಕ್ಷರ ಗಾತ್ರ

ಮೈಸೂರು: ಮತದಾರರನ್ನು ಕೈಬೀಸಿ ಕರೆಯುವ ಆಕರ್ಷಕ ಕಮಾನು. ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮತಗಟ್ಟೆಗಳು. ಸುಡುಬಿಸಿಲಿನಲ್ಲಿ ಮತದಾನ ಕೇಂದ್ರಕ್ಕೆ ಬಂದವರಿಗೆ ಕುಡಿಯಲು ಮಜ್ಜಿಗೆ, ನೀರು ವಿತರಣೆ.

ಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿ, ನಾಗಾಪುರ ಪುನರ್ವಸತಿ ಕೇಂದ್ರ ಮತ್ತು ಜಿಲ್ಲೆಯ ವಿವಿಧೆಡೆ ಸ್ಥಾಪಿಸಿದ್ದ ಬುಡಕಟ್ಟು ಮತಗಟ್ಟೆಗಳಲ್ಲಿ ಕಂಡುಬಂದ ದೃಶ್ಯಗಳಿವು. ಲೋಕಸಭೆ ಚುನಾವಣೆ ಮತದಾನಕ್ಕಾಗಿ ಗುರುವಾರ ಬುಡಕಟ್ಟು ಮತಗಟ್ಟೆಗೆ ಬಂದವರು ಹಬ್ಬದ ಸಂಭ್ರಮದಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮೈಸೂರು ನಗರ ವ್ಯಾಪ್ತಿಯಲ್ಲಿ ಮತದಾನ ಪ್ರಮಾಣ ಕಡಿಮೆಯಾದರೂ, ತಾಲ್ಲೂಕು ಕೇಂದ್ರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚುರುಕಿನಿಂದ ಮತದಾನ ನಡೆಯಿತು. ‌ಆದರೆ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇದ್ದಂತಹ ಕಾವೇರಿದ ವಾತಾವರಣ ಎಲ್ಲೂ ಕಂಡುಬರಲಿಲ್ಲ. ಶಾಂತಿಯುತವಾಗಿ ಮತದಾನ ನಡೆಯಿತು.

ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನ ಮೂರು ಗಂಟೆಯವರೆಗೆ ಮತದಾನ ನೀರಸವಾಗಿತ್ತು. ಸಂಜೆಯಾಗುತ್ತಿದ್ದಂತೆಯೇ ವೇಗ ಪಡೆದುಕೊಂಡಿತು. ಹುಣಸೂರು ತಾಲ್ಲೂಕಿನ ಕರಣಕುಪ್ಪೆ ಗ್ರಾಮದ ಮತಗಟ್ಟೆಯಲ್ಲಿ ಒಟ್ಟು 1,212 ಮತದಾರರು ಇದ್ದಾರೆ. ಮಧ್ಯಾಹ್ನ 12ರ ವೇಳೆಗೆ 381 ಮಂದಿ ಮತ ಚಲಾಯಿಸಿದ್ದರು. ಇಲ್ಲಿ ಇವಿಎಂ ಕೈಕೊಟ್ಟಿದ್ದರಿಂದ ಸುಮಾರು ಅರ್ಧ ಗಂಟೆ ತಡವಾಗಿ ಮತದಾನ ಪ್ರಕ್ರಿಯೆ ಆರಂಭವಾಯಿತು.

ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಒಟ್ಟು 722 ಮತದಾರರಿದ್ದು, ಮಧ್ಯಾಹ್ನ 12ರ ವೇಳೆಗೆ 240 ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು.

ಹುಣಸೂರು ತಾಲ್ಲೂಕಿನ ಕಡೇಮನುಗನಹಳ್ಳಿಯಲ್ಲಿನ ಮತಗಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಚುರುಕಿನಿ ಮತದಾನ ನಡೆದಿತ್ತು. ಒಟ್ಟು 817 ಮತದಾರರಿದ್ದು, ಮಧ್ಯಾಹ್ನ ಒಂದೂವರೆಯ ವೇಳೆಗೆ 510 ಮಂದಿ ಮತ ಹಾಕಿದ್ದರು.

‘ಬೆಳಿಗ್ಗೆ ಮತಗಟ್ಟೆಗೆ ಬಂದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೃಷಿ ಮತ್ತು ಇನ್ನಿತರ ಕೆಲಸಕ್ಕೆ ತೆರಳಿರುವುದರಿಂದ ಪುರುಷರು ಸಂಜೆಯ ವೇಳೆಗೆ ಮತಗಟ್ಟೆಯತ್ತ ಬರುವರು’ ಎಂದು ಪಂಚವಳ್ಳಿ ಗ್ರಾಮದ ಹರೀಶ್‌ ನುಡಿದರು.

ಬುಧವಾರ ರಾತ್ರಿ ಉತ್ತಮ ಮಳೆಯಾಗಿತ್ತು. ಆದ್ದರಿಂದ ಕೆಲವರು ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಶುರು ಮಾಡಿದ್ದಾರೆ. ಅವರು ಕೆಲಸ ಮುಗಿಸಿದ ಬಳಿಕವೇ ಮತಗಟ್ಟೆಗಳತ್ತ ಬರುತ್ತಾರೆ ಎಂದು ತಿಳಿಸಿದರು.

ಕಾಲುನೋವು, ಬೆನ್ನುನೋವು ಒಳಗೊಂಡಂತೆ ಸಣ್ಣಪುಟ್ಟ ಅನಾರೋಗ್ಯದಿಂದ ಬಳಲುತ್ತಿದ್ದವರು ಅದನ್ನು ಲೆಕ್ಕಿಸದೆ ತಮ್ಮ ಹಕ್ಕು ಚಲಾಯಿಸಿದರು. ಕೆಲವರು ಒಂದೆರಡು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿ ಬಂದರು. ಸಾರಿಗೆ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ ಕಡೆಗಳಲ್ಲಿ ಮತದಾರರನ್ನು ಕರೆದುಕೊಂಡು ಬರಲು ಆಟೊ ವ್ಯವಸ್ಥೆ ಮಾಡಲಾಗಿತ್ತು.

ಸಖಿ ಮತಗಟ್ಟೆಗಳು ಮತ್ತು ಅಂಗವಿಕಲರಿಗಾಗಿ ವಿಶೇಷವಾಗಿ ಸ್ಥಾಪಿಸಿರುವ ಮತಗಟ್ಟೆಗಳು ಗಮನ ಸೆಳೆದವು. ಪಿರಿಯಾಪಟ್ಟಣದ ಕುಂದನಹಳ್ಳಿ, ಹುಣಸೂರಿನ ಬಿಳಿಕೆರೆಯಲ್ಲಿ ಅಂಗವಿಕಲರಿಗೆ ಮತಗಟ್ಟೆ ಸ್ಥಾಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT