ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಪ್ರತಿ ವ್ಯಕ್ತಿ 2.5 ಕೆ.ಜಿ ಪ್ಲಾಸ್ಟಿಕ್‌ ಸೇವನೆ!

ಸಾಗರ ವಿಜ್ಞಾನ ತಜ್ಞ ಡಾ.ವಿ.ಎನ್‌. ನಾಯಕ್‌ ಹೇಳಿಕೆ; ‘ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ’ ಕುರಿತು ವಿಷಯ ಮಂಡನೆ
Last Updated 9 ಸೆಪ್ಟೆಂಬರ್ 2022, 14:12 IST
ಅಕ್ಷರ ಗಾತ್ರ

ಮೈಸೂರು: ‘ಜಗತ್ತಿನಲ್ಲಿ ಬಳಸುವ ಪ್ಲಾಸ್ಟಿಕ್‌ನಲ್ಲಿ ಶೇ 50ರಷ್ಟು ಏಕಬಳಕೆ ಪ್ಲಾಸ್ಟಿಕ್‌ ಸೇರಿದೆ. ಪ್ರತಿ ವ್ಯಕ್ತಿ 10 ವರ್ಷಗಳಲ್ಲಿ 2.5 ಕೆ.ಜಿ.ಯಷ್ಟು ಪ್ಲಾಸ್ಟಿಕ್‌ ಸೇವಿಸುತ್ತಾನೆ’ ಎಂದು ವಿಶ್ರಾಂತ ಪ್ರಾಧ್ಯಾಪಕ, ಸಾಗರ ವಿಜ್ಞಾನ ತಜ್ಞ ಡಾ.ವಿ.ಎನ್‌. ನಾಯಕ್‌ ತಿಳಿಸಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಕರ್ನಾಟಕ ಮುಕ್ತ ವಿವಿ, ಮೈಸೂರು ವಿಶ್ವವಿದ್ಯಾಲಯದಿಂದ ಆಯೋಜಿಸಿರುವ ‘14ನೇ ಅಖಿಲ ಕರ್ನಾಟಕ ವಿಜ್ಞಾನ ಸಮ್ಮೇಳನ’ದ ಎರಡನೇ ದಿನವಾದ ಶುಕ್ರವಾರ ‘ಸಾಗರದಲ್ಲಿ ಪ್ಲಾಸ್ಟಿಕ್ ಮಾಲಿನ್ಯ’ ಕುರಿತು ವಿಷಯ ಮಂಡಿಸಿದರು.

‘ಭೂಮಿಗಿಂತ ಸಾಗರದಲ್ಲಿರುವ ಜೀವಿಗಳ ಪ್ರಮಾಣ ಹೆಚ್ಚು. ಪ್ಲಾಸ್ಟಿಕ್‌ ಬಳಕೆ ಹೆಚ್ಚಿದಂತೆಲ್ಲಾ ಸಾಗರದ ಜೀವಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಎಲ್ಲೋ ಬಳಸಿ ಬಿಸಾಡಿದ ಪ್ಲಾಸ್ಟಿಕ್‌ ತ್ಯಾಜ್ಯ ಕಾಲಾನಂತರದಲ್ಲಿ ಸಮುದ್ರ ಸೇರುತ್ತದೆ. ಈ ತ್ಯಾಜ್ಯವು ಜಲಚರಗಳ ಸಾವಿಗೆ ಕಾರಣವಾಗುತ್ತಿದೆ. ಮೀನುಗಾರಿಕೆ ಮೇಲೂ ಪರಿಣಾಮ ಬೀರುತ್ತಿದೆ. ಸಮುದ್ರದಿಂದ ಜನ್ಮಿಸಿದ ಮನುಷ್ಯ ಸಮುದ್ರವನ್ನೇ ಹಾಳು ಮಾಡುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕೋವಿಡ್‌ ಸಂದರ್ಭದಲ್ಲಿ ಮಾಸ್ಕ್‌, ಕೈಗವಸು ಸೇರಿದಂತೆ ವೈದ್ಯಕೀಯ ತ್ಯಾಜ್ಯ ವ್ಯಾಪಕ ಪ್ರಮಾಣದಲ್ಲಿ ಉತ್ಪತ್ತಿಯಾಗಿದ್ದು, ಇದನ್ನು ಸಮರ್ಪಕವಾಗಿ ವಿಲೇವಾರಿ ಮಾಡಿಲ್ಲ’ ಎಂದರು.

‘ಮುಂದಿನ 20ರಿಂದ 30 ವರ್ಷಗಳಲ್ಲಿ ಭೂಮಿಯ ಎಲ್ಲೆಡೆ ಸೂಕ್ಷ್ಮ ಪ್ಲಾಸ್ಟಿಕ್‌ ಹರಡಿರುತ್ತದೆ. ಕಣ್ಣಿಗೆ ಕಾಣದಂತಹ ಪ್ಲಾಸ್ಟಿಕ್‌ ನಮ್ಮ ದೇಹ ಸೇರಿ ವಿವಿಧ ಕಾಯಿಲೆಗಳಿಗೆ ಕಾರಣವಾಗಲಿದೆ. ಜಗತ್ತಿನಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯದಿಂದ ಪ್ರತಿ ವರ್ಷ 1 ಲಕ್ಷ ಪ್ರಾಣಿಗಳು, 10 ಲಕ್ಷ ಪಕ್ಷಿಗಳು ಸಾಯುತ್ತಿವೆ. ಕಡಲಾಮೆ ಮರಿಗಳು ಪ್ಲಾಸ್ಟಿಕ್‌ ಸೇವಿಸಿ ಮೃತಪಡುತ್ತಿವೆ’ ಎಂದು ಹೇಳಿದರು.

‘ಪ್ಲಾಸ್ಟಿಕ್‌ ಬಳಕೆ ಅನಿವಾರ್ಯ ಎನ್ನುವಂತಾಗಿದೆ. ಏಕಬಳಕೆ ಪ್ಲಾಸ್ಟಿಕ್‌ ನಿಷೇಧಿಸಿದ್ದರೂ, ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನೂ ಇನ್ನೂ ಮಾಡಿಕೊಂಡಿಲ್ಲ. ಪ್ಲಾಸ್ಟಿಕ್‌ ಉಪಯೋಗವನ್ನು ನಿಲ್ಲಿಸಬೇಕು. ಭೂಮಿ ಮೇಲಿನ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು. ಸಮುದ್ರ ಮಾಲಿನ್ಯವನ್ನು ತಡೆಗಟ್ಟಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಸದಸ್ಯ ರಾಜೀವ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ಶಿವಕುಮಾರ್‌, ಜಿಲ್ಲಾ ಸಮಿತಿ ಸದಸ್ಯ ಎಚ್‌.ಎಲ್‌.ಚಲುವರಾಜು, ಕೃಷ್ಣ ಚೈತನ್ಯ ಇದ್ದರು.

4ನೇ ಗೋಷ್ಠಿಯಲ್ಲಿ ‘ವಿಜ್ಞಾನ ಸೌಂದರ್ಯತೆ ಹಾಗೂ ಸೌಂದರ್ಯದ ವಿಜ್ಞಾನ’ ಕುರಿತು ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಸ್‌.ಎಂ.ಶಿವಪ್ರಸಾದ್‌, ‘ಭಾರತೀಯ ಬಾಹ್ಯಾಕಾಶ ಸಂಶೋಧನೆ– ಸಮಾಜದ ಏಳಿಗೆಯಲ್ಲಿ’ ಕುರಿತು ಇಸ್ರೊ ವಿಜ್ಞಾನಿ ಡಾ.ರೂಪಾ ವೆಂಕಟೇಶ್‌ ವಿಷಯ ಮಂಡಿಸಿದರು.

‘17.4 ಲಕ್ಷ ಜೀವ ಪ್ರಭೇದ ಪತ್ತೆ’
ಮಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಜಯಕರ ಭಂಡಾರಿ ‘ವೈವಿಧ್ಯ– ಜೀವ ಜಗತ್ತಿನ ಜೀವಾಳ’ ಕುರಿತು ಮಾತನಾಡಿ, ‘ಜಗತ್ತಿನಲ್ಲಿ 80ರಿಂದ 120 ಲಕ್ಷ ಜೀವ ಪ್ರಭೇದಗಳಿದ್ದು, ಈ ಪೈಕಿ 17.4 ಲಕ್ಷ ಪ್ರಭೇದಗಳನ್ನು ಗುರುತಿಸಲಾಗಿದೆ. ಜಗತ್ತಿನ ಭೂಭಾಗದಲ್ಲಿ ಭಾರತ ಶೇ 2.2ರಷ್ಟು ಜಾಗ ಹೊಂದಿದ್ದು, 1.2 ಲಕ್ಷ ಜೀವ ಪ್ರಭೇದಗಳನ್ನು ಗುರುತಿಸಲಾಗಿದೆ. ನಾಲ್ಕು ಪರಿಸರ ಸೂಕ್ಷ್ಮ ವಲಯಗಳಿವೆ. ನಮ್ಮ ಪಶ್ಚಿಮ ಘಟ್ಟಗಳಲ್ಲಿ ಅಪರೂಪದ ಜೀವಸಂಕುಲವಿದೆ. ಸ್ಥಳೀಯ ಪ್ರಭೇದಗಳು ನಾಶವಾಗದಂತೆ ನೋಡಿಕೊಳ್ಳಬೇಕು. ಈ ಪ್ರಭೇದ ನಾಶವಾದರೆ ಮತ್ತೆಲ್ಲೂ ಸಿಗುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT