ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಓಪನ್‌ ಸ್ಟ್ರೀಟ್‌ ಫೆಸ್ಟಿವಲ್‌: ಇಲ್ಲಿ ಮೋಜಿಗೆ ಕೊನೆಯೇ ಇಲ್ಲ!

ಕುಣಿದು ನಲಿದ ಸಾವಿರಾರು ಯುವಜನ
Last Updated 13 ಅಕ್ಟೋಬರ್ 2018, 12:34 IST
ಅಕ್ಷರ ಗಾತ್ರ

ಮೈಸೂರು: ವಾಹ್‌! ಇದು ಓಪನ್‌ ಸ್ಟ್ರೀಟ್ ಫೆಸ್ಟಿವಲ್‌. ಇಲ್ಲಿ ಏನುಂಟು ಏನಿಲ್ಲ. ಮನೋರಂಜನೆಗೆ ಇದು ಹೇಳಿ ಮಾಡಿಸಿದ ಜಾಗ. ಒಂದೆಡೆ ವೇದಿಕೆಯ ಮೇಲೆ ಕಲಾವಿದರು ಹಾಡು–ನೃತ್ಯ ಎಂದು ಮನರಂಜಿಸುತ್ತಿದ್ದರೆ, ವೇದಿಕೆಯ ಕೆಳಗೆ ಯುವಜನತೆ ಹುಚ್ಚೆದ್ದು ಕುಣಿದು ತಮ್ಮ ಕಲಾಪ್ರೇಮವನ್ನು ತೀರಿಸಿಕೊಂಡರು.

ಕಳೆದ ವರ್ಷ ದೇವರಾಜ ಅರಸು ರಸ್ತೆಯಲ್ಲಿ ನಡೆದಿದ್ದ ಈ ಹಬ್ಬ ಈ ಬಾರಿ ನ್ಯಾಯಾಲಯ ಎದುರಿನ ಕೃಷ್ಣ ಬುಲೆವಾರ್ಡ್‌ ರಸ್ತೆಗೆ ಸ್ಥಳಾಂತರವಾಗಿತ್ತು. ಜಾಗ ಬದಲಾದರೇನಂತೆ, ಯುವಜನತೆಯ ಉತ್ಸಾಹ ಮಾತ್ರ ಕೊಂಚವೂ ಕಳೆಗುಂದಿರಲಿಲ್ಲ. ಸಿನಿಮಾ ಗೀತೆಯೇ ಇರಲಿ, ಜಾನಪದ ನೃತ್ಯವೇ ಇರಲಿ. ಎಲ್ಲದಕ್ಕೂ ತಾವೂ ಹೆಜ್ಜೆ ಸೇರಿಸಿ ಕಲೆ, ಸಂಸ್ಕೃತಿಗೆ ತಮ್ಮ ಸಂಪೂರ್ಣ ಬೆಂಬಲವನ್ನು ತೋರಿಸಿಯೇಬಿಟ್ಟರು.

ಬುಲೆವಾರ್ಡ್ ರಸ್ತೆಯಲ್ಲಿ ಸಾವಿರಾರು ಮಂದಿ ಸೇರಿದ್ದರು. ಜಿಲ್ಲಾಡಳಿತ ಮತ್ತು ‍ಪ್ರವಾಸೋಸ್ಯಮ ಇಲಾಖೆಯು ಜಂಟಿಯಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮವು ಬೆಳಿಗ್ಗೆ 7ರಿಂದ ರಾತ್ರಿ 10ರವರೆಗೂ ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸಿತು.

4 ನಾಲ್ಕು ವೇದಿಕೆ; ಕುಣಿದವರು ಸಹಸ್ರಾರು!:

ಇಲ್ಲಿ ನಾಲ್ಕು ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಬುಲೆವಾರ್ಡ್ ರಸ್ತೆಯ ಎರಡೂ ಬದಿಗಳಲ್ಲಿ ಎರಡು ಪ್ರಧಾನ ವೇದಿಕೆಗಳು. ಇಲ್ಲಿ ವೃತ್ತಿಪರರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ರಸ್ತೆಯ ಭಾಗದಲ್ಲಿ ಇನ್ನೆರಡು ಪುಟ್ಟ ವೇದಿಕೆಗಳನ್ನು ನಿರ್ಮಿಸಲಾಗಿತ್ತು. ಈ ವೇದಿಕೆಗಳಲ್ಲಿ ಯುವಕರು ತಾವೇ ವೇದಿಕೆಯ ಮೇಲೆ ಹತ್ತಿ ಮನಬಂದಂತೆ ಕುಣಿಯಲು ಅವಕಾಶ. ಕಿವಿಗಡಚಿಕ್ಕುವ ಹಾಗೆ ಸಿನಿಮಾಗೀತೆ ಸ್ಪೀಕರ್‌ನಲ್ಲಿ ಪ್ಲೇ ಆಗುತ್ತಿದ್ದರೆ, ಭೂಮಿ ಹಳ್ಳ ಬೀಳುವ ಹಾಗೆ ಯುವಕರು ಕುಣಿದು ಕುಪ್ಪಳಿಸಿದರು.

ಅಷ್ಟೇ ಅಲ್ಲ. ಯುವಕರಿಗೆ ಕುಣಿಯಲು ಹಾಡು ಬೇಕಾಗಿಯೇ ಇರಲಿಲ್ಲ. ಮರಗಾಲು ಗೊಂಬೆ, ಚಂಡೆ, ವೀರಗಾಸೆ, ಹುಲಿವೇಷಧಾರಿಗಳ ಕುಣಿತ, ಕೀಲು ಕುದುರೆ ಇತ್ಯಾದಿ ಜನಪದ ಕಲಾವಿದರ ಜತೆಗೆ ತಾವೂ ಹೆಜ್ಜೆಹಾಕಿದರು. ಕಲಾವಿದರೊಂದಿಗೆ ‘ಸೆಲ್ಫಿ’ ಕ್ಲಿಕ್ಕಿಸಿಕೊಂಡು ನಲಿದರು.

ತಿಂಡಿಪೋತರಿಗೂ ಹಬ್ಬ: ಈ ಹಬ್ಬಕ್ಕೆ ತಿಂಡಿ ಸ್ಟಾಲ್‌ಗಳಿಲ್ಲದೇ ಹೋದರೆ ಆದೀತೆ? ವಿವಿಧ ತಿಂಡಿ ಸ್ಟಾಲ್‌ಗಳಲ್ಲಿ ತಿಂಡಿಪೋತರ ದಂಡೇ ನೆರೆದಿತ್ತು. ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್ ಸ್ಟಾಲ್‌ಗಳಲ್ಲಿ ಜನವೋ ಜನ. ಬಿಸಿಲ ಬೇಗೆಯಲ್ಲಿ ಬೆಂದು ಬಾಡಿದವರಿಗೆ ಐಸ್‌ ಕ್ರೀಂ ತಿಂದು ದಾಹ ತಣಿಸಿಕೊಳ್ಳುವ ಅವಕಾಶ.

ಮಿಕ್ಕಂತೆ, ಸೈಕಲ್ ಮತ್ತು ಬೈಕ್ ಸ್ಟಂಟ್, ಮಕ್ಕಳ ಆಟಿಕೆ ವಿಭಾಗಗಳಿದ್ದವು. ರಸ್ತೆ ಮೇಲೆ 3ಡಿ ಆರ್ಟ್, ಡ್ರಮ್ ಜಾಮ್, ಸ್ಕೇಟಿಂಗ್, ಟ್ಯಾಟೂ ಶಾಪ್, ಪೇಪರ್ ಆರ್ಟ್ ಮಕ್ಕಳಿಗೆ ಆಕರ್ಷಣೆಯ ಕೇಂದ್ರವಾಗಿದ್ದವು.

ಪರಿಸರ ಕಾಳಜಿ; ಜ್ಞಾನ ಪ್ರಸಾರ:

ರಸ್ತೆಯ ಉದ್ದಕ್ಕೂ ಎಡ– ಬಲ ಬದಿಗಳಲ್ಲಿ ವಿವಿಧ ಮಳಿಗೆಗಳು ಗಮನಸೆಳೆದವು. ಹೆಣ್ಣುಮಕ್ಕಳಿನ ಫೇವರೇಟ್ ಆದ ಬಳೆ, ಓಲೆ ಇತ್ಯಾದಿ ಆಲಂಕಾರಿಕ ಆಭರಣಗಳ ಸ್ಟಾಲ್‌ ಒಂದೆಡೆಯಾದರೆ, ಅದರ ಪಕ್ಕದಲ್ಲೇ ಬಟ್ಟೆಗಳ ಸ್ಟಾಲ್‌. ‘ನಮ್ಮ ಮೈಸೂರು’ ಎಂದು ಕನ್ನಡದಲ್ಲಿ ಬರೆದಿರುವ ಟೀ–ಶರ್ಟ್‌ಗಳನ್ನು ಕೊಳ್ಳಲು ನೂಕುನುಗ್ಗಲು. ಇವರೊಂದಿಗೆ ‘ಪ್ಲಾಸ್ಟಿಕ್‌ ಬಿಡಿ, ಪೇಪರ್‌ ಬ್ಯಾಗ್‌ ಬಳಸಿ’ ಎಂಬ ಪರಿಸರಸ್ನೇಹಿ ಜಾಗೃತಿ. ಅದರ ಪಕ್ಕವೇ ಪ್ರಕೃತಿ ಸೌಂದರ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಕ್ಲಿಕ್ಕಿಸಿರುವ ಛಾಯಾಚಿತ್ರ ಪ್ರದರ್ಶನ.

ಈ ಹಬ್ಬದ ಪ್ರಮುಖ ಆಕರ್ಷಣೆ ಕಲಾಚಿತ್ರಗಳ ಪ್ರದರ್ಶನ ಹಾಗೂ ಮಾರಾಟ. ಕಲಾವಿದರು ಸ್ಥಳದಲ್ಲೇ ಚಿತ್ರ ಬಿಡಿಸಿ ಮಾರಾಟ ಮಾಡಿದರು. ಅಲ್ಲದೇ, ಮಕ್ಕಳನ್ನು ಕೂರಿಸಿಕೊಂಡ ಕಲಾವಿದರು ‘ಫೇಸ್ ಪೇಯಿಂಟ್’ ಮಾಡಿ ಮಕ್ಕಳಿಗೂ ಪೋಷಕರಿಗೂ ಹಿರಿಹಿರಿ ಹಿಗ್ಗುವಂತೆ ಮಾಡಿದರು.

ಕನ್ನಡವನ್ನು ಕೇಳುವವರೇ ಇಲ್ಲ!

‘ಓಪನ್ ಸ್ಟ್ರೀಟ್ ಫೆಸ್ಟಿವಲ್’ ಕಾರ್ಯಕ್ರಮ ಸಂಘಟಕರು ಕನ್ನಡ ಕಡೆಗಣಿಸಿ, ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾದರು.

ಇಲ್ಲಿ ಎರಡು ಪ್ರಧಾನ ವೇದಿಕೆಗಳಲ್ಲಿ ವೃತ್ತಿಪರರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಆದರೆ, ಕನ್ನಡದ ಗೀತೆಗಳನ್ನು ಹಾಡದೇ ಸಾರ್ವಜನಿಕರು ಕೋಪಕ್ಕೆ ತುತ್ತಾದರು. ತಮಿಳು, ತೆಲುಗು, ಹಿಂದಿ ಗೀತೆಗಳನ್ನು ಹಾಕಿ, ಅದಕ್ಕೆ ನೃತ್ಯ ಮಾಡುತ್ತಿದ್ದರು. ಲೈವ್‌ ಕಾರ್ಯಕ್ರಮ ನೀಡಿದ ಕಲಾವಿದರೂ ಹಿಂದಿ ಗೀತೆಗಳನ್ನೇ ಹಾಡಿ ಕನ್ನಡಿಗರಿಗೆ ಬೇಸರ ತಂದರು.

ಕನ್ನಡೇತರ ಹಾಡುಗಳಿಗೇ ಡಾನ್ಸ್‌ ಮಾಡುತ್ತಿದ್ದ ಕಲಾವಿದರ ಬಳಿ ಸಾಗಿದ ಕನ್ನಡ ಪ್ರೇಮಿ ಯುವಜನತೆ ಕನ್ನಡ ಹಾಡುಗಳನ್ನು ಹಾಕುವಂತೆ ಕೋರಿದರು. ಸತತ ಮನವಿಯ ಬಳಿಕ ಕೊನಗೆ ಕುರುಬನ ರಾಣಿ ಹಾಕಿ ಹೆಜ್ಜೆಹಾಕಿ ಕಾರ್ಯಕ್ರಮ ಮುಗಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ‘ಕನ್ನಡಕ್ಕೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದೇವೆ’ ಎಂದರು. ಆದರೆ, ಬಳಿಕವೂ ಕನ್ನಡದ ಗೀತೆಗಳು ಅಷ್ಟಾಗಿ ಕೇಳಿ ಬರಲಿಲ್ಲ.

ಹೊರನಡೆದ ರಾಮದಾಸ್:

ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಚಾಲನೆ ನೀಡಿದರು. ಕಾರ್ಉಕ್ರಮಕ್ಕೆ ಬೆಳಿಗ್ಗೆ 10ಕ್ಕೆ ನಿಗದಿಯಾಗಿತ್ತು, ಮಹೇಶ್ 10.45ಕ್ಕೆ ಬಂದರು. ಮುಂಚಿತವಾಗಿಯೇ ಬಂದು ಕುಳಿತಿದ್ದ ಶಾಸಕ ಎಸ್‌.ಎ.ರಾಮದಾಸ್ ಕಾದು ಬೇಸತ್ತು ಕಾರ್ಯಕ್ರಮದಿಂದ ಹೊರಟರು.

‘ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುವುದಕ್ಕೆ ಬಿಜೆಪಿಯವರಿಗೆ ಹೊಟ್ಟೆಕಿಚ್ಚು. ಅದಕ್ಕಾಗಿಯೇ ಕಾರ್ಯಕ್ರಮದಿಂದ ರಾಮದಾಸ್ ಹೊರನಡೆದಿದ್ದಾರೆ’ ಎಂದು ಮಹೇಶ್‌ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT