ಕಾಯಂಗೊಳಿಸದಿದ್ದರೆ ರೈತ ಮಾದರಿಯ ಹೋರಾಟ–ಎಚ್ಚರಿಕೆ
ಮೈಸೂರು: ಕಾರ್ಮಿಕರ ವಿವಾದ ಕೈಗಾರಿಕಾ ನ್ಯಾಯಮಂಡಳಿಯಲ್ಲಿ ಬಾಕಿ ಇದೆ. ಇದನ್ನು ಪರಿಗಣಿಸದೇ ಬಡ್ತಿ ಮತ್ತು ವರ್ಗಾವಣೆಯ ಅಧಿಕಾರವನ್ನು ಅಧೀಕ್ಷಕ ಎಂಜಿನಿಯರ್ ಅವರಿಗೆ ನೀಡಿ, ಏಕಮುಖವಾಗಿ ಬಡ್ತಿ ಮತ್ತು ವರ್ಗಾವಣೆ ಮಾಡುತ್ತಿರುವುದರಿಂದ ಹಲವು ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ವಿದ್ಯುತ್ ಕಾರ್ಮಿಕರ ಫೆಡೆರೇಷನ್ನಿನ ಗೌರವ ಅಧ್ಯಕ್ಷರಾದ ಎಸ್.ವರಲಕ್ಷ್ಮೀ ಬೇಸರ ವ್ಯಕ್ತಪಡಿಸಿದರು.
ಜನರಿಗೆ ಬೆಳಕು ನೀಡುವ ನೌಕರರು ಕತ್ತಲೆಯಲ್ಲಿದ್ದಾರೆ. ಈಗಾಗಲೇ ಕೆಲಸದಿಂದ ತೆಗೆದು ಹಾಕಿರುವವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು. ಗುತ್ತಿಗೆ ಪದ್ದತಿಯನ್ನು ರದ್ದುಗೊಳಿಸಬೇಕು. ಇಲ್ಲದಿದ್ದರೆ, ರೈತರು ನವದೆಹಲಿಯಲ್ಲಿ ನಡೆಸುತ್ತಿರುವಂತಹ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಗುತ್ತಿಗೆ ಪದ್ದತಿಯನ್ನು ಶೋಷಣಾತ್ಮಕ ಗುಲಾಮಗಿರಿ ಎಂದು ಸುಪ್ರೀಂಕೋರ್ಟ್ ಈಗಾಗಲೇ ವ್ಯಾಖ್ಯಾನಿಸಿದೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಿ ಎಂದು ಆದೇಶಿಸಿದೆ. ಆದರೆ, ಇಂಧನ ಇಲಾಖೆಯಲ್ಲಿ ಈ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಗುತ್ತಿಗೆ ಕಾರ್ಮಿಕರ ಕನಿಷ್ಠ ವೇತನವನ್ನು ₹ 21 ಸಾವಿರಕ್ಕೆ ಹೆಚ್ಚಿಸಬೇಕು, ಕೊರೊನಾದಂತಹ ಸಂದರ್ಭದಲ್ಲಿ ಈ ಕಾರ್ಮಿಕರನ್ನು ಮಾನವೀಯತೆಯ ಆಧಾರದ ಮೇಲೆ ಪರಿಗಣಿಸಿ ಕೆಲಸ ನೀಡಬೇಕು, ಗುತ್ತಿಗೆದಾರರಿಂದ ಆಗುವ ಶೋಷಣೆ ನಿಲ್ಲಿಸಬೇಕು, ಖಾಸಗೀಕರಣಕ್ಕೆ ದಾರಿ ಮಾಡಿಕೊಡುವ ವಿದ್ಯುತ್ ಕಾಯ್ದೆ 2020ನ್ನು ತಿದ್ದುಪಡಿ ಮಾಡಬಾರದು ಎಂದು ಆಗ್ರಹಿಸಿದರು.
ಸಿಐಟಿಯು ಕಾರ್ಯದರ್ಶಿ ಜಿ.ಜಯರಾಮ್, ಮುಖಂಡ ಉಮಾಶಂಕರ್ ಇದ್ದರು.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.