ಸ್ವಾತಂತ್ರ್ಯ ದಿನ ಹಬ್ಬವಾಗಲಿ

7

ಸ್ವಾತಂತ್ರ್ಯ ದಿನ ಹಬ್ಬವಾಗಲಿ

Published:
Updated:
Deccan Herald

ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸ ಎಲ್ಲರಿಗೂ ಗೊತ್ತಿರುವಂತದ್ದೇ. ಅದೇನು ಮಹಾ, ಬ್ರಿಟಿಷರ ವಿರುದ್ಧ ಹೋರಾಡಿ ನಮ್ಮದೇ ಸರ್ಕಾರ ಸ್ಥಾಪನೆಯಾದ ದಿನ ಎಂದು ಮೂಗು ಮುರಿಯುವವರ ಸಂಖ್ಯೆ ದೊಡ್ಡದಾಗುತ್ತಿದೆ. ವಿಶೇಷವಾಗಿ ಈ ವರ್ಗದಲ್ಲಿ ಹೆಚ್ಚಾಗಿ ಕಂಡು ಬರುವುದು ನಮ್ಮ ಯುವ ಸಮುದಾಯ. ಅಂದು ಹೋರಾಡಿ ಸ್ವಾತಂತ್ರ್ಯ ತಂದು ಕೊಟ್ಟರು. ಇಂದು ನಾವೇನು ಮಾಡುವುದು? ಎಂದು ಹಲವರು ಪ್ರಶ್ನೆ ಕೇಳುತ್ತಾರೆ.‌

ಸ್ವಾತಂತ್ರ್ಯ ದಿನಾಚರಣೆಗೆ ಸಿದ್ಧ ಮಾದರಿಯ ಒಂದು ಸಂದೇಶ, ರಾಷ್ಟ್ರಧ್ವಜ, ಭೂಪಟ, ಮಹಾತ್ಮ ಗಾಂಧಿ ಚಿತ್ರ ಇರುವ ಚಿತ್ರ ಸಂದೇಶವನ್ನು ವಾಟ್ಸ್‌ಆ್ಯಪ್‌ನಲ್ಲಿ ತೇಲಿ ಬಿಡುತ್ತಾರೆ. ‘ಹ್ಯಾಪಿ ಇಂಡಿಪೆಂಡೆನ್ಸ್ ಡೇ’ ಎಂದು ಹೇಳಿ ತಾವು ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದು ಸಂಭ್ರಮಿಸುತ್ತಾರೆ. ಈ ಸಂದೇಶಗಳನ್ನು ಎಲ್ಲರಿಗೂ ಕಳುಹಿಸುತ್ತಾರೆ.

ಮತ್ತೆ ಹಲವರು ಇಂತಹ ಸಂದೇಶಗಳನ್ನು ತೆರೆದೇ ನೋಡುವುದಿಲ್ಲ. ರಜಾ ಸಿಕ್ಕಿತೆಂದು ಪ್ರವಾಸಕ್ಕೆ ಹೊರಡುತ್ತಾರೆ. ಮನೆಯಲ್ಲಿ ಕುಳಿತು ಟಿ.ವಿಯಲ್ಲಿ ಹಾಕುವ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಇಲ್ಲವೇ ನಿದ್ದೆ ಹೊಡೆಯುತ್ತಾರೆ.‌

ಅತ್ತ ಜಿಲ್ಲಾಡಳಿತ ಆಚರಿಸುವ ಸ್ವಾತಂತ್ರ್ಯ ದಿನಾಚರಣೆ ಜನರಿಲ್ಲದೇ ಬಣಗುಡುವಂತಾಗುತ್ತಿದೆ. ಅಧಿಕಾರಿಗಳು ಕಡ್ಡಾಯವಾಗಿ ಬರಲೇಬೇಕು ಎಂದು ಆದೇಶ ಹೊರಡಿಸುವ ಮಟ್ಟಕ್ಕೆ ಅಧಿಕಾರಿಗಳ ಬದ್ಧತೆ ಇಳಿದಿದೆ. ಮನಸೊಳಗೆ ಬೈಯ್ದುಕೊಳ್ಳುತ್ತ ಬರುವವರು ಅನೇಕರು. ಧ್ವಜಾರೋಹಣದಂದು ಸೇರುವ ಬಹುತೇಕ ಮಂದಿ ಶಾಲಾ ಮಕ್ಕಳ ಪೋಷಕರು. ಅದೂ ಅವರು ತಮ್ಮ ಮಕ್ಕಳು ಹೇಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತಾರೆ, ಎನ್‌ಸಿಸಿಯಲ್ಲಿ ಹೇಗೆ ಕವಾಯತು ಮಾಡುತ್ತಾರೆ ಎಂದು ವೀಕ್ಷಿಸುವುದಕ್ಕೆ ಬಂದಿರುತ್ತಾರೆ.‌

ನಿಜಕ್ಕೂ ಸ್ವಾತಂತ್ರ್ಯ ದಿನಾಚರಣೆ ಎಂಬುದು ಬಲು ದೊಡ್ಡ ಹಬ್ಬ, ಉತ್ಸವ. ಅಂದು ದಸರೆಯ ಪಂಜಿನ ಕವಾಯತಿಗೆ ಸೇರುವಷ್ಟು ಜನ ಸೇರಬೇಕು. ರಾಷ್ಟ್ರಗೀತೆಯನ್ನು ಒಕ್ಕೊರಲಿನಿಂದ ಹೇಳಬೇಕು. ರಾಷ್ಟ್ರಧ್ವಜಕ್ಕೆ ವಂದಿಸಬೇಕು.

ಮನೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಇತಿಹಾಸದ ಪುಸ್ತಕಗಳನ್ನು ತೆರೆಯಬೇಕು. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ವಿವಿಧ ಮಗ್ಗುಲುಗಳನ್ನು ಪರಿಚಯ ಮಾಡಿಕೊಡಬೇಕು. ಇಡೀ ದಿನ ದೇಶದ ಸ್ವಾತಂತ್ರ್ಯದ ಮಹತ್ವವನ್ನು ಅರಿಯುವ ಕೆಲಸ ಮಾಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಉಂಟಾಗಿರುವ ಬೆದರಿಕೆಗಳನ್ನು ಕುರಿತು ಚಿಂತಿಸಬೇಕು. ಮುಖ್ಯವಾಗಿ ಯುವ ತಲೆಮಾರಿಗೆ ಅವುಗಳ ಪರಿಚಯ ಮಾಡಿಕೊಡಬೇಕು.

ಪ್ಲಾಸ್ಟಿಕ್ ಬಾವುಟ ಹಿಡಿದೊ, ರಾಷ್ಟ್ರಧ್ವಜದ ಚಿತ್ರವನ್ನು ಎಲ್ಲೆಂದರಲ್ಲಿ ಬರೆದೊ, ರಾಷ್ಟ್ರಲಾಂಛನವನ್ನು ಬೇಕಾಬಿಟ್ಟಿ ಇಟ್ಟೊ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದೆವು ಎಂದುಕೊಂಡರೆ ಅದು ದೊಡ್ಡ ತಪ್ಪು. ನಿಜಕ್ಕೂ ಈ ರೀತಿ ಮಾಡಿದರೆ ರಾಷ್ಟ್ರಕ್ಕೆ ಅವಮಾನ ಮಾಡಿದಂತೆ. ರಾಷ್ಟ್ರಧ್ವಜಾರೋಹಣಕ್ಕೆ ಗೊತ್ತುಪಡಿಸಿದ ಜಾಗದಲ್ಲಿಯೇ ಮಾಡಬೇಕು. ಜಿಲ್ಲಾಡಳಿತ ಮಾಡುವ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗಿಯಾಗಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !