ಭಾನುವಾರ, ಸೆಪ್ಟೆಂಬರ್ 15, 2019
30 °C
ಸರ್ವಸ್ವವೂ ಕೊಚ್ಚಿ ಹೋದರೂ ಹೊಸ ಮನೆಯ ಭರವಸೆಯಿಲ್ಲ–ಆತಂಕದಲ್ಲಿ ಪ್ರವಾಹ ಪೀಡಿತರು

ನಿಲುವಾಗಿಲು: ಅತಂತ್ರ ಸ್ಥಿತಿಯಲ್ಲಿ ನೆರೆ ಸಂತ್ರಸ್ತರು

Published:
Updated:
Prajavani

ನಿಲುವಾಗಿಲು (ಮೈಸೂರು): ‘ನಿತ್ಯವೂ ದುಡ್ಕೊಂಡ್ ತಿನ್ನೋರ್ ನಾವು. ಐದಾರು ದಿನ ನಮ್ಮ ಮನೆಗಳು ಲಕ್ಷ್ಮಣತೀರ್ಥದ ಪ್ರವಾಹದ ನೀರಿನಲ್ಲಿ ಮುಳುಗಿದ್ದವು. ಎಲ್ಲವೂ ಮಣ್ಣಿನ ಹಳೆಯ ಮನೆಗಳು. ಕೆಲವು ಕುಸಿದು ಬಿದ್ದಿವೆ. ಉಳಿದವು ಮೇಲ್ನೋಟಕ್ಕೆ ಚೆನ್ನಾಗಿವೆ. ಆದರೆ ವಾಸಿಸಲು ಯೋಗ್ಯವಾಗಿಲ್ಲ. ಯಾವಾಗ ಏನು ? ಎಂಬ ಆತಂಕ ಕಾಡುತ್ತಿದೆ...’

‘ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಶೀತ ಹಿಡಿದಿವೆ. ಯಾವಾಗ ಬೇಕಾದರೂ ಕುಸಿದು ಬೀಳುವ ಅಪಾಯವಿದೆ. ಆದರೂ ಯಾವೊಬ್ಬ ಅಧಿಕಾರಿಯೂ ನಮ್ಮ ಮನೆ ಅಪಾಯದಲ್ಲಿದೆ ಎಂಬುದನ್ನು ಗುರುತಿಸಿಲ್ಲ. ನೆರೆಯ ಅಬ್ಬರ ಇಳಿದ ಬಳಿಕ ಮನೆಗಳಿಗೋಗಿ ನೋಡಿದರೆ ಸರ್ವಸ್ವವೂ ಕೊಚ್ಚಿ ಹೋಗಿತ್ತು. ಏನು ಉಳಿದಿಲ್ಲ. ಹೊಸದಾಗಿ ಬದುಕು ಕಟ್ಟಿಕೊಳ್ಳಬೇಕಿದೆ...’

‘ನಮ್ಮ ಮನೆಗಳು ನೆರೆ ಹಾವಳಿಗೆ ತುತ್ತಾಗಿದ್ದರೂ; ಬಿದ್ದಿಲ್ಲ. ಸರ್ಕಾರದ ಮಾರ್ಗದರ್ಶಿಯಂತೆ ಹೊಸ ಮನೆ ಮಂಜೂರು ಮಾಡಲು ಬರಲ್ಲ ಎಂಬುದು ಸ್ಥಳೀಯ ಅಧಿಕಾರಿಗಳ ಹೇಳಿಕೆ. ಇದನ್ನು ಕೇಳಿ ಆಕಾಶವೇ ನಮ್ಮ ತಲೆ ಮೇಲೆ ಕಳಚಿ ಬಿದ್ದಂತಾಗಿದೆ. ಈಗಿರೋ ಮನೆಗೆ ಹೋಗಿ ವಾಸಿಸುವ ಸ್ಥಿತಿಯೂ ಇಲ್ಲ. ಏನು ಮಾಡಬೇಕು ಎಂಬುದೇ ತೋಚದಾಗಿದೆ’ ಎಂದು 17 ದಿನದಿಂದಲೂ ನೆರೆಯಿಂದ ಬಾಧಿತರಾದ ಕೆ.ರಾಮಕೃಷ್ಣ, ಎನ್‌.ಎಂ.ನಾಗೇಂದ್ರ ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.

‘ಐದಾರು ವರ್ಷದಿಂದ ಕೃಷಿಯೂ ಸರಿಯಾಗಿ ಕೈ ಹಿಡಿದಿಲ್ಲ. ಅಲ್ಲಿಗಲ್ಲಿಗೆ ನೇರ ಎಂಬಂತಿತ್ತು. ಆರಕ್ಕೇರದ ಮೂರಕ್ಕಿಳಿಯದ ಬದುಕು ನಮ್ಮದಾಗಿತ್ತು. ಪ್ರವಾಹ ಇದೀಗ ಎಲ್ಲವನ್ನೂ ಒಮ್ಮೆಗೆ ನುಂಗಿ ಹಾಕಿದೆ. ಮನೆ ಜಲಾವೃತಗೊಂಡು ಗೋಡೆಗಳಿಗೆ ಶೀತ ಹಿಡಿದಿದೆ. ಯಾವಾಗ ಬೇಕಾದರೂ ಬೀಳುವ ಸ್ಥಿತಿಯಿದೆ. ಮತ್ತೆ ಆ ಮನೆಗೆ ಹೋಗಲು ಭಯವಾಗುತ್ತಿದೆ. ಪರಿಹಾರ ಕೇಂದ್ರವನ್ನು ಯಾವಾಗ ಮುಚ್ಚುತ್ತಾರೋ ಗೊತ್ತಿಲ್ಲ. ಮುಂದೇನು ಎಂಬುದು ಬೆಂಬಿಡದ ಭೂತದಂತೆ ಕಾಡುತ್ತಿದೆ. ನಮ್ಮದೇ ಜಮೀನಿದ್ದರೂ ಹೊಸ ಮನೆ ಕಟ್ಟಿಕೊಳ್ಳಲು ನಮ್ಮ ಬಳಿ ಚಿಕ್ಕಾಸು ಇಲ್ಲ. ಭವಿಷ್ಯವೇ ಮಸುಕಾಗಿದೆ’ ಎಂದು ಶಶಿಧರ್ ಗೋಳಿಟ್ಟರು.

‘ಗಂಡ ಸತ್ತರೂ ಮಗಳನ್ನು ಬಿಕಾಂ ಓದಿಸಿಕೊಂಡು ಬಾಡಿಗೆ ಮನೆಯಲ್ಲಿದ್ದೆ. ಟೈಲರಿಂಗ್ ಮಾಡಿಕೊಂಡು ಬದುಕು ಕಟ್ಟಿಕೊಳ್ಳುವ ಯತ್ನ ನಡೆಸಿದ್ದೆ. ಉಕ್ಕೇರಿದ ಹೊಳೆ, ಮನೆಯ ಜತೆಗೆ ನಿತ್ಯ ಬಳಕೆಯ ಸಾಮಗ್ರಿಗಳನ್ನು ಆಪೋಷನ ತೆಗೆದುಕೊಂಡು, ನನ್ನನ್ನು ನಿರ್ಗತಿಕಳನ್ನಾಗಿಸಿ ಬೀದಿಗೆ ನಿಲ್ಲಿಸಿದೆ. ಭವಿಷ್ಯಕ್ಕೆ ಕತ್ತಲು ಕವಿದಂತಾಗಿದೆ’ ಎಂದು ಕವಿತಾ ಕಣ್ಣೀರಿಟ್ಟರು.

Post Comments (+)