ಬೇಸಿಗೆ ಹಣ್ಣುಗಳಿಗೆ ಭರಪೂರ ಬೇಡಿಕೆ; ನುಗ್ಗೆಕಾಯಿ ದರ ದಿಢೀರ್ ಕುಸಿತ

ಭಾನುವಾರ, ಏಪ್ರಿಲ್ 21, 2019
26 °C
ಹಸಿಮೆಣಸಿನಕಾಯಿ ಬೆಲೆ ಏರಿಕೆ

ಬೇಸಿಗೆ ಹಣ್ಣುಗಳಿಗೆ ಭರಪೂರ ಬೇಡಿಕೆ; ನುಗ್ಗೆಕಾಯಿ ದರ ದಿಢೀರ್ ಕುಸಿತ

Published:
Updated:
Prajavani

ಮೈಸೂರು: ನಗರದಲ್ಲಿ ಬೇಸಿಗೆ ಬಿಸಿಲು ಮಿತಿ ಮೀರುತ್ತಿದೆ. ಬೇಸಿಗೆ ಋತುಮಾನದ ಹಣ್ಣುಗಳು ಹೆಚ್ಚಾಗಿ ಆವಕವಾಗಿವೆ. ಜನರು ಇಂತಹ ಹಣ್ಣುಗಳನ್ನು ಮುಗಿಬಿದ್ದು ಖರೀದಿಸುತ್ತಿದ್ದಾರೆ.

ಖರಬೂಜ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಹೊತ್ತ ಕೈಗಾಡಿ ವ್ಯಾಪಾರಸ್ಥರು ಎಲ್ಲೆಂದರಲ್ಲಿ ಕಾಣಿಸುತ್ತಿದ್ದಾರೆ. ಜೆಎಸ್ಎಸ್‌ ಆಸ್ಪತ್ರೆಯ ಮುಂಭಾಗ, ಕುಕ್ಕರಹಳ್ಳಿ ಕೆರೆ ಸಮೀಪ, ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣ ಸೇರಿದಂತೆ ಹಲವೆಡೆ ಇಂತಹ ಹಣ್ಣುಗಳನ್ನು ವ್ಯಾಪಾರ ಮಾಡುವವರು ಇದ್ದಾರೆ.

ಗಾತ್ರ ಗುಣಮಟ್ಟಕ್ಕೆ ತಕ್ಕಂತೆ ಇವುಗಳ ಬೆಲೆ ಇದೆ. ಹಾಪ್‌ಕಾಮ್ಸ್‌ನಲ್ಲಿ ಖರಬೂಜ ಕೆ.ಜಿಗೆ ₹ 24ಕ್ಕೆ, ಕಲ್ಲಂಗಡಿ ₹ 18ಕ್ಕೆ ಮಾರಾಟವಾಗುತ್ತಿದೆ. ಇಂತಹ ಹಣ್ಣುಗಳನ್ನು ಸವಿಯುವ ಮೂಲಕ ಬೇಸಿಗೆ ದಾಹವನ್ನು ಜನರು ತಣಿಸಿಕೊಳ್ಳುತ್ತಿದ್ದಾರೆ.

ಮೈಸೂರು, ಚಾಮರಾಜನಗರ, ಹಾಸನ ಜಿಲ್ಲೆಗಳಲ್ಲಿ ಇಂತಹ ಹಣ್ಣುಗಳನ್ನು ಬೆಳೆದಿರುವ ರೈತರು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದಾರೆ. ಹಳೆಯ ಆರ್‌ಎಂಸಿ, ಎಂ.ಜಿ.ರಸ್ತೆಯ ಮಾರುಕಟ್ಟೆಗಳು ಪ್ರಮುಖ ಸಗಟು ಮಾರಾಟ ಕೇಂದ್ರಗಳೆನಿಸಿವೆ.

ಇಳಿಕೆಯಾಗದ ತರಕಾರಿ ಬೆಲೆಗಳು:

ಬಿಸಿಲಿನ ತಾಪ ಹೆಚ್ಚುತ್ತಿದ್ದು, ತರಕಾರಿಗಳ ಬೆಲೆಗಳು ಇಳಿಕೆ ಕಾಣುತ್ತಿಲ್ಲ. ಟೊಮೆಟೊ ಆವಕದಲ್ಲಿ ಅಲ್ಪಪ್ರಮಾಣದಲ್ಲಿ ಹೆಚ್ಚಳವಾಗಿರುವುದರಿಂದ ಬೆಲೆಯು ಎರಡು ರೂಪಾಯಿಯಷ್ಟು ಇಳಿಕೆಯಾಗಿದೆ. ಆದರೂ, ಸಗಟು ಬೆಲೆ ₹ 11 ಇದೆ. ಕೆ.ಜಿಗೆ ₹ 75ನ್ನು ತಲುಪಿದ್ದ ಬೀನ್ಸ್ ಬೆಲೆ ಸದ್ಯ ₹ 44ಕ್ಕೆ ಕಡಿಮೆಯಾಗಿದೆ. ಮದುವೆ ಸಮಾರಂಭಗಳು ಹೆಚ್ಚುತ್ತಿರುವುದರಿಂದ ಸಹಜವಾಗಿಯೇ ಬೆಲೆಗಳಲ್ಲಿ ಇಳಿಕೆಯಾಗುತ್ತಿಲ್ಲ.

ಬದನೆ, ಹಸಿಮೆಣಸಿನಕಾಯಿ ಮತ್ತಷ್ಟು ತುಟ್ಟಿ:

ಬದನೆಕಾಯಿ ಮತ್ತು ಹಸಿಮೆಣಸಿನಕಾಯಿ ಮತ್ತಷ್ಟು ತುಟ್ಟಿಯಾಗುವ ಮೂಲಕ ಖರೀದಿದಾರರಿಗೆ ಬಿಸಿ ಮುಟ್ಟಿಸಿದೆ. ಕಳೆದ ವಾರ ಇದರ ಸಗಟು ಧಾರಣೆ ಕೆ.ಜಿಗೆ ₹ 15 ಇತ್ತು. ಈಗ ಇದು ₹ 20 ಆಗಿದೆ. ಹಸಿಮೆಣಸಿನಕಾಯಿ ದರ ಕೆ.ಜಿಗೆ ಕಳೆದ ವಾರ ₹ 33 ಇದ್ದದ್ದು ಈಗ ಇದು ₹ 40 ಆಗಿದೆ. ಬಿಸಿಲಿನ ಝಳಕ್ಕೆ ಇಳುವರಿ ತುಂಬಾ ಕಡಿಮೆಯಾಗಿರುವುದರಿಂದ ಸಹಜವಾಗಿಯೇ ಬೆಲೆ ಏರಿಕೆಯ ಲಾಭ ರೈತರಿಗೆ ದಕ್ಕುತ್ತಿಲ್ಲ.

ನುಗ್ಗೆ ಬೆಲೆಯಲ್ಲಿ ದಿಢೀರ್ ಇಳಿಕೆ:

ನುಗ್ಗೆಕಾಯಿ ಧಾರಣೆಯಲ್ಲಿ ದಿಢೀರ್ ಇಳಿಕೆಯಾಗಿದ್ದು ಆಶ್ಚರ್ಯ ತರಿಸಿದೆ. ಯಾವಾಗಲೂ ಕೆ.ಜಿಗೆ ₹ 60ರ ಆಸುಪಾಸಿನಲ್ಲೇ ಇರುತ್ತಿದ್ದ ನುಗ್ಗೆಕಾಯಿ ಈಗ ಕೆ.ಜಿಗೆ ₹ 12 ತಲುಪಿದೆ. ದಿನವೊಂದಕ್ಕೆ 20ರಿಂದ 30 ಕ್ವಿಂಟಲ್‌ನಷ್ಟು ನುಗ್ಗೆ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈಗ ಇದರ ಪ್ರಮಾಣ 60 ಕ್ವಿಂಟಲ್‌ಗೆ ಏರಿದೆ. ಆವಕ ಹೆಚ್ಚಾಗಿರುವುದರಿಂದ ಸಹಜವಾಗಿಯೆ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ವ್ಯಾಪಾರಿ ನಂಜೇಗೌಡ ತಿಳಿಸಿದರು.

ತೊಗರಿಬೇಳೆ ಕೊಂಚ ಏರಿಕೆ

ತೊಗರಿಬೇಳೆ ಸಗಟು ಧಾರಣೆ ಕೆ.ಜಿಗೆ ₹ 82 ಇದ್ದದ್ದು ಈಗ ₹ 86ಕ್ಕೆ ಹೆಚ್ಚಾಗಿದೆ. ಉಳಿದಂತೆ, ಉದ್ದಿನಬೇಳೆಯ ಸಗಟು ದರ ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲಿ ₹ 80, ಹೆಸರುಬೇಳೆ ಕೆ.ಜಿಗೆ ₹ 75 ಹಾಗೂ ಹೆಸರುಕಾಳು ₹ 72ರಲ್ಲೇ ಸ್ಥಿರವಾಗಿದೆ.

ತರಕಾರಿಗಳು ಕಳೆದ ವಾರದ ಧಾರಣೆ ಈಗಿನ ಧಾರಣೆ (ಎಪಿಎಂಸಿ ಮಾರುಕಟ್ಟೆಯಲ್ಲಿ ಸಗಟು ಬೆಲೆ)

ಟೊಮೆಟೊ ;   13;   11

ಬೀನ್ಸ್ ;        60; 45

ಕ್ಯಾರೆಟ್;      18;22

ಎಲೆಕೋಸು;  22;13

ದಪ್ಪಮೆಣಸಿನಕಾಯಿ; 42; 44

ಬದನೆ ;      15; 20

ನುಗ್ಗೆಕಾಯಿ; 30; 12

ಹಸಿಮೆಣಸಿನಕಾಯಿ; 33; 40

ಈರುಳ್ಳಿ; 09; 09

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !