ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತಿ ಗಿರೀಶಕಾರ್ನಾಡರ ಗುಣಗಾನ

ಆಕ್ಸಿಜನ್‌ ಕಿಟ್‌ ಅಳವಡಿಸಿಕೊಂಡು ರಂಗೋತ್ಸವಕ್ಕೆ ಚಾಲನೆ ನೀಡಿದ್ದರು...
Last Updated 10 ಜೂನ್ 2019, 19:50 IST
ಅಕ್ಷರ ಗಾತ್ರ

ಮೈಸೂರು: ಮೈಸೂರಿನ ರಂಗಾಯಣಕ್ಕೂ ಹಿರಿಯ ಸಾಹಿತಿ ಗಿರೀಶ ಕಾರ್ನಾಡ ಅವರಿಗೆ ಅವಿನಾಭಾವ ಸಂಬಂಧ. 2018ರ ಜನವರಿ 14ರಂದು ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಅವರು ಚಾಲನೆ ನೀಡಿದ್ದರು. ರಂಗಾಯಣದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಕ್ಸಿಜನ್‌ ಕಿಟ್‌ ಅಳವಡಿಸಿಕೊಂಡು ಬಂದು ನಾಟಕೋತ್ಸವ ಉದ್ಘಾಟಿಸಿದ್ದರು. ರಂಗಾಯಣದ ಛಾಯಾಚಿತ್ರ ಪ್ರದರ್ಶನದ ವೇಳೆ ತೀವ್ರವಾಗಿ ಬಳಲಿದ್ದ ಅವರು ಕೆಲಕಾಲ ಕಲಾಮಂದಿರದ ಆವರಣದಲ್ಲಿ ಕುಳಿತು ವಿಶ್ರಾಂತಿ ಪಡೆದಿದ್ದರು.

‘ಟೈಗರ್‌ ಜಿಂದಾ ಹೈ ಸಿನಿಮಾದ ಪಾತ್ರ ಮಾಡುವ ಅವಕಾಶ ಬಂದಾಗ ನನ್ನ ಅಸಹಾಯಕ ಸ್ಥಿತಿಯನ್ನು ನಿರ್ದೇಶಕರಿಗೆ ವಿವರಿಸಿದ್ದೆ. ಅವರು ಉಸಿರಾಟದ ಸಮಸ್ಯೆ ಇರುವ ಪಾತ್ರ ಸೃಷ್ಟಿಸಿದರು. ಈಗ ಇಲ್ಲಿಗೆ ಆಕ್ಸಿಜನ್‌ ಕಿಟ್‌ನೊಂದಿಗೆ ಉದ್ಘಾಟನೆಗೆ ಬಂದರೆ ಸ್ನೇಹಿತರು, ‘ನೀವು ಮೇಕಪ್‌ ಇಲ್ಲದೆ ಹೊರಗೆ ಬರುವುದಿಲ್ಲವೇ ಎಂದು ಕೇಳಿದರು’ ಎಂಬುದಾಗಿ ಹಾಸ್ಯ ಚಾಟಕಿ ಹಾರಿಸಿದ್ದರು.

2014ರ ಸೆಪ್ಟೆಂಬರ್‌ 25ರಂದು ಅವರು ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದರು.

‘ನಮ್ಮ ಮನೆಯ ಒಬ್ಬ ಸದಸ್ಯನನ್ನು ಕಳೆದುಕೊಂಡಷ್ಟೇ ನೋವಾಗುತ್ತಿದೆ’ ಎಂದು ರಂಗಾಯಣ ನಿರ್ದೇಶಕಿ ಭಾಗೀರತಿ ಬಾಯಿ ಕದಂ ಅವರು ಸೋಮವಾರ ಭಾವುಕರಾದರು.

‘ನಾಟಕದ ಬಗ್ಗೆ ಅವರ ಬಳಿ ಹೋಗಿ ಚರ್ಚೆ ಮಾಡಬೇಕು ಎಂದುಕೊಂಡಿದ್ದೆ. ಆದರೆ, ಅವರ ನಿಧನದ ವಿಚಾರ ಕೇಳಿ ನನಗೆ ಆಘಾತವಾಯಿತು. ಇವರ ಕೃತಿಗಳು, ಗ್ರಂಥಗಳು ಮತ್ತು ನಾಟಕಗಳು ದೇಶ, ವಿದೇಶಗಳಲ್ಲಿ ಪ್ರಖ್ಯಾತಿ ಪಡೆದಿವೆ. ಹಲವು ಭಾಷೆಗಳಿಗೂ ಅನುವಾದವಾಗಿವೆ. ಅಷ್ಟು ದೊಡ್ಡ ಮಟ್ಟದ ವ್ಯಕ್ತಿತ್ವ ಕಾರ್ನಾಡರದ್ದು’ ಎಂದು ನುಡಿದರು.

ಸಚಿನ್‌ ರಾಜೇಂದ್ರ ಭವನದಲ್ಲಿ ನೂತನ ಸಂಸದರನ್ನು ಅಭಿನಂದಿಸಲು ಬಿಜೆಪಿ ಜಿಲ್ಲಾ ಗ್ರಾಮಾಂತರ ಘಟಕ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಿರೀಶ ಕಾರ್ನಾಡರ ನಿಧನ ಕಾರಣ ರದ್ದುಗೊಳಿಸಲಾಯಿತು.

‘ಕಾರ್ನಾಡರು ಷಿಕಾಗೋ ವಿ.ವಿಯ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅವರ ನಿಧನ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಮೇರು ಸಾಹಿತಿಯನ್ನು ಕಳೆದುಕೊಂಡಿದ್ದೇವೆ’ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.

'ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ, ನಾಟಕಕಾರ, ನಟ ನಿರ್ದೇಶಕ ಕಾರ್ನಾಡರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಸಂಸದ ಪ್ರತಾಪಸಿಂಹ ಟ್ವೀಟ್‌ ಮಾಡಿದ್ದಾರೆ.

‘ಕನ್ನಡ ರಂಗಭೂಮಿಯ ಕೀರ್ತಿ ಪಾತಕೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದ ಕೀರ್ತಿ ಕಾರ್ನಾಡ ಅವರದ್ದು. ಅವರ ಜೊತೆಯಲ್ಲಿ 2014ರ ದಸರಾ ಉದ್ಘಾಟನೆಯಲ್ಲಿ ಭಾಗವಹಿಸಿದ್ದೆ’ ಎಂದು ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್‌ ತಿಳಿಸಿದ್ದಾರೆ.

ಭಾರತೀಯ ರಂಗಭೂಮಿಯ ಅದ್ಭುತ ನಾಟಕಕಾರ ಗಿರೀಶ ಕಾರ್ನಾಡ ಅವರ ಸಾವು ರಂಗಭೂಮಿಗಾದ ಬಹುದೊಡ್ಡ ನಷ್ಟ ಎಂದು ರಾಜಶೇಖರ ಕದಂಬ ನುಡಿದಿದ್ದಾರೆ.

‘ಕನ್ನಡ ಸಾಹಿತ್ಯ ಲೋಕ ಕಂಡ ಅದ್ಭುತ ನಾಟಕಕಾರ, ಸಾಹಿತಿ, ಚಿತ್ರನಟ ಮತ್ತು ನಿರ್ದೇಶಕ ಕಾರ್ನಾಡ’ ಎಂದು ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ.ಹರೀಶಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT