ಚಿನ್ನ ಬಿಡಿಸಿಕೊಳ್ಳುವ ನೆಪದಲ್ಲಿ ಗೋಲ್ಡ್ ಕಂಪನಿಗೆ ಮೋಸ
ಸಾಲಿಗ್ರಾಮ: ಜ್ಯುವೆಲರ್ಸ್ ಅಂಗಡಿಯಲ್ಲಿ ಅಡವಿಟ್ಟಿರುವ ಚಿನ್ನವನ್ನು ಬಿಡಿಸಿಕೊಟ್ಟರೆ, ನಿಮ್ಮ ಕಂಪನಿಗೆ ಮಾರಾಟ ಮಾಡುವುದಾಗಿ ನಂಬಿಸಿದ ಮಹಿಳೆ ಯೊಬ್ಬರು, ಗೋಲ್ಡ್ ಫೈನಾನ್ಸ್ ಕಂಪನಿಯಿಂದ ₹1.75 ಲಕ್ಷ ಹಣ ಪಡೆದು ಪರಾರಿಯಾಗಿದ್ದಾರೆ.
ಮೈಸೂರು ನಗರದ ಮಂಜುನಾಥ ಗೋಲ್ಡ್ ಫೈನಾನ್ಸ್ ಕಂಪನಿಗೆ ಸೌಮ್ಯಾ ಎಂಬುವರು ಕರೆ ಮಾಡಿದ್ದು, ‘ಸಾಲಿಗ್ರಾಮದ ಮಹಾಲಕ್ಷ್ಮಿ ಜ್ಯುವೆಲರ್ಸ್‌ನಲ್ಲಿ ಚಿನ್ನ ಅಡವಿಟ್ಟಿದ್ದು, ಅದನ್ನು ಬಿಡಿಸಿಕೊಳ್ಳಲು ಆಗುತ್ತಿಲ್ಲ. ತಾವು ಬಿಡಿಸಿ ಕೊಟ್ಟರೆ ನಾನು ಚಿನ್ನವನ್ನು ನಿಮ್ಮ ಕಂಪನಿಗೆ ಮಾರಾಟ ಮಾಡು ತ್ತೇನೆ’ ಎಂದು ಮನವಿ ಮಾಡಿದ್ದಾರೆ.
ಮಂಜುನಾಥ ಗೋಲ್ಡ್ ಫೈನಾನ್ಸ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಸುರೇಶ್ ಎಂಬುವರು ಜುಲೈ 6ರಂದು ಬೆಳಿಗ್ಗೆ ಸಾಲಿಗ್ರಾಮಕ್ಕೆ ಬಂದಿದ್ದು, ಗಾಂಧಿ ವೃತ್ತದಲ್ಲಿರುವ ಮಣಪ್ಪುರಂ ಗೋಲ್ಡ್ ಫೈನಾನ್ಸ್ ಬಳಿ ಮಹಿಳೆಯನ್ನು ಭೇಟಿಯಾಗಿದ್ದಾರೆ. ಅವರೊಂದಿಗೆ ವ್ಯಕ್ತಿಯೊಬ್ಬರಿದ್ದು, ಆತ ನನ್ನ ತಮ್ಮ ಎಂದು ಮಹಿಳೆ ಹೇಳಿದ್ದಾರೆ.
‘ಚಿನ್ನ ಅಡವಿಟ್ಟಿರುವ ಮಳಿಗೆಯಲ್ಲಿ ಬಹಳ ಸಾಲ ಮಾಡಿದ್ದೇನೆ. ನೀವು ಬಂದರೆ ಮತ್ತಷ್ಟು ಹಣಕ್ಕೆ ಒತ್ತಡ ಹಾಕುತ್ತಾರೆ. ಹಣವನ್ನು ನನ್ನ ತಮ್ಮನ ಕೈಗೆ ಕೊಡಿ. ಆತ ಬಿಡಿಸಿಕೊಂಡು ಬರುತ್ತಾನೆ. ನಾನು ನಿಮ್ಮೊಂದಿಗೆ ಇರುತ್ತೇನೆ’ ಎಂದು ಸೌಮ್ಯಾ ನಂಬಿಸಿದ್ದಾರೆ. ಸುರೇಶ್ ಅವರು ₹1.75 ಲಕ್ಷ ಹಣವನ್ನು ಆ ವ್ಯಕ್ತಿಯ ಕೈಗೆ ಕೊಟ್ಟಿದ್ದಾರೆ.
ಸ್ವಲ್ಪ ಸಮಯದ ನಂತರ ಕರೆ ಮಾಡಿದ ಆ ವ್ಯಕ್ತಿ, ‘ಮಂಜುನಾಥ ಗೋಲ್ಡ್ ಫೈನಾನ್ಸ್ ಕಂಪನಿಯ ಸೇಲ್ಸ್ ಎಕ್ಸಿಕ್ಯೂಟಿವ್ ಸಹಿ ಮಾಡ ಬೇಕು ಎಂದು ಗಿರವಿ ಅಂಗಡಿ ಯವರು ಹೇಳುತ್ತಿದ್ದಾರೆ. ನೀವು ಮಾತ್ರ ಬನ್ನಿ’ ಎಂದು ತಿಳಿಸಿದ್ದಾರೆ.
ಸುರೇಶ್ ಅವರು ಮಹಾಲಕ್ಷ್ಮಿ ಜ್ಯುವೆಲರ್ಸ್ ವಿಳಾಸವನ್ನು ಹುಡುಕಿಕೊಂಡು ಹೋದರೆ, ಆ ಹೆಸರಿನ ಜ್ಯುವೆಲರ್ಸ್ ಅಂಗಡಿ ಮುಚ್ಚಿ ವರ್ಷಗಳೇ ಕಳೆದಿರುವ ವಿಚಾರ ಗೊತ್ತಾಗಿದೆ. ಬಳಿಕ, ಮಹಿಳೆ ಪರಾರಿಯಾಗಿದ್ದಾರೆ. ಈ ಸಂಬಂಧ ಸುರೇಶ್ ದೂರು ನೀಡಿದ್ದಾರೆ ಎಂದು ಸಾಲಿಗ್ರಾಮ ಠಾಣೆ ಎಎಸ್ಐ ಕುಮಾರ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.