ಭಾನುವಾರ, ಆಗಸ್ಟ್ 18, 2019
26 °C

ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದು ಸಂತೋಷ ತಂದಿದೆ: ಭೈರಪ್ಪ‌

Published:
Updated:
Prajavani

ಮೈಸೂರು: ದಸರಾ ಉದ್ಘಾಟನೆಗೆ ರಾಜ್ಯ ಸರ್ಕಾರ ನನ್ನನ್ನು ಆಯ್ಕೆ ಮಾಡಿರುವುದು ಸಂತೋಷ ಉಂಟು ಮಾಡಿದೆ ಎಂದು ಹೆಸರಾಂತ ಸಾಹಿತಿ ಎಸ್‌.ಎಲ್‌.ಭೈರಪ್ಪ ಪ್ರತಿಕ್ರಿಯಿಸಿದರು.

‘ಈ ವಿಚಾರದಲ್ಲಿ ನನಗೆ ಹೆಚ್ಚು ಆಸಕ್ತಿ ಇಲ್ಲ. ಆದರೆ, ಅದಾಗಿಯೇ ಒಲಿದು ಬಂದಾಗ ವಿನಯದಿಂದ ಸ್ವೀಕರಿಸಬೇಕು. ನಾನು ಬರೆದ ಪುಸ್ತಕಗಳು ಮುಂದೆ ಎಷ್ಟು ದಿನ ಬದುಕುತ್ತವೆ ಎಂಬುದು ನನ್ನ ಪಾಲಿಗೆ ಎಲ್ಲಕ್ಕಿಂತ ಮುಖ್ಯವಾದ ವಿಚಾರ’ ಎಂದರು.

ಬಹಳ ವರ್ಷಗಳಿಂದ ದಸರಾ ಉದ್ಘಾಟನೆಗೆ ತಮ್ಮ ಹೆಸರು ಕೇಳಿಬರುತಿತ್ತಲ್ಲವೇ ಎಂಬುದಕ್ಕೆ ‘ಈ ಪ್ರಶ್ನೆಗೆ ನಾನು ಉತ್ತರಿಸುವುದಿಲ್ಲ. ಈ ಪ್ರಶ್ನೆಯನ್ನು ನೀವು ಎತ್ತಲೂ ಬೇಡಿ. ಇದೆಲ್ಲಾ ಇದ್ದಿದ್ದೇ. ಇದನ್ನು ನಾನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ’ ಎಂದರು.

‘ನಾನು ಚಿಕ್ಕವನಿದ್ದಾಗ ದಸರಾ ಮಹೋತ್ಸವವು ಅರಮನೆ ಹಾಗೂ ಮಹಾರಾಜರ ಕೇಂದ್ರೀತವಾಗಿತ್ತು. ವೈಭವ ಹೆಚ್ಚು ಇರುತಿತ್ತು. ಈಗ ಚಾಮುಂಡೇಶ್ವರಿ ಮೂರ್ತಿ ಇಟ್ಟು ಮಾಡುತ್ತಾರೆ. ಅರಮನೆ ಪಾತ್ರ ಕಡಿಮೆಯಾಗಿದೆ. ಪ್ರವಾಸೋದ್ಯಮ ಬೆಳವಣಿಗೆ ಆಗಿದೆ’ ಎಂದು ಹೇಳಿದರು.

‘ನಾನು ಮೈಸೂರಿಗೆ ಬಂದಿದ್ದೇ 1948–49ರಲ್ಲಿ. ಆಗ ಮೊದಲ ಬಾರಿ ದಸರಾ ವೀಕ್ಷಿಸಿದ್ದೆ. ಮೊದಲೇ ಜಾಗ ಹಿಡಿದುಕೊಂಡು ನೋಡಿದ್ದೆವು’ ಎಂದು ನೆನಪಿಸಿಕೊಂಡರು.

‌ಪ್ರವಾಹ ಪರಿಸ್ಥಿತಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ‘ಕಳೆದ ವರ್ಷ ಕೊಡಗಿನಲ್ಲಿ ಮಳೆ ಬಂದಾಗ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೆ. ನೀರು ಕೇಳುವ ತಮಿಳುನಾಡಿನಿಂದ ಕೊಡಗಿಗೆ ಹಣ ಕೇಳಿ ಎಂದಿದ್ದೆ. ನನ್ನ ಪತ್ರಕ್ಕೆ ಉತ್ತರವನ್ನೂ ಬರೆಯಲಿಲ್ಲ, ಅದನ್ನು ಗಂಭೀರವಾಗಿಯೂ ಪರಿಗಣಿಸಲಿಲ್ಲ. ಈಗಲೂ ಅದೇ ಒತ್ತಾಯ ಮಾಡುತ್ತೇನೆ. ರಾಜ್ಯದಲ್ಲಿ ನೆರೆ ಬಂದಿದೆ. ನಮ್ಮ ಬಳಿ ಇಲ್ಲದಿದ್ದಾಗಲೂ ನೀರು ಕೇಳುವ ತಮಿಳುನಾಡಿನ ನಿಲುವು ಏನು ಎಂದು ಕೇಳಿ. ಈ ಸಂದರ್ಭದಲ್ಲಿ ಈ ವಿಷಯ ಪ್ರಸ್ತಾಪಿಸಿದರೆ ನಾಳೆ ಉಪಯೋಗಕ್ಕೆ ಬರಲಿದೆ’ ಎಂದರು.

Post Comments (+)