ಮಂಗಳವಾರ, ನವೆಂಬರ್ 24, 2020
20 °C
ದಾರ್ಶನಿಕರು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ: ಮುಹಮ್ಮದ್‌ ಕುಂಞಿ

ಸತ್ಯವನ್ನು ಗುರುತಿಸುವ ಕೆಲಸ ನಡೆಯಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದ್ವೇಷ, ಹಗೆತನದಿಂದ ಕೆಲವರನ್ನು ವೈರಿಗಳನ್ನಾಗಿಸಿ, ಅಧಿ ಕಾರಕ್ಕೇರುವ ಮತ್ತು ಅಧಿಕಾರ ಉಳಿಸಿಕೊಳ್ಳುವ ಪ್ರಕ್ರಿಯೆ ಜಗತ್ತಿನ ವಿವಿಧ ದೇಶಗಳಲ್ಲಿ ಕಂಡುಬರುತ್ತಿದೆ ಎಂದು ಮಂಗಳೂರಿನ ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮುಹಮ್ಮದ್‌ ಕುಂಞಿ ಹೇಳಿದರು.

ಜಮಾಅತೆ ಇಸ್ಲಾಮೀ ಹಿಂದ್‌ ಮೈಸೂರು ಘಟಕದ ವತಿಯಿಂದ ‘ಪ್ರವಾದಿ ಮುಹಮ್ಮದ್‌: ಮಾನವತೆಯ ಮಾರ್ಗದರ್ಶಕ’ ಎಂಬ ವಿಷಯದಲ್ಲಿ ಶನಿವಾರ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

ಫ್ರಾನ್ಸ್ ದೇಶದ ಅಧ್ಯಕ್ಷ ಇಮ್ಯಾನುಎಲ್ ಮ್ಯಾಕ್ರನ್ ಅವರು ಮತದಾರರಿಗೆ ಹಲವು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿದ್ದರು. ಅವುಗಳನ್ನು ಈಡೇರಿಸಲು ಆಗದೆ ಜನರ ಆಕ್ರೋಶಕ್ಕೆ ತುತ್ತಾಗಿದ್ದರು. ಇದೀಗ ಪ್ರವಾದಿ ಮುಹಮ್ಮದ್‌ ಅವರ ಕುರಿತಾದ ವ್ಯಂಗ್ಯಚಿತ್ರವನ್ನು ಸಮರ್ಥಿಸಿ, ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡುತ್ತಾ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.

ಪ್ರವಾದಿ ವ್ಯಂಗ್ಯಚಿತ್ರ ವಿರೋಧಿಸಿ ಫ್ರಾನ್ಸ್‌ನಲ್ಲಿ ನಡೆದ ಹಿಂಸೆ ಖಂಡನೀಯ. ಇವೆಲ್ಲವೂ ಪ್ರವಾದಿ ಅವರ ಆದರ್ಶಕ್ಕೆ ವಿರುದ್ಧವಾದದ್ದು. ಪ್ರವಾದಿ ಜೀವಿಸಿದ್ದ ಕಾಲದಲ್ಲೂ ಅವರನ್ನು ಹಲವರು ನಿಂದಿಸಿದ್ದರು. ಆದರೆ ಅವರ ಅನುಯಾಯಿಗಳು ಯಾರ ತಲೆ ಅಥವಾ ಕೈಗಳನ್ನು ಕಡಿಯಲಿಲ್ಲ. ಅದರ ಬದಲು ಪ್ರವಾದಿಯ ಸಂದೇಶಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡಿ ಸವಾಲುಗಳನ್ನು ಎದುರಿಸಿದ್ದರು ಎಂದರು.

‘ಸತ್ಯಕ್ಕೆ ಬೆಲೆಯಿಲ್ಲದ ಕಾಲದಲ್ಲಿ ನಾವಿದ್ದೇವೆ. ಆದರೆ ಸತ್ಯವನ್ನು ಗುರುತಿಸುವ ಪ್ರಯತ್ನಕ್ಕೆ ಯಾರೂ ಮುಂದಾಗುವುದಿಲ್ಲ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಬಂದದ್ದೇ ಸತ್ಯವೆಂದು ಭಾವಿಸಿ ಜೀವನ ಸಾಗಿಸುತ್ತಿದ್ದೇವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜಗತ್ತು ಇಂದು ಎದುರಿಸುತ್ತಿರುವ ಸಮಸ್ಯೆಗಳು ದೂರವಾಗಬೇಕಾದರೆ ನಾವು ದಾರ್ಶನಿಕರ ಕಡೆಗೆ ಮರಳಬೇಕಿದೆ. ವಿವೇಕಾನಂದ, ಬಸವಣ್ಣ, ಪ್ರವಾದಿ ಮುಹಮ್ಮದ್‌, ಏಸು ಕ್ರಿಸ್ತ ಮುಂತಾದವರನ್ನು ಅರಿತುಕೊಳ್ಳುವ ಕೆಲಸ ಆಗಬೇಕು. ಅವರ ಚಿಂತನೆ ಎಲ್ಲರಿಗೂ ಸೇರಿದ್ದು’ ಎಂದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಚಂದ್ರಶೇಖರ್‌ ಮಾತನಾಡಿ, ‘ನಾವು ಇಂದು ನಮ್ಮ ನಡುವೆ ಗೋಡೆಗಳನ್ನು ಕಟ್ಟಿಕೊಂಡು ಪರಕೀಯರಂತೆ ಜೀವಿಸುತ್ತಿದ್ದೇವೆ. ಸಹೋದರತೆ, ಭ್ರಾತೃತ್ವ ಕಡಿಮೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪ್ರವಾದಿ ಮುಹಮ್ಮದ್‌ ಅವರ ಆದರ್ಶ, ಚಿಂತನೆಗಳು ಎಷ್ಟು ಅಗತ್ಯ ಎಂಬುದನ್ನು ಮನಗಾಣಬೇಕು’ ಎಂದು ತಿಳಿಸಿದರು.

‘ನಮ್ಮ ಭಾಷೆ, ಧರ್ಮಗಳು ಬೇರೆ ಬೇರೆ ಇರಬಹುದು. ಆದರೆ ಎಲ್ಲರ ಭಾವನೆ ಒಂದೇ ಆಗಿದೆ. ನಾವೆಲ್ಲರೂ ಭಾರತೀಯರು ಎಂಬ ಭಾವನೆ ಇಟ್ಟುಕೊಂಡು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಎಲ್ಲ ಮನುಷ್ಯರೂ ಒಂದೇ ಎಂಬ ಸಂದೇಶವನ್ನು ಪ್ರವಾದಿಯವರು ಅಂದೇ ಸಾರಿದ್ದರು’ ಎಂದು ಹೇಳಿದರು.

ಜಮೀಅತೆ ಉಲೆಮಾ–ಎ–ಹಿಂದ್ ಕಾರ್ಯದರ್ಶಿ ಅರ್ಷದ್‌ ಅಹ್ಮದ್, ಮುಹಮ್ಮದ್‌ ಪಾಷಾ ಪಾಲ್ಗೊಂಡಿದ್ದರು.

‘ಓದುವ ಹವ್ಯಾಸ ಬೆಳೆಯಲಿ’

 ‘₹ 40 ರಿಂದ ₹ 50 ಲಕ್ಷ ಖರ್ಚು ಮಾಡಿ ಮನೆ ಕಟ್ಟಿಸಿಕೊಳ್ಳುವ ನಾವು ಆ ಮನೆಗೆ ಕನಿಷ್ಠ ₹ 10 ಸಾವಿರ ಬೆಲೆಯ ಒಳ್ಳೆಯ ಪುಸ್ತಕಗಳನ್ನು ಖರೀದಿಸಲು ಮುಂದಾಗುವುದಿಲ್ಲ. ಭಾರಿ ಹಣ ಖರ್ಚು ಮಾಡಿ ಮನೆಕಟ್ಟುವ ವ್ಯಕ್ತಿಗೆ ತನ್ನ ಮನೆಯಲ್ಲಿ ಪುಸ್ತಕ ಇಲ್ಲ ಎಂದು ಅನಿಸದಿರುವುದು ದುರದೃಷ್ಟಕರ’ ಎಂದು ಮುಹಮ್ಮದ್‌ ಕುಂಞಿ ಎಂದರು.

ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಓದದ, ಅಧ್ಯಯನ ನಡೆಸದ, ವೈಚಾರಿಕತೆಯಿಲ್ಲದೆ ಒಂದು ಜನ ಸಮೂಹದಿಂದ ಸಮಾಜಕ್ಕೆ ಎಲ್ಲ ಕಾಲದಲ್ಲೂ ಅಪಾಯ ಇದ್ದೇ ಇದೆ ಎಂದು ಎಚ್ಚರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.