ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ ಪ್ರಕರಣ: ಸಂಘಟನೆ ಕೈವಾಡ ಇದ್ದರೆ ನಿಷೇಧ: ಗೃಹ ಸಚಿವ ಬೊಮ್ಮಾಯಿ

ಮೊದಲು ಬಿಜೆಪಿಯನ್ನು ನಿಷೇಧಿಸಬೇಕು: ಎಸ್‌ಡಿಪಿಐ ತಿರುಗೇಟು
Last Updated 20 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಮೈಸೂರು: ಶಾಸಕ ತನ್ವೀರ್‌ ಸೇಠ್‌ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ನಿರ್ದಿಷ್ಟ ಸಂಘಟನೆಯ ಕೈವಾಡ ಇದೆ ಎಂಬುದು ತನಿಖೆಯಲ್ಲಿ ಸಾಬೀತಾದರೆ, ಕೂಡಲೇ ಆ ಸಂಘಟನೆಯನ್ನು ನಿಷೇಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಬುಧವಾರ ಇಲ್ಲಿ ಹೇಳಿದರು.

‘ಬಂಧಿತ ಆರೋಪಿಯು ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳಲ್ಲಿ ಸಕ್ರಿಯನಾಗಿದ್ದ. ಇಲ್ಲಿ ನಡೆದ ರಾಜು ಮತ್ತು ಇತರೆಡೆ ನಡೆದಿರುವ ಹತ್ಯೆಗಳಿಗೂ ಈ ಹಲ್ಲೆ ಪ್ರಕರಣಕ್ಕೂ ನಂಟಿದೆ. ಇನ್ನೆರಡು ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ’ ಎಂದು ಸುದ್ದಿಗಾರರಿಗೆ ಹೇಳಿದರು.

‘ಇದು, ರಾಜಕೀಯ ಅಸ್ತಿತ್ವಕ್ಕಾಗಿ ನಡೆದ ಹಲ್ಲೆ. ರಾಜಕೀಯ ಪೈಪೋಟಿ ಹಾಗೂ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದರ ಹಿಂದಿರುವುದು ಪ್ರಾಥಮಿಕ ತನಿಖೆ ವೇಳೆ ಸ್ಪಷ್ಟವಾಗಿದೆ’ ಎಂದರು.

ತನ್ವೀರ್‌ ಚೇತರಿಸಿಕೊಳ್ಳುತ್ತಿದ್ದಾರೆ. ಸ್ವಲ್ಪ ಕಾಲ ನಡೆದಾಡಿದ್ದಾರೆ. ಕುಳಿತು ಉಪಾಹಾರ ಸೇವಿಸಿದ್ದಾರೆ. ಆತಂಕಪಡುವ ಅಗತ್ಯ ಇಲ್ಲ ಎಂದು ತಿಳಿಸಿದರು.

ನಿಷೇಧದ ಪ್ರಶ್ನೆ ಬಂದರೆ ಮೊದಲು ಬಿಜೆಪಿ

ಇದಕ್ಕೆ ತಿರುಗೇಟು ನೀಡಿರುವ ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಮಜೀದ್‌, ‘ರಾಜಕೀಯ ಹಾಗೂ ಸೈದ್ಧಾಂತಿಕ ಹಿನ್ನೆಲೆಯಲ್ಲಿ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ. ನಿಷೇಧದ ಪ್ರಶ್ನೆ ಬಂದರೆ, ಈ ದೇಶದಲ್ಲಿ ಮೊದಲು ಬಿಜೆಪಿಯನ್ನು ನಿಷೇಧಿಸಬೇಕು. 1925ರಿಂದ ಇಲ್ಲಿಯವರೆಗೆ ದೇಶದಲ್ಲಿ ಆ ಪಕ್ಷದಿಂದ ಉಂಟಾದ ಹಿಂಸಾಚಾರ, ಶ್ರೀರಾಮನ ಹೆಸರಲ್ಲಿ ಮಾಡಿದ ಗಲಭೆಗಳೇ ಸಾಕು‘ ಎಂದರು.

‘ತನ್ವೀರ್‌ ಸೇಠ್ ಮೇಲಿನ ಹಲ್ಲೆಯನ್ನು ಕೆಲ ಪಕ್ಷಗಳು ರಾಜಕೀಕರಣಗೊಳಿಸುತ್ತಿವೆ. ಹೀಗೆ ಮಾಡುವುದರ ಮೂಲಕ, ಅಧಿಕಾರದಲ್ಲಿದ್ದವರು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹಳೆಯ ಚಾಳಿಯನ್ನು ಇನ್ನಾದರೂ ಬಿಡಬೇಕು’ ಎಂದು ಒತ್ತಾಯಿಸಿದರು.

‘ಸಾರ್ವಜನಿಕ ಸ್ಥಳದಲ್ಲಿ, ನೂರಾರು ಜನರ ಸಮ್ಮುಖದಲ್ಲಿಯೇ ಶಾಸಕರ ಮೇಲೆ ಹಲ್ಲೆ ನಡೆದದ್ದು ಆಘಾತಕಾರಿ ಸಂಗತಿ. ಘಟನೆಯನ್ನು ಎಸ್‌ಡಿಪಿಐ ಖಂಡಿಸುತ್ತದೆ. ತಪ್ಪು ಯಾರೇ ಮಾಡಿರಲಿ ಅಂಥವರಿಗೆ ಶಿಕ್ಷೆಯಾಗಬೇಕು. ಬಂಧಿತ ಆರೋಪಿ ಎಸ್‌ಡಿಪಿಐ ಕಾರ್ಯಕರ್ತನಲ್ಲ. ಚುನಾವಣೆ ವೇಳೆ ಪಕ್ಷದ ಪರ ಪ್ರಚಾರ ಮಾಡಿದ್ದ ಅಷ್ಟೆ. ಅಲ್ಲದೇ ಆತ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದಲ್ಲೂ ಗುರುತಿಸಿಕೊಂಡಿದ್ದ’ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಫಿಕ್ಸಿಂಗ್‌ ತನಿಖೆಯಲ್ಲಿ ಪುತ್ರನ ಹಸ್ತಕ್ಷೇಪ ಇಲ್ಲ’

‘ಕೆಪಿಎಲ್‌ ಮ್ಯಾಚ್‌ ಫಿಕ್ಸಿಂಗ್ ತನಿಖೆಯ ಮೇಲೆ ನನ್ನ ಪುತ್ರ ಹಸ್ತಕ್ಷೇಪ ನಡೆಸಿರುವುದು ಸುಳ್ಳು ಸುದ್ದಿ. ಈ ಪ್ರಕರಣಕ್ಕೂ ನಮ್ಮ ಕುಟುಂಬದವರಿಗೂ ಯಾವುದೇ ಸಂಬಂಧ ಇಲ್ಲ. ಬೇಕಾದರೆ ನೀವೇ ಪೊಲೀಸರನ್ನು ಕೇಳಿ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

‘ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ನಿರ್ದಾಕ್ಷಿಣ್ಯವಾಗಿ ಮಾಡುವಂತೆ ನಾನೇ ಹೇಳಿದ್ದೇನೆ. ನಾನು ಮತ್ತು ನನ್ನ ಪುತ್ರ ಕ್ರಿಕೆಟ್ ಆಡುತ್ತೇವೆ ಎಂದ ಮಾತ್ರಕ್ಕೆ ಈ ರೀತಿಯ ಆರೋಪ ಮಾಡುವುದು ಸರಿಯಲ್ಲ’ ಎಂದರು.

ವಾಪಸ್‌ ಪಡೆದಿದ್ದು ವಿದ್ಯಾರ್ಥಿಗಳ ಕೇಸ್‌: ಸಿದ್ದರಾಮಯ್ಯ

‘ತನ್ವೀರ್‌ ಸೇಠ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ದುರುದ್ದೇಶದಿಂದ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಎರಡು ಗುಂಪುಗಳ ನಡುವೆ ಮೈಸೂರಿನಲ್ಲಿ ಜಗಳ ನಡೆದಿತ್ತು. ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ ಎಂದು ಪೋಷಕರು ಕೋರಿದ್ದಕ್ಕೆ ಕೇಸು ವಾಪಸ್ ಪಡೆದಿದ್ದೆ. ಕೊಲೆ ಮಾಡಿದ ವ್ಯಕ್ತಿಗಳ ಮೇಲಿನ ಕೇಸು ಅಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಇಲ್ಲಿ ಹೇಳಿದರು.

‘ಯಡಿಯೂರಪ್ಪ ಅವರು ಮಾಹಿತಿ ಪಡೆದು ಮಾತನಾಡಬೇಕು, ಬೇಜವಾಬ್ದಾರಿ ಹೇಳಿಕೆ ನೀಡಬಾರದು. ಯಾವುದೇ ಸಂಘಟನೆಯು ಕೋಮುವಾದದಲ್ಲಿ ತೊಡಗಿದರೆ ಅದನ್ನು ಖಂಡಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT