10ರಿಂದ ದಸರಾ ಜನಪ್ರಿಯ ಆಹಾರ ಮೇಳ: ಬುಡಕಟ್ಟು, ವಿದೇಶಿ ಖಾದ್ಯ ಸವಿಯುವ ಅವಕಾಶ

7
ಎರಡು ಕಡೆ ಆಯೋಜನೆ

10ರಿಂದ ದಸರಾ ಜನಪ್ರಿಯ ಆಹಾರ ಮೇಳ: ಬುಡಕಟ್ಟು, ವಿದೇಶಿ ಖಾದ್ಯ ಸವಿಯುವ ಅವಕಾಶ

Published:
Updated:
Deccan Herald

ಮೈಸೂರು: ದಸರಾ ಉತ್ಸವದ ಅಂಗವಾಗಿ ಅ.10ರಿಂದ ಆಹಾರ ಮೇಳ ಆಯೋಜಿಸಲಾಗಿದ್ದು, ಬುಡಕಟ್ಟು ಸಮುದಾಯದ ಆಹಾರ ಪದ್ಧತಿಯಿಂದ ಮೊದಲ್ಗೊಂಡು ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿದೇಶಿ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶ ದೊರೆಯಲಿದೆ.

ಈ ಬಾರಿ ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಅ.18ರ ವರೆಗೆ ಹಾಗೂ ಲಲಿತ್‌ ಮಹಲ್ ಪ್ಯಾಲೆಸ್‌ ಹೋಟೆಲ್ ಬಳಿಯ ಮುಡಾ ಮೈದಾನದಲ್ಲಿ ಅ.19ರ ವರೆಗೆ ಆಹಾರ ಮೇಳ ನಡೆಯಲಿದೆ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕರೂ ಆಗಿರುವ ದಸರಾ ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷ ಪಿ.ಶಿವಣ್ಣ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತ್ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಜಮೀರ್‌ ಅಹಮದ್ ಖಾನ್‌ ಅವರು ಮೇಳವನ್ನು ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಆಹಾರ ಮೇಳದಲ್ಲಿ ಈ ಬಾರಿ ವಿದೇಶಿ ಆಹಾರವನ್ನು ಉಣಬಡಿಸಲಾಗುವುದು. ಜತೆಗೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ ಭಾಗದ ಆಹಾರ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳ ಸಸ್ಯಾಹಾರ, ಮಾಂಸಾಹಾರದ ತಿನಿಸಗಳೂ ಇರಲಿವೆ ಎಂದು ತಿಳಿಸಿದರು.

ವಿದೇಶಿ ಖಾದ್ಯಗಳನ್ನು ಬಡಿಸಲು ಒಂದು ಮಳಿಗೆಯನ್ನು ಮೀಸಲಿಡಲಾಗಿದೆ. ಮೈಸೂರು ವಿಶ್ವವಿದ್ಯಾನಿಲಯ, ಜೆಎಸ್‌ಎಸ್‌, ಎನ್‌ಐಇ ಕಾಲೇಜು ಸೇರಿದಂತೆ ವಿವಿಧೆಡೆ ವ್ಯಾಸಂಗ ಮಾಡುತ್ತಿರುವ ವಿದೇಶದ ವಿದ್ಯಾರ್ಥಿಗಳು ಖಾದ್ಯ ತಯಾರಿಸಲಿದ್ದಾರೆ ಎಂದರು.

173 ಮಳಿಗೆಗಳು: ಎರಡು ತಾಣಗಳಲ್ಲಿ ಒಟ್ಟು 173 ಮಳಿಗೆಗಳನ್ನು ತೆರೆಯಲಾಗಿದೆ. ಮೇಳಕ್ಕೆ ಭೇಟಿ ನೀಡುವವರಿಗೆ ಅನುಕೂಲವಾಗಲು ಪ್ರತ್ಯೇಕ ಬ್ಲಾಕ್‌ಗಳನ್ನು ಗುರುತಿಸಲಾಗಿದೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿ ‘ಎ’ ಬ್ಲಾಕ್‌ನಲ್ಲಿ ಸ್ವೀಟ್ಸ್‌, ಬೇಕರಿ, ಡೈರಿ, ಐಸ್‌ಕ್ರೀಂ, ‘ಬಿ’ ಬ್ಲಾಕ್‌ನಲ್ಲಿ ಚಾಟ್ಸ್‌, ಬೋಂಡಾ, ಬಜ್ಜಿ, ಇತರೆ ತಿನಿಸುಗಳು, ‘ಸಿ’ ಬ್ಲಾಕ್‌ನಲ್ಲಿ ಮಾಂಸಾಹಾರಿ ಖಾದ್ಯಗಳ ಸ್ಟಾಲ್‌ಗಳು, ‘ಡಿ’ ಬ್ಲಾಕ್‌ನಲ್ಲಿ ಕಾಫಿ, ಟೀ ಸ್ಟಾಲ್‌ಗಳು, ‘ಇ’ ಬ್ಲಾಕ್‌ನಲ್ಲಿ ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ ಮತ್ತು ಹೊರ ರಾಜ್ಯಗಳ ಮಾಂಸಾಹಾರಿ ಖಾದ್ಯಗಳು, ‘ಎಫ್‌’ ಬ್ಲಾಕ್‌ನಲ್ಲಿ ಸಸ್ಯಾಹಾರ ಖಾದ್ಯಗಳಿಗೆ ಸ್ಥಳ ನಿಗದಿಪಡಿಸಲಾಗಿದೆ.

ವಿವಿಧ ಸ್ಪರ್ಧೆಗಳ ಆಯೋಜನೆ: ಆಹಾರ ಮೇಳದ ತಾಣಗಳಲ್ಲಿ ಪುರುಷರು, ಮಹಿಳೆಯರು, ಕಾಲೇಜು ವಿದ್ಯಾರ್ಥಿಗಳು, ಪ್ರೌಢಶಾಲಾ ವಿದ್ಯಾರ್ಥಿಗಳು, ಯುವಕ– ಯುವತಿಯರು ಹಾಗೂ ಅತ್ತೆ–ಸೊಸೆ ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಅಕ್ಕಿರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯ, ವೆಜ್‌ಫ್ರೈಡ್‌ ರೈಸ್, ಸಲಾಡ್, ಗೀರೈಸ್‌ ವೆಜ್‌ಕುರ್ಮ, ಕಾಯಿ ಹೋಳಿಗೆ ತಯಾರಿಕೆ ಸ್ಪರ್ಧೆಗಳ ಜತೆಗೆ ಇಡ್ಲಿ, ಪಾನಿಪೂರಿ, ಮೊಟ್ಟೆ, ಬಾಳೆಹಣ್ಣು ತಿನ್ನುವ ಸ್ಪರ್ಧೆಗಳು ನಡೆಯಲಿವೆ.

ದಸರಾ ಆಹಾರ ಸಮಿತಿ ಉಪವಿಶೇಷಾಧಿಕಾರಿ ಹಾಗೂ ಮುಡಾ ಆಯುಕ್ತ ಪಿ.ಎಸ್.ಕಾಂತರಾಜು ಅವರು ಹಾಜರಿದ್ದರು.

* 98 ಸ್ಕೌಟ್ಸ್‌ ಮತ್ತು ಗೈಡ್ಸ್‌ ಮೈದಾನದಲ್ಲಿರುವ ಮಳಿಗೆಗಳು

* 75 ಮುಡಾ ಮೈದಾನದಲ್ಲಿ ಸ್ಥಾಪಿಸಿರುವ ಮಳಿಗೆಗಳು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !