ಭಾನುವಾರ, ಸೆಪ್ಟೆಂಬರ್ 19, 2021
24 °C

ಇವರೊಬ್ಬರೇ ಪ್ರಾಮಾಣಿಕರಾ? ‌ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಶ್ರೀನಿವಾಸಪ್ರಸಾದ್ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಇವರೊಬ್ಬರೇ ಪ್ರಾಮಾಣಿಕರಾ?’ ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೋಮವಾರ ಇಲ್ಲಿ ತಿರುಗೇಟು ನೀಡಿದರು.

‘ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇತ್ತು. ಈಗ ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿ ಬರುತ್ತಾನೆ. ಬಿಜೆಪಿಯೇ ಭ್ರಷ್ಟ ಪಕ್ಷ. ಬಿಜೆಪಿ ತೊಲಗದಿದ್ದರೆ ಈ ರಾಜ್ಯಕ್ಕೆ ಮುಕ್ತಿ ಇಲ್ಲ’ ಎಂದು ಸಿದ್ದರಾಮಯ್ಯ ಹೇಳಿದ್ದಕ್ಕೆ, ಶ್ರೀನಿವಾಸ ಪ್ರಸಾದ್ ತಮ್ಮನ್ನು ಭೇಟಿಯಾದ ಮಾಧ್ಯಮದವರ ಬಳಿ ಸಿಡಿಮಿಡಿಗೊಂಡರು.

‘ಬೇರೆ ಯಾರನ್ನು ಮುಖ್ಯಮಂತ್ರಿ ಮಾಡಬಾರದಾ‌? ಜವಾಬ್ದಾರಿಯಿಂದ ಮಾತನಾಡುವುದನ್ನು ಸಿದ್ದರಾಮಯ್ಯ ಇನ್ನೂ ಕಲಿತಿಲ್ಲ. ಬಾಲಿಷ ಹೇಳಿಕೆ ಕೊಡುತ್ತಿದ್ದಾರೆ. ಸಿಎಂ ಆಗಿದ್ದುಕೊಂಡೇ ಚುನಾವಣೆಯಲ್ಲಿ ಸೋತರು. ಇವರ ಸಚಿವರು ಉದುರಿ ಹೋದರು. ಬಾದಾಮಿಯಲ್ಲೂ ಸೋತಿದ್ದರೆ ಸ್ಥಿತಿ ಏನಾಗುತ್ತಿತ್ತು? ವಿರೋಧ ಪಕ್ಷದ ನಾಯಕ ಹೇಗಾಗಿದ್ದರೆ? ಎಂಬುದು ಎಲ್ಲರಿಗೂ ಗೊತ್ತು’ ಎಂದು ಪ್ರಸಾದ್‌ ಮೂದಲಿಸಿದರು.

‘ನಾನೊಬ್ಬ ಹಿರಿಯ ನಾಯಕನಾಗಿದ್ದೆ. ನನ್ನನ್ನು ವ್ಯವಸ್ಥಿತವಾಗಿ ತುಳಿದರು. ಇದಕ್ಕೆ ಪ್ರತಿಯಾಗಿ ತಕ್ಕ ಪಾಠ ಕಲಿಸಿದ್ದೇನೆ. ಇವರ ಹೇಳಿಕೆಗಳೆಲ್ಲ ಬಾಲಿಷ’ ಎಂದು ಸಿದ್ದರಾಮಯ್ಯ ವಿರುದ್ಧ ವಿ.ಶ್ರೀನಿವಾಸಪ್ರಸಾದ್ ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪ ರಾಜೀನಾಮೆ ನೀಡುವಾಗ ಭಾವುಕರಾಗುವುದು ಸಹಜ. ಉತ್ತಮ ಆಡಳಿತ ನೀಡಿದ್ದಾರೆ. ಬಿಜೆಪಿಯೂ ಚೆನ್ನಾಗಿಯೇ ನಡೆಸಿಕೊಂಡಿದೆ. ಮೂರನೇ ವ್ಯಕ್ತಿಗಳು ಈ ಬಗ್ಗೆ ಮಾತನಾಡಬಾರದು. ಕಾಂಗ್ರೆಸ್‌ನವರು ಸಹ ಈ ಬಗ್ಗೆ ಮಾತನಾಡಲೇಬಾರದು. ಇದು‌ ಬಿಜೆಪಿಯ ಆಂತರಿಕ ವಿಚಾರ. ಇಲ್ಲಿ ಹೈಕಮಾಂಡ್‌ನ ಸ್ಪಷ್ಟ ನಿರ್ಧಾರವಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು