ಭಾನುವಾರ, ಡಿಸೆಂಬರ್ 15, 2019
23 °C
ಜಮ್ಮು ಮತ್ತು ಕಾಶ್ಮೀರದ ಪರ ಎಲ್ಲೆಡೆ ಧ್ವನಿ ಮೊಳಗಿದಾಗ ಮಾತ್ರ ಏಕತೆ

ಸರ್ಕಾರ ಟೀಕಿಸುವನೇ ದೇಶಪ್ರೇಮಿ: ಕಣ್ಣನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಆಡಳಿತಾರೂಢ ಸರ್ಕಾರದ ನಿರ್ಧಾರಗಳನ್ನು ಬೆಂಬಲಿಸಿ, ಸ್ವಾಗತಿಸುವವನು ದೇಶ‍ಪ್ರೇಮಿಯಲ್ಲ. ಪ್ರತಿ ನಿರ್ಧಾರವನ್ನು ಅಳೆದು ತೂಗಿ, ಅದರಲ್ಲಿನ ಲೋಪ–ದೋಷಗಳನ್ನು ಎತ್ತಿ ಹಿಡಿದು, ಟೀಕಿಸುವಾತನೇ ನಿಜವಾದ ದೇಶಪ್ರೇಮಿ’ ಎಂದು ಐಎಎಸ್ ಹುದ್ದೆಗೆ ರಾಜೀನಾಮೆ ನೀಡಿರುವ ಕಣ್ಣನ್ ಗೋಪಿನಾಥನ್ ಅಭಿಪ್ರಾಯಪಟ್ಟರು.

ಕನ್ಸರ್ನ್ಡ್ ಸಿಟಿಜಿನ್ಸ್ ಆಫ್ ಇಂಡಿಯಾ ಸೋಮವಾರ ನಗರದಲ್ಲಿ ಆಯೋಜಿಸಿದ್ದ ‘ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಮುಂದಿರುವ ಸವಾಲುಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಕಣ್ಣನ್, ಆಡಳಿತಾರೂಢರ ನಿರ್ಧಾರಗಳನ್ನು ಕಟುಶಬ್ದಗಳಲ್ಲಿ, ವ್ಯಂಗ್ಯವಾಗಿ ಟೀಕಿಸಿದರು.

‘ಈಚೆಗಿನ ದಿನಗಳಲ್ಲಿ ಕೇಂದ್ರ ಸರ್ಕಾರ ಯಾವುದೇ ಒಂದು ನಿರ್ಧಾರ ತೆಗೆದುಕೊಂಡರೂ; ಅದಕ್ಕೆ ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಲಾಗುತ್ತಿದೆ. 70 ವರ್ಷದಲ್ಲಿ ಯಾರೊಬ್ಬರೂ ತೆಗೆದುಕೊಳ್ಳದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಪ್ರಶಂಸೆಯೇ ಎಲ್ಲೆಡೆ ಹರಿದಾಡುತ್ತಿದೆ.’

‘ಆದರೆ ವಾಸ್ತವವಾಗಿ ಈ ನಿರ್ಧಾರಗಳಿಂದ ಜನರಿಗೆ ಯಾವ ಅನುಕೂಲ ಸಿಕ್ಕಿದೆ ಎಂಬುದಕ್ಕೆ ಇಂದಿಗೂ ಉತ್ತರವೇ ಸಿಗುತ್ತಿಲ್ಲ. ಮುಕ್ತವಾಗಿ ಮಾತನಾಡುವ ಅವಕಾಶವನ್ನೇ ಕಿತ್ತುಕೊಳ್ಳಲಾಗಿದೆ. ಗನ್ ಮುಂದಿಟ್ಟು ಮಾತನಾಡು ಎಂದು ಬೆದರಿಸುವ ವಾತಾವರಣ ನಿರ್ಮಾಣಗೊಂಡಿದೆ’ ಎಂದು ಗೋಪಿನಾಥನ್ ಅಸಮಾಧಾನ ವ್ಯಕ್ತಪಡಿಸಿದರು.

‘₹ 500, ₹ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಬಳಿಕ ಕಪ್ಪುಹಣ ಹೊರಗೆ ಬರಲಿಲ್ಲ. ಒಂದು ದೇಶ, ಒಂದು ತೆರಿಗೆ ಪದ್ಧತಿಯ ಜಿಎಸ್‌ಟಿ ಜಾರಿಗೊಂಡ ಬಳಿಕ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲಿಲ್ಲ. ಮತ್ತಷ್ಟು ಕುಸಿದು ಜಿಡಿಪಿ 4.5ಕ್ಕೆ ಇಳಿದಿದೆ. ₹ 2000 ಮುಖಬೆಲೆಯ ನಕಲಿ ನೋಟುಗಳು ಮಾರುಕಟ್ಟೆ ಪ್ರವೇಶಿಸಿವೆ.’

‘2013ರಿಂದಲೂ ಅಸ್ಸಾಂನಲ್ಲಿ ಎನ್‌ಆರ್‌ಸಿ ಸದ್ದು ಮಾಡುತ್ತಿದೆ. ಆದರೆ ಅಕ್ರಮ ನುಸುಳುಕೋರರ ಸಂಖ್ಯೆ ತಗ್ಗಿಲ್ಲ. ಪದೇ ಪದೇ ಪಟ್ಟಿ ಪ್ರಕಟಿಸುವುದು ನಿಂತಿಲ್ಲ. ಸಂವಿಧಾನದ 370ನೇ ಕಲಂ ರದ್ದುಗೊಳಿಸಿದರೂ; ಕಾಶ್ಮೀರದ ಕಾಶ್ಮೀರಿ ಪಂಡಿತರು ಹಾಗೂ ಮುಸ್ಲಿಮರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಆದರೂ ಬುದ್ದಿ ಇಲ್ಲದ ಸರ್ಕಾರ ಕೈಗೊಂಡ ಪ್ರತಿ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಲಾಗುತ್ತಿದೆ’ ಎಂದು ಕಣ್ಣನ್ ಕಟಕಿಯಾಡಿದರು.

ಕನ್ಸರ್ನ್ಡ್ ಸಿಟಿಜಿನ್ಸ್ ಆಫ್ ಇಂಡಿಯಾ ರಾಜ್ಯ ಸಂಚಾಲಕ ಬಿ.ರವಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಂಶುಪಾಲರಾದ ವಿದ್ಯಾಶಂಕರ್ ಸ್ವಾಗತಿಸಿದರು.

ಚಾಣಕ್ಯನೇ ಅಪ್ರಸ್ತುತ: ಚುನಾವಣೆ, ಸರ್ಕಾರ ರಚನೆ ಶುರುವಾಗುತ್ತಿದ್ದಂತೆ ‘ಚಾಣಕ್ಯ’ ಪದ ಬಳಕೆ ಹೆಚ್ಚುತ್ತದೆ. ಅಕ್ಷರಶಃ ಇಂದು ಚಾಣಕ್ಯ ಪದ ಪ್ರಸ್ತಾಪವೇ ಅಪ್ರಸ್ತುತ ಎಂದು ಕಣ್ಣನ್ ಗೋಪಿನಾಥನ್ ಹೇಳಿದರು.

‘ಚಾಣಕ್ಯ, ಗುಪ್ತ ಸಾಮ್ರಾಜ್ಯ ಸ್ಥಾಪನೆಗೆ ಕಾರಣರಾದವರು. ಚಂದ್ರಗುಪ್ತಮೌರ್ಯರಿಗೆ ಆಡಳಿತ ನಡೆಸಲು ಸಲಹೆ ಕೊಡುತ್ತಿದ್ದವರು. ಅಂದಿಗೂ–ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ಅಂದು ಸಾಮ್ರಾಜ್ಯವಿತ್ತು. ಅದಕ್ಕೊಬ್ಬ ರಾಜನಿದ್ದ. ಇಂದು ಪ್ರಜಾಪ್ರಭುತ್ವವಿದೆ. ಇಲ್ಲಿರುವ ರಾಜನಲ್ಲ. ಪ್ರಜೆಗಳ ಸೇವಕ. ಇಂತಹ ಹೊತ್ತಿನಲ್ಲಿ ‘ಚಾಣಕ್ಯ’ ಹೇಗೆ ಸರಿ ಹೊಂದುತ್ತಾರೆ’ ಎಂದು ನೆರೆದಿದ್ದ ಸಭಿಕರನ್ನೇ ಪ್ರಶ್ನಿಸಿದರು ಕಣ್ಣನ್.

ಪ್ರತಿಕ್ರಿಯಿಸಿ (+)