ಕುಂಭಮೇಳಕ್ಕೆ ಕುಂಭನಗರ ಸಜ್ಜು

ಸೋಮವಾರ, ಮೇ 20, 2019
30 °C

ಕುಂಭಮೇಳಕ್ಕೆ ಕುಂಭನಗರ ಸಜ್ಜು

Published:
Updated:
Prajavani

ತಿ.ನರಸೀಪುರ: ಕಾವೇರಿ ಕಪಿಲಾ ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮದ ಕುಂಭನಗರವು 11ನೇ ಕುಂಭಮೇಳಕ್ಕೆ ಸಿದ್ಧಗೊಂಡಿದೆ. ಫೆ.17ರಿಂದ 19ರವರೆಗೆ ಮೇಳ ನಡೆಯಲಿದೆ.

ಯಾಗ ಮಂಟಪ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಾಣಗೊಂಡಿದೆ. ಅಗಸ್ತ್ಯೇಶ್ವರ ಸ್ವಾಮಿ, ಗುಂಜಾ ನರಸಿಂಹಸ್ವಾಮಿ ದೇವಾಲಯಗಳ ಮುಂಭಾಗ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ. ಸೋಪಾನಗಳ ಸ್ವಚ್ಛತೆ, ಬಣ್ಣ ಬಳಿಯುವುದು, ರಸ್ತೆಗಳ ಸ್ವಚ್ಛತೆ, ವಿದ್ಯುತ್‌ ದೀಪಗಳ ಅಳವಡಿಕೆ ಕಾರ್ಯ ಶನಿವಾರ ಸಂಜೆವರೆಗೂ ಮುಂದುವರಿದಿತ್ತು.

ತಾಲ್ಲೂಕು ಹಂತದ ನಿಯೋಜಿತ ಅಧಿಕಾರಿಗಳು ಸ್ಥಳದಲ್ಲಿದ್ದು, ಅಂತಿಮ ಸಿದ್ಧತೆಗಳನ್ನು ಪರಿಶೀಲಿಸಿದರು. ಪಟ್ಟಣದ ಜನರು ಶನಿವಾರದಿಂದಲೇ ಸಂಗಮಕ್ಕೆ ಭೇಟಿ ನೀಡಿ ಕುಂಭಮೇಳದ ಆಕರ್ಷಣೆಯನ್ನು ವೀಕ್ಷಿಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳು ಸಿಬ್ಬಂದಿಯನ್ನು ನಿಗದಿತ ಸ್ಥಳಗಳಿಗೆ ನಿಯೋಜನೆ ಮಾಡಿದರು. ಸೇನೆಯ ಯೋಧರು ತೇಲುವ ಸೇತುವೆ ಮೇಲಿನ ಎರಡು ಬದಿಗಳಲ್ಲಿ ಜನರ ಓಡಾಟಕ್ಕೆ ವ್ಯವಸ್ಥೆ ಮಾಡಿದ್ದಾರೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದವರು
ವಸ್ತುಪ್ರದರ್ಶನದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದಾರೆ.

ಕುಂಭಮೇಳ ನಡೆಯುವ ಮೂರು ದಿನಗಳವರೆಗೆ ಸುತ್ತೂರು ಹಾಗೂ ಆದಿಚುಂಚನಗಿರಿ ಮಠಗಳಿಂದ ಭಕ್ತರಿಗೆ ಅನ್ನ ದಾಸೋಹ ನಡೆಯಲಿದೆ.

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೂರನೇ ದಿನದ ಪುಣ್ಯಸ್ನಾನದಲ್ಲಿ ಹಾಗೂ ಧಾರ್ಮಿಕ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ವಿದ್ಯೋದಯ ಕಾಲೇಜು ಮೈದಾನದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗುತ್ತಿದೆ.

ಸಂಗಮದ ಮಧ್ಯಭಾಗದಲ್ಲಿ ನಿರ್ಮಿಸಿರುವ ಯಾಗ ಮಂಟಪದಲ್ಲಿ ಅಂಕುರಾರ್ಪಣೆ, ಸಂಕಲ್ಪ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ಹಾಗೂ ಧರ್ಮಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಧ್ವಜಾರೋಹಣ ನೆರವೇರಲಿದೆ.

ಫೆ.17ರಂದು ಸಂಜೆ 5ಕ್ಕೆ ನಡೆಯುವ ಧರ್ಮಸಭೆಯನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸಲಿದ್ದಾರೆ. ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಸಂಸದರಾದ ಪ್ರತಾಪಸಿಂಹ, ಆರ್.ಧ್ರುವನಾರಾಯಣ, ಎಲ್.ಆರ್.ಶಿವರಾಮೇಗೌಡ, ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿ.ಪಂ ಪ್ರಭಾರಿ ಅಧ್ಯಕ್ಷ ಸಾ.ರಾ.ನಂದೀಶ್, ಚಾಮರಾಜನಗರ ಜಿ.ಪಂ ಅಧ್ಯಕ್ಷೆ ಶಿವಮ್ಮ, ಮಂಡ್ಯ ಜಿ.ಪಂ ಅಧ್ಯಕ್ಷೆ ಎಸ್.ನಾಗರತ್ನ, ತಿ.ನರಸೀಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚೆಲುವರಾಜು ಪಾಲ್ಗೊಳ್ಳಲಿದ್ದಾರೆ. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಉಪ ನಿರ್ದೇಶಕಿ ಡಾ.ಟಿ.ಸಿ ಪೂರ್ಣಿಮಾ ಉಪನ್ಯಾಸ ನೀಡಲಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !