ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಕಳ: ಸಿಡಿಲು ಬಡಿದು ಮಹಿಳೆ ಸಾವು ಲಕ್ಷಾಂತರ ಹಾನಿ

ಸಿಡಿಲಿಗೆ ಬೈಲೂರು ಗ್ರಾಮದ ಮಹಿಳೆ ಬಲಿ, ನೀರಿನಲ್ಲಿ ಕೊಚ್ಚಿ ಹೋದ ನಿಧಿ
Last Updated 30 ಮೇ 2018, 10:17 IST
ಅಕ್ಷರ ಗಾತ್ರ

ಕಾರ್ಕಳ: ತಾಲ್ಲೂಕಿನಾದ್ಯಂತ ಸೋಮವಾರ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಮಹಿಳೆಯೊಬ್ಬರು ಮೃತ ಪಟ್ಟಿದ್ದು, ಲಕ್ಷಾಂತರ ರೂಪಾಯಿ ಹಾನಿ ಯುಂಟಾಗಿದೆ.

ತಾಲ್ಲೂಕಿನ ಬೈಲೂರು ಗ್ರಾಮದ ಬಸ್ರಿ ಶಾಲೆಯ ಬಳಿಯ ಸಾವಿರ ಹಿತ್ತಿಲು ಮನೆಯ ನಿವಾಸಿ ಶೀಲಾ (29) ಎಂಬುವ ವರಿಗೆ ಸಿಡಿಲು ಬಡಿದು ಚಿಕಿತ್ಸೆಗಾಗಿ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಾಗ ಮೃತಪಟ್ಟಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಗುಣ ಪಾಣಾರ್ತಿ ಅವರ ಮನೆಗೆ ಗಾಳಿ ಮಳೆಯಿಂದ ₹25 ಸಾವಿರ ಹಾನಿ ಸಂಭವಿಸಿದೆ. ರಭಸವಾದ ಗಾಳಿ ಮಳೆಗೆ ತಾಲ್ಲೂಕಿನ ಕುಕ್ಕುಜೆ ಗ್ರಾಮ ಗುಡ್ಡೆಯಂ ಗಡಿಯ ಅನಂತ ಶೆಟ್ಟಿ ಎನ್ನುವವರ ಮನೆಯ ಗೋಡೆ ಬಿರುಕು ಬಿಟ್ಟು ವಿದ್ಯುತ್ ವೈರಿಂಗ್ ಸುಟ್ಟು ₹30 ಸಾವಿರ ನಷ್ಟ ಸಂಭವಿಸಿದೆ.

ತಡರಾತ್ರಿ ಸುರಿದ ಗುಡುಗು ಸಹಿತ ಭಾರಿ ಗಾಳಿ ಮಳೆಗೆ ತಾಲ್ಲೂಕಿನ ಬೆಳ್ಮಣ್, ಇನ್ನಾ, ಮುಂಡ್ಕೂರು ಹಾಗೂ ಬೋಳ ಪರಿಸರದ ಅಲ್ಲಲ್ಲಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ನಂದಳಿಕೆ ಗೋಳಿಕಟ್ಟೆ ಆರ್ಯಾಡು ಪರಿಸರದಲ್ಲಿ ವಿದ್ಯುತ್ ತಂತಿಯ ಮೇಲೆ ಮರ ಬಿದ್ದ ಪರಿಣಾಮ ಸುಮಾರು 4 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗಾಳಿಯ ರಭಸಕ್ಕೆ ಮರ ಬಿದ್ದು 5 ವಿದ್ಯುತ್ ಕಂಬಗಳು ತುಂಡಾಗಿವೆ. ಮುಂಡ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಲ್ಲಡ್ಕ ನಿವಾಸಿ ಶೇಖರ ಗೌಡ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹೆಂಚುಗಳು ಹಾರಿ ಹೋಗಿ, ಮನೆಯ ವಿದ್ಯುತ್ ವೈರಿಂಗ್ ಸಹಿತ ವಿದ್ಯುತ್ ಮೀಟರ್ ಸುಟ್ಟು ಹೋಗಿದೆ. ₹60 ಸಾವಿರಕ್ಕೂ ಅಧಿಕ ನಷ್ಟ ಸಂಭವಿಸಿದೆ. ಬೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೋಪಾಡಿ ನಿವಾಸಿ ಸೋಮಾವತಿ ಎಂಬುವರ ಮನೆಗೆ ಸಿಡಿಲಿನಿಂದ ಮನೆಯ ವಿದ್ಯುತ್ ವೈರಿಂಗ್, ಮೀಟರ್, ವಿದ್ಯುತ್ ಉಪಕರ ಣಗಳು ಸುಟ್ಟು ಹೋಗಿ ₹40ಸಾವಿರ ನಷ್ಟ ಸಂಭವಿಸಿದೆ.

ತಾಲ್ಲೂಕಿನ ಮರ್ಣೆ ಗ್ರಾಮದ ಕಿರಿಂ ಜಿಬೈಲು ನಿವಾಸಿ ಕೃಷ್ಣ ನಾಯ್ಕ ಅವರ ವಾಸದ ಮನೆಗೆ ₹25 ಸಾವಿರ ನಷ್ಟ ಸಂಭವಿಸಿದೆ. ಎರ್ಲಪಾಡಿ ಗ್ರಾಮದ ಕಾಂತರಗೋಳಿ ಎಂಬಲ್ಲಿ ಸುಶೀಲಾ ಅವರ ಮನೆಯ ಮೇಲೆ ತೆಂಗಿನ ಮರಬಿದ್ದು ₹25 ಸಾವಿರ, ಕಂಬೋಳಿ ಹರಿಜನ ಅವರ ಮನೆಗೆ ಸಿಡಿಲು ಬಡಿದು ₹10 ಸಾವಿರ, ಅಂಡಾರು ಗ್ರಾಮದ ರಾಮಕೃಷ್ಣ ಶೇರ್ವೇಗಾರ ಅವರ ಅಡಿಕೆ ಮರ ಹಾನಿಗೊಂಡು ₹20 ಸಾವಿರ, ಅಕ್ಷತಾ ಆಚಾರ್ಯ ಅವರ ಮನೆ ಮೇಲೆ ಮರಬಿದ್ದು ₹10 ಸಾವಿರ, ಶಿರ್ಲಾಲು ಗ್ರಾಮದ ಸುಶೀಲಾ ಅವರ ಅಡಿಕೆ ತೋಟಕ್ಕೆ ಹಾನಿಯಾಗಿ ₹40 ಸಾವಿರ, ಧರ್ಮರಾಜ ಜೈನ್ ಅವರ ಅಡಿಕೆ ಹಾಗೂ ತೆಂಗಿನ ತೋಟಕ್ಕೆ ಹಾನಿಯಾಗಿ ₹40 ಸಾವಿರ ನಷ್ಟ ಸಂಭವಿಸಿದೆ.

ನಗರದ ರೋಟರಿ ಕಾಲೋನಿ ನಿವಾಸಿ ದಯಾನಂದ ದೇವಾಡಿಗ ಅವರ ಮನೆಗೆ ನೀರು ನುಗ್ಗಿ ಕಾಂಪೌಂಡ್‌ ಕುಸಿದು ₹1 ಲಕ್ಷ, ಭಾರತ್ ಬೀಡಿ ಕಾಲೋನಿಯ ನಿವಾಸಿ ನೂರ್‌ಜಹಾನ್ ಅವರ ಮನೆಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.

ನೀರಿನಲ್ಲಿ ಕೊಚ್ಚಿ ಹೋದ ಬಾಲಕಿ

ಪಡುಬಿದ್ರಿ: ಮಂಗಳವಾರ ಶಾಲೆಯಿಂದ ಮನೆಗೆ ತೆರಳುತ್ತಿದ್ದ ಇಬ್ಬರು ವಿದ್ಯಾರ್ಥಿಗಳಲ್ಲಿ ಒಬ್ಬಳು ನೀರು ಪಾಲಾಗಿದ್ದು, ಮತ್ತೊಬ್ಬಳನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋದ ವಿದ್ಯಾರ್ಥಿನಿ ಪಾದೆಬೆಟ್ಟುವಿನ ಉಮೇಶ್ ಆಚಾರ್ಯ ಮತ್ತು ಆಶಾ ದಂಪತಿಯ ಪುತ್ರಿ ನಿಧಿ ಆಚಾರ್ಯ ಎಂದು ಗುರುತಿಸಲಾಗಿದೆ. ಈಕೆಯ ಸಹೋದರಿ ನಿಶಾ ಆಚಾರ್ಯರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನಿಧಿ ಮತ್ತು ನಿಶಾ ಪಡುಬಿದ್ರಿಯ ಎಸ್‌ಬಿವಿಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ. ನಿಧಿ ನಾಲ್ಕನೇ ತರಗತಿಯಲ್ಲಿ ಕಲಿಯುತ್ತಿದ್ದಳು. ಮಂಗಳವಾರ ಬೆಳಿಗ್ಗೆಯಿಂದಲೇ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಶಾಲೆಯನ್ನು ಮಧ್ಯಾಹ್ನ 3 ಗಂಟೆಗೆ ಬಿಡಲಾಗಿತ್ತು. ಇವರಿಬ್ಬರು ಸೈಕಲ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಎರ್ಮಾಳು ತೆಂಕ ಪಾದೆಬೆಟ್ಟು ಆಲಡೆಯ ಬಳಿಯ ಪಟ್ಲ ಕಿರುಸೇತುವೆ ತುಂಬಿ ಹರಿಯುತ್ತಿತ್ತು. ಅದನ್ನು ದಾಟುವಾಗ ನೀರಿನ ರಭಸಕ್ಕೆ ಸಿಲುಕಿ ಇಬ್ಬರೂ ಕೊಚ್ಚಿಕೊಂಡು ಹೋಗಿದ್ದಾರೆ.  ಈ ವೇಳೆ ನಿಧಿ ನೀರು ಪಾಲಾಗಿದ್ದು, ನಿಶಾ ಅಲ್ಲಿಯೇ ಕೈಗೆ ಸಿಕ್ಕ ಹುಲ್ಲು ಕಡ್ಡಿಗಳನ್ನು ಹಿಡಿದುಕೊಂಡು ಬೊಬ್ಬೆ ಹಾಕುತ್ತಿದ್ದಳು. ಬೊಬ್ಬೆ ಕೇಳಿ ಸ್ಥಳೀಯರು ಬಂದು ಆಕೆಯನ್ನು ರಕ್ಷಿಸಿದ್ದಾರೆ.  ಪಡುಬಿದ್ರಿ ಪೊಲೀಸರು, ಅಗ್ನಿಶಾಮಕ ದಳ ಸ್ಥಳದಲ್ಲಿ ಬೀಡುಬಿಟ್ಟಿದ್ದು, ನಾಪತ್ತೆಯಾದ ನಿಧಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT