ಶುಕ್ರವಾರ, ಡಿಸೆಂಬರ್ 6, 2019
26 °C
ಜಿಲ್ಲಾಡಳಿತವು ಬಿ–ಖರಾಬು ಎಂದು ನಮೂದಿಸಿರುವುದರಿಂದ ಉಂಟಾದ ಸಮಸ್ಯೆ

ಭೂಮಾಲೀಕರ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಇಲ್ಲಿನ ಸರ್ವೆ ನಂಬರ್‌ 4, 39, 41ರ ಭೂಮಿ ಸಮಸ್ಯೆಯನ್ನು ಸರ್ಕಾರ ಬಗೆಹರಿಸದೇ ಇದ್ದಲ್ಲಿ ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲು ಚಾಮುಂಡಿ ಬೆಟ್ಟ ತಪ್ಪಲಿನ ಭೂಮಾಲೀಕರ ಸಂಘದ ಸದಸ್ಯರು ತೀರ್ಮಾನ ತೆಗೆದುಕೊಂಡರು.

ಈ ಕುರಿತು ಮಂಗಳವಾರ ಸಭೆ ನಡೆಸಿದ ಭೂಮಾಲೀಕರು, ಕುರುಬಾರಹಳ್ಳಿ ಸರ್ವೆ ನಂಬರ್ 4, ಚೌಡಹಳ್ಳಿ ಸರ್ವೆ ನಂಬರ್ 39, ಆಲನಹಳ್ಳಿ ಸರ್ವೆ ನಂಬರ್ 41ರ ವ್ಯಾಪ್ತಿಯ ಪ್ರದೇಶವನ್ನು ಜಿಲ್ಲಾಡಳಿತವು ‘ಬಿ– ಖರಾಬು’ ಎಂದು ಘೋಷಿಸಿದ್ದು, ದಾಖಲೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದ ಅತೀವ ಅನ್ಯಾಯವಾಗಿದ್ದು, ಭೂಮಿ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ದಾಖಲಾತಿಗಳಲ್ಲಿ ನಮೂದಿಸಿರುವ ‘ಬಿ– ಖರಾಬು’ ಪದವನ್ನು ತೆಗೆದುಹಾಕಿ, ಅನುಭವಿದಾರರಿಗೆ ನೆರವಾಗುವಂತೆ ಸರ್ಕಾರವನ್ನು ಒತ್ತಾಯಿಸಲು ಹೋರಾಟ ರೂಪಿಸುವಂತೆ ಸಭೆಯಲ್ಲಿ ಚರ್ಚೆಯಾಯಿತು. 35ಕ್ಕೂ ಹೆಚ್ಚು ಭೂಮಾಲೀಕರು ಚರ್ಚಿಸಿ ಹಲವು ಸಲಹೆಗಳನ್ನು ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮೂಲಕ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ದಾಖಲೆಗಳೊಂದಿಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಕೋರುವುದು. ದಾಖಲೆಗಳನ್ನು ಸರಿಪಡಿಸಲು ಗಡುವು ನೀಡುವುದು. ಬಳಿಕವೂ ಸಮಸ್ಯೆ ಬಗೆಹರಿಯದೇ ಇದ್ದಲ್ಲಿ ಸಮಸ್ಯೆಯ ಗಾಂಭೀರ್ಯವನ್ನು ಸರ್ಕಾರಕ್ಕೆ ಮನವರಿಕೆ ಮಾಡಿಸುವ ಸಲುವಾಗಿ ನಿರಂತರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.

‘ಏಕಾಏಕಿ ನ್ಯಾಯಾಲಯದ ಮೆಟ್ಟಿಲು ಹತ್ತುವುದು ಬೇಡ. ನಮ್ಮ ಸಮಸ್ಯೆ ಸರ್ಕಾರಕ್ಕೆ ಅರ್ಥವಾದಲ್ಲಿ ನಮಗೆ ಪರಿಹಾರ ಸಿಕ್ಕಿಬಿಡುತ್ತದೆ. ಜಿಲ್ಲಾಡಳಿತದ ಆದೇಶವನ್ನು ಸರ್ಕಾರ ವಾಪಸು ಪಡೆದುಕೊಂಡು, ಹೊಸ ಆದೇಶ ಹೊರಡಿಸಿದರೆ ಸಾಕು’ ಎಂದು ಸದಸ್ಯರು ಅಭಿಪ್ರಾಯಪಟ್ಟರು.

‘ಇದು ಬಿ– ಖರಾಬು ಭೂಮಿ ಅಲ್ಲವೇ ಅಲ್ಲ. ಮಹಾರಾಜರು ಅನುಭವಿಸುತ್ತಿದ್ದ ಜಾಗವನ್ನು ಸ್ವಾತಂತ್ರ್ಯ ಬಳಿಕ ನಮಗೆ ಮಾರಿದ್ದಾರೆ. ಅದು ಸರ್ಕಾರಿ ಜಾಗ ಹೇಗಾಗುತ್ತದೆ. ಹಾಗಾಗಿ, ಜಿಲ್ಲಾಡಳಿತವು ಇದನ್ನು ಅವೈಜ್ಞಾನಿಕವಾಗಿ ಅರ್ಥೈಸಿದೆ. ರಾಜವಂಶಸ್ಥರ ಭೂಮಿಯನ್ನು ಸರ್ಕಾರದ ಭೂಮಿಯೆಂದು ಹೇಳಲು ಸಾಧ್ಯವೇ ಇಲ್ಲ. ರಾಜವಂಶಸ್ಥರ ಪ್ರಕರಣಗಳೂ ಇದರಲ್ಲಿ ಸೇರಿದ್ದು, ಅವರಿಗೂ ಅನ್ಯಾಯವಾಗಿದೆ’ ಎಂದು ಹೇಳಿದರು.

‘ಅಲ್ಲದೇ, ‘ಮುಡಾ’ ವ್ಯಾಪ್ತಿಗೆ ಬರುವ ಸಿದ್ದಾರ್ಥನಗರ, ಕೆ.ಸಿ.ಬಡಾವಣೆ, ಜೆ.ಸಿ.ಬಡಾವಣೆಗಳೂ ಇದಕ್ಕೆ ಸೇರುತ್ತವೆ. ನಾಗರಿಕರು ಇಲ್ಲಿ ಮನೆಗಳನ್ನು ಕಟ್ಟಿಸಿಕೊಂಡು ಬದುಕುತ್ತಿದ್ದಾರೆ. ಅವರಿಗೆ ಅನ್ಯಾಯವಾಗಕೂಡದು. ನಮ್ಮ ಹೋರಾಟ ಈ ಕುರಿತು ನಡೆಯುತ್ತದೆ. ಪ್ರತಿಭಟನೆ, ಮನವಿಗಳಿಗೆ ಸ್ಪಂದಿಸದೇ ಇದ್ದಲ್ಲಿ ಅಂತಿಮವಾಗಿ ಕಾನೂನು ಹೋರಾಟ ಮಾಡುವುದು ಸೂಕ್ತ’ ಎಂಬ ನಿರ್ಧಾರಕ್ಕೆ ಬರಲಾಯಿತು.

ಸಂಘದ ಕಾರ್ಯದರ್ಶಿ ಕೆ.ಮನು, ಭೂ ಮಾಲೀಕರಾದ ಚೇತನ್, ಅಚ್ಚಯ್ಯ, ಮಹೇಶ್ವರನ್, ಕೋದಂಡರಾಮು, ಸತೀಶ್ ಬರ್ಗಿ, ವಕೀಲ ಶಶಿಕಿರಣ್, ರಾಘವೇಂದ್ರ ಮೂರ್ತಿ, ಎ.ವಿ.ಅಶೋಕ್, ಹಸೀನಾ ಬಾನು ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು