ಗುರುವಾರ , ನವೆಂಬರ್ 21, 2019
27 °C
ದೂರು ಕೊಟ್ಟರೂ ಕ್ರಮ ವಹಿಸಿಲ್ಲ: ಬೇಸರ

ಅಹವಾಲು ಸಭೆ ಏಕೆ ಮಾಡುತ್ತೀರಿ: ಲೋಕಾಯುಕ್ತ ಮಾದಯ್ಯಗೆ ವ್ಯಕ್ತಿ ಪ್ರಶ್ನೆ

Published:
Updated:
Prajavani

ಎಚ್.ಡಿ.ಕೋಟೆ: ‘ಅಕ್ರಮ ಮದ್ಯದಂಗಡಿ ತೆರೆದಿರುವ ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಮತ್ಯಾಕೆ ಜನರಿಂದ ಅಹವಾಲು ಸ್ವೀಕರಿಸುತ್ತೀರಿ...?’

ಮಾದಾಪುರ ಗ್ರಾಮದ ಎಂ.ಡಿ.ಕುಮಾರಸ್ವಾಮಿ ಅವರು ಲೋಕಾಯುಕ್ತ ಎಸ್‌ಪಿ ಕೆ.ಮಾದಯ್ಯ ಅವರನ್ನು ಪ್ರಶ್ನಿಸಿದ ಪರಿ ಇದು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಹವಾಲು ಸ್ವೀಕಾರ ಸಭೆಯಲ್ಲಿ ಕುಮಾರಸ್ವಾಮಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮೂರು ವರ್ಷಗಳ ಹಿಂದೆ ಮಾದಾಪುರ ಮುಖ್ಯರಸ್ತೆಯಲ್ಲಿ ಅಕ್ರಮವಾಗಿ ಮದ್ಯದಂಗಡಿ ತೆರೆಯಲಾಗಿತ್ತು. ಈ ಬಗ್ಗೆ ದೂರು ಸಲ್ಲಿಸಿದ್ದೆ. ಆದರೆ, ಈವರೆಗೂ ಮದ್ಯದಂಗಡಿಯನ್ನು ತೆರವುಗೊಳಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಾದಯ್ಯ, ‘ಮತ್ತೊಮ್ಮೆ ದೂರು ಕೊಡಿ. ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ’ ಎಂದರು.

‘ನರೇಗಾ ಯೋಜನೆಯಡಿ ಜಮೀನು ಸಮತಟ್ಟು ಮಾಡಿ ಎರಡು ವರ್ಷಗಳು ಕಳೆದರೂ ಮನುಗನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿಲ್‌ ಮಾಡಿಕೊಡುತ್ತಿಲ್ಲ’ ಎಂದು ಅಡಹಳ್ಳಿ ಗ್ರಾಮದ ರವಿ ಮತ್ತು ನೇತ್ರಾ ದಂಪತಿ ದೂರು ನೀಡಿದರು.

ಮಾದಯ್ಯ ಮಾತನಾಡಿ, ‘ಒಂದು ವಾರದೊಳಗೆ ಬಿಲ್‌ ಪಾವತಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಇಒ ರಾಮಲಿಂಗಯ್ಯ ಅವರಿಗೆ ಸೂಚಿಸಿದರು.

ಹಣ ನೀಡಿದರೆ ಮಾತ್ರ ಸರ್ವೆ ಇಲಾಖೆ ಅಧಿಕಾರಿಗಳು ಕೆಲಸ ಮಾಡಿ ಕೊಡುತ್ತಾರೆ. ರೈತರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ರೈತರು ದೂರಿದರು.

ಇದಕ್ಕೆ ಧ್ವನಿಗೂಡಿಸಿದ ಲೋಕಾಯುಕ್ತ ಡಿವೈಎಸ್ಪಿ ಅರುಣ ನಾಗೇಗೌಡ, ‘ಸರ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಹೆಚ್ಚು ದೂರುಗಳು ಬರುತ್ತಿವೆ. ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಅವರ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿನ್ನಹಳ್ಳಿ ಗ್ರಾಮದ ರಾಜಣ್ಣ ಮಾತನಾಡಿ, ‘1960ರಲ್ಲಿ ಖರೀದಿಸಿದ್ದ 2 ಎಕರೆ 30 ಗುಂಟೆ ಜಮೀನಿಗೆ ಕಂದಾಯ ಇಲಾಖೆ ಅಧಿಕಾರಿಗಳು ಖಾತೆ ಮಾಡಿಕೊಟ್ಟಿಲ್ಲ’ ಎಂದು ದೂರಿದರು.

ಸಭೆಯಲ್ಲಿ ತಹಶೀಲ್ದಾರ್ ಆರ್.ಮಂಜುನಾಥ್, ಲೋಕಾಯುಕ್ತ ಇನ್‌ಸ್ಪೆಕ್ಟರ್‌ಗಳಾದ ರೂಪಶ್ರೀ, ಜಯರತ್ನಾ, ಸರಗೂರು ತಹಶೀಲ್ದಾರ್ ಬಸವರಾಜು ಚಿಗರಿ, ಉಪ ತಹಶೀಲ್ದಾರ್ ಪುಟ್ಟಸ್ವಾಮಿ ಇದ್ದರು.

‘ತಂದೆ ಕೆಲಸ ನನಗೆ ಕೊಡಲಿಲ್ಲ’

‘ಕಂದಾಯ ಇಲಾಖೆಯಲ್ಲಿ ಉಪ ತಹಶೀಲ್ದಾರ್ ಆಗಿದ್ದ ನಮ್ಮ ತಂದೆ ಗೋಪಾಲಯ್ಯ ಅಕಾಲಿಕ ಮರಣಕ್ಕೆ ತುತ್ತಾದರು. ಅನುಕಂಪದ ಆಧಾರದ ಮೇಲೆ ನನಗೆ ಸರ್ಕಾರಿ ನೌಕರಿ ಸಿಗಬೇಕಿತ್ತು. ಆದರೆ, ಸರಗೂರು ಕಂದಾಯ ನಿರೀಕ್ಷಕ ಸಂಜೀವ್ ಕುಮಾರ್ ಮತ್ತು ಗ್ರಾಮ ಲೆಕ್ಕಿಗ ಭರತ್ ಹಣದ ಆಸೆಗಾಗಿ ನನ್ನ ತಂಗಿಗೆ ನೌಕರಿ ಸಿಗುವಂತೆ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಬಗ್ಗೆ ದೂರು ನೀಡಿ ಎರಡು ತಿಂಗಳು ಆಗಿದ್ದರೂ ನನಗೆ ನ್ಯಾಯ ಸಿಕ್ಕಿಲ್ಲ’ ಎಂದು ಅತಿಥಿ ಉಪನ್ಯಾಸಕ ಸರಗೂರು ಕೃಷ್ಣಮೂರ್ತಿ ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮಾದಯ್ಯ, ‘ಒಂದು ವಾರದೊಳಗೆ ಇವರ ಸಮಸ್ಯೆಯನ್ನು ಇತ್ಯರ್ಥ ಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಪ್ರತಿಕ್ರಿಯಿಸಿ (+)