ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮುದಾಯ ಭವನಗಳು ಖಾಸಗಿ ಉಸ್ತುವಾರಿಗೆ

ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಮಹತ್ವದ ನಿರ್ಧಾರ
Last Updated 27 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಮೈಸೂರು: ನಗರಪಾಲಿಕೆ ‌ವ್ಯಾಪ್ತಿಯ ಸಮುದಾಯ ಭವನಗಳನ್ನು ಖಾಸಗಿ ಉಸ್ತುವಾರಿಗೆ ವಹಿಸುವುದಾದರೆ ಕಠಿಣ ಮಾನದಂಡಗಳನ್ನು ರೂಪಿಸಬೇಕು ಎಂದು ನಗರ‍ಪಾಲಿಕೆ ಸದಸ್ಯರು ತೀವ್ರವಾಗಿ ಒತ್ತಾಯಿಸಿದರು.

ನಗರಪಾಲಿಕೆ ಸಭಾಂಗಣದಲ್ಲಿ ಮೇಯರ್‌ ‍‍ಪುಷ್ಪಲತಾ ಜಗನ್ನಾಥ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಸಮುದಾಯ ಭವನಗಳನ್ನು ಖಾಸಗಿ ನಿರ್ವಹಣೆಗೆ ನೀಡುವ ವಿಚಾರ ಮಾರ್ದನಿಸಿತು. ಸಮುದಾಯ ಭವನಗಳನ್ನು ನಿರ್ಮಿಸಿರುವುದು ಜನಸಾಮಾನ್ಯರ ಬಳಕೆಗಾಗಿ. ಅದರಲ್ಲೂ ಕಡಿಮೆ ಖರ್ಚಿನಲ್ಲಿ ಸಮಾಜಕ್ಕೆ ಒಳಿತಾಗುವ ಕೆಲಸ ಮಾಡಲೆಂದು. ಈ ನಿಟ್ಟಿನಲ್ಲಿ ಈ ಸಮುದಾಯ ಭವನಗಳು ಜನಸಾಮಾನ್ಯರಿಗೆ ಸಿಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ನಿರ್ವಹಣೆಗೆ ನೀಡಿದರೆ ಒಳಿತಾಗುವುದು ಎಂದು ಪಾಲಿಕೆ ಸದಸ್ಯರು ಒಮ್ಮತದಿಂದ ವಾದ ಮಂಡಿಸಿದರು.

ನಗರಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್‌ ಮಾತನಾಡಿ, ‘ಸಮುದಾಯ ಭವನಗಳನ್ನು ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿ ನಗರಪಾಲಿಕೆ ಇದೆ. ಇದಕ್ಕೆ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆ ಮುಖ್ಯ ಕಾರಣ. ಅಲ್ಲದೇ, ಈಗಾಗಲೇ ಈ ಸಮುದಾಯ ಭವನಗಳು ಅನಧಿಕೃತವಾಗಿಖಾಸಗಿಯವರ ವಶದಲ್ಲಿವೆ. ಇದನ್ನು ಅಧಿಕೃತಗೊಳಿಸುವ ಪ್ರಯತ್ನ ನಡೆಸಬೇಕು. ಆದರೆ, ಖಾಸಗಿಯವರಿಗೆ ವಹಿಸುವ ಮುಂಚೆ ಕೆಲವು ಕಠಿಣ ಮಾನದಂಡಗಳನ್ನು ನಿಗದ‍ಪಡಿಸಬೇಕು. ನಾಗರಿಕರಿಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಪಾಲಿಕೆ ಸದಸ್ಯ ಅಯೂಬ್‌ ಖಾನ್ ಇದಕ್ಕೆ ದನಿಗೂಡಿಸಿ ಪಾಲಿಕೆಯು ಎಲ್ಲ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಸುಣ್ಣ– ಬಣ್ಣ, ವಿದ್ಯುತ್‌ ಇತ್ಯಾದಿ ನಿರ್ವಹಣೆಯನ್ನೂ ಖಾಸಗಿ ಸಂಸ್ಥೆಗಳೇ ನಡೆಸುವಂತೆ ಆಗುವುದು. ಆದರೆ, ನಾಗರಿಕರಿಂದ ದುಬಾರಿ ಶುಲ್ಕವನ್ನು ಪಡೆಯುವಂತೆ ಆಗಬಾರದು’ ಎಂದು ಅವರು ಸಲಹೆ ನೀಡಿದರು.

ಸದಸ್ಯೆ ಎಚ್‌.ಎನ್‌.ಶಾಂತಕುಮಾರಿ ಮಾತನಾಡಿ, ‘ಖಾಸಗಿಯವರಿಗೆ ನಿರ್ವಹಣೆ ವಹಿಸಿಬಿಟ್ಟರೆ ನಗರಪಾಲಿಕೆಯ ಕೆಲಸವೇನು? ನಗರಪಾಲಿಕೆ ನಿರ್ಮಿಸಿರುವ ಸಮುದಾಯ ಭವನಗಳ ಪಟ್ಟಿ ನೀಡಿ. ಎಲ್ಲ ಸದಸ್ಯರೂ ಈ ಪ್ರಸ್ತಾವವನ್ನು ಅನುಮೋದಿಸುವುದಾದರೆ ನನ್ನ ತಕರಾರಿಲ್ಲ. ಕಾನೂನು ಇದಕ್ಕೆ ಒಪ್ಪಿಗೆ ಕೊಡುವುದಾದರೆ, ನನ್ನ ವಿರೋಧದ ನಡುವೆಯೂ ಒಪ್ಪಿಗೆ ನೀಡುತ್ತೇನೆ’ ಎಂದು ಹೇಳಿದರು.

ನಗರಪಾಲಿಕೆ ಸದಸ್ಯರಾದ ಎಂ.ಸತೀಶ್‌, ಎ.ಆರಿಫ್‌ ಹುಸೇನ್, ಪ್ರೇಮಾ ಶಂಕರೇಗೌಡ, ಮ.ವಿ.ರಾಮಪ್ರಸಾಸ್, ಎಸ್‌ಬಿಎಂ ಮಂಜು ಸೇರಿದಂತೆ ಹಲವರು ಈ ಪ್ರಸ್ತಾವದ ಪರವಾಗಿ ದನಿಗೂಡಿಸಿದರು.

ಸದಸ್ಯರ ಸಲಹೆಗಳನ್ನು ಆಲಿಸಿ ಪ್ರತಿಕ್ರಿಯಿಸಿದ ನಗರಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಮುಂದಿನ ಕೌನ್ಸಿಲ್‌ ಸಭೆಯಲ್ಲಿ ನಗರಪಾಲಿಕೆ ವ್ಯಾಪ್ತಿಯ ಸಮುದಾಯ ಭವನಗಳ ಪಟ್ಟಿ, ಖಾಸಗಿ ಸಂಸ್ಥೆಗಳಿಗೆ ನಿಗದಿಪಡಿಸುವ ಮಾನದಂಡಗಳ ಪಟ್ಟಿ, ನಿಯಮ ಉಲ್ಲಂಘನೆ ಮಾಡಿದರೆ ದಂಡ ಶುಲ್ಕದ ಪಟ್ಟಿ, ಸಮುದಾಯ ಭವನಗಳ ನಿರ್ವಹಣೆ, ವಿಚಾರಣೆಗಾಗಿ ವಲಯವಾರು ಸಮಿತಿಗಳನ್ನು ರಚಿಸಿ ಪಟ್ಟಿ ನೀಡುವುದಾಗಿ ತಿಳಿಸಿದರು.

ಅಂತಿಮವಾಗಿ ಮಾತನಾಡಿದ ಮೇಯರ್‌ ಪುಷ್ಪಲತಾ ಜಗನ್ನಾಥ್, ‘ನಗರಪಾಲಿಕೆ ಸದಸ್ಯರ ಒಪ್ಪಿಗೆಯ ಮೇರೆಗೆ ಖಾಸಗಿ ಸಂಸ್ಥೆಗಳಿಗೆ ಮೂರು ವರ್ಷಗಳಿಗೆ ಸಮುದಾಯ ಭವನಗಳನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಿಸಲು ಒಪ್ಪಿಗೆ ನೀಡಲಾಗಿದೆ’ ಎಂದು ಪ್ರಕಟಿಸಿದರು.

ಉಪ ಮೇಯರ್‌ ಶಫಿ ಮೊಹಮ್ಮದ್‌ ಭಾಗವಹಿಸಿದ್ದರು.

ಸಮುದಾಯ ಭವನದಲ್ಲಿ ಎಣ್ಣೆ ಹೊಡೆಯುತ್ತಾರೆ

‘ಕೆಲವು ಸಮುದಾಯ ಭವನಗಳು ಈಗ ಪೋಲಿಗಳ ತಾಣವಾಗಿದೆ. ನಿರ್ವಹಣೆ ಇಲ್ಲದೇ ಸೊರಗುತ್ತಿವೆ. ಖಾಲಿ– ಪೋಲಿಗಳು ಎಣ್ಣೆ ಹೊಡೆಯುವುದನ್ನು ನಾನು ಕಣ್ಣಾರೆ ನೋಡಿದ್ದೇನೆ’ ಎಂದು ನಗರಪಾಲಿಕೆ ಸದಸ್ಯ ಎ.ಆರಿಫ್‌ ಹುಸೇನ್ ಬಾಣಬಿಟ್ಟರು.

ಸಮುದಾಯ ಭವನಗಳು ಸ್ವಚ್ಛವಾಗಿರಬೇಕು, ಉತ್ತಮ ನಿರ್ವಹಣೆ ಹೊಂದಬೇಕು ಎಂದರೆ, ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡುವುದು ಒಳಿತು ಎಂದು ಸಲಹೆ ನೀಡಿದರು.

‘ಪಕ್ಕಾ ಮನೆ’ ಸಿಗುವುದೇ ಪಕ್ಕಾ ಇಲ್ಲ!

ನಗರಪಾಲಿಕೆ ವತಿಯಿಂದ ನೀಡುವ ಅನುದಾನ ಬಳಸಿಕೊಂಡು ಪಕ್ಕಾ ಮನೆ ನಿರ್ಮಿಸುವುದು ನಾಗರಿಕರಿಗೆ ಹಗಲು ಕನಸಾಗಿದೆ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

‘ಪಕ್ಕಾ ಮನೆ’ ವಸತಿ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದವರಿಗೆ ₹ 2.5 ಲಕ್ಷ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹ 3.5 ಲಕ್ಷ ಅನುದಾನ ನೀಡುವುದಾಗಿ ನಗರಪಾಲಿಕೆ ಹೇಳಿದೆ. ಆದರೆ, ಇದುವರೆಗೆ ಈ ಹಣ ಫಲಾನುಭವಿಗಳಿಗೆ ದೊರೆತೇ ಇಲ್ಲ ಎಂದು ನಗರಪಾಲಿಕೆ ಸದಸ್ಯ ಗೋಪಿ ಆರೋಪಿಸಿದರು.

ರೆವೆನ್ಯೂ ಬಡಾವಣೆಗಳಲ್ಲಿ ಪಕ್ಕಾ ಮನೆ ನಿರ್ಮಾಣಕ್ಕೆ ಅವಕಾಶವಿಲ್ಲ ಎಂದು ಕಾನೂನು ಹೇಳುತ್ತದೆ. ಆದರೆ, ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಂಡು ಹಣ ನೀಡಬಹುದು ಎಂದೂ ಕಾನೂನು ಹೇಳುತ್ತದೆ ಎಂದು ಸದಸ್ಯರು ಒತ್ತಾಯಿಸಿದರು.

ಪ್ರಭಾರಿ ಆಯುಕ್ತ ಶಿವಾನಂದ ಮೂರ್ತಿ ಸಭೆಗೆ ಮಾಹಿತಿ ನೀಡಿ, ಈ ಯೋಜನೆಗೆ ಒಟ್ಟು ₹ 7.21 ಕೋಟಿ ಅಗತ್ಯವಿದೆ. ಸರ್ಖಾರದಿಂದ ₹ 2.66 ಕೋಟಿ ಸಿಕ್ಕಿದೆ. ಇನ್ನೂ ₹ 4.77 ಕೋಟಿ ಅಗತ್ಯವಿದೆ’ ಎಂದು ತಿಳಿಸಿದರು.

ಅಗತ್ಯ ಇರುವವರಿಗೆ ಮೊದಲು ಕಂತುಗಳಲ್ಲಿ ಹಣ ನೀಡಿರಿ. ಇಲ್ಲವಾದರೆ, ಯೋಜನೆ ಫಲಿಸಲು ಎಂದು ಸದಸ್ಯ ಎಸ್‌ಬಿಎಂ ಮಂಜು ಕೋರಿದರು. ಬಿಜೆಪಿ ಸದಸ್ಯ ಶಿವಕುಮಾರ ಇದಕ್ಕೆ ದನಿಗೂಡಿಸಿದರು.

ರೆವೆನ್ಯೂ ಬಡಾವಣೆಗಳಲ್ಲಿ ಮೂಲಸೌಲಭ್ಯಗಳನ್ನು ನೀಡಬಹುದು. ಆದರೆ, ಮನೆ ನಿರ್ಮಾಣಕ್ಕೆ ಹಣ ನೀಡುವ ಬಗ್ಗೆ ಆಕ್ಷೇಪಣೆಯಿದೆ ಎಂದು ಆಯುಕ್ತ ಜಗದೀಶ್‌ ಹೇಳಿದರು.

ಮತ್ತಷ್ಟು ಚರ್ಚೆಯ ಬಳಿಕ ಮುಂದಿನ ಸಭೆಯಲ್ಲಿ ಚರ್ಚೆ ನಡೆಸುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಯಿತು.

ಇದ್ಯಾವ ರೀತಿಯ ಆಡಳಿತ?

ಸಭೆ ಆರಂಭವಾಗುತ್ತಿದ್ದಂತೆ ಹಿಂದಿನ ಸಭೆಯ ನಡಾವಳಿ ಕಾಯಂ ಮಾಡಲು ಮೇಯರ್ ಪುಷ್ಪಲತಾ ಜಗನ್ನಾಥ್‌ ಸದಸ್ಯರನ್ನು ಕೋರಿದರು. ಆದರೆ, ವಿರೋಧಪಕ್ಷದ ನಾಯಕ ಬಿ.ವಿ.ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿದರು.

‘ಕಳೆದ ಸಭೆದಲ್ಲಿ ವಿವಿಧ ಉಪ ಸಮಿತಿಗಳಿಗೆ ಚುನಾವಣೆ ನಡೆದಿದೆ. ಆದರೆ, ಕಾನೂನು ಪಾಲಿಸಿಲ್ಲ. ಬಿಜೆಪಿ ಸದಸ್ಯರ ಅನುಮೋದನೆ ಹಾಗೂ ಸಹಿ ಪಡೆಯಲಾಗಿದೆ ಎಂದು ಬರೆಯಲಾಗಿದೆ. ನಾವು ಸಹಿಯನ್ನೇ ಹಾಕಿಲ್ಲ ಎಂದು ಖಾರವಾಗಿ ಹೇಳಿದರು. ಇದಕ್ಕೆ ಸದಸ್ಯೆ ಸುನಂದಾ ಪಾಲನೇತ್ರ’ ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತ ಜಗದೀಶ್, ಟೈಪಿಂಗ್‌ ದೋಷದಿಂದಾಗಿ ಈ ರೀತಿಯ ಸಮಸ್ಯೆಯಾಗಿದೆ. ಇದನ್ನು ಸರಿಪಡಿಸಲಾಗುವುದು. ಪುರಭವನ, ಗ್ರಂಥಾಲಯ ಉಪ ಸಮಿತಿಗಳ ವಿಚಾರದಲ್ಲಿ ಮಾತ್ರ ಈ ರೀತಿಯಾಗಿದೆ ಎಂದರು. ದೋಷ ಸರಿಪಡಿಸಿಕೊಂಡ ಮೇಲೆ ಸಭೆಯು ಇದಕ್ಕೆ ಒಪ್ಪಿಗೆ ನೀಡಲಿ ಎಂದು ಒತ್ತಾಯಿಸಿದರು.

ವಿದ್ಯುತ್‌ ಸ್ಪರ್ಶದಿಂದ ಸಾವು ಖಚಿತ!

‘ಸೆಸ್ಕ್‌’ ವತಿಯಿಂದ ನಗರದ ಹಲವೆಡೆ ಒಂದೂವರೆ ಅಡಿ ಆಳದಲ್ಲಿ ವಿದ್ಯುತ್‌ ತಂತಿಗಳನ್ನು ಹಾಕಲಾಗುತ್ತಿದೆ. ಅಲ್ಲದೇ, ರಕ್ಷಣಾ ವಿಧಾನಗಳನ್ನು ಅನುಸರಿಸುತ್ತಿಲ್ಲ ಎಂದು ಬಿಜೆಪಿ ಸದಸ್ಯ ಶಿವಕುಮಾರ್ ಆರೋಪಿಸಿದರು.

ತಂತಿಗಳನ್ನು ಈ ರೀತಿ ನೆಲದಿಂದ ಕೊಂಚವೇ ಆಳದಲ್ಲಿ ಹೂಳಿದರೆ ಅಪಾಯ ಕಟ್ಟಿಟ್ಟ ಬುತ್ತಿ. ವಿವಿಧ ಕಾಮಗಾರಿಗಳಿಗೆ ನೆಲವನ್ನು ಅಗೆಯುವಾಗ ವಿದ್ಯುತ್‌ ಸ್ಪರ್ಶವಾದರೆ ಅದಕ್ಕೆ ಹೊಣೆ ಯಾರು. ಹಾಗಾಗಿ, ಕೂಡಲೇ ‘ಸೆಸ್ಕ್‌’ ನಡೆಸುತ್ತಿರುವ ಕಾಮಗಾರಿಗಳನ್ನು ನಿಲ್ಲಿಸುವಂತೆ ಆದೇಶಿಸಬೇಕು ಎಂದು ಶಿವಕುಮಾರ್ ಒತ್ತಾಯಿಸಿದರು.

ಲ್ಯಾನ್‌ಸ್ಟೋನ್‌, ದೇವರಾಜ ಮಾರುಕಟ್ಟೆ ಕಟ್ಟಡ ವಿಚಾರ ಏಕಿಲ್ಲ?

ಲ್ಯಾನ್‌ಸ್ಟೋನ್‌, ದೇವರಾಜ ಮಾರುಕಟ್ಟೆ ಕಟ್ಟಡ ನಿರ್ಮಾಣ ಕಾಮಗಾರಿ ನಿಂತು ಹಲವು ದಿನಗಳಾಗಿವೆ. ಈ ಬಗ್ಗೆ ಸಭೆಯ ಕಾರ್ಯಸೂಚಿಗೆ ವಿಷಯ ಸೇರಿಸುವಂತೆ ಕೇಳಿಕೊಂಡರೂ ಕೈಬಿಡಲಾಗಿದೆ ಎಂದು ಪಾಲಿಕೆ ಸದಸ್ಯ ನಾಗರಾಜ್ ಕಿಡಿ ಕಾರಿದರು.

ಕಾಮಗಾರಿ ಸಮಿತಿ ಅಧ್ಯಕ್ಷ ಅಯೂಬ್‌ ಖಾನ್‌ ಇದಕ್ಕೆ ಪ್ರತಿಕ್ರಿಯಿಸಿ, ಸಮಿತಿಯಲ್ಲಿ ಈ ವಿಚಾರ ಚರ್ಚೆಯೇ ಆಗಿಲ್ಲ ಎಂದು ಹೇಳಿದರು. ಚರ್ಚೆಯಾದ ಬಳಿಕವೇ ಕಾರ್ಯಸೂಚಿಗೆ ಸೇರಿಸಲು ಕೋರಿದ್ದು ಎಂದು ನಾಗರಾಜ್‌ ಹೇಳಿದರು.

ಇದಕ್ಕೆ ದನಿಗೂಡಿಸಿದ ಬಿಜೆಪಿಯ ಶಿವಕುಮಾರ್‌, ಇದೆಂಥ ಕಾರ್ಯಕ್ಷಮತೆಯ ಆಡಳಿತ. ನಿಮ್ಮ ನಡುವೆಯೇ ಇಷ್ಟೊಂದು ಗೊಂದಲಗಳಿವೆಯಲ್ಲ’ ಎಂದು ವ್ಯಂಗ್ಯವಾಡಿದರು.

ವಕೀಲರ ಬದಲಾವಣೆಗೆ ಒಪ್ಪಿಗೆ

ನಗರಪಾಲಿಕೆಯ ಪ್ರಕರಣಗಳನ್ನು ನಿರ್ವಹಿಸಲು ವಿಫಲರಾಗಿದ್ದು, ವಕೀಲ ಎಚ್‌.ಸಿ.ಶಿವರಾಮು ಅವರನ್ನು ಬದಲಿಸುವಂತೆ ಸಭೆಯು ತೀರ್ಮಾನಿಸಿತು.

ಶಿವರಾಮು ಅವರು ಪಾಲಿಕೆ ಅಧಿಕಾರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾಲ್ಕು ವರ್ಷಗಳಿಂದ 11 ಪ್ರಕರಣಗಳು ಬಾಕಿ ಇವೆ. ಅಲ್ಲದೇ, ಸೌಜನ್ಯದಿಂದ ನಡೆದುಕೊಳ್ಳುವುದೂ ಇಲ್ಲ ಎಂದು ಸದಸ್ಯರು ಕಿಡಿ ಕಾರಿದರು.

ನಗರಪಾಲಿಕೆ ಅಧಿಕಾರಿಗಳು ವಕೀಲರಿಗೆ ಸೂಕ್ತ ದಾಖಲೆಗಳನ್ನು ನೀಡುತ್ತಿಲ್ಲ ಎಂಬ ಆರೋಪ ಇದೆ ಎಂದು ಸದಸ್ಯ ಸುಬ್ಬಯ್ಯ ಹೇಳಿದರು.

ಮೋಹನ ಭಟ್ ಅವರನ್ನು ನೇಮಿಸಿಕೊಳ್ಳಬಹುದು ಎಂದು ಸದಸ್ಯರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಬಿಎಂ ಮಂಜು, ಮೋಹನ ಭಟ್ ಅವರನ್ನೇ ಏಕೆ ನೇಮಿಸಿಕೊಳ್ಳಬೇಕು. ನೇಮಕಾತಿಗೆ ಮಾನದಂಡ ನಿಗದಿಯಾಗಬೇಕು ಎಂದು ಮನವಿ ಮಾಡಿದರು.

ನಾಮಕಾರಣ ಬೇಡ

ನಗರದ ವಿವಿಧ ವೃತ್ತ, ಉದ್ಯಾನ, ರಸ್ತೆಗಳಿಗೆ ವ್ಯಕ್ತಿಗಳ ಹೆಸರು ಇಡಬೇಕೆಂಬ ಪ್ರಸ್ತಾವಕ್ಕೆ ಒಪ್ಪಿಗೆ ಸಿಗಲಿಲ್ಲ.

ಯಾವುದೇ ಸಾಧನೆ ಮಾಡದ ಹಾಗೂ ನಗರದ ಜನತೆಗೆ ಅಪರಿಚಿತರಾದ ವ್ಯಕ್ತಿಗಳ ಹೆಸರುಗಳನ್ನು ಏಕೆ ಇಡಬೇಕು. ಈ ವಿಚಾರವಾಗಿ ಮತ್ತಷ್ಟು ಚರ್ಚೆ ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT