ಗುರುವಾರ , ಮೇ 6, 2021
22 °C
ಕೆಎಸ್‌ಒಯು ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಕಿವಿಮಾತು

ಉದ್ಯೋಗಕ್ಕಾಗಿ ವಿದೇಶಕ್ಕೆ ಹಾರುವುದು ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಉದ್ಯೋಗ ಅರಸಿ ವಿದೇಶಕ್ಕೆ ಹಾರುವುದು ಬೇಡ. ಬದಲಿಗೆ ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯವೃತ್ತಿ ಮಾಡುವ ಸಂಕಲ್ಪ ತೊಡುವುದು ಶ್ರೇಷ್ಠ’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್‌.ವಿದ್ಯಾಶಂಕರ್‌ ಕಿವಿಮಾತು ಹೇಳಿದರು.

ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯು ಶನಿವಾರ ಹಮ್ಮಿಕೊಂಡಿದ್ದ ‘ಪದವೀಧರರ ದಿನಾಚರಣೆ 2019’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

‘ಭಾರತದಲ್ಲಿ ಪ್ರತಿವರ್ಷ 9 ಸಾವಿರ ಮಂದಿ ವೈದ್ಯ ಪದವಿಯನ್ನು ಪಡೆಯುತ್ತಿದ್ದಾರೆ. ವಿದೇಶಗಳಿಗೆ ವೃತ್ತಿ ಅರಸಿ ಹೋಗುವುದನ್ನೇ ಆದ್ಯತೆಯನ್ನಾಗಿ ಮಾಡಿಕೊಂಡಿರುತ್ತಾರೆ. ಇದರ ಬದಲು, ನಮ್ಮ ದೇಶದಲ್ಲೇ ಇದ್ದು, ವೃತ್ತಿ ಹುಡುಕುವ ಸಂಕಲ್ಪ ತೊಡಬೇಕು. ಹಣಕ್ಕಿಂತ ನೆಮ್ಮದಿ ಮುಖ್ಯ. ನೊಂದ ಬಡವರಿಗೆ ಚಿಕಿತ್ಸೆ ನೀಡಿದಾಗ ಮರಳಿ ಸಿಗುವ ಗೌರವವನ್ನು ಹಣಕ್ಕೆ ಹೋಲಿಸುವುದು ಸಾಧ್ಯವಿಲ್ಲ’ ಎಂದು ಅವರು ಅಭಿಪ್ರಾಯಪಟ್ಟರು.

‘ವೈದ್ಯಕೀಯ ಕಾಲೇಜುಗಳು ಈಗ ಹೆಚ್ಚಿವೆ. ವೈದ್ಯರ ಸಂಖ್ಯೆಯೂ ಹೆಚ್ಚಿದೆ. ಆದರೆ, ಆರೋಗ್ಯದ ಗುಣಮಟ್ಟ ಏಕೆ ಸುಧಾರಿಸುತ್ತಿಲ್ಲ ಎಂಬ ಆತಂಕ ನನ್ನನ್ನು ಕಾಡುತ್ತಿದೆ. ಇದಕ್ಕೆ ಕಾರಣ ನಮ್ಮ ವೈದ್ಯಕೀಯ ಪದ್ಧತಿಯಲ್ಲಿರುವ ಸಂಕಲ್ಪದ ಕೊರತೆ. ಮಾನವೀಯತೆಯನ್ನು ಅಳವಡಿಸಿಕೊಂಡು ಚಿಕಿತ್ಸೆ ನೀಡುವ ಸಂಕಲ್ಪವನ್ನು ತೊಡಬೇಕು. ಅದು ಸಮಾಜವನ್ನು ಸ್ವಾಸ್ಥ್ಯಕ್ಕೆ ಕೊಂಡೊಯ್ಯುತ್ತದೆ’ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಸೇವೆಗಳ ಇಲಾಖೆಯ ಉಪ ಮಹಾನಿರ್ದೇಶಕ ಡಾ.ಅನಿಲ್ ಕುಮಾರ್ ಮಾತನಾಡಿ, ವೈದ್ಯಕೀಯ ವೃತ್ತಿಗಳನ್ನು ಸೇರಬಯಸುವವರಿಗೆ ಸಾಕಷ್ಟು ವೃತ್ತಿ ಅವಕಾಶಗಳಿವೆ. ಆದರೆ, ಕಷ್ಟಪಟ್ಟು ದುಡಿಯುವ ಸಂಕಲ್ಪ ತೊಡುವ ಮನಸು ಇರಬೇಕು ಎಂದು ಸಲಹೆ ನೀಡಿದರು.

‘ವೈದ್ಯಕೀಯ ಅರಿವು ನಮ್ಮಲ್ಲಿ ಕಡಿಮೆ ಇದೆ. ಇದಕ್ಕಾಗಿ ಇಲಾಖೆಯ ವತಿಯಿಂದ 2020ರಲ್ಲಿ ಗ್ರಾಮಾಂತರ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿದ್ದೇವೆ. ಗ್ರಾಮಾಂತರ ಪ್ರದೇಶಗಳಿಗೆ ಆದ್ಯತೆ ನೀಡಲಾಗಿದೆ’ ಎಂದು ಹೇಳಿದರು.

ಮಣಿಪಾಲ ಆರೋಗ್ಯ ವಿಜ್ಞಾನ ಕಾಲೇಜಿನ ವಾಕ್‌ ಮತ್ತು ಶ್ರವಣ ವಿಭಾಗದ ಪ್ರಾಧ್ಯಾಪಕ ಡಾ.ಬಿ.ರಾಜಶೇಖರ್ ಮಾತನಾಡಿ, ಕಲಿಕೆ ನಿರಂತರ ಪ್ರಕ್ರಿಯೆ. ಕಲಿಕೆಯ ಸಂದರ್ಭದಲ್ಲಿ ರಸಭರಿತವಾದ ಕ್ಷಣಗಳು ಇರುತ್ತವೆ. ಅಂತೆಯೆ, ಕಲಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಬಳಿಕ ವೃತ್ತಿಯನ್ನು ಸವಾಲಾಗಿ ಸ್ವೀಕರಿಸಬೇಕು ಎಂದರು.

ಸಂಸ್ಥೆಯ ನಿರ್ದೇಶಕಿ ಪ್ರೊ.ಎಂ.ಪುಷ್ಪಾವತಿ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ರಿಜಿಸ್ಟ್ರಾರ್‌ ಡಾ.ಜಾದವ್‌ ಎಸ್‌.ಜಯಶಂಕರ ರಾವ್ ಭಾಗವಹಿಸಿದ್ದರು,

ಇದೇ ಸಂದರ್ಭದಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು. ರೆನಿ ರಾಜು ಅವರಿಗೆ ಅಭಿಲಾಶಾ ಪ್ರಶಸ್ತಿ, ಜಯಲಕ್ಷ್ಮಿ ಚಿನ್ನದ ಪದಕ, ಫ್ರೆಂಡ್ಸ್ ಯನೈಟೆಡ್ ಆರ್ಗನೈಸೇಷನ್ ವಿದ್ಯಾರ್ಥಿವೇತನ, ಅನುಸ್ಮಿತಾ ಮಾಥ್ಯೂ ಅವರಿಗೆ ಟಿ.ವಿ.ಅಲಮೇಲು ಚಿನ್ನದ ಪದಕ, ಎ.ಎಸ್.ಮಾನಸಾ ಹಾಗೂ ಎಂ.ಶಾಲಿನಿ ಅವರಿಗೆ ಡಾ.ಆರ್‌.ಸುಂದರ್‌ ಚಿನ್ನದ ಪದಕ, ದುರ್ಗಾ ಎಸ್‌.ಕುಮಾರ್ ಅವರಿಗೆ ವಿಜಯಲಕ್ಷ್ಮಿ ಬಸವರಾಜು ಚಿನ್ನದ ಪದಕ, ಪೆನ್ವಾಲ್ ಸುಮನ್‌ ಶಂಕರ್‌ ಅವರಿಗೆ ಆರ್‌.ಸುಮಿತ್ರಮ್ಮ ಮತ್ತು ಆರ್‌.ಕೆ.ರಾಜಗೋಪಾಲ ಚಿನ್ನದ ಪದಕ, ಜಿ.ಕೆ.ಜಯಶ್ರೀ ಅವರಿಗೆ ಡಿ.ಕೆ.ವೆಂಕಟೇಶ ಮೂರ್ತಿ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು