ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಬಾಗಿಲಿಗೆ ವೈದ್ಯಕೀಯ ಸೇವೆ

ಮೊಬೈಲ್‌ ಅಪ್ಲಿಕೇಷನ್, ಮೊಬೈಲ್‌ ಕರೆ ಮೂಲಕ ಸೇವೆ
Last Updated 22 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಮೊಬೈಲ್‌ ಅಪ್ಲಿಕೇಷನ್‌ಗಳು ಸಾಮಾಜಿಕ ಸಂಪರ್ಕಗಳಿಗೆ, ಮನರಂಜನೆಗೆ ಮಾತ್ರ ಎಂಬ ಪರಿಕಲ್ಪನೆ ಈಚಿನ ದಿನಗಳಲ್ಲಿ ಹುಸಿಯಾಗುತ್ತಿದೆ. ಈಗ ನಾಗರಿಕ ಸೇವೆಗಳಿಗೂ ಆಂಡ್ರ್ಯಾಯ್ಡ್‌ ಆ್ಯ‌ಪ್‌ಗಳು ಬಳಕೆಯಾಗುತ್ತಿವೆ. ಇಂತಹುದೇ ಒಂದು ಪ್ರಯತ್ನ ಮೈಸೂರಿನಲ್ಲೂ ನಡೆದಿದೆ. ವೃದ್ಧರು, ಮಹಿಳೆಯರು ಹಾಗೂ ಮಕ್ಕಳಿಗೆ ಅನುಕೂಲವಾಗುವಂತೆ ಮನೆಬಾಗಿಲಿಗೆ ವೈದ್ಯಕೀಯ ಸೇವೆಗಳನ್ನು ತಲುಪಿಸುವ ಪ್ರಯತ್ನ ಮೈಸೂರಿನ ಯುವಕರಿಂದ ನಡೆದಿದೆ.

ಸರಸ್ವತಿಪುರಂ ಮೂಲದ ಈ ಯುವಕರು ‘ಮೆಡ್‌ ಆ್ಯಪ್’ ಎಂಬ ಮೊಬೈಲ್‌ ಅಪ್ಲಿಕೇಷನ್‌ ರೂಪಿಸಿದ್ದಾರೆ. ವೈದ್ಯರು, ಎಂಜಿನಿಯರುಗಳು, ವಾಣಿಜ್ಯ ನಿರ್ವಹಣಾಕಾರರ ಈ ತಂಡವು ಒಂದು ವರ್ಷದಿಂದ ಈ ಸೇವೆಯನ್ನು ನೀಡುತ್ತಿದೆ. ಈ ಅಪ್ಲಿಕೇಷನ್‌ ಅನ್ನು ನಾಗರಿಕರು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಂಡು ಅದರ ಮೂಲಕ ಕರೆ ಮಾಡಿದರೆ ಸಾಕು. ಅಥವಾ 96632 38899 ಮೊಬೈಲ್‌ ನಂಬರಿಗೆ ಕರೆ ಮಾಡಿದರೂ ಆಯಿತು. ರೋಗಿಗಳ ವಿಳಾಸವನ್ನು ಪಡೆಯುವ ಮೆಡ್‌ ಆ್ಯಪ್ ತಂಡವು ಮನೆ ಬಾಗಿಲಿಗೆ ವೈದ್ಯಕೀಯ ಚಿಕಿತ್ಸೆಗಾಗಿ ಸಿಬ್ಬಂದಿಯನ್ನು ಕಳುಹಿಸುತ್ತದೆ. ವೈದ್ಯರ ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲಾಗದವರು ಈ ಸೌಲಭ್ಯ ಬಳಸಿಕೊಳ್ಳುವುದು ಮೈಸೂರಿನಲ್ಲಿ ದಿನೇ ದಿನೇ ಪ್ರಸಿದ್ಧವಾಗುತ್ತಿದೆ.

‘ಬೆಹಡೆನ್‌ ಮೆಡಿಕೇರ್‌’ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡು ಈ ಅಪ್ಲಿಕೇಷನ್‌ ಶುರು ಮಾಡಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ವಾಣಿಜ್ಯ ನಿರ್ವಹಣಾ ಕಾರ್ಯವನ್ನು ಮಾಡುತ್ತಿದ್ದ ನಿರಂಜನ ನಾಗೇಶ ಸ್ವಾಮಿ ಅವರಿಗೆ ವರ್ಷದ ಹಿಂದೆ ಈ ಪರಿಕಲ್ಪನೆ ಮೂಡಿತು. ತಮ್ಮ ಸ್ನೇಹಿತರ ಬಳಗದಲ್ಲಿದ್ದ ವೈದ್ಯರು, ಎಂಜಿನಿಯರುಗಳನ್ನು ಒಟ್ಟಿಗೆ ಸೇರಿಸಿದರು. ಈ ಮೊಬೈಲ್‌ ಅಪ್ಲಿಕೇಷನ್‌ ರೂಪಿಸಿ, ಮೇಲಿನ ಮೊಬೈಲ್‌ ನಂಬರನ್ನು ಅದಕ್ಕೆ ಜೋಡಿಸಲಾಯಿತು. ಇಷ್ಟು ಮಾಡಿದ್ದೇ ತಡ, ಅಶಕ್ತ ರೋಗಿಗಳು ಈ ಅಪ್ಲಿಕೇಷನ್‌ ಸೌಲಭ್ಯ ಪಡೆಯಲು ಆರಂಭಿಸಿದರು. ಸಣ್ಣಪುಟ್ಟ ಸಮಸ್ಯೆಗಳಿಗೆ ಮನೆಯಲ್ಲೇ ಚಿಕಿತ್ಸೆ ಪಡೆಯುವುದು ಇದರಿಂದ ಚಿಟಿಕೆ ಹೊಡೆದಷ್ಟು ಸುಲಭವಾಯಿತು.

ಯಾರಿಗೆ ಈ ಸೌಲಭ್ಯ?

ಕೆಲವೊಮ್ಮೆ ಚಿಕಿತ್ಸೆ ಸಣ್ಣದೇ ಆದರೂ, ಕ್ಲಿನಿಕ್‌ ಅಥವಾ ಆಸ್ಪತ್ರೆಗೆ ಹೋಗಿ ಸೌಲಭ್ಯ ಪಡೆಯುವುದು ರೋಗಿಗಳಿಗೆ ಕಷ್ಟವಾಗುತ್ತದೆ. ಅದರಲ್ಲೂ ವೃದ್ಧರು ಹಾಗೂ ಮಕ್ಕಳಿಗೆ ಈ ಸಮಸ್ಯೆ ಅತೀವ. ಆಸ್ಪತ್ರೆಗಳಲ್ಲಿ ಗಂಟೆಗಟ್ಟಲೇ ಕಾಯುವುದು, ಕೌಂಟರುಗಳಲ್ಲಿ ಸಾಲುಗಟ್ಟಿ ನಿಲ್ಲುವುದು, ಮತ್ತೊಬ್ಬರ ಮೇಲೆ ಅವಲಂಬಿತರಾಗುವುದು ಮಾನಸಿಕವಾಗಿಯೂ ಹಿಂಸೆ ನೀಡುತ್ತದೆ. ಇದರಿಂದ ವೈದ್ಯಕೀಯ ಸಮಸ್ಯೆಗಳ ಜತೆಗೆ ಖಿನ್ನತೆಗೂ ರೋಗಿಗಳು ಒಳಗಾಗುತ್ತಾರೆ.

ಇದನ್ನು ಸರಿಪಡಿಸುವುದು ಈ ಸೇವೆಯ ಉದ್ದೇಶ. ಸಾಮಾನ್ಯವಾಗಿ ರೋಗಿಗಳಿಗೆ ವೈದ್ಯರು ವೈದ್ಯಕೀಯ ಸಲಹೆ ನೀಡಿರುತ್ತಾರೆ. ಕಾಲ ಕಾಲಕ್ಕೆ ರಕ್ತದ ಪರೀಕ್ಷೆ ಮಾಡಿಸುವುದು, ರಕ್ತದೊತ್ತಡ, ಇಸಿಜಿ, ಸಕ್ಕರೆ ಅಂಶ ಪತ್ತೆಗಳನ್ನು ಮಾಡಿಸುವಂತೆ ಸೂಚನೆಯನ್ನು ನೀಡಿರುತ್ತಾರೆ. ಅವನ್ನು ಮಾಡಿಸಿಕೊಳ್ಳಬೇಕಾದ್ದು ರೋಗಿಗಳಿಗೆ ಅನಿವಾರ್ಯ. ಇದನ್ನು ಮನೆಯಲ್ಲೆ ಮಾಡಿಕೊಂಡರೆ ಎಷ್ಟು ಸುಲಭ ಎಂದು ಪ್ರತಿಯೊಬ್ಬ ರೋಗಿಗೂ ಅನ್ನಿಸದೇ ಇರದು. ಇದನ್ನು ಸಾಕಾರಗೊಳಿಸಿರುವುದೇ ಮೆಡ್‌ ಆ್ಯಪ್ ತಂಡದ ಸಾಧನೆ. ಯಾವುದೇ ರಕ್ತದ ಪರೀಕ್ಷೆಯನ್ನು ಇವರು ಮನೆಗೇ ಬಂದು ಮಾಡುತ್ತಾರೆ. ರಕ್ತದ ಮಾದರಿಯನ್ನು ಸಂಗ್ರಹಿಸಿ ಅದೇ ದಿನ ಅದರ ಫಲಿತಾಂಶದ ವರದಿಯನ್ನು ಮನೆಗೆ ತಲುಪಿಸುತ್ತಾರೆ.

ಅಲ್ಲದೇ, ಅನೇಕ ವೈದ್ಯಕೀಯ ಸಲಕರಣೆಗಳನ್ನು ಇವರು ಮನೆಗೇ ಹೊತ್ತು ತರುತ್ತಾರೆ. ಇಸಿಜಿ ಮಾದರಿಯ ಯಂತ್ರಗಳನ್ನು ಮನೆಗೆ ತಂದು ಸ್ಥಳದಲ್ಲೇ ಇಸಿಜಿ ಪರೀಕ್ಷೆ ನಡೆಸಿ, ವರದಿಯನ್ನೂ ಮುದ್ರಿಸಿ ಕೊಡುತ್ತಾರೆ. ಇದರಿಂದ ಅದೇ ಕ್ಷಣವೇ ತಮ್ಮ ಹೃದಯದ ಸಮಸ್ಯೆಗಳ ಬಗ್ಗೆ ರೋಗಿಗಳಿಗೆ ಮಾಹಿತಿ ಸಿಕ್ಕಿಬಿಡುತ್ತದೆ.

ಪರಿಣಿತರ ತಂಡ

ಮೆಡ್‌ ಆ್ಯಪ್‌ ಬಳಿ ಪರಿಣಿತರ ತಂಡವೇ ಇದೆ. 20 ಸಿಬ್ಬಂದಿ ಕ್ಷೇತ್ರ ಕಾರ್ಯ ಮಾಡುತ್ತಾರೆ. ಅವರ ಪೈಕಿ, ವೈದ್ಯರು, ಶುಶ್ರೂಷಕರು ಇದ್ದಾರೆ. ಮಿಕ್ಕಂತೆ ಅಪ್ಲಿಕೇಷನ್‌ ನಿರ್ವಹಣೆಗೆ ಸಿಬ್ಬಂದಿಯಿದ್ದಾರೆ. ಬೆನ್ನೆಲುಬಾಗಿ ಸಿಇಒ ಆಗಿ ನಿರಂಜನ ನಾಗೇಶ ಸ್ವಾಮಿ, ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಡಾ.ಶಿರಾಜ್‌ ನಿಸಾರ್, ಮುಖ್ಯ ಆಡಳಿತ ಅಧಿಕಾರಿಯಾಗಿ ಡಾ.ವಿನೋದ್ ಸಿಂಗ್, ಮುಖ್ಯ ಮಾರುಕಟ್ಟೆ ಅಧಿಕಾರಿಯಾಗಿ ನಬೀಲ್ ಅಹ್ಮದ್, ನಿರ್ದೇಶಕರಾಗಿ ಕೃಷ್ಣ ರಾಘವನ್‌ ಇದ್ದಾರೆ.

ಈ ಅಪ್ಲಿಕೇಷನ್‌ ಮೂಲಕ ನಗರ ವ್ಯಾಪ್ತಿಯಲ್ಲಿ 400 ತಜ್ಞ ವೈದ್ಯರ ಪಟ್ಟಿ, 30 ಆಸ್ಪತ್ರೆಗಳು, 105 ಕ್ಲಿನಿಕ್‌ಗಳು, 41 ಪ್ರಯೋಗಾಲಯಗಳು, 4 ರಕ್ತನಿಧಿಗಳು, 100 ರಕ್ತದಾನಿಗಳ ಸಂಪರ್ಕವನ್ನೂ ಕಲ್ಪಿಸಲಾಗಿದೆ. ಹಾಗಾಗಿ, ಬೆರಳಿನ ತುದಿಯಲ್ಲೇ ರೋಗಿಗಳಿಗೆ ಎಲ್ಲ ಅಗತ್ಯ ಸೇವೆಗಳನ್ನೂ ಕಲ್ಪಿಸಿದಂತೆ ಆಗುತ್ತಿದೆ.

ಇದೀಗ ಇವರ ಸೇವೆಯು ದೇಶದೆಲ್ಲೆಡೆಯೂ ಹಬ್ಬಿದೆ. ನೂರಾರು ಸಿಬ್ಬಂದಿ ದೇಶದ ಪ್ರಮುಖ ನಗರಗಳಲ್ಲಿ ಇದೇ ಸೇವೆ ಸಲ್ಲಿಸುತ್ತಿದ್ದಾರೆ. ಅದಕ್ಕಾಗಿಯೇ ಇವರ ಸೇವೆಯನ್ನು ಮೆಚ್ಚಿ ‘ಜಾಗತಿಕ ಸಾಧಕರ ‍ಪ್ರತಿಷ್ಠಾನ’ವು ಇವರಿಗೆ ‘ರಾಷ್ಟ್ರೀಯ ನಿರ್ಮಾಣ ರತ್ನ ಪುರಸ್ಕಾರ’ ಹಾಗೂ ಪ್ರತಿಭಾವಂತ ಹಾಗೂ ಅಭಿವೃದ್ಧಿಶೀಲ ಉದ್ದಿಮೆದಾರರ ಸಂಘವು ‘ಏಷ್ಯಾ ಪೆಸಿಫಿಕ್ ಸಾಧಕರ ಪ್ರಶಸ್ತಿ’ ನೀಡಿ ಗೌರವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT