ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನಾ ಬಜಾರ್‌: ಹಬ್ಬದ ಖರೀದಿ ಜೋರು

‘ಈದುಲ್‌ ಫಿತ್ರ್’ಗೆ ಉಡುಪು ಖರೀದಿಯಲ್ಲಿ ತೊಡಗಿರುವ ಮುಸ್ಲಿಮರು
Last Updated 26 ಮೇ 2019, 19:39 IST
ಅಕ್ಷರ ಗಾತ್ರ

ಮೈಸೂರು: ರಂಜಾನ್ ತಿಂಗಳು ಕೊನೆಗೊಳ್ಳಲು ಹತ್ತು ದಿನಗಳು ಬಾಕಿ ಉಳಿದಿದ್ದು, ಮುಸ್ಲಿಮರು ಈದುಲ್‌ ಫಿತ್ರ್‌ ಹಬ್ಬಕ್ಕೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬ ಸಮೀಪಿಸುತ್ತಿರುವಂತೆಯೇ ನಗರದ ಸಾಡೇ ರಸ್ತೆಯ ಮೀನಾ ಬಜಾರ್‌ನಲ್ಲಿ ವ್ಯಾಪಾರ ಗರಿಗೆದರುತ್ತದೆ.

ನಗರದ ಮುಸ್ಲಿಮರು ಮಾತ್ರವಲ್ಲದೆ, ಜಿಲ್ಲೆಯ ಇತರ ಭಾಗಗಳಿಂದಲೂ ಹಬ್ಬದ ವಸ್ತುಗಳ ಖರೀದಿಗೆ ಇಲ್ಲಿಗೆ ದಾಂಗುಡಿ ಇಡುತ್ತಾರೆ. ಮುಂದಿನ ಹತ್ತು ದಿನ ಅಂದರೆ ಹಬ್ಬದ ಮುನ್ನಾದಿನದವರೆಗೂ ಇಲ್ಲಿ ಖರೀದಿಯ ಭರಾಟೆ ಇರಲಿದೆ. ಈದುಲ್‌ ಫಿತ್ರ್‌ ಹಬ್ಬ ಜೂನ್‌ 5 ಅಥವಾ 6 ರಂದು ನಡೆಯಲಿದೆ.

ರಂಜಾನ್‌ ತಿಂಗಳು ಆರಂಭವಾ ಗುತ್ತಿರುವಂತೆಯೇ ಸಾಡೇ ರಸ್ತೆಯ ಸ್ವರೂಪವೇ ಬದಲಾಗಿಬಿಡುತ್ತದೆ. ಇಫ್ತಾರ್‌ ಅವಧಿಯಲ್ಲಿ ಸಮೋಸ ಒಳಗೊಂಡಂತೆ ವಿವಿಧ ತಿಂಡಿ ತಿನಿಸುಗಳ ಮಾರಾಟ ನಡೆಯುತ್ತದೆ. ರಂಜಾನ್‌ನ ಕೊನೆಯ ಹತ್ತು ದಿನಗಳಲ್ಲಿ ಇಲ್ಲಿ ಕೇವಲ ತಿಂಡಿ, ತಿನಿಸು ಮಾತ್ರವಲ್ಲದೆ, ಉಡುಪು, ಪಾದರಕ್ಷೆ, ಆಲಂಕಾರಿಕ ವಸ್ತುಗಳ ಅಂಗಡಿಗಳು ತಲೆ ಎತ್ತುತ್ತವೆ.

ಇಲ್ಲಿರುವ ಖಾಯಂ ಅಂಗಡಿಗಳ ಜತೆಗೆ ಹಲವು ವ್ಯಾಪಾರಿಗಳು ರಸ್ತೆ ಬದಿ ತಾತ್ಕಾಲಿಕ ಅಂಗಡಿಗಳನ್ನು ತೆರೆಯು ತ್ತಾರೆ. ಜತೆಗೆ ತಳ್ಳುಗಾಡಿಗಳಲ್ಲೂ ವಸ್ತುಗಳನ್ನು ತಂದು ಮಾರಾಟ ಮಾಡುತ್ತಾರೆ. ಕಡಿಮೆ ಬೆಲೆಗೆ ವಸ್ತು ಗಳು ದೊರೆಯುವುದು ಇಲ್ಲಿನ ವಿಶೇಷ. ಆದ್ದರಿಂದ ಬಡವರು ಮತ್ತು ಮಧ್ಯ ಮವರ್ಗದವರ ಶಾಪಿಂಗ್‌ನ ನೆಚ್ಚಿನ ತಾಣ ಎನಿಸಿಕೊಂಡಿದೆ. ಮುಸ್ಲಿಮರು ಮಾತ್ರವಲ್ಲದೆ, ಇತರ ಧರ್ಮೀಯರೂ ಖರೀದಿಗಾಗಿ ಇಲ್ಲಿಗೆ ಬರುವರು.

ಮೀನಾ ಬಜಾರ್‌ನಲ್ಲಿ ಬೆಳಿಗ್ಗೆ 11 ರಿಂದಲೇ ವ್ಯಾಪಾರ ಗರಿಗೆದರುತ್ತದೆ. ಆ ಬಳಿಕ ಎಲ್ಲ ಅಂಗಡಿಗಳಲ್ಲೂ ರಾತ್ರಿ ಯವರೆಗೆ ಬಿಡುವಿಲ್ಲದ ವ್ಯಾಪಾರ. ಮಧ್ಯಾಹ್ನದ ಬಳಿಕ ಇಡೀ ರಸ್ತೆಯೇ ಜನಜಾತ್ರೆಯಾಗಿ ಬದಲಾಗುತ್ತದೆ. ಅಂಗಡಿಗಳ ಮುಂದೆ ತೂಗುಹಾಕಿರುವ ವಿವಿಧ ವಿನ್ಯಾಸಗಳ ಉಡುಪುಗಳು ರಾತ್ರಿ ದೀಪದ ಬೆಳಕಿನಲ್ಲಿ ಕಂಗೊಳಿಸುವಾಗ ಇಲ್ಲಿ ಹೊಸ ಲೋಕವೇ ಸೃಷ್ಟಿಯಾಗಿರುತ್ತದೆ.

ಇಲ್ಲಿನ ವ್ಯಾಪಾರಿಗಳು ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳನ್ನೇ ಗುರಿಯಾಗಿಸಿ ವ್ಯಾಪಾರದಲ್ಲಿ ತೊಡಗಿರುವುದು ಸ್ಪಷ್ಟ. ಚೂಡಿದಾರ್‌, ಸಿದ್ಧ ಉಡುಪು, ಡ್ರೆಸ್‌ ಮೆಟೀರಿಯಲ್‌, ಬ್ಯಾಗ್‌, ಪಾದರಕ್ಷೆ, ಬುರ್ಖಾ, ಸೌಂದರ್ಯವರ್ಧಕ ಸಾಧನಗಳ ಹಲವು ಅಂಗಡಿಗಳು ಇಲ್ಲಿವೆ. ಮಕ್ಕಳ ಡ್ರೆಸ್‌ ಮತ್ತು ಆಕರ್ಷಕ ಪಾದರಕ್ಷೆಗಳು ಲಭ್ಯ. ಪುರುಷರಿಗೆ ವಿವಿಧ ರೀತಿಯ ಟೋಪಿ, ಸಲ್ವಾರ್‌ ಕಮೀಜ್, ಕುರ್ತಾ, ಪೈಜಾಮ ಇಲ್ಲಿ ದೊರೆಯುತ್ತದೆ.

‘ಮಹಿಳೆಯರು ಪ್ರತಿ ವರ್ಷವೂ ಹೊಸ ವಿನ್ಯಾಸಗಳ ಉಡುಪು ಬಯ ಸುವರು. ಆದ್ದರಿಂದ ಮಾರುಕಟ್ಟೆಯಲ್ಲಿ ಲಭ್ಯವಿರುವ ನವೀನ ಮಾದರಿಯ ಉಡುಪುಗಳನ್ನು ತಂದು ಮಾರಾಟಕ್ಕೆ ಇಟ್ಟಿದ್ದೇವೆ. ಔಟ್‌ ಆಫ್‌ ಫ್ಯಾಷನ್‌ ಉಡು ಪುಗಳನ್ನು ಯಾರೂ ಕೊಳ್ಳುವುದಿಲ್ಲ’ ಎಂದು ಇಲ್ಲಿನ ವ್ಯಾಪಾರಿ ಮುನೀರ್‌ ಹೇಳುತ್ತಾರೆ.

ಬಹುತೇಕ ವ್ಯಾಪಾರಿಗಳು ಗ್ರಾಹಕರಿಗೆ ಚೌಕಾಸಿಗೆ ಅವಕಾಶ ನೀಡುವುದಿಲ್ಲ. ಅದಕ್ಕಾಗಿ ‘ಫಿಕ್ಸ್‌ಡ್‌ ರೇಟ್‌’ ಎಂದು ಬರೆದು ಬೋರ್ಡ್‌ ತೂಗು ಹಾಕಿದ್ದಾರೆ. ‘ಕೈಗೆಟುವ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡುತ್ತೇವೆ. ಅದಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಿದರೆ ಲಾಭ ಸಿಗದು. ಆದ್ದರಿಂದ ಚೌಕಾಸಿಗೆ ಅವಕಾಶ ನೀಡುವುದಿಲ್ಲ’ ಎಂದು ವ್ಯಾಪಾರಿ ಖಾದರ್‌ ಪಾಷಾ ತಿಳಿಸಿದರು.

‘ಪ್ರತಿ ವರ್ಷ ಹಬ್ಬದ ಖರೀದಿಗೆ ಇಲ್ಲಿಗೆ ಬರುತ್ತೇನೆ. ಈದುಲ್‌ ಫಿತ್ರ್‌ ದಿನ ಕುಟುಂಬದ ಎಲ್ಲ ಸದಸ್ಯರೂ ಹೊಸ ಉಡುಪು ಧರಿಸುತ್ತಾರೆ. ಮನಸ್ಸಿಗೆ ಒಪ್ಪುವ ಉಡುಪುಗಳು ಇಲ್ಲಿ ಕಡಿಮೆ ಬೆಲೆಗೆ ದೊರೆಯುತ್ತವೆ’ ಎಂದು ಹಬ್ಬದ ಖರೀದಿಗೆ ಬಂದಿದ್ದ ಅನ್ವರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT