‘ಕ್ಯಾಬಿನೆಟ್‌ನಲ್ಲಿ ಹೊಟ್ಟೆ ಉರಿಯುತ್ತೆ ಕಣ್ರೀ..!’

ಶನಿವಾರ, ಜೂಲೈ 20, 2019
26 °C
ಒಂದು ವರ್ಷದಿಂದ ಜನರ ಮನಸ್ಸಿಗೆ ಒಪ್ಪಿಗೆಯಾಗುವ ಆಡಳಿತ ನೀಡಿಲ್ಲ: ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ

‘ಕ್ಯಾಬಿನೆಟ್‌ನಲ್ಲಿ ಹೊಟ್ಟೆ ಉರಿಯುತ್ತೆ ಕಣ್ರೀ..!’

Published:
Updated:
Prajavani

ಮೈಸೂರು: ‘ಪ್ರತಿ ಕ್ಯಾಬಿನೆಟ್‌ ಮೀಟಿಂಗ್‌ನಲ್ಲೂ ನೂರಾರು ಕೋಟಿ ಮೊತ್ತದ ಯೋಜನೆಗಳಿಗೆ ಅನುಮೋದನೆ ಕೊಡ್ತೀವಿ. ಆಗ ನಮ್ ಹೊಟ್ಟೆ ಉರಿಯುತ್ತೇ ಕಣ್ರೀ..!’

‘ರಾಜ್ಯದ ಎಲ್ಲ ಜಿಲ್ಲೆಗಳ ಯೋಜನೆಗಳಿಗೆ ವಿಶೇಷ ಅನುಮೋದನೆ ಸಿಗ್ತಿರುತ್ತೆ. ಆದರೆ ನಮ್‌ ಮೈಸೂರಿನ ಒಂದೇ ಒಂದು ಯೋಜನೆಯೂ ಕ್ಯಾಬಿನೆಟ್‌ ಮೀಟಿಂಗ್‌ಗೆ ಬರ್ತಿಲ್ಲ. ಮಂಜೂರಾತಿಯೂ ಸಿಗ್ತಿಲ್ಲ... ಇದಕ್ಕೆ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳೇ ಹೊಣೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಗುಡುಗಿದರು.

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಗುರುವಾರ ಸಂಜೆ ವಿವಿಧ ಇಲಾಖೆಯ ಜಿಲ್ಲಾ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ಜಿಲ್ಲಾಡಳಿತದ ಅಧಿಕಾರಿ ವರ್ಗಕ್ಕೆ ಮಾತಿನ ಚಾಟಿಯೇಟು ನೀಡಿದರು.

ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಂದರ್ಭ ಆಯುಕ್ತೆ ಶಿಲ್ಪಾನಾಗ್‌ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪೌರಾಡಳಿತ ನಿರ್ದೇಶನಾಲಯ ಸೇರಿದಂತೆ ಸಂಬಂಧಿಸಿದ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಕಾಮಗಾರಿಯ ಪ್ರಸ್ತಾವನೆ, ಯೋಜನೆಗೆ ಸಂಬಂಧಿಸಿದಂತೆ ವಿವರಣೆಯುಳ್ಳ ಪತ್ರ ಬರೆದು, ಮಂಜೂರಾತಿಗಾಗಿ ಆಯಾ ಅಧಿಕಾರಿಗಳ ಜತೆ ಸಂಪರ್ಕದಲ್ಲಿರುವೆ ಎಂದು ಹೇಳಿದ್ದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ದೇವೇಗೌಡ ಖಾರವಾಗಿ ಪ್ರತಿಕ್ರಿಯಿಸಿದರು.

‘ನೋಡಮ್ಮಾ ನೀನು ನಿಮ್ಮ ಸೆಕ್ರೆಟ್ರಿಗೆ ಪ್ರಪ್ರೊಸಲ್ ಕೊಡ್ತೀಯಾ. ಆತ ಅದನ್ನು ಮಂಜೂರು ಮಾಡಲು ಸಂಬಂಧಿಸಿದ ಇನ್ನೊಂದು ವಿಭಾಗಕ್ಕೆ ಕಳುಹಿಸಿದಾಗ ಅವರು ತಡೆ ಹಿಡಿದ್ಕೊಳ್ತಾರೆ. ಏಕೆ ಅಂತ ಕೇಳೋ ಕೆಪಾಸಿಟಿ ಅಧಿಕಾರಿಗಳಿಗೆ ಇರಲ್ಲ. ನೀವು ಪ್ರಫೊಸಲ್ ಕೊಡುವಾಗಲೇ ನನಗೊಂದು ಕೊಟ್ಟರೆ, ಆ ಕೆಲಸವನ್ನು ನಿರಾತಂಕವಾಗಿ ಮಾಡುಸ್ತೀನಿ. ಪಾಲಿಕೆ, ಮೂಡಾಗೆ ಸಂಬಂಧಿಸಿದ ಎಲ್ಲ ಪ್ರಸ್ತಾವನೆಯ ಪುಟ್ಟ ವಿವರ ನನಗೆ ಕೊಡಿ. ಇದನ್ನು ನಿಮ್ಮ ಕೈಯಲ್ಲಿ ಮಾಡಿಸಿಕೊಳ್ಳೋಕೆ ಆಗಲ್ಲ. ನಾನ್‌ ಮಾಡಿಸುವೆ’ ಎಂದು ಜಿ.ಟಿ.ದೇವೇಗೌಡ ಸೂಚಿಸಿದರು.

ಖಡಕ್‌ ಸೂಚನೆ; ಜನತಾ ದರ್ಶನ

‘ಗ್ರಾಮ ಪಂಚಾಯಿತಿಯ ಪಿಡಿಒನಿಂದ ಹಿಡಿದು ಜಿಲ್ಲೆಯ ಉನ್ನತ ಅಧಿಕಾರಿಗಳವರೆಗೂ ಯಾರೊಬ್ಬರೂ ಕೆಲಸ ಮಾಡುತ್ತಿಲ್ಲ. ನಾವು ಅಧಿಕಾರಕ್ಕೆ ಬಂದು ಒಂದು ವರ್ಷ ಗತಿಸಿದರೂ; ಜನರ ಮನಸ್ಸಿಗೆ ನಮ್ಮ ಆಡಳಿತ ಒಪ್ಪಿಗೆಯಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಇಲ್ಲಿಗೆ ಬಂದು ಸೂಚನೆ ನೀಡಬೇಕಾ ?’

‘ಅವರೆದುರು ನಾವು ಏನು ಮಾಡಲಾಗಿಲ್ಲ ಎಂದು ಕೈಚೆಲ್ಲಿ ಕೂರಬೇಕಾ ? ಯಾವೊಂದು ಕೆಲಸವೂ ಇದೂವರೆಗೆ ನಡೆದಿಲ್ಲ. ಶನಿವಾರ–ಭಾನುವಾರ ಎಂಬುದನ್ನು ಬದಿಗಿಟ್ಟು, ಮುಂದಿನ ಒಂದು ತಿಂಗಳಲ್ಲಿ ಅಹೋರಾತ್ರಿ ಕೆಲಸ ನಿರ್ವಹಿಸಿ ಜನರ ಸಮಸ್ಯೆ ಬಗೆಹರಿಸಲು ಮುಂದಾಗಿ’ ಎಂದು ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌ಗೆ ಸಭೆಯಲ್ಲೇ ದೇವೇಗೌಡ ಖಡಕ್‌ ಸೂಚನೆ ನೀಡಿದರು.

‘ಆಯಾ ಕ್ಷೇತ್ರದ ಶಾಸಕರೊಟ್ಟಿಗೆ ದಿನಕ್ಕೊಂದು ಸ್ಥಳಕ್ಕೆ ಭೇಟಿ ನೀಡೋಣ. ಜನತಾ ದರ್ಶನ ನಡೆಸೋಣ. ಮೈಸೂರು ಮಹಾನಗರ ಪಾಲಿಕೆಯಿಂದಲೇ ಇದು ಆರಂಭಗೊಳ್ಳಲಿ. ನಾವು ಜನರ ಬಳಿಗೆ ತೆರಳುವ ವೇಳೆಗೆ ಯಾವೊಂದು ಸಮಸ್ಯೆ ಇರದಂತೆ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದು’ ಎಂದು ಜಿಲ್ಲಾಧಿಕಾರಿಗೆ ಹೇಳಿದರು.

‘ಹೊಸದಾಗಿ ಬಂದಿದ್ದೀರಿ. ಕಚೇರಿಯಲ್ಲೇ ಕೂತು ಫೋನ್, ಮೊಬೈಲ್‌ನಲ್ಲೇ ಜಿಲ್ಲೆಯ ಮಾಹಿತಿ ಪಡೆಯೋದನ್ನು ಬಿಟ್ಟು ಪ್ರತಿ ಪೊಲೀಸ್‌ ಸ್ಟೇಷನ್‌ಗೂ ಭೇಟಿ ಕೊಡಿ. ಇಡೀ ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆ ನಿಯಂತ್ರಿಸಿ. ನೀವಿನ್ನು ಹುಡುಗರಿದ್ದೀರಿ. ಹುರುಪಿನಿಂದ ಕೆಲಸ ಮಾಡಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್‌ಗೆ ದೇವೇಗೌಡ ಆದೇಶಿಸಿದರು.

‘ಮೈಸೂರು ನಗರ ವ್ಯಾಪ್ತಿಯಲ್ಲಿ ಅತ್ಯಾಚಾರ, ಸರಗಳ್ಳತನ, ಸುಲಿಗೆ ಹೆಚ್ಚಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಿ.ಟಿ.ಡಿ. ಕಮೀಷನರ್‌ ಕೆ.ಟಿ.ಬಾಲಕೃಷ್ಣಗೆ ಅಪರಾಧ ಚಟುವಟಿಕೆ ನಿಯಂತ್ರಿಸಲು ಮುಂದಾಗಿ ಎಂದು ಸೂಚಿಸಿದರು. ಸಿಗ್ನಲ್‌ ಸಮಸ್ಯೆಯೂ ಹೆಚ್ಚಿದ್ದು, ಪ್ರತಿ ಸಿಗ್ನಲ್‌ನಲ್ಲೂ ವಾಹನ ಸವಾರರು ನಿಲ್ಲುವುದು ಕಿರಿಕಿರಿ. ಎರಡ್ಮೂರು ಸಿಗ್ನಲ್‌ ಫ್ರೀ ಇರುವಂತೆ ನೋಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !