ಭಾನುವಾರ, ಏಪ್ರಿಲ್ 11, 2021
20 °C
ವೃದ್ದರಿಗೆ, ಅಂಗವಿಕಲರಿಗೆ ಮಾಸಿಕ ಪಿಂಚಣಿ ಬಿಡುಗಡೆ ಮಾಡಲು ಎಂ.ಕೆ.ಸೋಮಶೇಖರ್ ಒತ್ತಾಯ

‘ವೃದ್ದಾಪ್ಯ ವೇತನ ನೀಡಲಾಗದಷ್ಟು ಸರ್ಕಾರ ಬಡವಾಗಿದೆಯೇ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ವೃದ್ದಾಪ್ಯ ವೇತನ ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಾಶನಗಳು ಕಳೆದ ಆರೇಳು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ. ಸರ್ಕಾರಕ್ಕೆ ಈ ಮಾಸಾಶನಗಳನ್ನು ಬಿಡುಗಡೆ ಮಾಡಲಾಗದಷ್ಟು ಬಡತನ ಬಂದಿದೆಯೇ’ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಪ್ರಶ್ನಿಸಿದರು.

ಕೆ.ಆರ್.ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರವಲ್ಲ, ರಾಜ್ಯಾದ್ಯಂತ ಈ ಸಮಸ್ಯೆ ಇದೆ. ಸರ್ಕಾರದ ಬೊಕ್ಕಸ ಆ ಪ್ರಮಾಣದಲ್ಲಿ ಖಾಲಿಯಾಗಿರಬೇಕು ಎಂದು ಅನ್ನಿಸುತ್ತಿದೆ. ಇಂತಹವರ ಬಗ್ಗೆ ಕಿಂಚಿತ್ತೂ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಅವರು ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಸರ್ಕಾರ ಕೊಡುತ್ತಿದ್ದ ಮಾಸಿಕ ಪಿಂಚಣಿಯು ಔಷಧ ತೆಗೆದುಕೊಳ್ಳುವುದಕ್ಕೆ ಆಗುತ್ತಿತ್ತು. ಈಗ ಹಣ ಬಿಡುಗಡೆಯಾಗದೇ ಜನರು ಪರದಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

‍‘ನಿತ್ಯ ಇವರು ಬ್ಯಾಂಕುಗಳಿಗೆ ಅಲೆಯಬೇಕಿದೆ. ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಬಂದು ವಿಚಾರಿಸಬೇಕಿದೆ. ನಿತ್ಯ ಇವರು ಓಡಾಡುವುದಕ್ಕೆ ಸಾಕಷ್ಟು ಖರ್ಚಾಗುತ್ತಿದೆ. ಒಂದು ವೇಳೆ ಸರ್ಕಾರಕ್ಕೆ ಪಿಂಚಣಿ ನೀಡುವುದಕ್ಕೆ ಆಗುವುದಿಲ್ಲ ಎನ್ನುವುದಾದರೆ ಬಹಿರಂಗವಾಗಿ ಕೊಡಲಾಗದು ಎಂದು ಹೇಳಲಿ. ಅದನ್ನು ಬಿಟ್ಟು ವೃಥಾ ಅಲೆದಾಡಿಸುವುದು ಸರಿಯಲ್ಲ’ ಎಂದು ಕಿಡಿಕಾರಿದರು.

‘ಕೆ.ಆರ್.ಕ್ಷೇತ್ರದ ಹಾಲಿ ಶಾಸಕ ಎಸ್.ಎ.ರಾಮದಾಸ್ ಅವರ ಕೈಯಲ್ಲಿ ಮಾಶಾಸನ ನೀಡಲು ಆಗದು. ಅದು ಸರ್ಕಾರದಮಟ್ಟದಲ್ಲಿ ಆಗಬೇಕಾದ ಕೆಲಸ. ಆದರೆ, ರಾಮದಾಸ್ ಅವರು ಕನಿಷ್ಠ ಬಡವರ ಕಷ್ಟ ಕೇಳಲು ಎಲ್ಲೂ ಹೊರಗೆ ಹೋಗುತ್ತಿಲ್ಲ. ನಮ್ಮ ಕಾಲದಲ್ಲಿ ಮಂಜೂರಾದ ಯೋಜನೆಗಳನ್ನು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ’ ಎಂದು ಹರಿಹಾಯ್ದರು.

ಪಾಲಿಕೆ ಸದಸ್ಯರಾದ ಶೋಭಾ ಸುನಿಲ್ ಮಾತನಾಡಿ, ‘ಸರ್ಕಾರಕ್ಕೆ ಹೊಸ ಫಲಾನುಭವಿಗಳನ್ನು ಆಯ್ಕೆ ಮಾಡುವ ಯೋಗ್ಯತೆ ಇಲ್ಲ. ಕನಿಷ್ಠ ಹಳಬರಿಗೆ ಸಕಾಲಕ್ಕೆ ಪಿಂಚಣಿ ನೀಡುವ ತಾಕತ್ತೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಮ್ಮೆ ತಾಲ್ಲೂಕು ಕಚೇರಿಗೆ ಹೋಗಿ ನೋಡಿದರೆ ಸಾಕು. ಬಡವರ ಉದ್ದನೆಯ ಸಾಲು ಕಾಣಿಸುತ್ತದೆ. ಇನ್ನಾದರೂ ಇವರಿಗೆ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಗಿರಿಜಾ, ಗಿರಿಜಮ್ಮ, ನಜೀಮಾ, ಗಣೇಶ್ ಹಾಗೂ ಇತರರು ತಮಗೆ 4 ತಿಂಗಳುಗಳಿಂದ ಮಾಸಾಶನ ಬಂದಿಲ್ಲ. ಕೂಡಲೇ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.