ಶುಕ್ರವಾರ, ಜೂನ್ 25, 2021
22 °C
ಕೆ.ಆರ್.ಆಸ್ಪತ್ರೆ ನರ್ಸಿಂಗ್‌ ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದ ಶಾಸಕ ಎಲ್‌.ನಾಗೇಂದ್ರ

ಹಾಸ್ಟಲ್‌ ತಡೆಗೋಡೆ ಎತ್ತರಿಸುವಂತೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರಿನ ಕೆ.ಆರ್.ಆಸ್ಪತ್ರೆ ನರ್ಸಿಂಗ್‌ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಸೋಮವಾರ ಭೇಟಿ ನೀಡಿದ ಶಾಸಕ ಎಲ್.ನಾಗೇಂದ್ರ ಕೂಡಲೇ ಸುರಕ್ಷೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು

ಮೈಸೂರು: ಕೆ.ಆರ್‌ ಆಸ್ಪತ್ರೆಯ ನರ್ಸಿಂಗ್‌ ಕಾಲೇಜು ಮಹಿಳೆಯರ ವಿದ್ಯಾರ್ಥಿನಿಲಯಕ್ಕೆ ವ್ಯಕ್ತಿಯೊಬ್ಬ ನುಗ್ಗಿ ಉಡುಪು, ಮೊಬೈಲ್ ಫೋನ್‌ ಕಳವು ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಲಯಕ್ಕೆ ಸೋಮವಾರ ಭೇಟಿ ನೀಡಿದ ಶಾಸಕ ಎಲ್‌.ನಾಗೇಂದ್ರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಾಸ್ಟೆಲ್‌ಗೆ ಭೇಟಿ ನೀಡಿದ ನಾಗೇಂದ್ರ ಸೂಕ್ತ ರಕ್ಷಣೆ ಇಲ್ಲದೇ ಇರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಹಾಸ್ಟೆಲ್‌ ತಡೆಗೋಡೆ ಚಿಕ್ಕದಾಗಿದ್ದು ಯಾರು ಬೇಕಾದರೂ ಹತ್ತಿಬರುವಂತಿದೆ. ಅಲ್ಲದೇ, ತಂತಿ ಬೇಲಿಯನ್ನೂ ಹಾಕದೇ ಇರುವುದು ರಕ್ಷಣೆಯೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿನಿಯರು ದೂರು ನೀಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದರು.

ವಿದ್ಯಾರ್ಥಿನಿಲಯದ ಅಡುಗೆ ಮನೆ, ಬಚ್ಚಲುಮನೆ, ಶೌಚಾಲಯಗಳು ಶಿಥಿಲವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಇವನ್ನು ಕೂಡಲೇ ದುರಸ್ತಿಗೊಳಿಸಬೇಕು ಎಂದು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ನಂಜರಾಜು ಅವರಿಗೆ ಸೂಚಿಸಿದರು.

ಕೂಡಲೇ ಸುರಕ್ಷಾ ಸಿಬ್ಬಂದಿಯನ್ನು ಹೆಚ್ಚಿಸಬೇಕು. ತಡೆಗೋಡೆಯ ಎತ್ತರವನ್ನು ಹೆಚ್ಚಿಸಬೇಕು. ತಡೆಗೋಡೆಯ ಮೇಲೆ ತಂತಿ ಬೇಲಿ ಹಾಕಿಸಬೇಕು. ಯಾರೂ ಒಳಬಾರದಂತೆ ಗ್ರಿಲ್‌ ಹಾಕಿಸಬೇಕು. ಹಾಸ್ಟೆಲ್‌ ಸುತ್ತಲೂ ಇರುವ ಗಿಡಗಂಟಿಗಳನ್ನು ತೆರವುಗೊಳಿಸಬೇಕು. ಈ ಕಾರ್ಯಗಳನ್ನು ಅತಿ ಶೀಘ್ರವೇ ನಡೆಸಬೇಕು ಎಂದು ಅವರು ಆದೇಶಿಸಿದರು.

‘ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಇದ್ದಲ್ಲಿ ನನ್ನನ್ನು ಕೇಳಿರಿ. ಹಣವಿಲ್ಲವೆಂದು ವಿದ್ಯಾರ್ಥಿನಿಯರಿಗೆ ತೊಂದರೆ ಉಂಟು ಮಾಡಿದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕಾಗುವುದು’ ಎಂದು ಅವರು ಎಚ್ಚರಿಸಿದರು.

ನರ್ಸಿಂಗ್ ಹಾಸ್ಟೆಲ್‌ ವಾರ್ಡನ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಹಾಗೂ ಡೀನ್ ಆಗಿಂದಾಗ್ಗೆ ಹಾಸ್ಟೆಲ್‌ಗೆ ಭೇಟಿ ನೀಡುತ್ತಿರಬೇಕು. ಕುಂದುಕೊರತೆಯನ್ನು ಆಲಿಸಿ ನನ್ನ ಗಮನಕ್ಕೆ ತರಬೇಕು. ಇಲ್ಲವಾದಲ್ಲಿ ಮುಂದೆ ಎದುರಾಗುವ ಯಾವುದೇ ಸಮಸ್ಯೆಗಳಿಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಬೇಕಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು