ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೇಯಸಿ ಕುರಿತು ಅಶ್ಲೀಲ ಮಾತು ಕೊಲೆಯಲ್ಲಿ ಅಂತ್ಯ

ರಾಘವೇಂದ್ರ ಕೊಲೆ ಆರೋಪಿಗಳ ಬಂಧನ, ಕೊಲೆಗೆ ಸುಪಾರಿ ನೀಡಿದ್ದು ಬೆಳಕಿಗೆ
Last Updated 22 ಮಾರ್ಚ್ 2019, 11:28 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಕುಂಬಾರಕೊಪ್ಪಲುವಿನ ರಾಘವೇಂದ್ರ ಅವರ ಕೊಲೆ ಪ್ರಕರಣವನ್ನು ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಈತ ತನ್ನ ಗೆಳೆಯ ಎಸ್‌.ಎಂ.ರಜತ್‌ ಎಂಬಾತನ ಪ್ರೇಯಸಿಯ ಕುರಿತು ಅಶ್ಲೀಲವಾಗಿ ಮಾತನಾಡುತ್ತಿದ್ದುದ್ದೇ ಕೊಲೆಗೆ ಪ್ರಧಾನ ಕಾರಣ ಎಂಬ ಅಂಶ ತನಿಖೆಯಲ್ಲಿ ಗೊತ್ತಾಗಿದೆ. ಈ ಸಂಬಂಧ ಒಟ್ಟು ಐವರು ಆರೋಪಿಗಳನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮೇಟಗಳ್ಳಿಯ ಲೋಕನಾಯಕನಗರದ ಎಸ್.ಎಂ.ರಜತ್‌ (24), ಎಂಸಿಸಿ ಕಾಲೊನಿಯ ವೆಂಕಟೇಶ್ (25), ವೆಂಕಟರಮಣ (29), ಬೆಳವಾಡಿಯ ಅಮೃತೇಶ್ವರನಗರದ ಕೇಶವ (23) ಹಾಗೂ ಮಂಡ್ಯ ಜಿಲ್ಲೆಯ ಕಾರಸವಾಡಿ ಗ್ರಾಮದ ಚಂದನ್ (24) ಬಂಧಿತರು.

ಇವರಲ್ಲಿ ರಜತ್ ಎಂಬಾತ ಉಳಿದವರಿಗೆ ಕೊಲೆ ಮಾಡಲು ಸುಪಾರಿ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಜತ್ ಹಾಗೂ ರಾಘವೇಂದ್ರ ಸ್ನೇಹಿತರಾಗಿ ಒಟ್ಟಿಗೆ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದರು. ರಜತ್‌ನಿಂದ ಸಾಲ ಪಡೆದ ರಾಘವೇಂದ್ರ ಹೆಚ್ಚಿನ ಬಡ್ಡಿಗೆ ಬೇರೆಯವರಿಗೆ ಸಾಲ ನೀಡುತ್ತಿದ್ದ. ಜತೆಗೆ, ರಜತ್ ಪ್ರೇಯಸಿ ಕುರಿತು ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದರಿಂದ ಕೋಪಗೊಂಡಿದ್ದ ರಜತ್ ಉಳಿದ ಆರೋಪಿಗಳಿಗೆ ಸುಪಾರಿ ನೀಡಿದ. ಒಂದು ವ್ಯವಹಾರ ಇದೆ ಎಂದು ನಂಬಿಸಿ ರಾಘವೇಂದ್ರ ಅವರನ್ನು ಕಾರಿನಲ್ಲಿ ಹತ್ತಿಸಿಕೊಂಡು ಕೂರ್ಗಳ್ಳಿಯ ನಿರ್ಜನ ಪ್ರದೇಶದಲ್ಲಿ ಕುತ್ತಿಗೆಗೆ ಹಗ್ಗದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ, ನಂತರ ಕುತ್ತಿಗೆಯನ್ನು ಬ್ಲೇಡ್‌ನಿಂದ ಕೋಯ್ದಿದ್ದಾರೆ. ಶವವನ್ನು ಜೋಡಿ ತೆಂಗಿನಮರದ ಬಳಿಯ ಸ್ಮಶಾನದಲ್ಲಿ ಹೂತು, ಕೊಲೆಗೆ ಬಳಸಿದ ಸಾಧನಗಳನ್ನು ನಾಶಪಡಿಸಿದರು. ನಂತರ, ಶವದ ಮೇಲೆ ಜೆಸಿಬಿ ಸಹಾಯದಿಂದ ಮಣ್ಣು ಎಳೆಸಿ ಜಾಗವನ್ನು ಸಮತಟ್ಟುಗೊಳಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ಸುಳಿವು ನೀಡಿದ ಫೋನ್‌ ಕರೆ

ರಾಘವೇಂದ್ರ ಮಾರ್ಚ್ 13ರ ರಾತ್ರಿ ಮನೆಯಲ್ಲಿ ಊಟ ಮಾಡಲು ಕುಳಿತುಕೊಳ್ಳುತ್ತಿದ್ದಾಗ ಕೇಶವ ಫೋನ್ ಮಾಡಿ ಹೊರಗೆ ಬರುವಂತೆ ಹೇಳುತ್ತಾನೆ. ನಂತರ, ಆತನ ಕಾರಿನಲ್ಲಿ ಹೋಗಿದ್ದನ್ನು ಕಂಡ ರಾಘವೇಂದ್ರ ಅವರ ಸಂಬಂಧಿ ಯಶೋಧಕೃಷ್ಣ ನೀಡಿದ ಸುಳಿವು ಪೊಲೀಸರು ಪ್ರಕರಣ ಬೇಧಿಸುವುದಕ್ಕೆ ಸಹಕಾರಿಯಾಯಿತು. ಮೊದಲು ಕೇಶವನನ್ನು ವಶಕ್ಕೆ ತೆಗೆದುಕೊಂಡು ತೀವ್ರವಾಗಿ ವಿಚಾರಣೆ ನಡೆಸಿದಾಗ ಇಡೀ ಪ್ರಕರಣ ಬಯಲಿಗೆ ಬಂದಿತು.

ವಿಜಯನಗರ ಠಾಣೆ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್, ಸಿಬ್ಬಂದಿಯಾದ ಮಹದೇವ, ಶಂಕರ್, ಈಶ್ವರ್, ಸೋಮಾರಾಧ್ಯ, ಶ್ರೀನಿವಾಸಮೂರ್ತಿ, ಕಾಂತರಾಜು, ಶಿವಮೂರ್ತಿ, ಹರೀಶ, ಮಹದೇವಪ್ರಸಾದ್, ರಂಗೇಶ್ ಕಾರ್ಯಾಚರಣೆ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT