ಗುರುವಾರ , ನವೆಂಬರ್ 21, 2019
22 °C
ಜೈಲು ಶಿಕ್ಷೆ ಅನುಭವಿಸಿದ್ದಕ್ಕಿಂತ ಪ್ರಕರಣದ ಸಂಬಂಧ ನ್ಯಾಯಾಲಯಕ್ಕೆ ಅಲೆದಾಡಿಯೇ ಹೈರಾಣಾಗಿದ್ದೆವು...

ಪಂಜರದ ಹಕ್ಕಿಗಳಿಗೆ ಬಿಡುಗಡೆಯ ಸ್ವಾತಂತ್ರ್ಯ ಸಿಕ್ಕಾಗ ಬೇಸರ

Published:
Updated:
Prajavani

ಮೈಸೂರು: ಜೈಲು ಶಿಕ್ಷೆಯಿಂದ ಬಿಡುಗಡೆಗೊಂಡರೂ ಮೊಗದಲ್ಲಿ ಸಂಭ್ರಮವಿರಲಿಲ್ಲ. ಮನದ ಮೂಲೆಯಲ್ಲಿ ಅಡಗಿದ್ದ ಬೇಸರ ಹೋಗಲಿಲ್ಲ. ಏಳು ತಿಂಗಳ ಹಿಂದೆಯೇ ಬಿಡುಗಡೆಯಾಗಬೇಕಿತ್ತು. ಈಗ ಬಿಡುಗಡೆಗೊಂಡರೂ ಪ್ರಯೋಜನವಿಲ್ಲ. ಇನ್ನೊಂದು ತಿಂಗಳಿಗೆ ಶಿಕ್ಷೆಯನ್ನೇ ಮುಗಿಸಿ ಹೊರಬರುತ್ತಿದ್ದೆವು...

ಮಹಾತ್ಮಗಾಂಧಿ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಮೈಸೂರು ಕಾರಾಗೃಹದಿಂದ ಮೂರನೇ ಹಂತದಲ್ಲಿ ಮಂಗಳವಾರ ಬಿಡುಗಡೆಗೊಂಡ ಕೈದಿಗಳಾದ ಮೈಸೂರಿನ ಸತೀಶ್, ವಿ.ಎಂ.ಮಲ್ಲಿಕಾರ್ಜುನ್‌, ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ರಮೇಶ್‌ ಅವರ ಅಂತರಾಳದ ನುಡಿಗಳಿವು.

‘ಏಪ್ರಿಲ್‌ನಲ್ಲೇ ನಮ್ಮ ಬಿಡುಗಡೆಯಾಗಬೇಕಿತ್ತು. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದವು. ಲೋಕಸಭಾ ಚುನಾವಣೆ ನಡೆದಿದ್ದರಿಂದ ಇಲ್ಲಿ ತನಕವೂ ಮತ್ತೆ ಜೈಲಿನ ಸರಳುಗಳ ಹಿಂದೆಯೇ ಉಳಿಯಬೇಕಾಯಿತು. ಮಗ ಬಿಡುಗಡೆಯಾಗಲಿಲ್ಲ ಎಂಬ ಕೊರಗಿನಲ್ಲೇ ತಾಯಿ ಎರಡು ಬಾರಿ ಹಾಸಿಗೆ ಹಿಡಿದು ನರಳಿದರು. ಅ.2ರಂದೂ ತಾಂತ್ರಿಕ ಕಾರಣಗಳಿಂದ ನಮ್ಮ ಬಿಡುಗಡೆಯಾಗಲಿಲ್ಲ’ ಎಂದು ಸತೀಶ್ ಬೇಸರ ವ್ಯಕ್ತಪಡಿಸಿದರು.

‘ಈ ಬಾರಿ ಬಿಡುಗಡೆ ಎಂಬುದನ್ನೇ ಮನೆಯವರಿಗೆ, ಸ್ನೇಹಿತರಿಗೆ ತಿಳಿಸಿಲ್ಲ. ಆದರೂ ಕೆಲವರು ಜೈಲಿನ ಬಳಿಯೇ ಬಂದು ಬರಮಾಡಿಕೊಂಡಿದ್ದು ಖುಷಿ ಕೊಟ್ಟಿತು. ಜೈಲು ಪಾಲಾಗುವ ಮುನ್ನ ಬುಕ್‌ಸ್ಟಾಲ್ ನಡೆಸುತ್ತಿದ್ದೆ. ಒಳ್ಳೆಯ ವ್ಯಾಪಾರವಾಗುತ್ತಿತ್ತು. ಈಗ ಬುಕ್‌ಸ್ಟಾಲ್ ಇಲ್ಲ. ಹೆಂಡತಿ, ಇಬ್ಬರೂ ಹೆಣ್ಣು ಮಕ್ಕಳು ಇದ್ದಾರೆ. ಏನಾದರೂ ಬ್ಯುಸಿನೆಸ್ ಮಾಡಬೇಕು ಎಂಬ ಆಲೋಚನೆಯಿಂದಲೇ ಜೈಲಿನಿಂದ ಹೊರಗೆ ಬಂದಿರುವೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುವತಿಯ ಆತ್ಮಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದೆ. ಆರಂಭದಲ್ಲಿ ಇಲ್ಲಿನ ನ್ಯಾಯಾಲಯ ಮೂರು ವರ್ಷ ಶಿಕ್ಷೆ ವಿಧಿಸಿತ್ತು. ನನ್ನ ವಿರುದ್ಧ ದೂರು ದಾಖಲಿಸಿದವರು ಹೈಕೋರ್ಟ್‌ ಮೊರೆ ಹೊಕ್ಕರು. ಅಲ್ಲಿ 13 ವರ್ಷ ಶಿಕ್ಷೆಯಾಯ್ತು. ನಾನು ಸುಪ್ರೀಂಕೋರ್ಟ್‌ಗೆ ಹೋದೆ. ಅಲ್ಲಿ ಐದು ವರ್ಷ ಶಿಕ್ಷೆಯಾಯ್ತು. ಈ ನಡುವೆ ಮದುವೆ, ಮಕ್ಕಳಾದವು. ಈಗಾಗಲೇ ನಾಲ್ಕು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದೆ. ಇನ್ನೊಂದು ವರ್ಷವಿದ್ದಾಗ ಬಿಡುಗಡೆಯಾಗಿರುವೆ’ ಎಂದು ಹೇಳಿಕೊಂಡರು.

‘ಜೈಲು ಶಿಕ್ಷೆ ಅನುಭವಿಸಿದ್ದಕ್ಕಿಂತ ಪ್ರಕರಣದ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಅಲೆದು ಹೈರಾಣಾದೆ’ ಎಂದವರು ಕನಕಪುರ ತಾಲ್ಲೂಕಿನ ಶಿವನಹಳ್ಳಿ ಗ್ರಾಮದ ರಮೇಶ್‌.

‘ನನ್ನ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣ 2001ರಲ್ಲಿ ದಾಖಲಾಯ್ತು. ಬೆಂಗಳೂರು ಡೇರಿಯಲ್ಲಿ ಗುತ್ತಿಗೆ ಸೂಪರ್‌ವೈಸರ್‌ ಆಗಿ ಕೆಲಸ ಮಾಡುತ್ತಿದ್ದೆ. ಇದ್ದೊಂದು ನೌಕರಿಯೂ ಹೋಯ್ತು. 2017ರಲ್ಲಿ ಎರಡು ವರ್ಷ ಜೈಲು ಶಿಕ್ಷೆಯಾಯ್ತು. 16 ವರ್ಷ ಕೋರ್ಟ್‌ಗೆ ಅಲೆದಾಡಿಯೇ ಸುಸ್ತಾಗಿದ್ದೆ. ಇನ್ನೊಂದು ತಿಂಗಳು ಕಳೆದಿದ್ದರೆ ಶಿಕ್ಷೆಯ ಅವಧಿಯೇ ಮುಗಿಯುತ್ತಿತ್ತು. ಈಗ ಹೊರಗೆ ಬಿಟ್ಟಿದ್ದಾರೆ. ಹೊಟ್ಟೆಪಾಡಿಗಾಗಿ ಕೆಲಸ ಹುಡುಕಿಕೊಳ್ಳಬೇಕಿದೆ’ ಎಂದು ಹೇಳಿದರು.

ಕಾರಾಗೃಹಕ್ಕೆ ಕೈದಿಗಳ ಭಾರ!

ಮೈಸೂರು ಜಿಲ್ಲಾ ಕೇಂದ್ರ ಕಾರಾಗೃಹ ಸಾಮರ್ಥ್ಯಕ್ಕಿಂತ ಹೆಚ್ಚು ಕೈದಿಗಳನ್ನು ಹೊಂದಿದೆ. 562 ಕೈದಿಗಳ ಸಾಮರ್ಥ್ಯದ ಕಾರಾಗೃಹದಲ್ಲಿ, ಪ್ರಸ್ತುತ 862 ಕೈದಿಗಳಿದ್ದು, 300 ಹೆಚ್ಚುವರಿ ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದಾರೆ.

ಹೊಸ ಜೈಲು ನಿರ್ಮಾಣದ ಪ್ರಸ್ತಾವನೆ ಸೇರಿದಂತೆ, ಈಗಿನ ಜೈಲಿನಲ್ಲೇ ಭದ್ರತೆ ಹೆಚ್ಚಳಕ್ಕೆ ವೀಕ್ಷಣಾ ಗೋಪುರ ನಿರ್ಮಿಸುವ ಪ್ರಸ್ತಾವನೆಯೂ ನನೆಗುದಿಗೆ ಬಿದ್ದಿದೆ.

‘ಗಾಂಧಿ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ಕೇಂದ್ರ ಗೃಹ ಸಚಿವಾಲಯ ಕಡಿಮೆ ಅವಧಿಯ, ಕೆಲ ನಿರ್ದಿಷ್ಟ ವರ್ಗದ ಶಿಕ್ಷಾ ಬಂಧಿಗಳನ್ನು ಬಿಡುಗಡೆ ಮಾಡಲು ಸೂಚಿಸಿತ್ತು. ಇದರಂತೆ 2018ರ ಅಕ್ಟೋಬರ್‌ನಲ್ಲಿ 13 ಕೈದಿಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೆವು. 11 ಜನರಿಗೆ ಬಿಡುಗಡೆಯಾಗಿತ್ತು’ ಎಂದು ಜೈಲಿನ ಮುಖ್ಯ ಅಧೀಕ್ಷಕಿ ಕೆ.ಸಿ.ದಿವ್ಯ‌ಶ್ರೀ ‘ಪ್ರಜಾವಾಣಿ’ಗೆ ತಿಳಿಸಿದರು.

‘ಎರಡನೇ ಹಂತದಲ್ಲಿ 16 ಜನರು, ಮೂರನೇ ಹಂತದಲ್ಲಿ ಮೂವರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೆವು. ಎರಡನೇ ಹಂತದ ಬಿಡುಗಡೆ ನಡೆಯಲಿಲ್ಲ. 14 ಜನರು ಶಿಕ್ಷಾ ಅವಧಿ ಮುಗಿಸಿಕೊಂಡು ಜೈಲಿನಿಂದ ಹೋಗಿದ್ದರು. ಉಳಿದಿದ್ದ ಇಬ್ಬರು ಸೇರಿದಂತೆ ಮೂರನೇ ಪ್ರಸ್ತಾವನೆಯಲ್ಲಿದ್ದ ಒಬ್ಬರನ್ನು ಮಂಗಳವಾರ ಬಿಡುಗಡೆ ಮಾಡಿದೆವು’ ಎಂದು ಮಾಹಿತಿ ನೀಡಿದರು.

ಪುಸ್ತಕ–ಸಸಿಯ ಉಡುಗೊರೆ

ಬಿಡುಗಡೆಗೊಂಡ ಮೂವರು ಕೈದಿಗಳಿಗೂ ಜೈಲಿನ ವತಿಯಿಂದ ಮಹಾತ್ಮಗಾಂಧಿ ಅವರ ‘ಆತ್ಮಕತೆ’ ಹಾಗೂ ‘ನನ್ನ ಜೀವನದ ಕತೆ’ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇ ಸಂದರ್ಭ ತಲಾ ಒಂದೊಂದು ಸಸಿ ನೀಡಿದರು. ಖಾದಿ ಬ್ಯಾಗ್‌, ಟವೆಲ್ ಕೊಟ್ಟು ಬೀಳ್ಕೊಟ್ಟರು.

ಸಮಾರಂಭದ ನಡುವೆ ಮಹಿಳಾ ಕೈದಿಯೊಬ್ಬರು ನಮನ್ನು ವಿಶೇಷವಾಗಿ ಪರಿಗಣಿಸಿ ಬಿಡುಗಡೆ ಮಾಡಿ ಎಂದು ಕೋರಿಕೊಂಡಿದ್ದಕ್ಕೆ, ಕಾರಾಗೃಹ ಸುಧಾರಣಾ ಸಮಿತಿ ಸದಸ್ಯ ಪ್ರೊ.ನಂಜರಾಜ ಅರಸ್‌ ಕಿವಿಯಾದರು.

ಕಾರ್ಯಕ್ರಮ ಮುಗಿಯುತ್ತಿದ್ದಂತೆ ಹಲವು ಪುರುಷ ಕೈದಿಗಳು ಶಾಸಕ ತನ್ವೀರ್ ಸೇಠ್‌ ಭೇಟಿಯಾಗಿ, ‘ನಾವು ತಪ್ಪು ಮಾಡಿಲ್ಲ. ಆದರೂ ಶಿಕ್ಷೆ ಅನುಭವಿಸುತ್ತಿದ್ದೇವೆ. ನಮ್ಮನ್ನು ಬಿಡುಗಡೆಗೊಳಿಸಿ’ ಎಂದು ಮನವಿ ಮಾಡಿಕೊಂಡ ದೃಶ್ಯ ಗೋಚರಿಸಿತು. ಜೈಲಿನಲ್ಲಿದ್ದ ಸಂದರ್ಭ ಒಡನಾಡಿಗಳಾಗಿದ್ದ ಹಲವರು ಶುಭ ಕೋರಿ ಬೀಳ್ಕೊಟ್ಟರು. ಹೊರಗೆ ಕುಟುಂಬದವರು ನೆರೆದು ಸ್ವಾಗತಿಸಿಕೊಂಡ ಚಿತ್ರಣ ಕಂಡು ಬಂತು.

ಪ್ರತಿಕ್ರಿಯಿಸಿ (+)