ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು–ಕೊಡಗು: ಮತ್ತೆ ‘ಸಿಂಹ’ ಗರ್ಜನೆ

ಪ್ರತಾಪಸಿಂಹ ಪುನರಾಯ್ಕೆ; ಸೋಲು ಕಂಡ ಕಾಂಗ್ರೆಸ್‌ ಅಭ್ಯರ್ಥಿ ವಿಜಯಶಂಕರ್‌
Last Updated 23 ಮೇ 2019, 19:09 IST
ಅಕ್ಷರ ಗಾತ್ರ

ಮೈಸೂರು: ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತೆ ನೆಲಕಚ್ಚಿದೆ. ಮೈತ್ರಿ ತಂತ್ರ ಕೈಕೊಟ್ಟಿದ್ದು, ಬಿಜೆಪಿ ಗೆಲುವಿನ ಕೇಕೆ ಮೊಳಗಿಸಿದೆ.

ಭಾರಿ ಕುತೂಹಲ ಮೂಡಿಸಿದ್ದ ಮೈಸೂರು–ಕೊಡಗು ಲೋಕಸಭಾ ಕ್ಷೇತ್ರ ದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಸಿಂಹ ಪುನರಾಯ್ಕೆ ಆಗಿದ್ದಾರೆ.

ಮೈತ್ರಿ ಪಕ್ಷಗಳಿಗೆ ಸಡ್ಡೊಡೆದು ನಿರೀಕ್ಷೆಗೂ ಮೀರಿದ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಮತ್ತೊಮ್ಮೆ ಸಂಸತ್ ಪ್ರವೇಶಿಸಲು ಸಿದ್ಧರಾಗಿರುವ ಅವರು ತಮ್ಮ ಸಮೀಪದ ಪ್ರತಿಸ್ವರ್ಧಿ ಕಾಂಗ್ರೆಸ್‌ನ ಸಿ.ಎಚ್‌.ವಿಜಯಶಂಕರ್‌ ಅವರನ್ನು 1.39 ಲಕ್ಷ ಮತಗಳಿಂದ ಸೋಲಿಸಿದ್ದಾರೆ. ಈ ಮೂಲಕ ಮತ್ತೆ ‘ಸಿಂಹ’ ಗರ್ಜನೆ ಕೇಳಿಸಿದೆ.

ಪಡುವಾರಹಳ್ಳಿಯಲ್ಲಿರುವ ಮಹಾ ರಾಣಿ ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಮತ ಎಣಿಕೆ ಆರಂಭದಲ್ಲಿ ಕೆಲ ಕ್ಷೇತ್ರಗಳಲ್ಲಿ ಮಾತ್ರ ಕಾಂಗ್ರೆಸ್‌ ಅಭ್ಯರ್ಥಿ ತುಸು ಮುನ್ನಡೆ ಸಾಧಿಸಿದ್ದರು. ಆ ಬಳಿಕ ಪ್ರತಾಪಸಿಂಹ ಅವರದ್ದೇ ಪಾರಮ್ಯ. ಐದನೇ ಸುತ್ತಿನ ವೇಳೆಗೆ ಸುಮಾರು 40 ಸಾವಿರ ಮತಗಳಿಂದ ಮುಂದಿದ್ದರು. 10ನೇ ಸುತ್ತಿನ ವೇಳೆಗೆ ಅಂತರವನ್ನು 80 ಸಾವಿರಕ್ಕೆ ಹೆಚ್ಚಿಸಿಕೊಂಡರು. 15ನೇ ಸುತ್ತಿನ ಎಣಿಕೆ ಹೊತ್ತಿಗೆ ಅಂತರ ಲಕ್ಷಕ್ಕೆ ಬೆಳೆಯಿತು.

ನಂತರದ ಸುತ್ತುಗಳಲ್ಲೂ ಭಾರಿ ಮುನ್ನಡೆ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದ ಅವರು ವಿಜಯದುಂಧುಬಿ ಮೊಳಗಿಸಿದರು. ಆಗಾಗ್ಗೆ ಮಾಧ್ಯಮ ಕೊಠಡಿಗೆ ಬರುತ್ತಿದ್ದ ಅವರು ಆರಂಭದಲ್ಲೇ ಆನಂದತುಂದಿಲರಾಗಿದ್ದರು. 20 ಸುತ್ತುಗಳ ಮತ ಎಣಿಕೆ ನಡೆಯಿತು. ಸೋಲು ಖಚಿತವಾಗುತ್ತಿದ್ದಂತೆ ವಿಜಯಶಂಕರ್‌ ಅವರು ಕಾರು ಹತ್ತಿ ಹೊರಟರು.

ಪ್ರಧಾನಿ ಮೋದಿ ಅಲೆ, ಕೊನೆಯ ಎರಡು ವರ್ಷಗಳಲ್ಲಿ ಕ್ಷೇತ್ರದಲ್ಲಿ ಕೈಗೊಂಡ ಕಾಮಗಾರಿ, ಜಾತಿ ಬಲ, ಹಿಂದುತ್ವ ಪ್ರತಾಪಸಿಂಹ ಅವರ ಕೈ ಹಿಡಿಯಲು ಪ್ರಮುಖ ಕಾರಣವಾದ ಅಂಶಗಳು.

2014ರಲ್ಲಿ ಜೆಡಿಎಸ್‌, ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧಿಸಿದ್ದಾಗ ಅವರು ಕೇವಲ 31,608 ಮತಗಳಿಂದ ಗೆದ್ದಿದ್ದರು. ಈ ಬಾರಿ ಮೈತ್ರಿ ಅಭ್ಯರ್ಥಿ ಎದುರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆದ್ದು ಅಚ್ಚರಿ ಫಲಿತಾಂಶಕ್ಕೆ ಕಾರಣವಾಗಿದ್ದಾರೆ.

ಹೇಳಿಕೇಳಿ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರದ್ದೇ ಪಾರಮ್ಯ. ಹೀಗಾಗಿ, ಈ ಸಂಗತಿ ಇದೇ ಸಮುದಾಯದ ಪ್ರತಾಪಸಿಂಹ ಅವರ ಪಾಲಿಗೆ ವರದಾನವಾಗಿ ಪರಿಣಮಿಸಿದೆ. ಇತ್ತ ಸಿದ್ದರಾಮಯ್ಯ ಅವರು ಒಕ್ಕಲಿಗರ ವಿರೋಧಿ ಎಂದು ಕೆಲವರು ಪ್ರಚಾರ ನಡೆಸಿದ್ದು, ಕಾಂಗ್ರೆಸ್‌ ಪಾಲಿಗೆ ಮುಳುವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲೂ ಈ ವಿಚಾರ ಜೋರು ಸದ್ದು ಮಾಡಿತ್ತು.

ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಆ ಪಕ್ಷದ ಸಾಂಪ್ರದಾಯಿಕ ಮತದಾರರು ಕೈ ಹಿಡಿಯಲೇ ಇಲ್ಲ. ಜೆಡಿಎಸ್‌ ನಾಯಕರು ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಲಿಲ್ಲ.

ವಿಜಯಶಂಕರ್‌ ಅವರು ಹುಣಸೂರು, ಪಿರಿಯಾಪಟ್ಟಣ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಮೇಲುಗೈ ಸಾಧಿಸಿದರು. ಪ್ರತಾಪಸಿಂಹ ಅವರಿಗೆ ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ, ಮಡಿಕೇರಿ, ವಿರಾಜಪೇಟೆ ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಲಭಿಸಿದೆ.

ಅಂಚೆ ಮತ ಗಳಿಕೆಯಲ್ಲೂ ಪ್ರತಾಪಸಿಂಹ ಮೇಲುಗೈ ಸಾಧಿಸಿದ್ದಾರೆ. ಅವರು 3,869 ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ 1,417 ಮತ ಗಿಟ್ಟಿಸಿಕೊಂಡಿದ್ದಾರೆ.

ಸೋಲು ಕಂಡಿರುವ ಇದೇ ವಿಜಯಶಂಕರ್‌ ಈ ಹಿಂದೆ (1998) ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಖಾತೆ ತೆರೆದಿದ್ದರು. ಆದರೆ, ಪಕ್ಷ ಬದಲಾಯಿಸಿ ತಾವೇ ತೋಡಿಕೊಂಡ ಖೆಡ್ಡಾಕ್ಕೆ ಬಿದ್ದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT