ಭಾನುವಾರ, ಜನವರಿ 16, 2022
28 °C
ಕನ್ನಡದ ದಾರಿಯಲ್ಲಿ– 20

‘ನಾಸಾ’ ಪ್ರಶಸ್ತಿ ವಿಜೇತ ದಿನೇಶ್‌ ಓದಿದ್ದು ಕನ್ನಡ ಮಾಧ್ಯಮದಲ್ಲಿ!

ಮೋಹನ್‌ ಕುಮಾರ ಸಿ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದ ನಂತರ ಅಮೆರಿಕ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ‘ಫ್ಯೂಚರ್ ಇನ್ವೆಸ್ಟಿಗೇಟರ್’ ಪ್ರಶಸ್ತಿ ಪಡೆದಿರುವ ದಿನೇಶ್‌ ಹೆಗಡೆ, ಓದಿದ್ದು ಕನ್ನಡ ಮಾಧ್ಯಮದಲ್ಲಿ!

ನಗರದ ಯುವರಾಜ ಕಾಲೇಜಿನಲ್ಲಿ ಬಿ.ಎಸ್ಸಿ ಜೊತೆಗೆ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಎಂ.ಎಸ್ಸಿವರೆಗೆ ನಗರದ ‘ನಿರಂತರ ರಂಗ ತಂಡ’ದ ‘ಸ್ತ್ರೀ ಭಾರತಂ’, ‘ರಾಜನಗಾರಿ’ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು.

ಅಮೆರಿಕದ ಹಂಟ್ಸ್‌ವಿಲ್‌ನಲ್ಲಿರುವ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮೂರನೇ ವರ್ಷದ ಡಾಕ್ಟರೇಟ್ ಅಧ್ಯಯನ ಮಾಡುತ್ತಿರುವ ದಿನೇಶ್‌, ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ವಾಜಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆ, ಅಶೋಕ ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದರು. ವಿಜ್ಞಾನದ ಪರಿಕಲ್ಪನೆಗಳನ್ನು ಕನ್ನಡದಲ್ಲಿಯೇ ಅರ್ಥೈಸಿಕೊಂಡರೆ ವಿಷಯದಲ್ಲಿ ಸ್ಪಷ್ಟತೆ ಸಿಗುವುದಲ್ಲದೆ ಜ್ಞಾನ ವಿಸ್ತಾರವಾಗುತ್ತದೆ ಎಂಬುದು ಅವರ ನಿಲುವು!

ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಕನ್ನಡದಲ್ಲಿಯೇ ಬರೆದಿದ್ದು, ವಿವಿಧ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಇಸ್ರೋ, ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಜರ್ಮನಿಯ ‘ಮ್ಯಾಕ್ಸ್‌ ಪ್ಲಾಂಕ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಸೋಲಾರ್‌ ಸಿಸ್ಟ್‌ಂ’ನಲ್ಲಿಯೂ ಕೆಲಸ ಮಾಡಿದ್ದಾರೆ.

‘ವಿಜ್ಞಾನ ಕಲಿಕೆಗೆ ಪೂರಕವಾದ ಜಗತ್ತಿನ ವಿವಿಧ ಭಾಷೆಯ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳಬೇಕು. ಜರ್ಮನ್‌, ಚೀನಾದ ಮ್ಯಾಂಡರಿನ್‌ ಭಾಷೆಗಳಲ್ಲಿ ಸಮೃದ್ಧ ಕೃತಿಗಳು ದೊರೆಯುತ್ತವೆ. ಅವರಿಗೆ ಇಂಗ್ಲಿಷ್‌ ಅಗತ್ಯವೇ ಇಲ್ಲ. ಅಲ್ಲಿನ ವಿಜ್ಞಾನಿಗಳೂ ಮಾತೃಭಾಷೆಯಲ್ಲಿಯೇ ಸಂಶೋಧನೆ ನಡೆಸುತ್ತಾರೆ. ಭಾರತದಲ್ಲೂ ಆ ಬದಲಾವಣೆ ಆಗಬೇಕು’ ಎಂದು ದಿನೇಶ್ ಹೇಳಿದರು. 

‘ಪಾಲಹಳ್ಳಿ ವಿಶ್ವನಾಥ್‌, ನಾಗೇಶ ಹೆಗಡೆ, ಡಾ.ಬಿ.ಎಸ್‌.ಶೈಲಜಾ ಅವರ ಕನ್ನಡ ವಿಜ್ಞಾನ ಲೇಖನಗಳು ಸ್ಫೂರ್ತಿ ತುಂಬಿದವು. ಯುವರಾಜ ಕಾಲೇಜಿನಲ್ಲಿ ಪ್ರೊ.ಸ್ವರ್ಣಮಾಲಾ ಅವರು, ವಿವಿಧ ವಿಶ್ವವಿದ್ಯಾಲಯಗಳ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಲು ಪ್ರೇರೇಪಿಸಿದರು. ಅವರ ಪಾಠಗಳು ಖಗೋಳ ವಿಜ್ಞಾನಿಯಾಗುವ ಕನಸನ್ನು ವಿಸ್ತರಿಸಿದವು. ವಿಜ್ಞಾನದ ಕುರಿತು ಯೋಚಿಸುವಾಗೆಲ್ಲ ಕನ್ನಡವೇ ತುಂಬಿರುತ್ತದೆ’ ಎಂದರು.

‘ರಂಗಭೂಮಿ ಸಮಾಜಮುಖಿಯಾಗಿಸುತ್ತದೆ. ಮೈಸೂರು ನನ್ನ ಜೀವನಕ್ಕೆ ತಿರುವು ನೀಡಿದ ಊರು. ರಂಗಭೂಮಿಯ ದಿನಗಳು, ಗೆಳೆಯರೊಂದಿಗಿನ ಕನ್ನಡ ಸಾಹಿತ್ಯ, ವಿಜ್ಞಾನದ ಚರ್ಚೆ, ಕಾಲೇಜು ಗ್ರಂಥಾಲಯದ ಓದು, ನಾವಾಡಿದ ವಿಜ್ಞಾನದ ನಾಟಕಗಳನ್ನು ಮರೆಯಲಾರೆ’ ಎಂದರು.

‘ವಿಜ್ಞಾನಿಗಳ ಅವಿರತ ಶ್ರಮದಿಂದ 60 ವರ್ಷಗಳಲ್ಲಿ ದೇಶ ಬಾಹ್ಯಾಕಾಶ ಶಕ್ತಿಯಾಗಿ ಹೊರಹೊಮ್ಮಿದೆ. ಖಗೋಳ ವಿಜ್ಞಾನಕ್ಕೆ ವಿಫುಲ ಅವಕಾಶಗಳಿವೆ. ಸೌರಮಾರುತಗಳು, ಬಾಹ್ಯಾಕಾಶ ಹವಾಮಾನದ ಕುರಿತು ಅಧ್ಯಯನ ನಡೆಸಿದ್ದೇನೆ. ಕೌಶಲ ಪಡೆದು ದೇಶಕ್ಕೆ ಮರುಳುವೆ’ ಎಂದು ಹೇಳಿದರು.

‘ನಾಸಾ’ ಇವರಿಗೆ ₹ 1 ಕೋಟಿ 42 ಸಾವಿರ ವಿದ್ಯಾರ್ಥಿ ವೇತನ ನೀಡಿದ್ದು, ಸೂರ್ಯ ಹಾಗೂ ಬಾಹ್ಯಾಕಾಶ ಹವಾಮಾನದ ಅನಿಶ್ಚಿತತೆಗಳ ಅಧ್ಯಯನ ನಡೆಸಿದ್ದಾರೆ. ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ಬೋಧಕರಾಗುವ, ಇಲ್ಲವೇ ಇಸ್ರೋ ಸೇರುವ ಕನಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು