ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ವರ್ಷಾಚರಣೆಗೆ ಸಜ್ಜು

Last Updated 28 ಡಿಸೆಂಬರ್ 2019, 10:24 IST
ಅಕ್ಷರ ಗಾತ್ರ

ಮುಚುಮು ಚಳಿ, ಝಗಮಗಿಸುವ ದೀಪದ ಬೆಳಕಿನ ನಡುವೆ ಕೇಳಿಬರುವ ಸಂಗೀತ, ಮೈಮನಸ್ಸನ್ನು ಉಲ್ಲಾಸಗೊಳಿಸಲು ಮದಿರೆಯ ಸ್ವಾದ...

ನ್ಯೂ ಇಯರ್‌ ಈವ್‌ನ ಸಂಭ್ರಮಕ್ಕೆ ನಗರ ಸಜ್ಜಾಗಿದೆ. ಅನೇಕ ಸಿಹಿಕಹಿ ಘಟನೆಗಳೊಂದಿಗೆ 2019 ಮರೆಯಾಗುತ್ತಿದ್ದು, ‘ಟ್ವೆಂಟಿ–20’ಯನ್ನು ಸ್ವಾಗತಿಸಲು ಜನತೆ ಕಾತರಾಗಿದ್ದಾರೆ.

ಸಾಂಸ್ಕೃತಿಕ ನಗರಿಯ ಬಹುತೇಕ ಹೋಟೆಲ್‌ಗಳಲ್ಲಿ, ಕ್ಲಬ್‌ಗಳಲ್ಲಿ ನ್ಯೂ ಇಯರ್ ಈವ್‌ ಪಾರ್ಟಿಗಳು ಆಯೋಜನೆಗೊಂಡಿವೆ. ಪ್ರಮುಖ ರಸ್ತೆಗಳಾದ ಅರಸು ರಸ್ತೆ, ಕಾಳಿದಾಸ ರಸ್ತೆ, ಹುಣಸೂರು ರಸ್ತೆ, ವಿಜಯನಗರ 2ನೇ ಹಂತದ ವಾಟರ್‌ ಟ್ಯಾಂಕ್ ರಸ್ತೆಗಳು ರಂಗೇರುತ್ತಿವೆ.

ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿದ್ದು, ಸಾಂಸ್ಕೃತಿಕ ನಗರಿಯಲ್ಲೂ ಇದರ ಕಾವು ಜೋರಾಗಿದೆ. ಪರಿಣಾಮ ನ್ಯೂ ಇಯರ್ ಈವ್ ಮೇಲೂ ಬಿದ್ದಿದೆ. ಹೊಸ ವರ್ಷವನ್ನು ಸ್ವಾಗತಿಸಲೆಂದೇ ರಾಜ್ಯ, ವಿವಿಧ ದೇಶಗಳಿಂದ ಇಲ್ಲಿಗೆ ಬರುತ್ತಿದ್ದ ಪ್ರವಾಸಿಗರ ಸಂಖ್ಯೆ ಶೇ 30 ರಷ್ಟು ಕಡಿಮೆಯಾಗಿದೆ. ಈ ನಡುವೆಯೂ ಪ್ರವಾಸಿಗರನ್ನು ಆಕರ್ಷಿಸಲು ಹೋಟೆಲ್‌ಗಳು ಮುಂದಾಗಿವೆ. ಯುವ ಜನರನ್ನು ಸೆಳೆಯಲು ವಿಶಿಷ್ಟ ಟ್ಯಾಗ್‌ಲೈನ್‌ಗಳೊಂದಿಗೆ ಆಕರ್ಷಕ ಹೆಸರುಗಳನ್ನಿಟ್ಟು ಪಾರ್ಟಿ ಆಯೋಜಿಸಿವೆ.

ಲಲಿತ್‌ ಮಹಲ್‌ನಲ್ಲಿ ‘ಬಿಗ್ಗೆಸ್ಟ್‌ ನ್ಯೂ ಇಯರ್‌ ಈವ್‌’ ಇದ್ದರೆ, ಬೃಂದಾವನ ಗಾರ್ಡನ್‌ನಲ್ಲಿ ‘ಪೂಲ್‌ಸೈಡ್‌ ಕೌಂಟ್‌ಡೌನ್‌ 2020’, ರ್‍ಯಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ‘ಕ್ಲಬ್‌ ಬ್ಲೂ 2020’, ಶರ್ಮದಾ ಹಿಡೆನ್‌ ನೆಸ್ಟ್‌ನಲ್ಲಿ ‘ಟರ್ನ್‌ ಆನ್‌ 2020’, ಕಂಟ್ರಿ ಇನ್‌ನಲ್ಲಿ ‘ದಿ ರಾಯಲ್‌ ಅಫೈರ್‌ 2020’, ರಿಯೊ ಮೆರಿಡಿಯನ್‌ನಲ್ಲಿ ‘ಎಸೆಂಟ್ರಿಕ್ ಈವ್‌’, ಸಂದೇಶ್‌ ದಿ ಪ್ರಿನ್ಸ್‌ನಲ್ಲಿ ‘ಲೈಟ್ಸ್ ಆಲ್ ನೈಟ್‌’,ಸದರನ್‌ ಸ್ಟಾರ್‌ನಲ್ಲಿ ‘ನಿಯೋ ಕಾರ್ನಿವಾಲ್‌’, ಸೈಲೆಂಟ್ ಷೋರ್ಸ್‌ನಲ್ಲಿ ‘ಫಿನಾಲೆ 2020’,ಕೊಕೊ ಗ್ರೋವ್‌ನಲ್ಲಿ ಬಾಲಿ ಬೂಮ್‌ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಫೋರಂ, ಸಿಪಾಯಿ ಗ್ರ್ಯಾಂಡೆ, ಮೆಟ್ರೊಪೋಲ್‌, ಸ್ಟಾರ್‌ಲೈಟ್‌ ರೆಸ್ಟೊರೆಂಟ್‌, ರುಚಿ ದ ಪ್ರಿನ್ಸ್‌, ಹೋಟೆಲ್‌ ಪೈ ವಿಸ್ತಾ, ಜೆ.ಪಿ.ಫಾರ್ಚುನ್‌ ಸೇರಿದಂತೆ ಮೈಸೂರಿನ ಪ್ರತಿಷ್ಠಿತ ತಾರಾ ಹೋಟೆಲ್‌ಗಳು ಸೇರಿದಂತೆ ಸಣ್ಣಪುಟ್ಟ ಕೆಫೆಗಳಲ್ಲೂ ಪಾರ್ಟಿಗಳು ನಡೆಯಲಿವೆ. ಡಿ.ಜೆ. ಪಾರ್ಟಿ, ಹಾಸ್ಯ, ಸಂಗೀತ ಹಾಗೂ ನೃತ್ಯ ಕಾರ್ಯಕ್ರಮಗಳು ರಂಜಿಸಲಿವೆ.

ವಿವಿಧ ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳೂ ಹಾಲ್‌ಗಳನ್ನು ಬುಕ್‌ ಮಾಡಿವೆ. ಕೆಲ ಹೋಟೆಲ್‌ಗಳಲ್ಲಿ ಜೋಡಿಯಾಗಿ, ಒಂಟಿಯಾಗಿ ಹಾಗೂ ಮಕ್ಕಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಿವೆ. ಇದರ ಜೊತೆಗೆ ವೇದಿಕೆ ಏರಲು ತುಸು ದುಬಾರಿ ದರವೂ ಇದೆ. ₹ 999 ರಿಂದ 10 ಸಾವಿರದವರೆಗೂ ದರ ಇದೆ.

ಈಗಾಗಲೇ ಬುಕ್ಕಿಂಗ್ ಆರಂಭವಾಗಿದ್ದು, ಹೋಟೆಲ್ ವೆಬ್‌ಸೈಟ್‌ ಹಾಗೂ ಬುಕ್ ಮೈ ಷೋ ಸೇರಿದಂತೆ ವಿವಿಧ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಕಾಯ್ದಿರಿಸುವ ಅವಕಾಶ ಕಲ್ಪಿಸಿವೆ.

‘ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟದ ಕಾವಿನ ನಡುವೆಯೂ ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ವರ್ಷಾಂತ್ಯದ ವೇಳೆಗೆ ಇನ್ನಷ್ಟು ಸುಧಾರಣೆ ಆಗಬಹುದು. ನಗರದ 25ಕ್ಕೂ ಹೆಚ್ಚು ತಾರಾ ಹೋಟೆಲ್‌ಗಳಲ್ಲಿ ಅಲ್ಲಿನ ಸೌಲಭ್ಯಕ್ಕೆ ತಕ್ಕಂತೆ ನ್ಯೂ ಇಯರ್ ಈವ್ ಪಾರ್ಟಿ ಆಯೋಜಿಸಿದ್ದಾರೆ’ ಎಂದು ಮಾಹಿತಿ ನೀಡುತ್ತಾರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ.

‘ಹೊಸ ವರ್ಷಾಚರಣೆಗೆ ಎಲ್ಲಿಗೂ ಹೋಗುವುದಿಲ್ಲ. ಕುಟುಂಬದ ಆಪ್ತರೊಂದಿಗೆ ಮನೆಯಲ್ಲೇ ಆಚರಿಸುತ್ತೇವೆ. ಅದಕ್ಕಾಗಿ ಸಿದ್ಧತೆಯೂ ನಡೆಯುತ್ತಿದೆ’ ಎಂದು ಹೇಳುತ್ತಾರೆ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ದಿನೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT