ಬುಧವಾರ, ಮೇ 18, 2022
28 °C
ಸಂಪ್ರದಾಯಕ್ಕಷ್ಟೇ ಸೀಮಿತ; ಕೊನೆ ಹಂತದ ನಿರ್ಧಾರದಿಂದ ಸಂಕಷ್ಟ

ಓಮೈಕ್ರಾನ್‌: ಸೊಗಡಿಲ್ಲದ ಗ್ರಾಮೀಣ ಜಾತ್ರೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದಟ್ಟವಾಗಿ ಆವರಿಸಿರುವ ಕೋವಿಡ್‌ ಕರಿನೆರಳು, ಈ ವರ್ಷವೂ ಜಾತ್ರೆ ಹಾಗೂ ಉತ್ಸವದ ಮೇಲೆ ಪರಿಣಾಮ ಬೀರಿದೆ. 2021ರ ಅಂತ್ಯಭಾಗದವರೆಗೂ ಜಾತ್ರೆಗೆ ಅದ್ಧೂರಿಯಾಗಿ ತಯಾರಿ ನಡೆಸಿದ್ದ ದೇವಸ್ಥಾನದ ಆಡಳಿತ ಮಂಡಳಿಗಳು, ಹೊಸ ವರ್ಷದಲ್ಲಿ ಎಬ್ಬಿಸಿರುವ ’ಓಮೈಕ್ರಾನ್‌’ ಬಿರುಗಾಳಿ ಹೊಡೆತಕ್ಕೆ ತತ್ತರಿಸಿವೆ.

ಅನೇಕ ದೇವಸ್ಥಾನಗಳು ಜಾತ್ರೆಯನ್ನುಸಂಪ್ರದಾಯಕ್ಕೆ ಸೀಮಿತಗೊಳಿಸಿದ್ದರೆ, ಕೆಲವೆಡೆ ಸಾಂಕೇತಿಕವಾಗಿ ಆಚರಣೆ ನಡೆಸಲು ನಿರ್ಧರಿಸಿದೆ. ಸಹಜವಾಗಿ ಈ ಬೆಳವಣಿಗೆ ಉತ್ಸವವನ್ನೇ ಎದುರು ನೋಡುತ್ತಿದ್ದ ವ್ಯಾಪಾರಿ ಸಮುದಾಯ, ಭಕ್ತ ವರ್ಗಕ್ಕೆ ತೀವ್ರ ನಿರಾಸೆ ಮೂಡಿಸಿದೆ.

‘ಜಿಲ್ಲೆಯ ಮೂಗೂರು ತ್ರಿಪುರ ಸುಂದರಿ ದೇವಸ್ಥಾನ, ಕೆ.ಆರ್‌.ನಗರದ ಚುಂಚನಕಟ್ಟೆ, ತಿರಮಕೂಡಲು ನರಸೀಪುರ ಮುಡುಕುತೊರೆ ದೇವಸ್ಥಾನ, ನಗರದ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ಉತ್ಸವ, ಜಾತ್ರೆಗಳನ್ನು ರದ್ದುಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಕಡೆಗಳಲ್ಲಿ ಉತ್ಸವ, ಮೆರವಣಿಗೆ, ಜಾತ್ರೆ ಹಾಗೂ ಧಾರ್ಮಿಕ ಚಟುವಟಿಕೆಗೆ ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಸರ್ಕಾರದ ಮುಂದಿನ ಆದೇಶದವರೆಗೂ ಈ ನಿಯಮ ಅನ್ವಯವಾಗಲಿದೆ.

‘ದರ್ಶನಕ್ಕೆ ಅವಕಾಶ: ಕೋವಿಡ್‌ ನಿಯಮಾವಳಿಯಂತೆ, ಅಂತರ ಕಾಯ್ದುಕೊಂಡು, ಥರ್ಮಲ್‌ ಸ್ಕ್ಯಾನರ್ ಪರೀಕ್ಷೆ ನಡೆಸಿ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ಸರಿಗೆ 50 ಮಂದಿಗೆ ದೇವಸ್ಥಾನಕ್ಕೆ ಪ್ರವೇಶ ನೀಡಬಹುದು. ದೇವಸ್ಥಾನದ ಆವರಣದ ಒಳಗೆ ಹಾಗೂ ಹೊರಭಾಗದಲ್ಲಿ ನಡೆಯುವ ಎಲ್ಲ ಮಾದರಿಯ ಸೇವೆಗಳನ್ನು ರದ್ದುಗೊಳಿಸಲಾಗಿದೆ.  ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಗಳಿಲ್ಲ’ ಎಂದು ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ತಹಶೀಲ್ದಾರ್ ಕೃಷ್ಣ ಸಿ.ಜಿ. ಅವರು ’ಪ್ರಜಾವಾಣಿ‘ಗೆ ತಿಳಿಸಿದರು.

ವ್ಯಾಪಾರ ಕುಂಠಿತ: ಲಾಕ್‌ಡೌನ್ ಸಂಕಷ್ಟದ ಬಳಿಕ ಜನರು ಹೆಚ್ಚು ಖರ್ಚು ಮಾಡುತ್ತಿಲ್ಲ. ದೇಗುಲಗಳ ಸುತ್ತಮುತ್ತಲಿನ ವ್ಯಾಪಾರವೂ ಚೇತರಿಸಿಕೊಂಡಿಲ್ಲ. ಅದರಿಂದ ಹಣಕಾಸು ಹರಿವು ತಗ್ಗಿದೆ. ಇದೂ ಅಲ್ಲದೇ, ಸರ್ಕಾರವೇ ಉತ್ಸವಕ್ಕೆ ನಿರ್ಬಂಧ ಹೇರಿರುವ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದ್ದು, ವ್ಯಾಪಾರಕ್ಕೆ ಹಿನ್ನಡೆಯಾಗಿದೆ ಎಂದು ಚಾಮುಂಡಿಬೆಟ್ಟದ ವ್ಯಾಪಾರಿ ರಾಮೇಗೌಡ ತಿಳಿಸಿದರು.

ಕಳೆಗಟ್ಟದ ಸಂಕ್ರಾಂತಿ: ಕೋವಿಡ್‌ನಿಂದ ಹುಣಸೂರು ತಾಲ್ಲೂಕಿನಲ್ಲಿ ಈ ಬಾರಿಯ ತಾಲ್ಲೂಕಿನ ದೊಡ್ಡಹೆಜ್ಜೂರು, ರಾಮೇನಹಳ್ಳಿ, ಕಲ್ಲೂರಪ್ಪನ ಬೆಟ್ಟಗಳಲ್ಲಿ ಜಾತ್ರೆಗಳಿಗೆ ತಡೆ ಬಿದ್ದಿದೆ. ಅದರಿಂದ, ಗ್ರಾಮೀಣ ಪ್ರದೇಶದ ಜನರಿಗೆ ಸಂಕ್ರಾಂತಿ ಹಬ್ಬದ ಕಳೆ ಇಲ್ಲವಾಗಿದೆ.

ಸಂಕ್ರಾಂತಿ ಹಬ್ಬದ ದಿನ ಜಾತ್ರಾ ಸಂಭ್ರಮದಲ್ಲಿ ಮಕರ ಸಂಕ್ರಾಂತಿ ‘ಸುಗ್ಗಿ‘ ಹಬ್ಬ ಆಚರಿಸುವ ಸಂಪ್ರದಾಯಕ್ಕೂ ತಡೆ ಬಿದ್ದಿದೆ. ಸತತ ಮೂರನೇ ವರ್ಷವೂ ಕೋವಿಡ್ ನೆಪವೊಡ್ಡಿ ನಿಷೇಧ ಹೇರಿರುವುದು ಬೇಸರ ಮೂಡಿಸಿದೆ’ ಎಂದು ದೊಡ್ಡಹೆಜ್ಜೂರು ಶ್ರೀರಾಮಾಂಜನೇಯಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಶೇಖರೆಗೌಡ ಬೇಸರ ಹೊರಹಾಕಿದರು.

ಖರ್ಚು ನಷ್ಟ: ಲಸಿಕಾ ಅಭಿಯಾನ, ಸರ್ಕಾರದಿಂದ ಮುಂಚಿತವಾಗಿ ಯಾವುದೇ ಮಾಹಿತಿ ಎಚ್ಚರಿಕೆ ಇರದ ಕಾರಣ ಅನೇಕ ದೇವಸ್ಥಾನಗಳಲ್ಲಿ ಅದ್ಧೂರಿ ಜಾತ್ರೆ ನಡೆಸಲು ಸಾಕಷ್ಟು ತಯಾರಿ ನಡೆಸಲಾಗಿತ್ತು. ವರ್ಷದ ಆರಂಭದಲ್ಲಿ ಜಿಲ್ಲಾಡಳಿತ ಹೊಸತಾಗಿ ನಿರ್ಬಂಧ ಹೇರಿದ ಕಾರಣ, ಅನೇಕ ಕಡೆಗಳಲ್ಲಿ ಕೊನೆಯ ಹಂತದಲ್ಲಿ ಏನೂ ಮಾಡಲು ಸಾಧ್ಯವಾಗಿದೆ. 

’ಈ ಬಾರಿ ಉತ್ಸವ ನಡೆಸಲು, ದೇವಸ್ಥಾನದ ಜಾತ್ರೆಗೆ ₹1 ಲಕ್ಷ ಹಣ ವ್ಯಯಿಸಿ ಸಕಲ ಸಿದ್ದತೆ ನಡೆದಿತ್ತು‘ ಎಂದು ಶೇಖರಗೌಡ ಮಾಹಿತಿ ನೀಡಿದರು.

ಶ್ರೀಕಂಠೇಶ್ವರ ಚಿಕ್ಕಜಾತ್ರೆ ಸರಳ: ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿಯ ದೊಡ್ಡ ಜಾತ್ರೆ ಕೋವಿಡ್‌ನಿಂದ ಎರಡು ವರ್ಷದಿಂದ ರದ್ದಾಗುತ್ತಿದೆ. ಕಳೆದ ನವೆಂಬರ್‌ನಲ್ಲಿ ಜನರ ಒತ್ತಾಯದ ಮೇರೆಗೆ ಸರಳವಾಗಿ ಹೊರ ಊರಿನ ಭಕ್ತರಿಗೆ ಪ್ರವೇಶ ನೀಡದೇ ಸಾಂಕೇತಿಕವಾಗಿ ಆಚರಿಸಲಾಗಿತ್ತು. ನಗರದ ರಾಘವೇಂದ್ರ ಸ್ವಾಮಿಗಳ ಪ್ರತೀಕ ಸನ್ನಿಧಾನವಾದ ಮಠದಲ್ಲಿ ಆಗಸ್ಟ್ ತಿಂಗಳಿನಲ್ಲಿ ನಡೆಸುತ್ತಿದ್ದ ರಾಯರ ಆರಾಧನೆಯನ್ನು 2 ವರ್ಷಗಳಿಂದ ಸರಳವಾಗಿ ಆಚರಿಸಲಾಗುತ್ತಿದೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.