ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಮನೆಯ ಆವರಣದಲ್ಲೊಂದು ಅದ್ಭುತ ಲೋಕ

ನರ್ತಿಸಲು ಕಾಲುಗಳ ಹಂಗು ಬೇಡವೆಂದು ಸಾಬೀತುಪಡಿಸಿದರು
Last Updated 5 ಅಕ್ಟೋಬರ್ 2019, 9:36 IST
ಅಕ್ಷರ ಗಾತ್ರ

ಮೈಸೂರು: ಶಾಸ್ತ್ರೀಯವಾದ ನೃತ್ಯ ಮಾಡಲು ಕಾಲುಗಳು ಬೇಕಿಲ್ಲ ಎಂಬುದನ್ನು ಅರಮನೆ ಆವರಣದಲ್ಲಿ ಶುಕ್ರವಾರ ರಾತ್ರಿ ನಡೆದ ‘ಮಿರಾಕಲ್ ಆನ್ ವೀಲ್ಸ್’ ಕಾರ್ಯಕ್ರಮ ಸಾಬೀತುಪಡಿಸಿತು.

ನಡೆಯಲಾಗದವರು ಗಾಲಿಕುರ್ಚಿಯ (ವೀಲ್‌ಚೇರ್‌) ಮೇಲೆ ಕೂತೇ ನರ್ತಿಸುವ ಮೂಲಕ ಜನರನ್ನು ವಿಸ್ಮಿತಗೊಳಿಸಿದರು.‌ ಸೈಯ್ಯದ್ ಸಲಾಹುದ್ದೀನ್ ಪಾಷಾ ಅವರ ತಂಡವು ಪ್ರಸ್ತುತಪಡಿಸಿದ ನೃತ್ಯರೂಪಕಗಳು ಜನಮನ ಸೆಳೆದವು.

ಗಾಲಿಕುರ್ಚಿಗಳಲ್ಲಿ ಗಿರಗಿರನೇ ತಿರುಗುತ್ತಾ ನರ್ತಿಸಿದರೆ, ವೇಗವಾಗಿ ಅವರು ಕೈಗಳನ್ನು ಚಲಿಸುತ್ತಿದ್ದ ಪರಿ ಗಗನದಲ್ಲಿ ಮಿಂಚುತ್ತಿದ್ದ ಕೋಲ್ಮಿಂಚುಗಳನ್ನು ನೆನಪಿಸುತ್ತಿತ್ತು.

ಕುರ್ಚಿಯನ್ನು ಒಮ್ಮೆಗೆ ಕೆಳಗೆ ಬೀಳಿಸಿ ಅದರ ಮೇಲೆ ಇತರ ಸಹ ಕಲಾವಿದರು ಹತ್ತಿಕೊಂಡು ಮಾನವ ಗೋಪುರ ನಿರ್ಮಿಸಿದ್ದು ಪ್ರೇಕ್ಷಕರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡಿತು. ಗಾಲಿಕುರ್ಚಿಯನ್ನು ಮುಂಭಾಗಕ್ಕೆ ಆನಿಸಿ ಇಲಿಯಂತೆ ನರ್ತಿಸಿದ ಕಲಾವಿದರ ಸಾಹಸ ಮೆಚ್ಚುಗೆಗೆ ಪಾತ್ರವಾಯಿತು.

‘ಗಣಪತಿ ವಂದನೆ’ ಮೂಲಕ ಅಪರೂಪದ ನೃತ್ಯಕ್ಕೆ ನಾಂದಿ ಹಾಡಲಾಯಿತು. ನಂತರ, ಶಿವಸ್ತುತಿ, ಜುಗಲ್‌ ಬಂದಿಗಳು ಅಮೋಘವಾಗಿ ಮೂಡಿಬಂದವು.

ಮಹಿಷಾಸುರ ಮತ್ತು ಚಾಮುಂಡಿಯ ಯುದ್ದ ಮೈನವಿರೇಳಿಸುವಂತಿತ್ತು. ಮಹಿಷನ ಮರ್ಧನ, ಚಾಮುಂಡಿಯ ದರ್ಶನ, ಕಾಳಿ ನರ್ತನಗಳು ಅತ್ಯಾದ್ಭುತವಾಗಿತ್ತು. ಮಹಿಷ ವೇಷಧಾರಿಯ ನರ್ತನವೂ ಸಾಕಷ್ಟು ಗಮನಸೆಳೆಯಿತು.

ಇದಕ್ಕೂ ಮುನ್ನ ಸುಚೇಂದ್ರಬಾಬು ಮತ್ತು ತಂಡದವರು ಪ್ರಸ್ತುತಪಡಿಸಿದ ಕೂಚಿಪುಡಿ ನೃತ್ಯ ಆಕರ್ಷಕವಾಗಿತ್ತು. ಆಂಧ್ರಪ್ರದೇಶ ಮತ್ತು ಕರ್ನಾಟಕದ ಒಟ್ಟು 10 ಮಂದಿ ಕಲಾವಿದರು ಇದರಲ್ಲಿ ಭಾಗಿಯಾದರು.

‘ಜಯಜಯದುರ್ಗೆ’ ನರ್ತನ ಹಾಗೂ ‘ರೂಪಂ ದೇಹಿ ಜಯಂ ದೇಹಿ’ ಸಾಲುಗಳು ಅನುರಣಿಸಿದ ಪರಿ ಸೂಜಿಗಲ್ಲಿನಂತೆ ಸೆಳೆದವು.

ಪದ್ಮಶ್ರೀ ಮತ್ತು ತಂಡದವರು ಪ್ರಸ್ತುತಪಡಿಸಿದ ಭರತನಾಟ್ಯವು ಜನಮನಗೆದ್ದಿತು. ವಿಷ್ಣುವಿನ ದಶಾವತಾರ, ಸೀತಾಪಹರಣ, ರಾಮ ರಾವಣರ ಕಾಳಗ, ಶ್ವೇತಅಶ್ವವೇರಿ ಬರುವ ಕಲ್ಕಿಯ ಚಿತ್ರವೂ ಅಮೋಘವಾಗಿತ್ತು.

ಡಾ.ಶಿವಶಂಕರಸ್ವಾಮಿ ಮತ್ತು ತಂಡದವರ ತಾಳವಾದ್ಯ ಸಂಗೀತ ಹಾಗೂ ಡಾ.ಎಸ್.ಕೆ.ಶರ್ಮಾ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT